ಬಾಲ್ಯಕಾಲ ಮಾಯಾಜಾಲ

ಬಾಲ್ಯಕಾಲ ಮಾಯಾಜಾಲ

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲೀಷ್ ಮೂಲ: ಸಾವಿತ್ರಿ ಬಾಬುಲ್ಕರ್, ಕನ್ನಡಕ್ಕೆ : ಶ್ಯಾಮಲಾ ಮಾಧವ
ಪ್ರಕಾಶಕರು
ವಿಕಾಸ ಪ್ರಕಾಶನ, ವಿಜಯನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ : ೨೦೨೧

"ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ. ಎಂಬತ್ತು ವರ್ಷಗಳ ಹಿಂದೆ ನಿಧಾನವಾಗಿ ಸರಿದು ಹೋದ ಎಂಥ ಸುಂದರ ದಿನಗಳವು ! ಬಾಲ್ಯಕಾಲ ಬೀಸಿದ ಆ ತಂಬೆಲರ ಮಾಯಾಜಾಲದೊಳಗೆ ನಾನು ಕಳೆದೇ ಹೋದೆ.

ಸಾರಸ್ವತ ಕೊಂಕಣಿ ಸಮಾಜದ ಆಗಿನ ಕಾಲದ ಜನರ ಜೀವನದ ರೀತಿ, ನೀತಿಗಳು ಉತ್ತಮ ದಾಖಲಾತಿ ಕೃತಿಯುದ್ದಕ್ಕೂ ನಡೆದಿದೆ. ಸಾಂಸ್ಕೃತಿಕವಾಗಿ ಅತ್ಯಂತ ಉನ್ನತ ಆದರೆ ಅಷ್ಟೇ ಉದಾರ ಮತ್ತು ಸರಳ ಕುಟುಂಬವೊಂದರ ಕಿರಿಯ ಸದಸ್ಯೆಯಾಗಿ ಸಾವಿತ್ರಿಯವರು ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಡ ಅಂದಿನ ಬದುಕು ಲೇಖಕಿಯ ವಿಶಿಷ್ಟ ಕಥನ ಶೈಲಿಯಿಂದ ಹೃದ್ಯ ಗದ್ಯ ಕಾವ್ಯವಾಗಿ ಹೊಮ್ಮಿದೆ.

ಈ ಕೃತಿ ವಿಶೇಷವಾಗಿ ನನ್ನನ್ನು ಸೆಳೆದದ್ದು ಸಾವಿತ್ರಿಯವರ ಬಾಲ್ಯ ಸಹಜ ಕುತೂಹಲದ ಅಸಂಖ್ಯ ಪ್ರಶ್ನೆಗಳಿಂದ; ಆ ಪ್ರಶ್ನೆಗಳಲ್ಲಿ ಹಾಗೂ ಆ ಪುಟ್ಟ ಪೋರಿಯ ಮಾನಸಿಕ ಸ್ವಗತಗಳಲ್ಲಿ ಜಿನುಗುವ ಅಪ್ಪಟ ತಿಳಿಹಾಸ್ಯದ ಒಸರಿನಿಂದ. ನಳಿನ್ ಮಾಮಿಯಂಥ ಅಪೂರ್ವ ಸ್ನೇಹಮಯಿ ಸ್ತ್ರೀ ಈ ಕೃತಿಯ ಓದಿನಿಂದ ನನ್ನ ಭಾವಕೋಶಕ್ಕೆ ದೊರಕಿದ ಅಪೂರ್ವ ರತ್ನ !

ಎಂಬತ್ತು ವರ್ಷಗಳಷ್ಟು ಹಿಂದಿನ ನಮ್ಮ ಊರಿನ ಕಥಾನಕವನ್ನು ಇಂಗ್ಲಿಷ್ ಭಾಷೆಯಿಂದ ತನ್ನೆಲ್ಲ ಮಣ್ಣಿನ ಗಂಧದೊಡನೆ ಸೊಗಸಾದ ಕನ್ನಡದಲ್ಲಿ ನಿರೂಪಿಸಿ, ಸಾವಿತ್ರಿಯವರ ಬಾಲ್ಯದ ಮಾಯಾಕತೆಯ ಚೆಲುವನ್ನು, ಸಂಸ್ಕೃತಿಯ ಬನಿಯನ್ನು ನಮಗೆ ಬಸಿದು ಕೊಟ್ಟವರು ಶ್ಯಾಮಲಾ ಮಾಧವ ಅವರು. ಅವರಂಥ ಸಮರ್ಥ, ವಾತ್ಸಲ್ಯಮಯಿ ಅನುವಾದಕಿ ದೊರೆತ ಕಾರಣದಿಂದಲೇ ಕೃತಿಯುದ್ದಕ್ಕೂ ನೀರ ಒರತೆಯಂತೆ ಜಿನುಗುವ ಮಾನವ ಪ್ರೀತಿಯ ಸ್ರೋತ, ಅದರ ನೈಜತೆಗೆ ಧಕ್ಕೆಯಾಗದ ರೀತಿಯಲ್ಲಿ ಸಹಜವೆಂಬಂತೆ ಇಲ್ಲಿ ಮೈ ತಾಳಿದೆ." ಎಂದು ಮುನ್ನುಡಿಯಲ್ಲಿ ಶಕುಂತಲಾ ಕಿಣಿ ಇವರು ಅಭಿಪ್ರಾಯ ಪಟ್ಟಿದ್ದಾರೆ.