ಬಸವಣ್ಣನವರ ನಾಡಾದ ಬಸವ ಕಲ್ಯಾಣ
ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿದ್ದ ಬಸವ ಕಲ್ಯಾಣ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ವೈಭವದ ನಗರ. ಕಳಚೂರಿ ಬಿಜ್ಜಳನ ರಾಜಧಾನಿಯಾಗಿದ್ದ ಬಸವ ಕಲ್ಯಾಣದಲ್ಲಿ ಶರಣರ ಕ್ರಾಂತಿ ನಡೆಯಿತು. ಹಲವು ವಚನಕಾರರಿಗೆ ನೆಲೆ ನೀಡಿದ್ದ ಈ ನೆಲದಲ್ಲಿ ಬಸವಣ್ಣನವರು ರೂಪಿಸಿದ ಅನುಭವ ಮಂಟಪ ಇದ್ದಿದ್ದು. ಕರಿಕಲ್ಲಿನ ಕೋಟೆ, ಹಲವು ದೇವಾಲಯಗಳು, ಮಸೀದಿಗಳು ಇರುವ ಬಸವ ಕಲ್ಯಾಣದಲ್ಲಿ ಬಸವಣ್ಣ ಧ್ಯಾನ ಮಾಡುತ್ತಿದ್ದ ಗುಹೆ, ಅಂಬಿಗರ ಚೌಡಯ್ಯ, ಅಲ್ಲಮಪ್ರಭು ಅವರ ಸ್ಮಾರಕ ಮಂದಿರಗಳಿವೆ.
ಬೀದರ್ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಬಸವಕಲ್ಯಾಣ ಬಹುಮುಖ್ಯ ಧಾರ್ಮಿಕ ಕೇಂದ್ರ ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನ 108 ಅಡಿ ಎತ್ತರದ ಪುತ್ಥಳಿ ಲೋಕಾರ್ಪಣೆಗೊಂಡಿದೆ. ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಾಣಗೊಂಡಿರುವ ಈ ಪುತ್ಥಳಿ ವಿಶ್ವದ ಅತಿ ಎತ್ತರದ ಬಸವ ಪುತ್ಥಳಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಐತಿಹಾಸಿಕ ಶರಣ ಸ್ಮಾರಕಗಳನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಸರ್ಕಾರ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮೂಲಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದೆ. ಕೂಡಲಸಂಗಮ ಮಾದರಿಯಲ್ಲಿ ಬಸವಕಲ್ಯಾಣವನ್ನು ಪ್ರವಾಸಿ ಕೇಂದ್ರವಾಗಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಮತ್ತಷ್ಟು ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ಜಗದ್ಗುರು ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಬಸವ ಧರ್ಮಪೀಠ ಟ್ರಸ್ಟ್ ಯೋಜನೆ ರೂಪಿಸಿದೆ. ಟ್ರಸ್ಟ್, ''ಬಸವ ಮಹಾಮನೆ' ಮೂಲಕ ಕಲ್ಯಾಣವನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸಿದೆ.
ನಿಸರ್ಗದ ಮಡಿಲಲ್ಲಿ ನಿಂತಿದೆ 108 ಅಡಿ ಎತ್ತರದ ಪುತ್ಥಳಿ : ಶರಣ ಸಂಸ್ಕೃತಿ ಪುನರುತ್ಥಾನದ ಸಂಕಲ್ಪದೊಂದಿಗೆ ಬಸವಕಲ್ಯಾಣದ ಹೃದಯ ಭಾಗದಲ್ಲಿ ಸುಮಾರು 22 ಎಕರೆ ವಿಶಾಲ ಪರಿಸರದಲ್ಲಿ ಬಸವ ಮಹಾಮನೆ ಬೆಳೆದು ನಿಂತಿದೆ. ಈ ನಿಸರ್ಗದ ಮಡಿಲಲ್ಲಿ 108 ಅಡಿ ಎತ್ತರದ ಬಸವ ಪುತ್ಥಳಿ, ಶರಣ ಶೈಲ, ಶರಣ ಗ್ರಾಮ, ಅಕ್ಕಮಹಾದೇವಿ ಗವಿ ನಿರ್ಮಾಣ ಮಾಡಲಾಗಿದ್ದು, ಬಸವಾದಿ ಶರಣರ ಜೀವನದ ಚಿತ್ರಣವೇ ಕಣ್ಮುಂದೆ ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ.
ಬುದ್ಧಗಯಾದ 164 ಅಡಿ ಎತ್ತರದ ಬುದ್ಧನ ಪ್ರತಿಮೆ ಮತ್ತು ಆಂಧ್ರಪ್ರದೇಶ-40 ಅಡಿ ಎತ್ತರದ ಲಾರ್ಡ್ ಬುದ್ಧ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿ ಪಡೆದಿವೆ. ಈಗ ಇವುಗಳ ಸಾಲಿಗೆ ಬಸವ ಪುತ್ಥಳಿ ಸಹ ಸೇರಿದೆ. ಇದಕ್ಕಾಗಿ ಸುಮಾರು 6 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಕ್ಷರಧಾಮ ಮಾದರಿ 3ಡಿ ಚಿತ್ರಣ : ವಿಶೇಷವಾಗಿ ದೆಹಲಿಯಲ್ಲಿರುವ ಅಕ್ಷರ ಧಾಮದ ಮಾದರಿಯಲ್ಲಿ ಪುತ್ಥಳಿ ಕೆಳಗೆ ಎರಡು ಅಂತಸ್ತಿನ 'ಶರಣ ಶೈಲ' ಪೀಠ ನಿರ್ಮಾಣ ಮಾಡಿ, ಆ ಮೂಲಕ ಬಸವಣ್ಣನವರ ಜೀವನ ಚರಿತ್ರೆಯ ಪ್ರಮುಖ 32 ಪ್ರಸಂಗಗಳ 3ಡಿ (ಧ್ವನಿ ಮತ್ತು ಬೆಳಕು) ವ್ಯವಸ್ಥೆ ಮಾಡಲಾಗಿದೆ.
ಪುತ್ಥಳಿ ದರ್ಶನಕ್ಕಾಗಿ 108 ಮೆಟ್ಟಿಲು ಸಹ ನಿರ್ಮಿಸಲಾಗಿದೆ. ಗುಡ್ಡವನ್ನೇ ಕೊರೆದು ಬಸವಣ್ಣ, ಅಕ್ಕಮಹಾದೇವಿ ಗುಹೆ ನಿರ್ಮಿಸಲಾಗಿದೆ. ಆದರ್ಶವನ್ನು ನುಡಿದು, ಅದರಂತೆ ಬದುಕಿದ ಶರಣರ ಮೂರ್ತಿಗಳನ್ನು ಕೆತ್ತಲಾಗಿದೆ. ಕೆಂಪು ಕಲ್ಲು ಹಾಗೂ ಸುಣ್ಣ ಮಿಶ್ರಿತ ಗುಹೆಯೊಳಗೆ ಹವಾನಿಯಂತ್ರಿತ ವಾತಾವರಣ ನೈಸರ್ಗಿಕವಾಗಿ ದೊರಕಿದೆ. ಸಮೀಪದಲ್ಲಿಯೇ ಶರಣ ಗ್ರಾಮವೂ ನಿರ್ಮಾಣಗೊಂಡಿದೆ, ಕಲ್ಯಾಣ ಕ್ರಾಂತಿಗೆ ಕಾರಣವಾದ ಸನ್ನಿವೇಶ ಅನಾವರಣ ಗೊಳಿಸುತ್ತದೆ. ಬಸವಾನುಯಾಯಿಗಳನ್ನು ವರ್ಷಕ್ಕೊಮ್ಮೆ ಕಲ್ಯಾಣದಲ್ಲಿ ಸಮಾವೇಶಗೊಳಿಸುವ ಉದ್ದೇಶದಿಂದ ಕಲ್ಯಾಣಪರ್ವ ಎಂಬ ಧಾರ್ಮಿಕ ಸಮಾವೇಶ ನಡೆಸಿ ಶರಣ ವೈಭವ ಮತ್ತೆ ಕಂಗೊಳಿಸುವಂತೆ ಮಾಡಲಾಗಿದೆ.
"ಕಾಯಕವೇ ಕೈಲಾಸ ಎಂದು ಸಾರಿದ ಭಕ್ತಿ ಭಂಡಾರಿ ಬಸವಣ್ಣನವರ ವಿಚಾರಧಾರೆ ಇಂದಿಗೂ ಪ್ರಸ್ತುತ. ಆಧುನಿಕ ಯುಗದ ಪ್ರವರ್ತಕ ಎಂದು ಪ್ರಸಿದ್ಧಿ ಪಡೆದ ಮಹಾನ್ ಚೇತನ ನಮಗೆಲ್ಲರಿಗೂ ಎಂದೆಂದಿಗೂ ದಾರಿದೀಪ "ಬನ್ನಿ ಬಸವಕಲ್ಯಾಣಕ್ಕೆ ಪ್ರವಾಸ ಹೋಗೋಣ...."
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು