ಬಲು ಅಪರೂಪದ ಚೌಸಟ್ ಯೋಗಿನಿ ದೇಗುಲ

ಬಲು ಅಪರೂಪದ ಚೌಸಟ್ ಯೋಗಿನಿ ದೇಗುಲ

ನಮ್ಮಲ್ಲಿ ಒಂದು ಮಾತಿದೆ - ೬೪ ಬಗೆಯ ವಿದ್ಯೆಗಳನ್ನು ಕಲಿತವನಿಗೆ ಜೀವನದಲ್ಲಿ ಸೋಲು ಉಂಟಾಗದು ಎಂದು. ಈ ಅರವತ್ತ ನಾಲ್ಕು ವಿದ್ಯೆಗಳ ಸಮ್ಮಿಳಿತವೇ ಆಗಿರುವ ಚೌಸಟ್ (ಹಿಂದಿಯಲ್ಲಿ ೬೪) ಯೋಗಿನಿ ದೇಗುಲವು ಬಹಳ ಅಪರೂಪದ ದೇವಸ್ಥಾನಗಳಲ್ಲಿ ಒಂದು. ಭಾರತದಲ್ಲಿ ಈ ರೀತಿಯ ಯೋಗಿನಿ ದೇವಸ್ಥಾನಗಳು ಬಲು ಅಪರೂಪ. ಒಂದು ಒಡಿಶಾದಲ್ಲಿರುವ ಚೌಸಟ್ ಯೋಗಿನಿ ದೇವಸ್ಥಾನವಾದರೆ ಮತ್ತೊಂದು ಮಧ್ಯಪ್ರದೇಶದ ಮಿತೌಲಿ ಎಂಬ ಪ್ರದೇಶದಲ್ಲಿರುವ ಯೋಗಿನಿ ದೇವಾಲಯ. 

ಒಡಿಶಾ ರಾಜಧಾನಿ ಭುವನೇಶ್ವರದಿಂದ ಸುಮಾರು ೨೦ ಕಿ.ಮೀ. ದೂರವಿರುವ ಹಿರಾಪುರ ಎಂಬ ಪುಟ್ಟ ಗ್ರಾಮದಲ್ಲಿರುವ ಈ ದೇಗುಲವು ಬಹಳ ಅಪರೂಪದ್ದು. ಅಪರೂಪದ್ದು ಏಕೆಂದರೆ ಈ ದೇಗುಲವು ವೃತ್ತಾಕಾರದಲ್ಲಿದ್ದು ತಾಂತ್ರಿಕ ಪದ್ಧತಿಯ ರೀತಿ ನಿರ್ಮಾಣಗೊಂಡಿದೆ. ನಿಸರ್ಗದ ಐದು ಶಕ್ತಿಗಳಾದ ಜಲ, ವಾಯು, ಅಗ್ನಿ, ಆಕಾಶ ಮತ್ತು ಭೂಮಿಯನ್ನು ಪೂಜಿಸಲು ಅನುಕೂಲವಾಗುವಂತೆ ಈ ದೇವಸ್ಥಾನದ ನಿರ್ಮಾಣವಾಗಿದೆ ಎಂದು ನಂಬಲಾಗಿದೆ. ಈ ದೇವಸ್ಥಾನದ ಒಳಗಡೆ ವೃತ್ತಾಕಾರದಲ್ಲಿ ೬೪ ದೇವಿಗಳ ವಿಗ್ರಹಗಳಿವೆ. ಪ್ರತಿಯೊಂದು ವಿಗ್ರಹ ಭಿನ್ನ ಭಿನ್ನವಾಗಿದೆ. ಯೋಗಿನಿ ದೇವತೆಗಳು ಆಕಾಶ ಮಾರ್ಗದಲ್ಲೇ ಚಲಿಸುತ್ತಾರೆ ಎಂಬ ಕಾರಣಕ್ಕಾಗಿ ಈ ದೇವಸ್ಥಾನಕ್ಕೆ ಮೇಲ್ಛಾವಣಿ ಅಳವಡಿಸಲಾಗಿಲ್ಲ, ಗೋಪುರವನ್ನೂ ನಿರ್ಮಾಣ ಮಾಡಲಾಗಿಲ್ಲ. ಇಪ್ಪತ್ತೆರಡು ಅಡಿ ವ್ಯಾಸ ಹೊಂದಿರುವ, ವೃತ್ತಾಕಾರದ ಈ ದೇಗುಲವನ್ನು ಸುಮಾರು ಒಂಬತ್ತನೆಯ ಶತಮಾನದಲ್ಲಿ ಆಗ ರಾಜ್ಯವಾಳುತ್ತಿದ್ದ ಹೀರಾ ಮಹಾದೇವಿ ಎಂಬ ರಾಣಿಯು ನಿರ್ಮಿಸಿದಳು ಎಂಬ ಉಲ್ಲೇಖಗಳಿವೆ. 

ದೇವಾಲಯದ ಪ್ರಾಂಗಣದ ಪ್ರಾರಂಭದಲ್ಲಿ ಮೊದಲಿಗೆ ಒಂದು ಸಣ್ಣದಾದ ಈಶ್ವರನ ಗುಡಿ, ಅದರ ಪಕ್ಕದಲ್ಲೇ ಮಾತಾಶಕ್ತಿಯ ವಿಗ್ರಹ. ಅದರಿಂದ ಸ್ವಲ್ಪವೇ ದೂರದಲ್ಲಿ ಕೇವಲ ನಾಲ್ಕು ಅಡಿ ಎತ್ತರದ ಶ್ರೀಯಂತ್ರದ ಸಂಕೇತವಾಗಿರುವ ವರ್ತುಲಾಕಾರದ ರೂಪದಲ್ಲಿರುವ ಕಲ್ಲಿನ ಪುರಾತನ ದೇವಸ್ಥಾನ ಚೌಸಟ್ ಯೋಗಿನಿ ಮಂಡಲ. ನಮ್ಮ ದೇಶದಲ್ಲಿ ಬಹುವಾಗಿ ಪ್ರಚಲಿತದಲ್ಲಿರುವ ತಾಂತ್ರಿಕ ವಿದ್ಯೆಯನ್ನು ನಿರೂಪಿಸಲು ನಿರ್ಮಾಣವಾದ ಮಂದಿರ ಇದಿರಬಹುದು ಎಂದು ಹೇಳುತ್ತಾರೆ. ಭಾರತದ ಪ್ರತಿಯೊಂದು ದೇಗುಲವೂ ಭಿನ್ನ. ಏಕೆಂದರೆ ಪ್ರತಿಯೊಂದು ದೇವಾಲಯವೂ ಅದರದ್ದೇ ಆದ ಮಹತ್ವ, ಶಕ್ತಿ ಮತ್ತು ಪುರಾತನ ವೈಶಿಷ್ಟ್ಯವನ್ನು ಹೊಂದಿದೆ. ಈ ಕಾರಣದಿಂದ ಯೋಗಿನಿ ಮಂದಿರವೂ ತನ್ನ ಭಿನ್ನ ಸ್ವರೂಪದಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ.

ಈ ದೇಗುಲದ ಬಗ್ಗೆ ವಾಸ್ತು ಶಾಸ್ತ್ರ ಹೇಳುವುದು ಹೀಗೆ - ಈ ವರ್ತುಲಾಕಾರದ ದೇಗುಲದಲ್ಲಿ ೬೪ ದಿಕ್ಕುಗಳಿಂದ ಶಕ್ತಿಗಳು ಸಮ್ಮಿಳಿತವಾಗಿರುವುದರಿಂದ ಅದರ ಉನ್ನತಿಯು ಎಲ್ಲೆಡೆ ಪಸರಿಸುವ ಕಾರಣದಿಂದಾಗಿ ಈ ದೇಗುಲಕ್ಕೆ ಬೇರೆ ದೇವಸ್ಥಾನಗಳಿಗೆ ಇರುವಂತೆ ಛಾವಣಿ ಇಲ್ಲ. ಗೋಪುರವೂ ಇಲ್ಲ. ಅಂದರೆ ದೇವಾಲಯವು ಆಕಾಶಕ್ಕೆ ತೆರೆದುಕೊಂಡಿದೆ. ಇದು ಯೋಗಿನಿ ಪೂಜಾ ಕ್ರಮಕ್ಕೆ ಸೂಕ್ತವಾಗಿದೆ. ಈ ೬೪ ವಿಗ್ರಹಗಳಲ್ಲಿ ಮಧ್ಯದಲ್ಲಿರುವ ಒಂದು ವಿಗ್ರಹವು ಗಾತ್ರದಲ್ಲಿ ತುಸು ದೊಡ್ಡದಾಗಿದ್ದು, ಕಮಲದ ಮೇಲೆ ನಿಲ್ಲಿಸಲಾಗಿದೆ. ಹತ್ತು ಕೈಗಳನ್ನು ಹೊಂದಿರುವ ಈ ವಿಗ್ರಹವನ್ನು ಮುಖ್ಯ ಮಾಯಮಯ ದೇವಿ ಅಥವಾ ಮಹಮಾಯಾ ದುರ್ಗಾ ಎಂದು ಕರೆಯುತ್ತಾರೆ. ಈ ಕಾರಣದಿಂದ ಈ ದೇಗುಲವನ್ನು ಮಹಮಾಯ ದೇವಸ್ಥಾನ ಎಂದೂ ಕರೆಯುತ್ತಾರೆ. 

೬೪ ಬಗೆಯ ವಿದ್ಯೆಗಳನ್ನು ಕಲಿತವ ಎಲ್ಲೂ ಸೋಲುವುದಿಲ್ಲ ಎಂಬುದು ಪುರಾತನ ಮಾತಾಗಿತ್ತು. ಅದೇ ಬಗೆಯ ವಿದ್ಯೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ದೇಗುಲದ ೬೪ ವಿಗ್ರಹಗಳು ನಿರ್ಮಾಣವಾಗಿದೆ ಎಂದು ನಂಬಲಾಗಿದೆ. ಬಹಳ ಪುರಾತನ ದೇವಾಲಯವಾದುದರಿಂದ ಮತ್ತು ಆಕ್ರಮಣಕಾರರ ದಾಳಿಗೆ ತುತ್ತಾಗಿ ಬಹಳಷ್ಟು ಯೋಗಿನಿಯರ ವಿಗ್ರಹಗಳು ಭಗ್ನಗೊಂಡಿವೆ. ಭಗ್ನ ಮೂರ್ತಿಗಳನ್ನು ನೋಡುವಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಆದರೂ ಈ ದೇಗುಲವನ್ನು ನೋಡಲೇ ಬೇಕು. ಅಷ್ಟೊಂದು ವೈವಿಧ್ಯತೆ ತುಂಬಿಕೊಂಡಿದೆ. ಈಗ ಪುರಾತತ್ವ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುವುದರಿಂದ ಇನ್ನಷ್ಟು ಹಾನಿಯಾಗುವುದು ತಪ್ಪಿದೆ. 

ವರ್ತುಲಾಕೃತಿಯಲ್ಲಿ ರಚನೆಯಾಗಿರುವ ೬೪ ವಿಗ್ರಹಗಳಲ್ಲಿ ತಾರಾ, ವಾರಾಹಿ, ಕೌಮಾರಿ, ಗೌರಿ, ಕುಬೇರಿ, ಇಂದ್ರಾಣಿ, ಯಮುನಾ, ಯಶ, ಸರಸ್ವತಿ, ಕಾಮಾಕ್ಯ, ವಿನಾಯಕಿ, ವಾಯುವೇಗ, ಮಂಗಳೆ, ಮಹಾಲಕ್ಷ್ಮಿ, ನರಸಿಂಗಿ ಮೊದಲಾದ ಹೆಸರಿನ ಯೋಗಿನಿಯರು ತಮ್ಮ ತಮ್ಮ ವಾಹನಗಳ ಮೇಲೆ ನಿಂತಿರುವ ಭಂಗಿಯನ್ನು ಕಾಣಬಹುದು. ವೃತ್ತಾಕಾರದಲ್ಲಿ ೬೦ ಮೂರ್ತಿಗಳು ಮತ್ತು ನಡುಭಾಗದಲ್ಲಿರುವ ದೇಗುಲದಲ್ಲಿ ನಾಲ್ಕು ಯೋಗಿನಿಯರು ಒಟ್ಟಿಗೆ ೬೪ ವಿಗ್ರಹಗಳಿವೆ. ಎಲ್ಲಾ ವಿಗ್ರಹಗಳು ನಿಂತುಕೊಂಡ ಭಂಗಿಯಲ್ಲಿವೆ. ನವಿಲು, ಮೊಸಳೆ, ಹಾವು, ಹಲ್ಲಿ, ಕೋಣ, ಕತ್ತೆ, ಇಲಿ, ಆಮೆ ಮೊದಲಾದ ಪ್ರಾಣಿ ಪಕ್ಷಿ ಮೊದಲಾದ ಜೀವಿಗಳ ವಾಹನಗಳ ಮೇಲೆ ಈ ಮೂರ್ತಿಗಳು ನಿಂತುಕೊಂಡಿರುವುದನ್ನು ಕಾಣಬಹುದು. ಪ್ರತೀ ದೇವಾಲಯಗಳಲ್ಲಿ ಇರುವಂತೆ ಇಲ್ಲಿ ಗಣಪತಿಯ ವಿಗ್ರಹ ಇಲ್ಲ. ಆದರೆ ವಿನಾಯಕಿ ಎನ್ನುವ ಸ್ತ್ರೀ ರೂಪದ ಗಣಪತಿಯನ್ನು ಕಾಣಬಹುದು. ಈ ಯೋಗಿನಿ ವಿಗ್ರಹವನ್ನು ಗಣೇಶ್ವರಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. 

ದೇವಸ್ಥಾನವನ್ನು ಪ್ರವೇಶಿಸುವ ಜಾಗದಲ್ಲಿ ಜಯ-ವಿಜಯರ ಮೂರ್ತಿಗಳು ಇವೆ. ಈ ೬೪ ವಿಗ್ರಹಗಳ ಜೊತೆಗೆ ನಾಲ್ಕು ಏಕಪಾದ ಭೈರವ ಮೂರ್ತಿಗಳು ಹಾಗೂ ಮಂಟಪದ ಹೊರಭಾಗದಲ್ಲಿ ಒಂಬತ್ತು ನವದುರ್ಗಿಯರ (ಕಾತ್ಯಯಿನಿ) ವಿಗ್ರಹಗಳು ಹೀಗೆ ಒಟ್ಟು ೮೧ ವಿಗ್ರಹಗಳು ಇವೆ. ಬಹಳಷ್ಟು ವಿಗ್ರಹಗಳು ಭಗ್ನಗೊಂಡಿವೆ ಇಲ್ಲವೇ ಕಾಲನ ಹೊಡೆತಕ್ಕೆ ಶಿಥಿಲಗೊಂಡಿವೆ ಆದರೆ ೬೧ನೇ ಸಂಖ್ಯೆಯ ಯೋಗಿನಿಯ ವಿಗ್ರಹ ನಾಪತ್ತೆಯಾಗಿದೆ. ಆ ವಿಗ್ರಹ ಇರುವ ಜಾಗ ಖಾಲಿಯಾಗಿಯೇ ಉಳಿದಿದೆ. ಒಂದು ದೇಗುಲದಲ್ಲಿ ಇಷ್ಟೊಂದು ಮೂರ್ತಿಗಳಿರುವುದು ಅಪರೂಪದ ಸಂಗತಿಯೇ ಸರಿ. ದೇಗುಲದ ಹೊರಭಾಗದಲ್ಲಿ ಮಹಾಮಾಯಾ ಎನ್ನುವ ಪುಷ್ಕರಣಿಯೂ ಇದೆ.

ಈ ಊರಿನ ಗ್ರಾಮಸ್ಥರು ಬಹಳ ಭಕ್ತಿ ಭಾವದಿಂದ ಈ ಯೋಗಿನಿಯರನ್ನು ಪೂಜಿಸುತ್ತಾರೆ. ಪ್ರತೀ ಡಿಸೆಂಬರ್ ತಿಂಗಳಲ್ಲಿ ಚೌಸಟ್ ಯೋಗಿನಿ ಮಹೋತ್ಸವ ಜರುಗುತ್ತದೆ. ಆ ಸಂದರ್ಭದಲ್ಲಿ ಒಡಿಶಾದ ಸಾಂಸ್ಕೃತಿಕ ವೈಭವದ ಅನಾವರಣವಾಗುತ್ತದೆ. ದೇವಾಲಯದ ಎದುರಲ್ಲೇ ಎಂದೂ ಬತ್ತಿ ಹೋಗದಿರುವ ನೀರಿನ ಒರತೆಯಿರುವ ಪುಟ್ಟ ಬಾವಿ ಇದೆ. ನೀವು ಎಂದಾದರೂ ಒಡಿಶಾ ರಾಜ್ಯಕ್ಕೆ ಪ್ರವಾಸ ಹೋದರೆ ಈ ದೇವಸ್ಥಾನವನ್ನು ನೋಡಲು ಮರೆಯದಿರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ