ಬಯಕೆ (ಭಾಗ 2)

ಬಯಕೆ (ಭಾಗ 2)

ಸ್ಥಾನ ಬಂಧಿತ ಅಂದರೆ ಒಂದು ವಸ್ತು ಏಕಕಾಲದಲ್ಲಿ ಎರಡು ಕಡೆ ಇರುವುದಿಲ್ಲ. ಈಗ ಯಾರ ಹತ್ತಿರ ಒಂದು ವಸ್ತು ಇದೆ ಅಂದರೆ, ಅದೇ ವಸ್ತು ನನ್ನ ಬಳಿ ಇರುವುದಿಲ್ಲ. ಅದನ್ನು ನಾನು ಪಡೆದರೆ ಆತನಲ್ಲಿ ಅದು ಖಾಲಿಯಾಗುತ್ತದೆ. ಅಂದರೆ ನೋಡೋದಕ್ಕೆ ಎಲ್ಲರಿಗೂ ಸಿಗುತ್ತದೆ. ಪಡೆಯುವುದಕ್ಕೆ ಆಗುವುದಿಲ್ಲ. ನೋಡೋದಿಕ್ಕೆ ನನ್ನ ಕೈಯಲ್ಲೇ ಇರಬೇಕು ಅಂತ ಎಲ್ಲಿದೆ ?. ಹೂವು ಎಲ್ಲಾದರೂ ಇರಲಿ , ನೋಡಿ ಸಂತೋಷ ಪಡುತ್ತೀನಿ ಅಂದರೆ ನಮಗೆ ಸಮಸ್ಯೆ ಇಲ್ಲ. ನನ್ನ ಕೈಯಾಗೆ ಇದ್ದರೆ ಏನು?. ನಿಮ್ಮ ಕೈಯಾಗೆ ಇದ್ದರೇನು ? ಕೈಯಲ್ಲಿ ಹಿಡಿದವನಿಗೆ ತ್ರಾಸ. ಅದನ್ನು ಹಿಡಿಯಬೇಕು. ನೋಡುವವನಿಗೆ ತ್ರಾಸ ಇಲ್ಲ. ಒಬ್ಬ ಮನೆ ಕಟ್ಟುತ್ತಾನೆ ಬಹಳ ತ್ರಾಸ ಆಗಿರುತ್ತದೆ. ಗೃಹ ಶಾಂತಿ ಅಂತ ಮಾಡಿ, ಬಂಧು ಬಳಗ ಎಲ್ಲರನ್ನು ಕರೆದು ತೋರಿಸುತ್ತಾನೆ. ಬಂದವರೆಲ್ಲ ನೋಡಿ ಒಳ್ಳೆಯ ಮಾತು ಹೇಳಿದರೆ ಕಟ್ಟಿಸಿದಾಗ ಇದ್ದ ತ್ರಾಸ ಕಡಿಮೆಯಾಗುತ್ತದೆ. ಗೃಹಶಾಂತಿ ಅಲ್ಲ ಮನಶಾಂತಿಯಾಗುತ್ತದೆ. 

ನೋಡೋಕೆ ಹೋದವರು ಎಲ್ಲಾ ನೋಡುವುದು. ಎಷ್ಟು ಅದ್ಭುತ ?.ಅಂತ ಹೇಳುವುದು. ನಿನ್ನದರ ತರಹ ಬೇರೆ ಇಲ್ಲ ಅನ್ನೋದು. ಏಕೆಂದರೆ ಅದು ಆತನದೇ ತಾನೆ. ಹಾಗೂ ಆತನಿಗೂ ಸಂತೋಷ. ನಮಗೂ ಸಂತೋಷ. ಅದನ್ನು ಬಿಟ್ಟು. ಅದೇ ತರ ಕಟ್ಟಬೇಕು ಅಂದಾಗ ಯೋಚಿಸಿದರೆ ದುಃಖ. ನೋಡೋದಕ್ಕೆ ಆರಾಮ. ಪಡೆಯಲು ಅಲ್ಲ. ಬಹಳಷ್ಟು ಜಗತ್ತು ಮತ್ತು ವಸ್ತು ನೋಡಿ ಸಂತೋಷ ಪಡುವುದಕ್ಕೆ ಇದೆ. ಬದುಕು ಮಹತ್ವದ್ದು ವಿನಃ, ಸಂಗ್ರಹ ಮಹತ್ವದಲ್ಲ. ನಾನು ಏನು ಬಳಸುತ್ತೇನೆ ಅದು ಮಹತ್ವದ್ದು. ನಾವೆಲ್ಲ ನಿವೃತ್ತಿ ನಂತರ ಆರಾಮವಾಗಿ ಇರಬೇಕು ಅನ್ನುತ್ತೇವೆ. ನಿವೃತ್ತಿ ಯಾವಾಗ ನೀಡುತ್ತಾರೆ. ನಮ್ಮ ಮೇಲೆ ಸಾಮರ್ಥ್ಯ ಇಲ್ಲ ಅಂತ ಭರವಸೆ ಆದಾಗ, ನಿವೃತ್ತಿ ನೀಡುತ್ತಾರೆ. ಆವಾಗ ಆರಾಮವಾಗಿ ಇರೋದಕ್ಕೆ ಆಗುತ್ತಾ. ಆರಾಮ ಇರುವ ಉತ್ಸಾಹ ಇದ್ದಾಗ ಆರಾಮವಾಗಿ ಇರಬೇಕೇ ವಿನಹ, ಉತ್ಸಾಹ ಕಳೆದುಕೊಂಡ ಮೇಲೆ ಅಲ್ಲ. ಯುವಕ, ತರುಣ ಇದ್ದಾಗಲೇ ಆರಾಮ ಇರಬೇಕು, ಜಗತ್ತನ್ನು ಪಡೆದೆ ಅನುಭವಿಸಬೇಕು ಅಂತ ಏಕೆ?. ಪಡೆಯಲಾರದೇ ಬಹಳಷ್ಟು ವಸ್ತುಗಳನ್ನು ಅನುಭವಿಸಬಹುದು. ನೋಡಿ ಸಂತೋಷ ಪಡಬಹುದು. ಬಯಕೆ ಸಣ್ಣದಿದ್ದರೆ ಅದು ಸುಲಭವಾಗಿ ಸಿಗುತ್ತದೆ. ಆಗ ಯಾವ ಮನುಷ್ಯನು ಅಪ್ರಾಮಾಣಿಕ ಆಗುವುದಿಲ್ಲ. ಇದು ಮನುಷ್ಯನ ತಪ್ಪಲ್ಲ , ಬಯಕೆ ತಪ್ಪು. ನಿರ್ಣಯ ಮಾಡುವಾಗ ಬಹಳ ಎಚ್ಚರಿಕೆ ಇರಬೇಕು.

ಒಂದು ಕಥೆ ಒಬ್ಬ ಸೂಫಿ ಸಂತನ ಶಿಷ್ಯ. ಆತನಿಗೆ ಒಂದು ಮಗು. ವಯಸ್ಸು ಐದು ವರ್ಷ. ದೀಪಾವಳಿ ಅಂತ ಹಬ್ಬ ಬರುತ್ತದೆ. ಎಲ್ಲರೂ ಮನೆ ಮುಂದೆ ದೀಪ ಹಚ್ಚಿರುತ್ತಾರೆ. ಆ ಮಗುವಿಗೂ ಒಂದು ಆಸೆ. ನಾವು ದೀಪ ಹಚ್ಚಬೇಕು ಅಂತ. ತಂದೆ ಬಳಿ ಹೋಗಿ ಕೇಳುತ್ತದೆ. ಪಾಪ ಆತ ತುಂಬಾ ಬಡವ. ಆ ಮಗುವಿನ ಇಚ್ಛೆ ಪೂರೈಸಲು ಆಗುವುದಿಲ್ಲ. ಆಗ ಆ ಸಂತ ಮಗುವಿಗೆ ಹೇಳುತ್ತಾನೆ "ನೋಡು ಆ ದೀಪ ಆರುತ್ತದೆ, ನಾವು ಆರುವ ದೀಪ ಹಚ್ಚುವುದಲ್ಲ, ಶಾಶ್ವತ ದೀಪ ಹಚ್ಚುವವರು." ಆರುವ ದೀಪ ನೋಡೋದು, ಶಾಶ್ವತ ದೀಪ ಹಚ್ಚೋದು ಅಂದ. ಕೈ ಹಿಡಿದು ಊರಲ್ಲೆಲ್ಲಾ ತಿರುಗಾಡಿ, ಎಲ್ಲಾ ದೀಪ ತೋರಿಸಿದನು. ಹಚ್ಚಿದವ್ರು ಮನೆ ಒಳಗೆ ಇದ್ದರು. ಇವರು ಎಲ್ಲಾ ದೀಪ ನೋಡಿದರು. ನೋಡುವವರು ಇಬ್ಬರು. ನಾಲ್ಕು ದೀಪ ಹಚ್ಚಿ, ಮನೆ ಒಳಗೆ, ಹಚ್ಚಿದವ್ರು ಇದ್ದಾಗ, ಇವರಿಬ್ಬರೂ ಊರಿನ ತುಂಬಾ ದೀಪಗಳನೆಲ್ಲ ನೋಡಿ ಸಂತೋಷಪಟ್ಟರು. ಅವರು ನಮಗಾಗಿ ಹಚ್ಚಿದ್ದಾರೆ. ಅವರು ಹಚ್ಚುವರು. ನಾವು ನೋಡುವವರು. ಹಚ್ಚುವ ಕೆಲಸಗಾರರು ಅವರು. ನೋಡೋ ಮಾಲೀಕರು ನಾವು ಎಂದನು. ಇದು ದೃಷ್ಟಿಕೋನ. ಆನಂದ ಪಡಬೇಕಾದರೆ ನಾವೇ ದೀಪ ಹಚ್ಚಬೇಕು ಅಂತ ಎಲ್ಲಿದೆ ? ಹಚ್ಚಿದವರಿಗಿಂತ ನೋಡಿ ಸಂತೋಷ ಪಟ್ಟವರು ಸಂತ ಮತ್ತು ಮಗ. ಸಂತ ಹೇಳಿದ, "ನೋಡಿ ನೋಡಿ ನಮ್ಮ ಕಣ್ಣು ಶ್ರೀಮಂತ, ಮನಸ್ಸು ಶ್ರೀಮಂತ , ನಾವೇ ಶ್ರೀಮಂತರು" ಎಂದ. ಎಷ್ಟೊಂದು ಜನ ಹಚ್ಚೋರು ಇರುವಾಗ, ನಾವೇಕೆ ಹಚ್ಚಬೇಕು?. ನಾವು ನೋಡುವವರು. ನೋಡುವುದಕ್ಕೆ ಬಂದರೆ ಜಗತ್ತಿನಲ್ಲಿ ನೋಡಿ ಆನಂದ ಪಡಬಹುದು. ನೋಡುವ, ಆನಂದ ಪಡುವ, ಬಯಕೆ ಇರಬೇಕೇ ವಿನಹ, ಪಡೆಯುವ ಬಯಕೆ ಅಲ್ಲ. ಅಲ್ಲವೆ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ