" ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!

" ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!

 

 

ಹಿಂದಿನ ದಿನ ಹುಲಿಯ ದರ್ಶನ ಮಾಡಿದ ನಾವು ಮುಂಜಾನೆ ಎದ್ದು ಸಿದ್ದತೆ ನಡೆಸಿ ತಯಾರಾದೆವು.ಮುಂಜಾವಿನ ಕಾನನದ ತಂಗಾಳಿ ಮನಸ್ಸನ್ನುಉಲ್ಲಾಸ ಗೊಳಿಸಿ ಮುದ ನೀಡಿತು. ಹಾಗೆಯೇ   " ಬಳ್ಳೆ"  ಎಂಬ ಮಾಯಾ ಲೋಕದ ನೆನಪಿನಾಳಕ್ಕೆ ಜಾರಿದೆ. ಅಯ್ಯೋ  ಕ್ಷಮಿಸಿ ನಿಮಗೆ    " ಬಳ್ಳೆ"   ಎಂಬ ಮಾಯಾಲೋಕ ಪರಿಚಯಿಸುತ್ತೇನೆ ಬನ್ನಿ .ಈ ಜಾಗ ಕಾಕನ ಕೋಟೆಯ ಕಾಡಿನ ಒಂದು ಮುಖ್ಯ ಆನೆ ಶಿಭಿರ.ಇಲ್ಲಿ ಒಂದು ಚೆಕ್ ಪೋಸ್ಟ್ ಇದ್ದು ಕರ್ನಾಟಕ -ಕೇರಳ ನಡುವೆ ಓಡಾಡುವ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಕರ್ನಾಟಕದ ಹೆಗ್ಗಡದೇವನ ಕೋಟೆ ಯಿಂದ  ಕೇರಳ ರಾಜ್ಯದ ಮಾನಂದವಾಡಿ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ  ಚಲಿಸುವುದು ಒಂದು ಸವಾಲೇ ಸರಿ .ರಸ್ತೆಯಲ್ಲಿ ಹಳ್ಳ ಕೊಳ್ಳಗಳಿದ್ದು ವಾಹನಗಳ ಚಕ್ರಗಳ ಸಂಕಟ ಹೇಳ ತೀರದು.ಈ ಮಧ್ಯೆ ಎಲ್ಲಿಂದಲೋ ಇದ್ದಕ್ಕಿದಂತೆ ರಸ್ತೆಗೆ  ಆಗಮಿಸುವ ಕಾಟಿಗಳು[ಕಾಡು ಎಮ್ಮೆ /ಕೋಣ ], ಆನೆಗಳು  ಹಳ್ಳಿಯಲ್ಲಿ ರಸ್ತೆಗೆ ಅಡ್ಡ ಬರುವ  ಎಮ್ಮೆಗಳನ್ನು ನೆನಪಿಗೆ ತರುತ್ತವೆ.  ವಾಹನ ಚಾಲನೆ ಮಾಡುವಾಗ ಇವುಗಳನ್ನು ನೆನಪಿನಲ್ಲಿ ಇಟ್ಟುಕೊಂಡೆ ಚಲಿಸಬೇಕಾಗುತ್ತದೆ.ನಾವುಗಳೂ ಸಹ ಇಲ್ಲಿಗೆ ಬರುವಾಗ ಹಲವಾರು ಬಾರಿ  ಇಂತಹ ಸಂದರ್ಭ ಎದುರಿಸಿದ್ದೇವೆ .ಇನ್ನೂ ಒಂದು ತಮಾಷೆ ಅಂದ್ರೆ ಇಲ್ಲಿರುವ ಒಂದು ಕುಂಡಾ  ಅಂತ ಕರೆಯುವ[ ಕುರುಡು ಆನೆ ಎಂದು ಹೇಳುತ್ತಾರೆ ]  ಆನೆಯದು !!! ಇದು ರಸ್ತೆಯಲ್ಲಿ ಬರುವ ಲಾರಿಗಳನ್ನು ಅಡ್ಡ ಹಾಕಿ  ಲಾರಿಯಲ್ಲಿ ಲೋಡ್ ಆಗಿರುವ  ತಿನ್ನುವ ಪದಾರ್ಥ ಗಳನ್ನೂ  ಸೊಂಡಿಲಿನಲ್ಲಿ ಹುಡುಕಿ  ತಿಂದು ನಂತರ ಲಾರಿಯನ್ನು ಬಿಡುತ್ತದೆ .ಈ ಚಾಣಾಕ್ಷ ಆನೆಯ ಬಗ್ಗೆ ಇಲ್ಲಿ ಹಲವಾರು ಕಥೆಗಳು ಹರಿದಾಡಿವೆ.     " ಬಳ್ಳೆ"ಕ್ಯಾಂಪ್ ಗೆ ನಾವು ಬಂದಾಗಲೆಲ್ಲ  ನಮ್ಮನ್ನು ಎದುರುಗೊಂಡು ಸ್ವಾಗತ ನೀಡಲು ನಮ್ಮ ಗೆಳೆಯರೊಬ್ಬರು ಇರುತ್ತಾರೆ. ಅವರಿಗಾಗಿ ನಾವು ಪ್ರೀತಿಯಿಂದ  ಕ್ಯಾರೆಟ್  ತೆಗೆದು ಕೊಂದು ಹೋಗಿರುತ್ತೇವೆ. ಎಲ್ಲಿರುತ್ತದೋ ಗೊತ್ತಿಲ್ಲ ನಾವು ಇಳಿದ ಕೂಡಲೇ ಓಡಿಬಂದು ಈ " ಜಿಂಕೆ " ನಿಲ್ಲುತ್ತದೆ.ನಾವು ನೀಡುವ ಕ್ಯಾರೆಟ್ ತಿಂದು ನಮ್ಮ ಕಾರಿನ ಅಕ್ಕ ಪಕ್ಕ ಸುಳಿದಾಡಿ ನಂತರ ಕಾಡಿಗೆ ದೌಡಾಯಿಸುತ್ತದೆ.ಇದು ಸುಮಾರು ಐದಾರು ವರ್ಷಗಳಿಂದ  ನಡೆದುಕೊಂಡು ಬಂದ ಗೆಳೆತನ ವಾಗಿದೆ. ನಮ್ಮ ಕಣ್ಣುಗಳೂ ಸಹ ಅಲ್ಲಿಗೆ ಹೋದೊಡನೆ ಈ ಗೆಳೆಯನಿಗಾಗಿ ಹುಡುಕುತ್ತವೆ. ಇಲ್ಲೇ ಪಕ್ಕದಲ್ಲೇ ಇದೆ ಕಾಡಿನ  ದೇವಿಯ  ಒಂದು ದೇವಾಲಯ ಈ ದೇವರಿಗೆ ಇಲ್ಲಿನ ಪ್ರತಿಯೊಬ್ಬರೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹಾಗೆ ಸ್ವಲ್ಪ ಮುಂದೆ ಬಂದರೆ       ಇಲ್ಲಿದೆ ಒಂದು ಗಿರಿಜನರ ಒಂದು ಹಾಡಿ.[ ಕಾಡಿನ ವಾಸಿಗಳು ವಾಸಿಸುವ ಗುಡಿಸಿಲುಗಳ  ಗುಂಪು ]  ಮಣ್ಣಿನ ಗೋಡೆ ಹಾಕಿದ ಬಿದುರಿನ ಗಳುಗಳ ಜೊತೆಗೆ ಜೊಂಡು ಹುಲ್ಲನ್ನು ಹೊದಿಸಿದ ಚಾವಣಿಯ ಈ ಪುಟ್ಟ ಗುಡಿಸಿಲಿನಲ್ಲಿ   ವನ್ಯ ಜೀವಿಗಳ ಜೊತೆಯಲ್ಲಿ ಪ್ರತಿ ಕ್ಷಣಗಳನ್ನೂ ಕಳೆವ ಜೀವಿಗಳು. ನಾವು ಭೇಟಿ ನೀಡಿದಾಗ ಅಲ್ಲಿ ಆಟ ಆಡುತ್ತಿದ್ದ  ಮಕ್ಕಳನ್ನು ನೋಡಿ  ಮನಸು ಮರುಗಿತು. ಇವರೂ ಸಹ ನಮ್ಮ ದೇಶದ ಆಸ್ತಿ ಅಲ್ಲವೇ?? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿಸಿತು. ಅರೆ ಇದೇನಿದು ಆನೆ ರಾಯರು      ಇಲ್ಲಿ ವಿರಮಿಸಿದ್ದಾರೆ  ದೂಳಿನ ಸ್ನಾನ  ಅವರಿಗೆ ನಡೆಯುತ್ತಿದೆ !!! ಹೌದು  ನೋಡ್ರೀ ಆನೆ ರಾಯರಿಗೆ ನೀರಿನ ಸ್ನಾನಕ್ಕೆ ಮೊದಲು ಮಣ್ಣಿನ ಧೂಳಿನ ಮಜ್ಜನ ಆಗಲೇ ಬೇಕೆಂದು  ತಿಳಿಯಿತು.ಸುಮಾರು ಅರ್ಧ ಘಂಟೆ ನಡೆದ ಈ  ಕೆಲಸದ ನಂತರ ಮಾವುತರು ಆನೆಯನ್ನು ಕಬಿನಿ ಹಿನ್ನೀರಿನ   ಕಾಲುವೆಗೆ  ಕರೆತರಲು ಸಿದ್ದವಾದರು. ನಾವು ಹೊರಟೆವು. ಅಗೋ ನೋಡಿ ಆನೆ ನಡೆದು ಬರುವ ನೋಟವನ್ನು ಆನೆಯ ಮೇಲೆ ಕುಳಿತ ಮಾವುತರು ಆನೆಯನ್ನು  ಕರೆದುಕೊಂಡು     ಬರುವ ಆ ದೃಶ್ಯ  ''ಗಂಧದ ಗುಡಿಯ '' ಸನ್ನಿವೇಶಗಳನ್ನು ನೆನಪಿಸಿತು. ಬನ್ನಿ ಆನೆಯ ಜಳಕ ನೋಡೋಣ    ಅಬ್ಭ ಸುಮಾರು  ಒಂದು ಘಂಟೆಗೂ ಹೆಚ್ಚು ಕಾಲ ಆನೆಯ ಮೈಯನ್ನು ಉಜ್ಜಿ   ಧೂಳಿನಿಂದ   ಕೊಳೆಯಾಗಿದ್ದ ಆನೆಯನ್ನು  ಫಳ ಫಳ ಹೊಳೆಯುವಂತೆ ಮಾಡಿದ ಆ ಮಾವುತನ  ಶ್ರಮಕ್ಕೆ ಜೈ ಹೋ ಎನ್ನದೆ ಇರಲಾಗಲಿಲ್ಲ. ಅಂದ ಹಾಗೆ ಈ ಆನೆ ಯಾವುದು ಗೊತ್ತ ??? ನಮ್ಮ ಮೈಸೂರಿನ ದಸರಾಕ್ಕೆ ಪ್ರತೀ ವರ್ಷ ಆಗಮಿಸುವ " ಅರ್ಜುನ " ಎಂಬ ಗಂಡಾನೆ. ತುಂಟ ಸ್ವಭಾವದವನಾದ ಇವನು ಆಗಾಗ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಅಂತಾ ಅಂದು ಕೊಳ್ಳುತಿದ್ದಂತೆ  ವೇಣು ಬನ್ನಿ ಬನ್ನಿ  ಡಿ.ಬಿ. ಕುಪ್ಪೆ ಗೆ ಹೋಗ್ಬೇಕು  ಲೇಟಾಗುತ್ತೆ ಅಂದ್ರು . ಬರ್ತೀನಿ ಲೇಟಾಯ್ತು.ಮುಂದಿನ  ಸಂಚಿಕೆಯಲ್ಲಿ  ...ಅತ್ತ ಕೇರಳ  ಇತ್ತ  ಕರ್ನಾಟಕ  !!!!

Comments