ಬಾರೆ ಬಾರೆ ಪುಟ್ಟಮ್ಮ
ಬರಹ
ಬಾರೆ ಬಾರೆ ನನ್ನ ಪುಟ್ಟಮ್ಮ
ನಾಲ್ಕು ಹಲ್ಲು ತೋರು ನೀ ನನ್ನಮ್ಮ
ಮುದ್ದಿನ ರಾಣಿ ಗಿಡ್ಡು ಪುಟಾಣಿ
ಕೊಡುವೆನು ಬಾರೆ ಗುಂಡು ಬಟಾಣಿ
ಅಗಲದ ಹಣೆಗೆ ದುಂಡನೆ ಕುಂಕುಮ
ಗುಂಗುರು ಕೂದಲ ತೀಡುವೆ ಬಾರಮ್ಮ
ಕಿವಿಯಲಿ ಝುಮಕಿ ಹಾಕುವೆನು
ಕಣ್ಣಿಗೆ ಕಾಡಿಗೆ ಹಚ್ಚುವೆನು
ಪುಟಾಣಿ ಕಾಲ್ಗಳಲಿ ಘಲಘಲ ಗೆಜ್ಜೆ
ಮನೆಯೊಳಗೆಲ್ಲ ನಿನ್ನದೆ ಹೆಜ್ಜೆ
ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ
ಉಣಿಸುವೆ ಉಪ್ಪು ತುಪ್ಪದ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆಯುವೆ ಚಂದಮಾಮ
ತಟ್ಟಿ ಮಲಗಿಸಲಿಹಳು ನಿನ್ನಮ್ಮ
ಸಿಹಿ ಹಾಲನ್ನೀವೆ ಬಟ್ಟಲಿನಲಿ
ನಾನೂ ಸೇರುವೆ ನಿನ್ನಳಿನಲಿ
ಆಲಂಗಿಸು ನಿನ್ನ ಪುಟ್ಟ ಕೈಗಳಲಿ
ಆಡಿ ಪಾಡಿ ಸೋತು ಮಲಗು ನೀ ಬಳಲಿ