ಬಯಲಲ್ಲಿ ಅಡಗಿರುವ 501 ಸತ್ಯಗಳು

ಬಯಲಲ್ಲಿ ಅಡಗಿರುವ 501 ಸತ್ಯಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲಿಷ್ ಮೂಲ: ಪಿ.ದೈವಮುತ್ತು ಕನ್ನಡಕ್ಕೆ: ಆದರ್ಶ್ ಗೋಖಲೆ
ಪ್ರಕಾಶಕರು
ಅವನಿ ಪ್ರಕಾಶನ, ಕುಂಭಾಸಿ, ಕುಂದಾಪುರ-೫೭೬೨೫೭
ಪುಸ್ತಕದ ಬೆಲೆ
ಬೆಲೆ: ರೂ.೮೦.೦೦

ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯೂನಿಷ್ಟರಂತೆ ‘ಜಾತ್ಯಾತೀತವಾದ' ಎಂಬುದು ಹಿಂದೂಗಳ ಶತ್ರುವಾಗಿ ರೂಪುಗೊಳ್ಳುತ್ತಿರುವ ಹೊಸದಾದ ಮತ. ನಾಸ್ತಿಕವಾದವೆಂದು ಹೇಳಿಕೊಂಡರೂ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದೇ ಈ ನವಮತದ ಧ್ಯೇಯವಾಗಿದೆ. ಸತ್ಯ ಅರಿಯದೆ ಆ ಮತವನ್ನು ಸೇರಿರುವ ಅನೇಕರು ನಮ್ಮ ನಡುವೆ ಇರಬಹುದು. ಸತ್ಯವೇನೆಂದು ತಿಳಿದ ನಂತರ ರಾಷ್ಟ್ರೀಯವಾದದ ಕಡೆಗೆ ಹೊರಳಬಹುದು. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಪುಸ್ತಕವು ನಿಮಗಾಗಿಯೇ ಇದೆ. ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ಈ ಪುಸ್ತಕವನ್ನು ಓದಿ.’ ಇದು ಬೆನ್ನುಡಿಯಲ್ಲಿ ಪ್ರಕಟವಾದ ದೈವಮುತ್ತು ಅವರ ಮಾತುಗಳು.

ಪ್ರಕಾಶಕರಾದ ಅವನಿ ಪ್ರಕಾಶನದ ಶ್ರೀಪತಿ ಆಚಾರ್ಯ ಇವರು ತಮ್ಮ ಪ್ರಕಾಶಕರ ಮಾತಿನಲ್ಲಿ ಪುಸ್ತಕದ ಬಗ್ಗೆ, ಅದರ ಲೇಖಕರು ಹಾಗೂ ಅನುವಾದಕರ ಬಗ್ಗೆ ಬರೆದಿದ್ದಾರೆ. ಬಯಲಲ್ಲಿ ಯಾರಿಗಾದರೂ ಅಡಗಿಕೊಳ್ಳಲು ಸಾಧ್ಯವೇ? ಹಾಗೆಯೇ ಈ ಪುಸ್ತಕದಲ್ಲಿ ಹೇಳುವ ಸತ್ಯ ಸಂಗತಿಗಳೂ ಹಾಗೆಯೇ, ಈ ಕೃತಿಯಲ್ಲಿ ನೀಡಿರುವ ಕೆಲವು ಸಂಗತಿಗಳು ಎಲ್ಲರಿಗೂ ತಿಳಿದಿರುವಂತದ್ದೇ. ಆದರೂ ನಾವು ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲದೇ ಇರುವುದೇ ದುರಂತ. ಮೂಲ ಲೇಖಕರಾದ ದೈವಮುತ್ತುವವರು ತಮ್ಮ ಈ ಬರಹಗಳನ್ನು ಯಾವುದೇ ಭಾಷೆಗೆ ಮುಕ್ತವಾಗಿ ಭಾಷಾಂತರಿಸುವಂತೆ ಔದಾರ್ಯ ತೋರಿಸಿದ್ದಾರೆ. ಅವರ ಲಿಖಿತ ಅನುಮತಿಯ ಅಗತ್ಯವೂ ಬೇಕಿಲ್ಲವಂತೆ.

ಪುಸ್ತಕದಲ್ಲಿ ೫೦೧ ಚುಟುಕು ಪ್ರಶ್ನೆಗಳಿವೆ. ನಮ್ಮ ಕಳೆದುಹೋದ ಇತಿಹಾಸದ ಸತ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ. ಸುಮಾರು ೧೦೦ ಪುಟಗಳ ಈ ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.