ಬಾಲವೇ ನಾಯಿಯನ್ನಾಡಿಸುತ್ತಿದೆ, ನೋಡಿದಿರಾ?!
ಅನುದಾನರಹಿತ ಶಾಲಾ ಮಂಡಲಿಗಳ ಒಕ್ಕೂಟ (ಕುಸ್ಮಾ - ಕುಸುಮದಂತ ಮೃದುವಲ್ಲ, ಬಿಡಿ!) ಜುಲೈ 16ರಿಂದ 22ರವರೆಗೆ ಶಾಲೆ ಮುಚ್ಚಿ ಪ್ರತಿಭಟಿಸುವ ಬೆದರಿಕೆ ಹಾಕಿವೆ. ಶಾಲೆ ಸ್ಥಾಪಿಸಿ ಎಂದು ಬೇಡಿಕೊಂಡಿದ್ದವರ್ಯಾರು? ಎಂದು ಕೇಳುವ ಕದಿರನ್ನು ಸರಕಾರ ಉಳಿಸಿಕೊಂಡಿಲ್ಲ! ಮಕ್ಕಳಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸಬೆಕಾದ್ದು ರಾಜ್ಯ ಸರಕಾರದ ಕಾಯ್ದೆಬದ್ಧ ಹೊಣೆ. ಆದರೆ ಹೊಣೆ ನಿಭಾಯಿಸಲು ಬೇಕಾದ ಸ್ವಾತಂತ್ರ್ಯ, ಸ್ವಾಯತ್ತತೆಯನ್ನು ಇದು ಗಿಟ್ಟಿಸಿಕೊಳ್ಳಲಿಲ್ಲ. ಪುಟ್ಟ ಮಕ್ಕಳಿಗೆ ಏನು ಕಲಿಸಬೇಕು; ಹೇಗೆ ಕಲಿಸಬೇಕೆಂಬ ನಿರ್ದಿಷ್ಟ ಗುರಿ ಮತ್ತು ಸುಬದ್ಧ Logistics ರೂಪಿಸಿಕೊಳ್ಳದೆ, ಅತ್ತ ಕೇಂದ್ರ ಸರಕಾರದ ದಬ್ಬಾಳಿಕೆಗೂ, ಇತ್ತ ಖಾಸಗಿ ಶಿಕ್ಷಣ ಷಾರ್ಕ್ಗಳೂ Blackmailಗೂ ಗುರಿಯಾಗುತ್ತಿದೆ; ಗಾಬರಿ-ಗಾಬರಿಯಾಗಿ, ಸರಕಾರೀ ಶಾಲೆಗಳನ್ನು ಮುಚ್ಚುವ, ಇಂಗ್ಲಿಷ್ ಶಾಲೆಗಳನ್ನು ತೆರೆಯುವ, ಅಸಮರ್ಥನೀಯ ತೀರ್ಮಾನಗಳನ್ನು ಸಾರಿಕೊಳ್ಳುತ್ತಿದೆ!
ಮಕ್ಕಳಿಗೆ ಮುಲಭೂತ ಜ್ಞಾನ-ಕೌಶಲಗಳನ್ನು ಒದಗಿಸುವುದು ಪ್ರಾಥಮಿಕ ಶಿಕ್ಷಣದ ಗುರಿ. ಪ್ರದೇಶದ ಭೌಗೋಳಿಕ, ಸಾಂಸ್ಕೃತಿಕ, ಪಾರಂಪರಿಕ ಜ್ಞಾನವೂ ಮುಲಭೂತ ಶಿಕ್ಷಣದ ಅಗತ್ಯ. ಅದನ್ನು ರಾಜ್ಯ ಸರಕಾರ ಪೂರ್ಣ ಹತೋಟಿಗೆ ತೆಗೆದುಕೊಳ್ಳಬೇಕು; ಕೇಂದ್ರದ CBSE, ICSE ಪಠ್ಯಕ್ರಮವನ್ನು ಎತ್ತಂಗಡಿ ಮಾಡಬೇಕು; ಶಿಕ್ಷಣದಲ್ಲಿ ಸಮಾನತೆಯನ್ನು ವ್ರತವಾಗಿ ಕೈಗೊಳ್ಳಬೇಕು. ಈಗ ಅದಿಲ್ಲದೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಭಾಷಾಧಾರಿತ ರಾಜ್ಯ ಸ್ವಾಯತ್ತತೆಯೇ ಅಳಿವಿನತ್ತ ಸಾಗುತ್ತಿದೆ!