ಬರಿ ಸುಳ್ಳು, ಸ್ವಲ್ಪ ಮಳ್ಳು

ಬರಿ ಸುಳ್ಳು, ಸ್ವಲ್ಪ ಮಳ್ಳು

ಬರಹ

ಕತೆ ಹೇಳೋದು, ಕೇಳೋದು ಕಲೆ ಅಂತಾರೆ. ಕತೆ ಕಟ್ಟೋದು, ಕುಟ್ಟೋದು ಸಹಾ ಕಲೇನೇ ಅಲ್ವಾ? ಕೇಳುವವರಿದ್ದರೆ ಅವರ ಕಥೆನೇ ಮುಗಿಸಿಬಿಡೋ ಕತೆಗಾರರಿಗೆ ನಮ್ಮಲ್ಲಿ ‘ಪಂಚು’ ಅಂತ ಹೆಸರು. ಈ ಪಂಚುಗಳ ಕತೆ ಹೇಳುವ ಶೈಲಿ ಸಮ್ಮೋಹಕ. ಇವರು ಒಳ್ಳೆ ಟೈಮ್ ಪಾಸ್ ಐಟಮ್ಗಳು. ಸುಳ್ಳು ಇವರ ಕತೆಗಳ ಜೀವ, ಅತಿಶಯೋಕ್ತಿಯೇ ಉಸಿರು. ಆದರೆ ತಮ್ಮ ಭಯಂಕರ ಕಲ್ಪನಾಶಕ್ತಿಯಿಂದಾಗಿ ಆ ಕತೆಗಳಿಗೆ ಅದ್ಭುತ ರಂಜನೀಯತೆಯನ್ನೊದಗಿಸಿಬಿಡುತ್ತಾರೆ. ಮಜಾ ಅಂದರೆ ಇವರು ಹೇಳುವ ಕತೆಗಳಲ್ಲಿ ಇವರೇ ನಾಯಕರು.

ತನ್ನ ಮಹಾತ್ಮೆಯನ್ನು ತಾನೇ ಸಾರುವ ಪಂಚುವೊಬ್ಬನ ಬಾಯಲ್ಲೆ ಅವನ ಕತೆಯೊಂದನ್ನು ಕೇಳಿ............

ಸುಮಾರು ವರ್ಷಗಳ ಹಿಂದಿನ ಕತೆ ಇದು. ಅದು ದೊಡ್ಡಹಬ್ಬದ (ದೀಪಾವಳಿ) ದಿನ. ಮಧ್ಯಾಹ್ನ ಊಟ ಮುಗಿಸಿ ಜಗುಲಿಯ ತುದಿಗೆ ಒಬ್ಬನೇ ಕುಳಿತಿದ್ದೆ, ಬರಿ ಲುಂಗಿಯಲ್ಲಿ. ಗುಂಯ್..........ಅಂತ ಹಾರಿ ಬಂದ ಜೇನ್ನೊಣವೊಂದು ಹೆಗಲ ಮೇಲೆ ಕುಳಿತುಬಿಟ್ಟಿತು. ‘ಎಲಾ ಜೇನೇ, ನನ್ನ ಹೆಗಲನ್ನೇ ಏರುವ ಧೈರ್ಯವೇ?’ ಎಂದುಕೊಂಡವನೇ ಆ ಜೇನನ್ನು ಹಿಡಿದು ಅದರ ಕಾಲಿಗೆ ನೂಲನ್ನು ಸುತ್ತಿದೆ. ಎಲ್ಲಿ ಹೋಗುತ್ತದೋ ನೋಡೋಣ ಎಂದು ಅದನ್ನು ಹಾರಿ ಬಿಟ್ಟೆ.
ಜೇನ್ನೊಣ ಹಾರಿತು ಹಾರಿತು ಹಾರಿತು, ಕೈಲಿ ಹಿಡಿದಿದ್ದ ನೂಲುಂಡೆ ಖರ್ಚಾಗುತ್ತ ಬಂತು. ನಾನು ಬಿಟ್ಟೇನೇ? ನೂಲಿನ ಒಂದು ತುದಿಗೆ ಹಾರುತ್ತಿರುವ ಜೇನು, ಇನ್ನೊಂದು ತುದಿಗೆ ಒಡುತ್ತಿರುವ ನಾನು. ಅದು ಎಲ್ಲಿ ಹೋಗುತ್ತದೆ ನೋಡೇ ಬಿಡೋಣ ಎಂದು ನಿರ್ಧರಿಸಿಯಾಗಿತ್ತು. ಜೇನು ಗದ್ದೆ ದಾಟಿತು, ಅಗಳ ದಾಟಿತು, ಗುಡ್ಡ ಏರಿತು ಇಳಿಯಿತು, ಕಾನು ಹೊಕ್ಕಿತು. ಅದರ ಹಿಂದೆ ನಾನು.
ಜೇನ್ನೊಣ ಹಾರೋದನ್ನು ನಿಲ್ಲಿಸಿತು. ನೋಡುತ್ತೇನೆ ಬ್ರಹದಾಕಾರದ ಜೇನು ಹೊಟ್ಟು. ಎಷ್ಟು ದೊಡ್ಡದೆಂದರೆ, ಸುಮಾರು ಎರದಾಳು ಉದ್ದ (೧೨ ಅಡಿ) ಒಂದಾಳು ಅಗಲ. ಆಸೆ ಹುಟ್ಟದೇ ಇದ್ದೀತೆ? ಆದರೆ ಜೇನನ್ನು ಬಡಿಯುವುದು ಹೇಗೆ? ಹೊಳೆಯಿತು ಐಡಿಯಾ. ಬೀಡಿ ಸೇದುವ ಚಟವಿತ್ತಲ್ಲಾ ನನಗೆ, ಸರಿ, ಸ್ಥಳದಲ್ಲೆ ಸೂಡಿಯೊಂದನ್ನು ತಯಾರಿಸಿ ಬೆಂಕಿಕೊಟ್ಟೆ. ಜೇನನ್ನೇನೊ ಹಾರಿಸಿದೆ ಆದರೆ ಬ್ರಹ್ಮಾಂಡ ಗಾತ್ರದ ಹೊಟ್ಟನ್ನು ಮನೆಗೊಯ್ಯೋದು ಹೇಗೆ? ತಡ ಮಾಡಲಿಲ್ಲ. ಉಟ್ಟಿದ್ದ ಲುಂಗಿಯನ್ನೇ ಬಿಚ್ಚಿದೆ. ಅದರೊಳ್ಗೆ ಜೇನು ಹುಟ್ಟನ್ನು ನಾಕಾರು ತುಂಡುಗಳನ್ನಾಗಿ ಮಾಡಿ ಕಟ್ಟಿದೆ. ಹೊರುವಂಥಾ ಹೊರೆಯಾ ಅದು? ನಾನು ಹಳಬನಲ್ಲವಾ? ಸೊಪ್ಪಿನ ಹೊರೆಯನ್ನು ಹತ್ತಾರು ಮೈಲಿ ಹೊತ್ತು ನಡೆದವನು. ಅದೇ ಉಮೇದಿಯಲ್ಲಿ ಬೆನ್ನಿನಮೇಲೆ ಜೇನಿನ ಹೊರೆ ಹೊತ್ತು ನಡೆದೆ. ಗುಡ್ಡವನ್ನಿಳಿಯುವಾಗಲೇ ದೂರದಿಂದ ನನ್ನನ್ನು ನೋಡಿದ ಊರವರಿಗೆ ಆಶ್ಚರ್ಯ. ಆಳಿಗಿಂತ ದೊಡ್ಡ ಹೊರೆಯಲ್ಲವೇ? ಅದಕ್ಕೆ. ಉಸಿರು ಕಟ್ಟಿ ಊರಿನೆಡೆಗೆ ಮುಂದುವರೆದೆ. ಮೈಯೆಲ್ಲ ಜೇನುತುಪ್ಪ. ಹೆಜ್ಜೆಯೂರಿದಲ್ಲೆಲ್ಲ ಅದರದೇ ಅಂಟಂಟು.
ಹಬ್ಬದ ದಿನ, ಮನೆತುಂಬ ನೆಂಟರು. ಎಲ್ಲರಿಗೂ ಸಂಶಯ ನಾನು ಮನುಷ್ಯನೊ ರಾಕ್ಷಸನೊ ಅಂತ. ಸರಿ ಜೇನುತುಪ್ಪ ತಿನ್ನುವ ಕೆಲಸ ಶುರುವಾಯಿತು. ತಿಂದರು ತಿಂದರು ತಿಂದರು, ತಿಂದು ಮುಗಿಸಲಾದೀತೆ? ಪಕ್ಕದ ಮನೆಯವರನ್ನು ಕರೆದೆ, ಅವರ ನೆಂಟರೂ ಬಂದರೂ. ಊಹೂಂ. ಖಾಲಿಯಾಗದು ಜೇನುತುಪ್ಪ. ಮನೆಯಲ್ಲಿದ್ದ ಬಾಟಲಿಗಳಲ್ಲೆಲ್ಲ ತುಂಬಿ ಅವರಿಗೆಲ್ಲ ಕೊಟ್ಟೆ. ಅಷ್ಟಾದರೂ ನನಗೆ ಎರಡು ಡಬ್ಬಿ (ಸುಮಾರು ೮೦ ಕೆಜಿ) ಜೇನುತುಪ್ಪ ಉಳಿಯಿತು.

......................

ಈ ಪರಿ ಕಥಾಕಾಲಕ್ಷೇಪದ ನಂತರ ಕೇಳುಗರ ಸಂದೇಹಗಳನ್ನು ಊಹಿಸಬಲ್ಲೆ. ಜೇನ್ನೊಣವನ್ನು ನೂಲು ಕಟ್ಟಿ ಹಿಂಬಲಿಸುವುದು ಸಾಧ್ಯವೇ? ನಡು ಮಧ್ಯಹ್ನದಲ್ಲಿ ಜೇನು ಬಡಿಯೋದು ಹೇಗೆ? ನಾಲ್ಕೈದು ಕ್ವಿಂಟಾಲ್ ಭಾರವನ್ನು ಹೆಗಲ ಮೇಲೆ ಹೊರಲು ಸಾಧ್ಯವೇ? ಮುಂತಾದ ಪ್ರಶ್ನೆಗಳೆಲ್ಲ ಕೇಳತಕ್ಕದ್ದಲ್ಲ. ಅದು ಪಂಚುಗಳಿಗೆ ಮಾತ್ರ ಸಾಧ್ಯವಾಗಬಹುದಾದ ಕೆಲಸಗಳು.

(ವಿವಿಧ ಕಲೆಗಳಲ್ಲಿ ಪಾರಂಗತರಾದ ಪಂಚುಗಳಿಂದ ಇನ್ನಷ್ಟು ಸ್ಯಾಂಪಲ್ ಗಳನ್ನು ನಿರೀಕ್ಷಿಸಿ.)