ಬದುಕ ಬದಲಿಸುವ ಕತೆಗಳು...

ಬದುಕ ಬದಲಿಸುವ ಕತೆಗಳು...

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಶಶಿಕಿರಣ್ ಶೆಟ್ಟಿ
ಪ್ರಕಾಶಕರು
ಬೃಂದಾವನ ಪ್ರಕಾಶನ, ದೊಂಪದ ಕುಮೇರಿ, ಕೊಳಲಗಿರಿ-ಅಂಚೆ, ಉಡುಪಿ -೫೭೬೧೦೧, ಮೊ: ೯೯೪೫೧೩೦೬೩೦
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೨

ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ಶಶಿಕಿರಣ್ ಶೆಟ್ಟಿಯವರು ಬರೆದ ಪುಟ್ಟ ಪುಟ್ಟ ಕತೆಗಳ ಸಂಗ್ರಹವೇ “ಬದುಕ ಬದಲಿಸುವ ಕತೆಗಳು". ಶಶಿಕಿರಣ್ ಇವರು ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಾದು ಹೋದ, ಸಮಾಜದಲ್ಲಿ ನಡೆಯುತ್ತಿರುವ ಮತ್ತು ತಾವು ವಿವಿದೆಡೆಗಳಿಂದ ಕೇಳಿದ ವಿಷಯಗಳನ್ನು ಕತೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಕತೆಗಳಿಗೆ ಪುಸ್ತಕವೆಂಬ ಚೌಕಟ್ಟು ಹಾಕಿ ಓದುಗರಿಗೆ ಉಣಬಡಿಸಲು ಹೊರಟಿದ್ದಾರೆ. ಇಲ್ಲಿರುವ ಎಲ್ಲಾ ಕತೆಗಳು ನಮ್ಮ ಸುತ್ತಮುತ್ತಲು ನಡೆಯುವಂಥದ್ದೇ. ಈ ಕಾರಣದಿಂದಲೇ ಕತೆಗಳನ್ನು ಓದುತ್ತಾ ಓದುತ್ತಾ ಅವುಗಳು ನಮಗೆ ಆಪ್ತವಾಗುತ್ತಾ ಹೋಗುತ್ತವೆ. 

ಲೇಖಕರಾದ ಡಾ.ಶಶಿಕಿರಣ್ ಶೆಟ್ಟಿಯವರ ಬಗ್ಗೆ ಬೆನ್ನುಡಿಯಲ್ಲಿ ಪಿ.ವಿ.ಪ್ರದೀಪ್ ಕುಮಾರ್ ಅವರು ಸೊಗಸಾದ ಪರಿಚಯ ಮಾಡಿಕೊಟ್ಟಿದ್ದಾರೆ. ಪ್ರದೀಪ್ ಕುಮಾರ್ ಅವರ ಬರೆದಂತೆ “ ಡಾ.ಶಶಿಕಿರಣ್ ಶೆಟ್ಟಿಯವರು ಉಡುಪಿಯ ಕೊಳಲಗಿರಿಯವರು. ಉಡುಪಿಯ ಎಸ್ ಡಿ ಎಂ ಆಯುರ್ವೇದ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯಾಸಂಗವನ್ನು ಮುಗಿಸಿ, ಪ್ರಸ್ತುತ ಉಡುಪಿಯ ಕೊಳಲಗಿರಿಯಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದು ಜನಸೇವೆಗಾಗಿ ‘ಹೋಂ ಡಾಕ್ಟರ್ ಫೌಂಡೇಶನ್ (ರಿ.) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದು ಪ್ರಸ್ತುತ ತನ್ನ ಹುಟ್ಟೂರಿನ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ‘ಬದುಕ ಬದಲಿಸುವ ಕತೆಗಳು' ಇವರ ಚೊಚ್ಚಲ ಕೃತಿ.

ಹೋಂ ಡಾಕ್ಟರ್ ಫೌಂಡೇಶನ್ ಮೂಲಕ ಸಮಾಜದ ನೂರಾರು ನೊಂದ ಅಸಹಾಯಕ, ಶೋಷಿತ ಕುಟುಂಬಕ್ಕೆ ಸಾಂತ್ವಾನ ನೀಡಲಾಗಿದೆ. ಉಡುಪಿಯ ೮೦ರ ಹರೆಯದ ವೃದ್ಧೆಯಾದ ಸರೋಜಮ್ಮ ಅವರು ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದರು. ಆ ವೃತ್ತಿಯನ್ನು ನಿಲ್ಲಿಸಿ ಕಳೆದ ಮೂರು ವರ್ಷಗಳಿಂದ ಅವರಿಗೆ ಊಟ, ಔಷಧದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪೇತ್ರಿಯ ನಟರಾಜ್ ಎನ್ನುವ ವ್ಯಕ್ತಿಯು ೧೦ ವರ್ಷಗಳ ಹಿಂದೆ ತನ್ನ ಬಲಗೈಯನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದ. ಇತ್ತೀಚೆಗೆ ೨ ಲಕ್ಷದ ಎಂಡೋಲೈಟ್ ಕೈಯನ್ನು ಅಳವಡಿಸಿ ಕೊಟ್ಟಿದ್ದಾರೆ. ಕಳೆದ ೫ ವರ್ಷಗಳಿಂದ ೧೩೦ಕ್ಕೂ ಅಧಿಕ ಬಡ ರೋಗಿಗಳಿಗೆ ೩೬ ಲಕ್ಷಕ್ಕೂ ಅಧಿಕ ಹಣ ಕೊಟ್ಟಿರುವುದು ಹೋಂ ಡಾಕ್ಟರ್ ಫೌಂಡೇಶನ್ ನ ಸಾಧನೆಗಳಲ್ಲಿ ಪ್ರಮುಖವಾದುವುಗಳಾಗಿವೆ. ಹೀಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಿಡುವಿನ ಸಮಯದಲ್ಲಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಣ್ಣ ಸಣ್ಣ ಕಥೆಗಳನ್ನು ಬರೆದು ಓದುಗರ ಮೆಚ್ಚುಗೆಯನ್ನು ಗಳಿಸಿದ್ದಾರೆ.”

ಡಾ. ಶಶಿಕಿರಣ್ ಶೆಟ್ಟಿಯವರು ಈ ಪುಸ್ತಕದಿಂದ ಬರುವ ಲಾಭಾಂಶದ ಒಂದು ಪಾಲನ್ನು ‘ಹೋಂ ಡಾಕ್ಟರ್ ಫೌಂಡೇಶನ್" ನ ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟಿದ್ದಾರೆ. ಪುಸ್ತಕದ ವಿಶೇಷತೆಯೆಂದರೆ ಇದಕ್ಕೆ ೬ ಮಂದಿ ಓದುಗರೇ ಮುನ್ನುಡಿಯನ್ನು ಬರೆದಿದ್ದಾರೆ. ಲೇಖಕರ ಕಥೆಗಳನ್ನು ಓದಿ ಮೆಚ್ಚಿ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಲೇಖಕರೂ, ರಾಷ್ಟ್ರೀಯ ಚೆಸ್ ತರಬೇತುದಾರರಾಗಿರುವ ಉಪ್ಪುಂದದ ಗಣೇಶ್ ವೈದ್ಯ ಇವರು ಆಡು ಭಾಷೆಯ ಸೊಗಡಿನಲ್ಲಿ ನೈಜ ಘಟನೆಗಳನ್ನು ಹಸಿ ಹಸಿಯಾಗಿ ತೆರೆದಿಟ್ಟ ಈ ಕಥೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಹಾಗೇ ಕರ್ವಾಲಿನ ಸಾಮಾಜಿಕ ಕಾರ್ಯಕರ್ತರು ರಾಘವೇಂದ್ರ ಪ್ರಭು, ಕೊಕ್ಕರ್ಣೆಯ ವ್ಯಾಪಾರಿ ರವೀಂದ್ರ ಪ್ರಭು, ಕೊಡವೂರಿನ ಮುಕ್ತ ಶ್ರೀನಿವಾಸ ಭಟ್, ಉಡುಪಿಯ ವಕೀಲರಾದ ದೀಪಿಕಾ ವಿಘ್ನೇಶ್ ಆಚಾರ್ಯ, ದಾವಣಗೆರೆಯ ಗೃಹಿಣಿ ಭವ್ಯ ಎಸ್. ಇವರೆಲ್ಲಾ ಡಾ.ಶಶಿಕಿರಣ್ ಅವರ ಬದುಕು ಬದಲಿಸುವ ಕತೆಗಳ ಬಗ್ಗೆ ತಮ್ಮ ಮನದಾಳದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ “ ಬದುಕ ಬದಲಿಸುವ ಕತೆಗಳು ಇದು ನನ್ನ ಮೊದಲ ಪುಸ್ತಕ. ನನ್ನ ಸಣ್ಣ ಕಥೆಗಳ ಸಂಗ್ರಹ. ನಾನು ಬರೆಯುವ ಕತೆಗಳು ನಮ್ಮ ಸಮಾಜದೊಳಗೇ, ನಮ್ಮ, ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳೇ ಆಗಿದ್ದು, ಇದು ನಮ್ಮ ಬದುಕನ್ನು ಬದಲಾಯಿಸಬಹುದು. ಸಮಾಜದ ನೊಂದವರ, ಸಂಕಷ್ಟದ ಪರಿಸ್ಥಿತಿಯ ಜನರ ಬದುಕನ್ನು ಬದಲಾಯಿಸಬಹುದು. ಪ್ರತಿ ಕಥೆ ಓದುವಾಗ ಇದು ನನ್ನದೇ ಕಥೆ ಎನ್ನುವಷ್ಟರ ಮಟ್ತಿಗೆ ನೈಜ ಚಿತ್ರಣ ಇಲ್ಲಿದೆ. ಮನುಷ್ಯ ಹೇಗೆ ಬದಲಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ವರ್ಣಿಸುವುದರ ಮೂಲಕ ಆರೋಗ್ಯಯುತ ಸಮಾಜವೊಂದರ ನಿರ್ಮಾಣ ಮಾಡುವುದು ನನ್ನ ಗುರಿಯಾಗಿದೆ.” 

ಡಾ.ಶಶಿಕಿರಣ್ ಶೆಟ್ಟಿಯವರು ತಮ್ಮ ಮಾತಿನಲ್ಲಿ ಹೇಳಿರುವುದರಲ್ಲಿ ಏನೂ ಅತಿಶಯೋಕ್ತಿ ಇಲ್ಲ. ಏಕೆಂದರೆ ಈ ಪುಸ್ತಕದಲ್ಲಿರುವ ಸುಮಾರು ೬೦ ಕತೆಗಳು ಬದುಕನ್ನು ಬದಲಿಸುವ ಕತೆಗಳೇ... ಪ್ರತಿಯೊಂದು ಕತೆಗಳು ನಮ್ಮ ಸುತ್ತಮುತ್ತಲಿನಲ್ಲೇ ನಡೆಯುತ್ತಿದೆ ಎನ್ನುವಷ್ಟು ಮನಸ್ಸಿಗೆ ಹತ್ತಿರವಾಗಿವೆ. ಕೆಲವನ್ನಂತೂ ಓದಿ ಮುಗಿಸುವಾಗ ಕಣ್ಣಂಚಿನಲ್ಲಿ ನೀರು ಜಿನುಗಿದ್ದೂ ಇದೆ. ಕೆಲವು ಕತೆಗಳು ೬-೭ ವಾಕ್ಯಗಳಲ್ಲೇ ಮುಗಿದರೂ ಅದರ ಪ್ರಭಾವ ಬಹಳ ಸಮಯ ಕಾಡುವಂತಿದೆ. ಉದಾಹರಣೆಯಾಗಿ ‘ಕಾಮನ್ ಜ್ವರ' ಎನ್ನುವ ಕಥೆಯನ್ನು ತೆಗೆದುಕೊಂಡರೆ…

೯೦ ವರ್ಷ ದಾಟಿದ ಅಪ್ಪ ತನ್ನ ಮಗನಿಗೆ, ಜ್ವರ ಬಂದಿದೆ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದರೆ, ಆತ ತುಂಬಾ ಬಿಜಿ ಇದ್ಡೇನೆ, ಈಗ ಜ್ವರ ಎಲ್ಲಾ ಕಾಮನ್ ಡೋಲೋ ಮಾತ್ರೆ ತೆಗೆದುಕೊಂಡು ಮಲಗಿದರೆ ಗುಣ ಆಗುತ್ತೆ ಅನ್ನುತ್ತಾನೆ. ಆಗ ತಂದೆಗೂ ‘ಮಗ ಸಣ್ಣವನಿದ್ದಾಗ ಆತನಿಗೆ ಜ್ವರ ಬಂದಾಗ ತಾನು ಎಷ್ಟೊಂದು ಟೆನ್ಶನ್ ಮಾಡಿಕೊಳ್ಳುತ್ತಿದ್ದೆ. ಕೆಲಸ ಬಿಟ್ಟು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದೆ. ನಾನೆಂತಾ ಹುಚ್ಚ’ ಅನಿಸುತ್ತೆ. ಅದೇ ನೋವಿನಲ್ಲಿ ಡೋಲೋ ಮಾತ್ರೆ ತೆಗೆದು ಮಲಗುತ್ತಾರೆ. ಆದರೆ ಅವರ ಕಣ್ಣುಗಳು ಮಾತ್ರ ಯಾಕೋ ಮಂಜಾಗಿದ್ದವು ಎಂದು ಕಥೆಯನ್ನು ಮುಗಿಸುತ್ತಾರೆ ಡಾ. ಶಶಿಕಿರಣ್ ಶೆಟ್ಟಿ. ಕಥೆ ಓದಿದಾಗ ಕಣ್ಣುಗಳು ಅಪ್ಪನದ್ದು ಮಾತ್ರವಲ್ಲ ಓದುಗರದ್ದೂ ಮಂಜಾಗಿ ಹೋಗುತ್ತವೆ. ಕಥೆ ಸಣ್ಣದು ಆದರೆ ಅದು ಬೀರುವ ಪ್ರಭಾವ ಅಪಾರ ಎನ್ನುವುದು ಈ ಪುಸ್ತಕದ ಕಥೆಗಳನ್ನು ಓದುವಾಗ ಓದುಗರಿಗೆ ಆಗುತ್ತದೆ. 

ಲೇಖಕರು ಬರೆದ ಕಥೆಗಳನ್ನು ಓದುವಾಗ ಅವರ ಮೊದಲ ಕೃತಿ ಎಂದು ಅನಿಸುವುದಿಲ್ಲ. ಪುಸ್ತಕದ ಕೆಲವೆಡೆ ಸಣ್ಣ ಪುಟ್ಟ ಅಕ್ಷರ ತಪ್ಪುಗಳಿದ್ದರೂ ಅದನ್ನು ಮುಂದಿನ ಮುದ್ರಣದಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ. ಪುಸ್ತಕದ ವಿನ್ಯಾಸವೂ ಅಲ್ಪ ಮಟ್ಟಿಗೆ (ಒಂದು ಪುಟಕ್ಕೆ ಒಂದು ಕಥೆಯಂತೆ) ಬದಲಾದರೆ ಪರಿಪೂರ್ಣ ಕಥಾಸಂಕಲನವೊಂದು ಓದುಗರಿಗೆ ದೊರೆತಂತಾಗುತ್ತದೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನವನ್ನು ಡಾ.ಶಶಿಕಿರಣ್ ಶೆಟ್ಟಿಯವರು ವಕ್ರತುಂಡ ಶ್ರೀ ವಿನಾಯಕನಿಗೆ ಭಕ್ತಿ ಪೂರ್ವಕವಾಗಿ ಅರ್ಪಣೆ ಮಾಡಿದ್ದಾರೆ. ಕೊನೆಗೆ ಒಂದು ಮಾತು, ಈ ಪುಸ್ತಕವನ್ನು ಒಮ್ಮೆ ಕೈಗೆತ್ತಿಕೊಂಡರೆ ನೀವು ಅದನ್ನು ಮುಗಿಸುವ ತನಕ ಕೆಳಗಿಡಲಾರಿರಿ ಇದು ಮಾತ್ರ ಸತ್ಯ. 

ಪುಸ್ತಕಕ್ಕಾಗಿ ಸಂಪರ್ಕಿಸಿ : ಡಾ.ಶಶಿಕಿರಣ್ ಶೆಟ್ಟಿ (Mob: 9945130630)