ಬಾಗಲಕೋಟೆಯ ಸುತ್ತ ಮುತ್ತ - ೨

ಬಾಗಲಕೋಟೆಯ ಸುತ್ತ ಮುತ್ತ - ೨

ಬರಹ

ಎರಡನೇ ದಿನ ನಾವು ಹೊರಟದ್ದು ಗೋಕಾಕ ಮತ್ತು ಗೊಡಚಿನಮಲ್ಕಿ ಜಲಪಾತಗಳನ್ನು ನೋಡಲು. ಬಾಗಲಕೋಟೆಯಿಂದ ಗದ್ದನಕೇರಿ, ಕಲಾದಗಿ, ಲೋಕಾಪುರ ಮಾರ್ಗವಾಗಿ ಯರಗಟ್ಟಿಗೆ ಬಸ್ಸೊಂದರಲ್ಲಿ ಬಂದೆವು. ಯರಗಟ್ಟಿಯಿಂದ ಟೆಂಪೋದಲ್ಲಿ ಗೋಕಾಕಕ್ಕೆ ಪಯಣ. ಗೋಕಾಕ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆಯಿತ್ತು. ನೀರಿನ ಪ್ರಮಾಣ ಕಡಿಮೆ ಇದ್ದಾಗ ಜಲಪಾತವೊಂದರ ಎತ್ತರ ಅರಿವಾಗುವುದು. ಸುಮಾರು ೪೦೦ ಅಡಿಯಷ್ಟು ಎತ್ತರವಿದ್ದು, ೧೭೫ ಅಡಿಯಷ್ಟು ಅಗಲವಿರುವ ಗೋಕಾಕ ಜಲಪಾತದಲ್ಲಿ ನೀರಿನ ಹರಿವು, ಮೇಲ್ಭಾಗದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಡ್ಕಲ್ ಅಣೆಕಟ್ಟಿನಿಂದ ಹೊರಬಿಡುವ ನೀರಿನ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಆಗಿನ್ನೂ ಆಣೆಕಟ್ಟು ತುಂಬಿರಲಿಲ್ಲವಾದ್ದರಿಂದ ಸಹಜವಾಗಿಯೇ ನೀರಿನ ಪ್ರಮಾಣ ಕಡಿಮೆಯಿತ್ತು. ಜಲಪಾತದ ತಳದಲ್ಲಿ ಸಣ್ಣ ಗುಹೆಯಂತಹ ಜಾಗವಿದ್ದು, ಸ್ಥಳೀಯರು ಅಲ್ಲಿವರೆಗೆ ಇಳಿದು ಕೂತ್ಕೊಂಡಿರುವುದು ಕಾಣುತ್ತಿತ್ತು. ಸಣ್ಣ ಚುಕ್ಕಿಗಳಂತೆ ಕಾಣುತ್ತಿದ್ದ ಅವರು, ಅಲ್ಲೇನು ಮಾಡುತ್ತಿದ್ದರು ಎಂದು ಸರಿಯಾಗಿ ಕಾಣುತ್ತಿರಲಿಲ್ಲ. ಸಮಾನ ಅಂತರದಲ್ಲಿ ೩ ಕವಲುಗಳಲ್ಲಿ ನೀರು ಕೆಳಗೆ ಧುಮುಕುತ್ತಿತ್ತು. ಆ ದೃಶ್ಯವೇ ಅಷ್ಟು ಸುಂದರವಾಗಿ ಕಾಣುತ್ತಿರಬೇಕಾದರೆ, ಆಣೆಕಟ್ಟಿನಿಂದ ನೀರು ಬಿಟ್ಟಾಗ ಕಾಣುವ ದೃಶ್ಯ ಇನ್ನಷ್ಟು ರಮಣೀಯವಾಗಿರಬಹುದೆಂದು ಗ್ರಹಿಸಿದೆ. ಜಲಪಾತದ ಸ್ವಲ್ಪ ಮೇಲೆ ಬ್ರಿಟಿಷರು ನಿರ್ಮಿಸಿದ ಕಾಲುಸೇತುವೆಯೊಂದಿದೆ.

ನಂತರ ಗೊಡಚಿನಮಲ್ಕಿಗೆ ಬಸ್ಸೊಂದರಲ್ಲಿ ತೆರಳಿದೆವು. ಗೊಡಚಿನಮಲ್ಕಿ ಹುಕ್ಕೇರಿ ತಾಲೂಕಿನಲ್ಲಿದೆ. ಹಳ್ಳಿಯಿಂದ ೩ಕಿಮಿ ಉತ್ತಮ ಸ್ಥಿತಿಯಲ್ಲಿರುವ ಟಾರು ರಸ್ತೆಯಲ್ಲಿ ನಡೆದು, ನಂತರ ಇನ್ನೊಂದು ೫ ನಿಮಿಷ ಗದ್ದೆ, ಬಯಲುಗಳ ನಡುವೆ ನಡೆದರೆ ಮಾರ್ಕಾಂಡೇಯ ನದಿ ನಿರ್ಮಿಸುವ ಗೊಡಚಿನಮಲ್ಕಿ ಜಲಪಾತವನ್ನು ತಲುಪಬಹುದು. ಇಲ್ಲೂ ಅಣೆಕಟ್ಟಿನ ಕಾಟ. ನಾವು ತೆರಳಿದ ವರ್ಷವೇ ಮೇಲ್ಭಾಗದಲ್ಲಿ ಬರುವ ಶಿರೂರು ಎಂಬ ಹಳ್ಳಿಯಲ್ಲಿ ಮಾರ್ಕಾಂಡೇಯ ನದಿಗೆ ಅಣೆಕಟ್ಟನ್ನು ಕಟ್ಟಲಾಗಿತ್ತು. ನೀರಿನ ಹರಿವು ಕಡಿಮೆ ಇದ್ದರೂ, ಈ ಸ್ಥಳ ಬಹಳ ಸುಂದರವಾಗಿದೆ. ಎತ್ತರ ೫೦ ಅಡಿಯಷ್ಟು ಮಾತ್ರ ಇದ್ದರೂ, ಸುಮಾರು ೧೨೦ಅಡಿಯಷ್ಟು ಅಗಲವಿದೆ ಗೊಡಚಿನಮಲ್ಕಿ ಜಲಪಾತ. ಕಪ್ಪು ಕಲ್ಲುಗಳ ಮೇಲೆ ಹರಿದುಬಂದು ರಭಸದಿಂದ ಧುಮುಕುವ ಚಿತ್ರವನ್ನು ಕಲ್ಪಿಸಿಕೊಂಡೇ ಪುಳಕಿತನಾದೆ. ಈಗ ಒಂದು ಬದಿಯಲ್ಲಿ ಮಾತ್ರ ಸ್ವಲ್ಪ ನೀರು ಹರಿಯುತ್ತಿದ್ದರೂ ಸೌಂದರ್ಯಕ್ಕೇನೂ ಕಡಿಮೆಯಿರಲಿಲ್ಲ. ಮಾರ್ಕಾಂಡೇಯ ನದಿ ಹಾಗೇ ಮುಂದಕ್ಕೆ ಹರಿದು ಸಿಂಗಾಪುರ ಎಂಬಲ್ಲಿ ಘಟಪ್ರಭಾ ನದಿಯನ್ನು ಸೇರುತ್ತದೆ.

ಬಾಗಲಕೋಟೆಗೆ ಮರಳಿದ ನಾವು ನಂತರ ಪೇಟೆಯೊಳಗೆ ತೆರಳಿದೆವು. ಹೊಸದಾಗಿ ನಿರ್ಮಿಸಲಾಗಿದ್ದ ರಸ್ತೆಯಲ್ಲಿ ಸುತ್ತು ಬಳಸಿ ಬಸ್ಸು ನಿಲ್ದಾಣ ಮತ್ತು ಪೇಟೆಗೆ ತೆರಳಿದ್ರೆ ೧೨ಕಿಮಿ. ಮುಳುಗಡೆಯಾಗಲಿರುವ ರಸ್ತೆಯಲ್ಲಿ ತೆರಳಿದರೆ ೩ಕಿಮಿ. ಇನ್ನೂ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ತುಂಬಿರಲಿಲ್ಲವಾದ್ದರಿಂದ, ಮುಳುಗಡೆಯಾಗಲಿರುವ ಮನೆ, ರಸ್ತೆ, ದೇವಳಗಳು ಇನ್ನೂ ಬಳಕೆಯಾಗತೊಡಗಿದ್ದವು. ಒಂದೆಡೆ ರಸ್ತೆ ಅರ್ಧ ಕಿಮಿ ದೂರದವರೆಗೂ ೨ಅಡಿಯಷ್ಟು ನೀರಿನಲ್ಲಿ ಮುಳುಗಿದ್ದರೂ, ಜನರು ಆ ರಸ್ತೆಯನ್ನು ಬಳಸುತ್ತಿದ್ದರು. ಸೈಕಲ್ಲು, ಕಾರು, ಟೆಂಪೋ, ರಿಕ್ಷಾ, ಬೈಕು...ಎಲ್ಲಾ ಆ ರಸ್ತೆಯಲ್ಲಿ ಓಡಾಡತೊಡಗಿದ್ದವು. ರಸ್ತೆ ದಾಟಿ ನಂತರ ಇರುವ ದೇವಳವೊಂದರಲ್ಲಿ, ದೇವರ ಮೂರ್ತಿ ಇನ್ನೂ ಇತ್ತು ಮತ್ತು ಭಜನೆ ನಡೆಯುತ್ತಿತ್ತು. ಆ ದೇವಸ್ಥಾನ ಅರ್ಧ ಮುಳುಗಡೆಯಾಗಲಿದ್ದು, ಕೊನೆ ಕ್ಷಣದವರೆಗೆ ಕಾದು ನಂತರ ಅಲ್ಲಿಂದ ದೇವರನ್ನು ಹೊಸದಾಗಿ ಕಟ್ಟಲಾಗಿರುವ ದೇವಸ್ಥಾನಕ್ಕೆ ಕೊಂಡೊಯ್ಯುವ ಇರಾದೆ. ಹಾಗೆ ಕೆಲವೊಂದು ಮನೆಗಳನ್ನು ಜನರು ಇನ್ನೂ ಬಿಟ್ಟು ಹೋಗಿರಲಿಲ್ಲ. ಹೊಸದಾಗಿ ನಿರ್ಮಿಸಲಾಗಿರುವ ಬಾಗಲಕೋಟೆಯಲ್ಲಿ, ಇವರಿಗೆಲ್ಲಾ ವಸತಿ ಸೌಕರ್ಯವನ್ನು ಕೊಡಲಾಗಿದ್ದರೂ ಕೊನೆ ಕ್ಷಣದವರೆಗೂ ತಮ್ಮ ಮನೆಯಲ್ಲೇ ಇರುವಂತಹ ತುಡಿತ. ಹೆಚ್ಚೆಂದರೆ ಇನ್ನೊಂದು ತಿಂಗಳು ಅವರಲ್ಲಿರಬಹುದಿತ್ತು. ಅಷ್ಟರಲ್ಲಿ ನೀರು ಮೇಲೆ ಬರುವುದಿತ್ತು.

ಎರಡು ದಿನ ನನ್ನೊಂದಿಗೆ ಅಡ್ಡಾಡಿ ಪೂರ್ತಿ ಸುಸ್ತು ಹೊಡೆಸಿಕೊಂಡ ಅನಿಲ, ೩ನೇ ದಿನ ಬೆಳಗ್ಗೆ ಸ್ವಲ್ಪ ಉದಾಸೀನ ಮಾಡತೊಡಗಿದಾಗ 'ನಾನೊಬ್ಬನೇ ಹೋಗುತ್ತೇನೆ' ಎಂದೆ. ಆ ದಿನ ಇಳಕಲ್ ಸಮೀಪವಿರುವ ಕಪಿಲತೀರ್ಥ ಜಲಧಾರೆಯನ್ನು ನೋಡಲು ಹೊರಟಿದ್ದೆ. ಬಸ್ಸು ನಿಲ್ದಾಣಕ್ಕೆ ನನ್ನನ್ನು ಬಿಟ್ಟು 'ಫೋನ್ ಮಾಡು, ಸಂಜಿಗೆ' ಎಂದು ಅನಿಲ ಮನೆಗೆ ಹಿಂತಿರುಗಿದ. ಅಮೀನಗಡ, ಹುನಗುಂದ ಮಾರ್ಗವಾಗಿ ೯೦ ನಿಮಿಷದಲ್ಲಿ ಬಸ್ಸು ಇಳಕಲ್ ತಲುಪಿತು. ಕೆಸರು ತುಂಬಿ ರಾಡಿಯಾಗಿದ್ದ ಊರು. ಎಲ್ಲೂ ಒಂದು ಸರಿಯಾಗಿರುವ ರಸ್ತೆ ಕಾಣಬರಲಿಲ್ಲ. ಬಸ್ಸು ನಿಲ್ದಾಣದಲ್ಲಿ, ಜಲಧಾರೆಯಿದ್ದ ಊರಾದ ಕಬ್ಬರಗಿಗೆ ಬಸ್ ಇದೆಯಾ, ಎಂದು ಕೇಳಿದ್ರೆ 'ಇಲ್ರಿ' ಎಂಬ ಉತ್ತರ.

ಇಳಕಲ್ ನಿಂದ ೧೭ ಕಿಮಿ ದೂರದಲ್ಲಿದೆ ಕಬ್ಬರಗಿ. ಇಲ್ಲಿಂದ ಇನ್ನೆರಡು ಕಿಮಿ ತೆರಳಿ ೧೫ ನಿಮಿಷ ನಡೆದರೆ ಕಪಿಲತೀರ್ಥ ಎಂಬ ಸಣ್ಣ ಜಲಧಾರೆ. ಇಳಕಲ್, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ ಮತ್ತು ಕಬ್ಬರಗಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿದೆ. ಕಬ್ಬರಗಿಗೆ ಹೋಗಿ ಬರಲು ರಿಕ್ಷಾವೊಂದರಲ್ಲಿ ಕೇಳಿದಾಗ ೪೦೦ ಎಂದ. ಚೌಕಾಶಿ ಮಾಡಿದಾಗ ೩೫೦ಕ್ಕೆ ಒಪ್ಪಿದ. 'ನಿಮ್ಗೆ ಕಬ್ಬರ್ಗಿ ಒಳಗ ಎಲ್ಲೋಗ್ಬೇಕ್ರಿ ಸರ', ಎಂದು ಆಟೋ ಚಾಲಕ ಕೇಳಿದಾಗ, 'ನೀರ್ ಬೀಳ್ತದಲ್ಲ, ಅಲ್ಗೆ' ಎಂದೆ. 'ಓ ಕಪಿಲೆಪ್ಪ!' ಎಂದ. 'ಈಗ ನೀರ್ ಇರೋದ ಡೌಟರೀ ಸರ.. ಮಳಿ ಒಂದೆರಡ್ ದಿನಾ ಮಸ್ತ್ ಹೊಡೀತಂದ್ರ ಚಲೋ ನೀರ್ ಇರ್ತದ ನೋಡ್ರಿ' ಎಂದು ನನ್ನಲ್ಲಿ ಕೊರೆಯುತ್ತಾ ಹುಲಗೇರಿ ಮತ್ತು ಕಾಟಾಪುರ ದಾಟಿ ಕಬ್ಬರಗಿ ತಲುಪಿಸಿದ. ಇಲ್ಲಿಂದ ಮಣ್ಣಿನ ರಸ್ತೆಯಲ್ಲಿ ಮತ್ತೆರಡು ಕಿಮಿ ಓಡಿಸಿ ಸಣ್ಣ ಬೆಟ್ಟದ ಬುಡಕ್ಕೆ ತಂದು ನಿಲ್ಲಿಸಿದ. ರಿಕ್ಷಾದಿಂದ ಇಳಿದದ್ದೇ ತಡ, ೫ ಹೆಣ್ಣುಮಕ್ಕಳು ತಲೆ ಮೇಲೆ ಒಣಕಟ್ಟಿಗೆ ಹೊರೆ ಹೊತ್ತು ಪ್ರತ್ಯಕ್ಷ. 'ಅಯ್, ಪೋಟೋ ತೆಗೆಯಾಕತ್ತಾರ' ಎಂದು ಮುಸಿಮುಸಿ ನಗುತ್ತಾ ಹಳ್ಳಿಯೆಡೆ ಮುನ್ನಡೆದರು. ನಂತರ ಆಟೋ ಚಾಲಕನೇ ಮುನ್ನಡೆದು ನನಗೆ ದಾರಿ ತೋರಿಸಿ ಜಲಧಾರೆಯಿದ್ದ ಕಣಿವೆಯೆಡೆ ಕರೆತಂದ. ಒಂದು ಹನಿ ನೀರಿರಲಿಲ್ಲ! ಒಂದೆರಡು ದಿನದ ಹಿಂದೆ ನೀರು ಹರಿದುಹೋಗಿದ್ದ ಕುರುಹುಗಳಿದ್ದವು. ಜಾಗ ಚೆನ್ನಾಗಿತ್ತು. ನೀರು ಧುಮುಕುತ್ತಿದ್ದರೆ ಆ ಸ್ಥಳ ಇನ್ನಷ್ಟು ಚೆನ್ನಾಗಿ ಕಾಣುತ್ತಿತ್ತು. ಕಣಿವೆಯಿಂದ ಮೇಲೆ ಬಂದು ರಿಕ್ಷಾದೆಡೆ ನಡೆಯುತ್ತಿರುವಾಗ ಅನಿಲನ ಫೋನು, ಸುರಕ್ಷಿತವಾಗಿದ್ದೆನೋ ಇಲ್ವೋ ಎಂದು ತಿಳಿದುಕೊಳ್ಳಲು.

ಕಬ್ಬರಗಿ ಹಳ್ಳಿಯಲ್ಲಿ ಒಂದೆಡೆ ಹತ್ತಾರು ಮಂದಿ ಕುಳಿತಿದ್ದರು. ರಿಕ್ಷಾದಲ್ಲಿ ಕುಳಿತೇ ಅವರ ಫೋಟೊ ತೆಗೆಯುವಾಗ ಅವರಲ್ಲೊಬ್ಬ, 'ಯಾರ್ರಿ ಅದ, ಫೋಟೊ ಯಾಕ್ರಿ ಹೊಡಿಯಾಕತ್ತೀರಿ' ಎಂದ. ನನ್ನ ರಿಕ್ಷ ಚಾಲಕ, 'ದೂರದಿಂದ ಬಂದಾರ್ರಿ, ಕಪಿಲೆಪ್ಪ ನೋಡಾಕ, ಹಂಗೆ ಹಳ್ಳಿ ಫೋಟೊ ಹೊಡೀತಾರಂತ....' ಎಂದಾಗ, 'ಓ ಹಂಗೇನ, ತಡ್ರಿ ಮತ್ತ...ನಾವು ಸರಿ ಕುಂತ್ಕೊತೀವಿ' ಎನ್ನುತ್ತ ಶಿಸ್ತಾಗಿ ಕೂತು ಪೋಸು ಕೊಟ್ಟರು. ನಂತರ ರಿಕ್ಷಾ ಚಾಲಕನ ವಿನಂತಿ ಆತನದ್ದೊಂದು ಫೋಟೊ ತೆಗೆಯಬೇಕೆಂದು ಅದೂ ಕೂಡಾ ಆತನ ರಿಕ್ಷಾದೊಂದಿಗೆ ಅದು ಕೂಡಾ ಆತ ಹೇಳುವ ಸ್ಥಳದಲ್ಲಿ! ಒಪ್ಪಿದಾಗ, ಒಂದೆಡೆ ಸೂರ್ಯಕಾಂತಿಗಳಿದ್ದ ಹೊಲದ ಬದಿಯಲ್ಲಿ ರಿಕ್ಷಾ ನಿಲ್ಲಿಸಿ ಫೋಟೊ ತೆಗೆಸಿಕೊಂಡು, ವಿಳಾಸ ನೀಡಿ ಕಳಿಸಿಕೊಡುವಂತೆ ವಿನಂತಿಸಿದ.

ಸಂಜೆ ೬ ಗಂಟೆಗೆ ಬಾಗಲಕೋಟೆಯಿಂದ ಉಡುಪಿಗೆ ನನಗೆ ಬಸ್ಸಿತ್ತು. ಇಳಕಲ್ ನಿಂದ ಹಿಂತಿರುಗಿದಾಗ ೪.೩೦ ಆಗಿತ್ತು. ೩ ದಿನಗಳ ಪ್ರವಾಸ ಮುಗಿಸಿ, ಬಹಳ ಸ್ಥಳಗಳನ್ನು ತೋರಿಸಿದ ಅನಿಲನಿಗೊಂದು ಥ್ಯಾಂಕ್ಸ್ ಹೇಳಿ ಮರಳಿದೆ ಉಡುಪಿಗೆ.