ಬಾಗ್ದಾದ್'ನಿಂದ ವಿಸ್ತರಿಸಿದ 'ಖಗೋಳ' ದರ್ಶನದ ಗ್ರಸ್ತತೆ!
“Star gazing marries a child’s wonder to a genius’ intellect. Here, we journey into an astronomer’s universe, while marvelling at his mind” - ಅನಾಮಿಕ
ಖಗೋಳಶಾಸ್ತ್ರವು ಬಹುಶಃ ವೈಜ್ಞಾನಿಕ ಶಾಸ್ತ್ರಗಳಲ್ಲಿ ಅತ್ಯಂತ ಹಳೆಯ ಅಧ್ಯಯನಗಳಲ್ಲಿ ಒಂದಾಗಿದೆ. ನಮ್ಮ ಬರಿಗಣ್ಣಿಗೆ ಕಾಣಸಿಗುವ ಚಂದ್ರ, ನಕ್ಷತ್ರಗಳು, ಬಾಲಚುಕ್ಕಿ, ಧೂಮಕೇತು ಇತ್ಯಾದಿಗಳಿಂದ ಸೌರವ್ಯೂಹ, ನೇಸರ ಸುತ್ತು, ಬ್ರಹ್ಮಾಂಡದ ಹುಟ್ಟು, ಅದರ ವಿಸ್ತರಿಸುವ ಅಂಶ ಮತ್ತು ಅಂತ್ಯದವರೆಗೆ ಎಲ್ಲವು ಒಳಗೊಂಡ ಅಧ್ಯಯನವೇ 'ಖಗೋಳಶಾಸ್ತ್ರ'ವಾಗಿದೆ. ಮಾನವನು ಇರುಳಿನ ಗಗನಾದ್ಯಂತ ಹರಡಿಗೊಂಡ ಮಿನುಗುವ ನಕ್ಷತ್ರಗಳನ್ನು ನೋಡಿದಾಗಿನಿಂದ, ಈ ತಾರಾ- ಹೊದಿಕೆಯಾಚೆ ಏನಿದೆ ಎಂಬ ಉತ್ಸುಕತೆ ಕಾಡತೊಡಗಿತು; ಈ ಕಾತರ-ತವಕವೇ 'ಖಗೋಳಶಾಸ್ತ್ರ'ದ ಹುಟ್ಟಿಗೆ ಮತ್ತು ಅಸ್ತಿತ್ವದಲ್ಲಿರಲು ನೇರ ಕಾರಣವಾಗಿದೆ. ಪ್ರಾಚೀನ ಮಾನವ, ಆಕಾಶಕಾಯಗಳೊಂದಿಗೆ ಕಟ್ಟುಕಥೆ ಅಥವಾ ವ್ಯಕ್ತಿಗತ ಹಣೆಬರಹವನ್ನು ನೇಯ ತೊಡಗಿಸಿ ಮೌಢ್ಯತೆಯಿಂದ ಕೂಡಿದ ಜ್ಯೋತಿಶಾಸ್ತ್ರವನ್ನು ಹುಟ್ಟು ಹಾಕಿದರು. ಆದರೆ, ಯುಕ್ಲಿಡ್ ಮತ್ತು ನಂತರದ ಜ್ಞಾನಿಗಳು ಸೂರ್ಯ-ಚಂದ್ರನ ಅಂತಸ್ತು-ಚಲನೆ ಇತ್ಯಾದಿ ಎಣಿಸಿ 'ಖಗೋಳಶಾಸ್ತ್ರ'ಕ್ಕೆ ನಾಂದಿ ಹಾಡಿದರು. ತರುವಾಯ, ಸುಧಾರಿತ ತಂತ್ರಜ್ಞಾನದ ಉದ್ಗಮದೊಂದಿಗೆ, ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರವು ನಾಟಕೀಯ ಬೆಳವಣಿಗೆ ಕಂಡಿತು.
ಖಗೋಳ ದರ್ಶನದ ಗ್ರಸ್ತತೆ ಮಾನವನನ್ನು ಹಿಂದಿನಿಂದಲೂ ಸಂಶೋಧನೆಗೆ ಪ್ರೇರಿಸುತ್ತ ಬಂದಿದೆ. ಆದರೆ, ವಿಜ್ಞಾನದ ಇತಿಹಾಸದಲ್ಲಿ ಮೊತ್ತಮೊದಲ ವೈವಸ್ಥಿತ ಖಗೋಳ ಸಮೀಕ್ಷಾ ಮಂದಿರ (Observatory)ವು ಖಲೀಫಾ ಅಲ್-ಮಾಮುನ್ ಅವರ ಆಶ್ರಯದಲ್ಲಿ ಬಾಗ್ದಾದಿನಲ್ಲಿ ನಿರ್ಮಿಸಲಾಯಿತು. ಇದನ್ನು ಅನುಸರಿಸಿ, ಬಾಗ್ದಾದಿನಿಂದ ದಮಾಸ್ಕಸ್`ವರೆಗೆ ಅನೇಕ ಖಾಸಗಿ 'ಮೆರಿಡಿಯನ್ ಡಿಗ್ರಿ ಮಾಪಿಸುವ' ಖಗೋಳ ಸಮೀಕ್ಷಾ ಮಂದಿರಗಳನ್ನು ಕಟ್ಟಲಾಯಿತು. Al-Mamun's Arc Measurement Observatory, ಸೌರ ನಿಯತಾಂಕ ಮಂದಿರ ಮತ್ತು ಸೂರ್ಯ, ಚಂದ್ರ ಮತ್ತು ಗ್ರಹಗಳ ವಿವರವಾದ ವೀಕ್ಷಣೆಗಳನ್ನು ಸಫಲವಾಗಿ ವಹಿಸುವ ಸಮೀಕ್ಷಾ ಮಂದಿರಗಳನ್ನು ಸ್ಥಾಪಿಸಲಾಯಿತು. [ಅಲ್-ಮಾಮುನ್ ಆರ್ಕ್ ಮಾಪನ: ಅವರ ಖಗೋಳಶಾಸ್ತ್ರಜ್ಞರು ನೀಡಿದ ಮತ್ತೊಂದು ಗೋಷ್ವಾರೆಯ ಪ್ರಕಾರ 56⅔ ಅರೇಬಿಕ್ ಮೈಲಿಗಳು (ಪ್ರತಿ ಡಿಗ್ರಿಗೆ 111.8 ಕಿಮೀ); ಇದು 40,248 ಕಿ.ಮೀ ಸುತ್ತಳತೆಗೆ ಅನುರೂಪವಾಗಿದೆ]. ಖಗೋಳ ಸಮೀಕ್ಷಾ ಮಂದಿರಗಳಲ್ಲಿ ಸಂಶೋಧನೆ ನಡೆಸುತ್ತಿದ್ದ ಶಾಸ್ತ್ರಜ್ಞರಿಗೆ ನಕ್ಷತ್ರಗಳ ಇರುಹ-ಅಂತಸ್ತು ಅಧ್ಯಯನಿಸಲು ಮಹಾನ್ ಖಗೋಳಶಾಸ್ತ್ರಜ್ಞ ಅಬ್ದ್ ಅಲ್-ರಹಮಾನ್ ಅಲ್ ಸೂಫಿಯವರ ಮೇರುಕೃತಿ 'Catalogue of Stars' ಅನುಕೂಲವಾಗಿತ್ತು.
ಹತ್ತನೇ ಶತಮಾನದಲ್ಲಿ, 'ಬುವೈಹಿದ್ ರಾಜವಂಶ'ವು ಖಗೋಳಶಾಸ್ತ್ರದಲ್ಲಿ ವಿಸ್ತೃತವಾದ ಕಾರ್ಯಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಿತು. ಉದಾಹರಣೆಗೆ: 950 A.Dಯಲ್ಲಿ ಖಗೋಳವೀಕ್ಷಣೆಗಳಿಗೆ ಅನುಕೂಲವಾಗಲು ನಿರ್ಮಿಸಲಾದ ಬೃಹತ್ ಪ್ರಮಾಣದ ಉಪಕರಣಗಳನ್ನು ಶೇಖರಿಸಲು ಆ ಕಾಲದ ಅತ್ಯಾಧುನಿಕವಾದ ಸಮೀಕ್ಷ ಮಂದಿರವನ್ನು ಸ್ಥಾಪಿಸಲಾಯಿತು. ಇಬ್ನ್ ಅಲ್ ಆಲಂನಂತಹ ಖಗೋಳಶಾಸ್ತ್ರಜ್ಞರ ಝಿಜ್ನಲ್ಲಿ ಮಾಡಿದ ದಾಖಲೆಗಳಿಂದ ನಾವು ಇದನ್ನು ತಿಳಿದಿದ್ದೇವೆ. ಶರ್ಫುದೌಲಾ ಕೂಡ ಬಾಗ್ದಾದ್‌ನಲ್ಲಿ ಇದೇ ರೀತಿಯ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದರು. ಎಮಿರೇಟ್ಸ್ ಆಫ್ ಕಾರ್ಡೋಬಾ[ಇಸ್ಲಾಮಿಕ್ ಸ್ಪೇನ್]ದಲ್ಲಿ ಇಬ್ನ್ ಯೂನಸ್ ಮಿಸ್ರಿ ಮತ್ತು ಅಲ್-ಜರ್ಕಾಲ್ ಅವರ ದಾಖಲೆಗಳು ತಮ್ಮ ಕಾಲಕ್ಕೆ ಅತ್ಯಾಧುನಿಕ ಉಪಕರಣಗಳ ಬಳಕೆಯನ್ನು ಎತ್ತಿ ಹಿಡಿಯುತ್ತದೆ.
ಮೊತ್ತಮೊದಲ ಬೃಹತ್ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದವನು ಮಲಿಕ್ ಷಾ I, ಬಹುಶಃ ಇಸ್ಫಹಾನ್‌ನಲ್ಲಿ ಎಂದು ವಿಜ್ಞಾನದ ಇತಿಹಾಸಕಾರ ಥಾಮಸ್ ಗೋಲ್ದಸ್ಟೀನ್ ಪ್ರತಿಪಾದಿಸುತ್ತಾರೆ. ಇದೇ ಖಗೋಳ ವೀಕ್ಷಣಾಲಯದಲ್ಲಿ ಒಮರ್ ಖಯ್ಯಾಮ್ ಅವರು ಅನೇಕ ಇತರ ಸಹಯೋಗಿಗಳೊಂದಿಗೆ ಝಿಜ್'ಅನ್ನು ನಿರ್ಮಿಸಿದರು ಮತ್ತು ಫಾರ್ಸಿ ಸೌರ ಕ್ಯಾಲೆಂಡರ್ (Persian Solar Calendar) ಅಥವ ಜಲಾಲಿ ಕ್ಯಾಲೆಂಡರ್'ಅನ್ನು ರೂಪಿಸಿದರು. ಈ ಕ್ಯಾಲೆಂಡರ್'ನ ಆಧುನಿಕ ಆವೃತ್ತಿಯು ಇಂದಿಗೂ ಇರಾನ್‌ನಲ್ಲಿ ಅಧಿಕೃತವಾಗಿ ಬಳಕೆಯಲ್ಲಿದೆ. ಆ ಕಾಲದ ಕೆಲವು ಅತ್ಯುನ್ನತ ಖಗೋಳಶಾಸ್ತ್ರಜ್ಞರು ಅಲ್ಲಿ ಒಟ್ಟುಗೂಡಿ, ಒಮರ್ ಖಯ್ಯಾಮ್ ಸಹಯೋಗದಿಂದ 50 ವರ್ಷಗಳ ಅವಧಿಯಲ್ಲಿ ಟಾಲೆಮಿಕ್ ತಂತ್ರ (Ptolemaic System) ಲ್ಲಿ ಗಮನಾರ್ಹ ಮಾರ್ಪಾಡುಗಳನ್ನು ಮಾಡಿದರು.
ಅತ್ಯಂತ ಪ್ರಭಾವಶಾಲಿ ಖಗೋಳ-ವೀಕ್ಷಣಾಲಯವನ್ನು ಹದಿಮೂರನೇ ಶತಮಾನದಲ್ಲಿ ಹುಲೆಗು ಖಾನ್ ಸ್ಥಾಪಿಸಿದರು. ಈ ಖಗೋಳ-ವೀಕ್ಷಣಾಲಯದಲ್ಲಿ ಹುಲೆಗು ಖಾನ್ ಅವರಿಗೆ ವಿಶ್ರಾಂತಿ ವಸತಿ ಜೊತೆಗೆ ಬೃಹತ್ ಗ್ರಂಥಾಲಯ ಮತ್ತು ಮಸೀದಿಯ ಸೌಲಭ್ಯ ಒಳಗೊಂಡಿತ್ತು. ಇದೇ ವೀಕ್ಷಣಾಲಯದಲ್ಲಿ, ನಸೀರುದ್ದೀನ್ ಅಲ್-ತುಸಿ ಮರಘಾದಲ್ಲಿ ಅದರ ತಾಂತ್ರಿಕ ನಿರ್ಮಾಣದ ಮೇಲ್ವಿಚಾರಣೆ ನೆರವೇರಿಸಿದರು. ಅಂತಿಮವಾಗಿ, ತಕಿಯುದ್ದೀನ್ ಮುಹಮ್ಮದ್ ಇಬ್ನ್ ಮಾರುಫ್ 1577ರಲ್ಲಿ ಒಟ್ಟೋಮನ್'ನ ಇಸ್ತಾಂಬುಲ್'ನಲ್ಲಿ ಬೃಹತ್ ಆಧುನಿಕ ವೀಕ್ಷಣಾಲಯವನ್ನು ಸ್ಥಾಪಿಸಿದರು. ಆದಾಗ್ಯೂ, ಈ ವೀಕ್ಷಣಾಲಯವು ಅಲ್ಪಕಾಲಿಕವಾಗಿತ್ತು. ಕಾರಣ: ವೀಕ್ಷಣಾಲಯವು 1580ರಲ್ಲಿ ನೆಲಸಮಗೊಳಿಸಲಾಯಿತು. ಆದರೆ, ಹುಲೆಗು ಸ್ಥಾಪಿಸಿದ ಮರಘಾ ವೀಕ್ಷಣಾಲಯ, ಉಲುಗ್ ಬೇಗ್'ನ ಸಮರ್‌ಖಾಂಡ್ ವೀಕ್ಷಣಾಲಯ, ಇಸ್ಫಹಾನ್‌ನಲ್ಲಿರುವ ಮಲಿಕ್ಷಾ ವೀಕ್ಷಣಾಲಯ ಮತ್ತು ಗಜನ್ ಖಾನ್‌ನ ತಬ್ರೇಜ್ ವೀಕ್ಷಣಾಲಯ ಜಗತ್ತಿನ ಚೊಚ್ಚಲ ಖಗೋಳ ವೀಕ್ಷಣಾಲಯಗಳು ವ್ಯವಸ್ಥಿತ ಖಗೋಳದರ್ಶನಕ್ಕೆ ನಾಂದಿ ಹಾಡಿ ಖಗೋಳತಜ್ಞರಿಗೆ ಮುಂದಿನ ಸಂಶೋಧನೆಗೆ ಉಪಯುಕ್ತಕರವಾಗಿತ್ತು; ಮತ್ತು ಖಗೋಳ ಸಮೀಕ್ಷಾ ಮಂದಿರವೆಂಬ ನವ ಕಲ್ಪನೆಗೆ ಭದ್ರ ಬುನಾದಿ ಹಾಕಿತು.
ತಾರಾಲಯದ ವಿಜ್ಞಾನವೂ ಇಸ್ಲಾಮಿಕೇಟ್ ವಿಜ್ಞಾನಿಗಳಿಂದ ವಾಸ್ತುಶೈಲಿಯಾಗಿತ್ತು, ವಿಮಾನದ ಸಂಶೋಧಕರಾದ ಅಬ್ಬಾಸ್ ಇಬ್ನೆ ಫಿರ್ನಾಸ್ ಅವರು, ಕೃತಕ ಸೂರ್ಯ, ಚಂದ್ರ, ನಕ್ಷತ್ರಮಂಡಲ, ಚಂಡಮಾರುತಗಳನ್ನು ಒಳಗೊಂಡಿರುವ ಮತ್ತು ಸಂಪೂರ್ಣವಾಗಿ ಗಾಜಿನಿಂದ ರಚಿಸಲ್ಪಟ್ಟ ಒಂದು ಭವ್ಯ ತಾರಾಲಯವನ್ನು ಕಟ್ಟಿದರು. ಇದು ಜಗತ್ತಿನ ಪ್ರಪ್ರಥಮ ಪ್ಲಾನೆಟೇರಿಯಮ್ ಎಂದು ವಿಜ್ಞಾನದ ಇತಿಹಾಸಕಾರರು ಬಲವಾಗಿ ಪ್ರತಿಪಾದಿಸುತ್ತಾರೆ!
- ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.