ಬಾಲ್ಯದ ಒಂದು ಪುಟ

ಬಾಲ್ಯದ ಒಂದು ಪುಟ

ಬರಹ

ಹೀಗೊಂದು ಬಾಲ್ಯ... ಹಾಗೇ ಸುಮ್ಮನೆ !!!

’ಸ್ಕೂಲಿಗೆ ಲೇಟಾಗುತ್ತೆ ಏಳೂ’ ಎಂಬೋ ಅಮ್ಮನ ಕೂಗು ಅಡಿಗೆ ಮನೆಯಿಂದ ಮೂರನೆ ಬಾರಿಗೆ ಬಂದಾಗ ಏಳಲೇ ಬೇಕಾಯ್ತು. ಹಾಸಿಗೆ ಮೇಲೆ ಚಕ್ಕಂಬಕ್ಕಳ ಹಾಕಿ ಕೂತು "ಕರಾಗ್ರೇ ವಸತೇ ಲಕ್ಷ್ಮೀ" ಹೇಳಿಕೊಂಡು ಬಚ್ಚಲಿಗೆ ನೆಡೆದು ಹಲ್ಲುಜ್ಜಿ ಮುಖ ತೊಳೆದುಕೊಳ್ಳುತ್ತಿದ್ದಂತೆ ಯಾರೋ ಬಾಗಿಲು ಬಡಿದರು. "ನನಗೆ ಸ್ನಾನಕ್ಕೆ ಲೇಟಾಯ್ತು.... ಮುಗೀತಾ ನಿಂದು ?" ... ಹೊರಗೆ ಬಂದು ಅಡಿಗೆ ಮನೆಗೆ ಹೋಗಿ ಅಮ್ಮ ಕೊಟ್ಟ ಕಾಫ಼ಿ ಕುಡಿಯುತ್ತ, "ಪ್ರಜಾವಾಣಿ" ಕೈಗೆ ಎತ್ತಿಕೊಂಡೆ.

ಮೊದಲು ನೋಡುವುದೇ ಕಡೆ ಪುಟ ! ಬೇರಾವ ಆಟ ಅರ್ಥವಾಗದಿದ್ದರೂ ಕ್ರಿಕೆಟ್ ಮಾತ್ರ ಚೆನ್ನಾಗಿ ಅರ್ಥ ಆಗುತ್ತಿತ್ತು. ಕ್ರಿಕೆಟ್ ಸುದ್ದಿ ಓದುವುದರಲ್ಲಿ ತಲ್ಲೀನನಾಗಿದ್ದ ನನಗೆ ಲೋಟದಿಂದ ಕಾಫಿ ಚೆಲ್ಲಿ ಪೇಪರ್ ಮೇಲೆ ಬಿದ್ದದ್ದು ಗೊತ್ತೇ ಆಗಲಿಲ್ಲ. ಫ಼್ಯಾಂಟಮ್’ಗೆ ಏನಾಯ್ತು ಎಂದು ನೋಡಿ, ಮೊದ್ದುಮಣಿಯ ಜೋಕಿಗೆ ನಕ್ಕ ಮೇಲೆ, ಅರಿವಾಗಿ ಬೇಗ ಬೇಗ ಕಾಫಿಯುಕ್ತ ಪೇಪರ್ ಅನ್ನು ಮುದುಡಿಟ್ಟು ಸೈಲೆಂಟಾಗಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಸ್ವಲ್ಪ ಹೊತ್ತಿನ ನಂತರ ಯಾರೋ ಕೂಗಿದರು "ಇದನ್ನು ಇವತ್ತಿನ ಪೇಪರ್ ಅಂತ ಪ್ರಮಾಣ ಮಾಡಬೇಕು. ಕಾಫಿ ಯಾರು ಚೆಲ್ಲಿದ್ದು ?"... ನಂಗೊತ್ತಿಲ್ಲಪ್ಪ !

ಬಚ್ಚಲ ಮನೆಯಲ್ಲಿ ಯಾರೂ ಇಲ್ಲದ್ದು ನೋಡಿ, ಸ್ನಾನಕ್ಕೆ ಹೋದೆ. ಹಂಡೆಯಲ್ಲಿನ ನೀರನ್ನು ಬಕೆಟ್’ಗೆ ಸುರಿದುಕೊಂಡು ಹೆಚ್ಚು ಕಮ್ಮಿ ಎಲ್ಲಾ ನೀರನ್ನು ಮೈಗೆ ಸುರಿದುಕೊಂಡು, ಮುಖಕ್ಕೆ ಮಾತ್ರ ಸೋಪು ತಿಕ್ಕಿಕೊಂಡು, ಅರ್ಧ ತಂಬಿಗೆ ನೀರಲ್ಲೇ ಮುಖ ತೊಳೆದುಕೊಂಡು, ಅಲ್ಲಲ್ಲೇ ಅಳಿದುಳಿದ ಸೋಪನ್ನು ಆಮೇಲೆ ಟವಲಿನಲ್ಲೇ ಒರೆಸಿಕೊಂಡು ಹೊರಬಂದೆ. ಅಬ್ಬ, ಕ್ಲೀನ್ ಆದೆ. ನಾಳೆ ತನಕ ಮುಖಕ್ಕೆ ನೀರು ಸೋಕಿಸುವ ಅಗತ್ಯವಿಲ್ಲ !! ಸ್ವಲ್ಪ ಹೊತ್ತಿನ ನಂತರ ಬಚ್ಚಲಿಗೆ ಹೋದವರಾರೋ ಕೂಗಿದರು "ಹಂಡೇಲಿ ನೀರೇ ಇಲ್ಲ... ಕೊನೆಗೆ ಸ್ನಾನ ಮಾಡಿದವರು ಯಾರು ? ಮೊದಲೇ ಲೇಟ್ ಆಯ್ತು, ಥತ್! " ನಾನಂತೂ ಜೋರಾಗಿ "ವಕ್ರತುಂಡ ಮಹಾಕಾಯ" ಹೇಳಿಕೊಳ್ಳುತ್ತಿದ್ದೆ !!!!

ರಾತ್ರಿ ಮಲಗುವ ಮುನ್ನ ತಲೆದಿಂಬಿನ ಅಡಿ ಇಟ್ಟಿದ್ದ ಯೂನಿಫ಼ಾರ್ಮ್ ಶರಟು-ಚಡ್ಡಿಯನ್ನು ಕೈಯಲ್ಲೇ ಮತ್ತೊಮ್ಮೆ ಇಸ್ತ್ರಿ ಮಾಡಿ, ಒಪ್ಪವಾಗಿ ಅಲಂಕರಿಸಿಕೊಂಡು, ಅಮ್ಮ ಕೊಟ್ಟ ಉಪ್ಪಿಟ್ಟನ್ನು ಸೊಟ್ಟ ಮೂತಿ ಮಾಡಿಕೊಂಡೆ ಕೈಗೆತ್ತಿಕೊಂಡೆ. ಅದ್ಯಾರು ಕಂಡು ಹಿಡಿದರೋ ಈ ಉಪ್ಪಿಟ್ಟು ? ಜೊತೆಗೆ ಈ ತರಕಾರಿ ಬೇರೆ. ತಟ್ಟೆಯ ಬದಿಗೆ ಹುರುಳೀಕಾಯಿ, ಕರಿಬೇವು, ಮೆಣಸಿನಕಾಯಿ ಎಲ್ಲಾ ಒತ್ತರಿಸಿಟ್ಟು ಖಾಲೀ ಉಪ್ಪಿಟ್ಟನ್ನು ತಿಂದೆ. ಅಮ್ಮನಿಂದ ಬೈಗುಳ "ಈ ಸಂಪತ್ತಿಗೆ ನಾನ್ಯಾಕೆ ಅಷ್ಟು ಕಷ್ಟ ಪಡಬೇಕು ? ನಾಳೆಯಿಂದ ರವೆಗೆ ಉಪ್ಪು ಹಾಕಿ ಕೊಡ್ತೀನಿ ಸಾಕು" ಅಂತ.... ಸ್ನಾನ ಮಾಡುವಾಗ ಕಿವಿಯಲ್ಲಿ ನೀರು ಹೋಯ್ತು ಅಂತ ಕಾಣುತ್ತೆ, ಬೈಗುಳ ನನಗೆ ಕೇಳಿಸಲೇ ಇಲ್ಲ !!!

ಶೂ ಹಾಕಿಕೊಳ್ಳುತ್ತಿದ್ದಂತೆ ಅಮ್ಮ ಹೇಳಿದರು "ಹಿಡಿ.... ಒಂದು ರುಪಾಯಿ ... ಶೆಟ್ಟಿ ಅಂಗಡಿಯಿಂದ ಕೊತ್ತಂಬರಿ, ಕರಿಬೇವು, ಮೆಣಸಿನಕಾಯಿ ತೊಗೊಂಡು ಚಿಲ್ಲರೆ ಹುಷಾರಾಗಿ ವಾಪಸ್ಸು ತೊಗೊಂಡು ಬಾ". ಅಂಗಡಿಯಿಂದ ಬಂದವನೇ ಮಣಭಾರದ ಬ್ಯಾಗನ್ನು ಹೆಗಲಿಗೇರಿಸಿ ಸ್ಕೂಲಿಗೆ ಹೊರಟು ನಿಂತೆ. ಅಣ್ಣ ನಗುತ್ತ ನುಡಿದ "ಮುಂದೆ ಎಲ್ಲಿ ಕೆಲಸ ಸಿಗದಿದ್ದರೂ ಮಂಡೀ ಪೇಟೆಯಲ್ಲಿ ಅಕ್ಕಿ ಹೊರೋ ಕೆಲಸ ಗ್ಯಾರಂಟಿ" ಅಂತ. ಅಮ್ಮ ಹೇಳಿದರು "ಹುಷಾರಾಗಿ ಹೋಗಿ ಬಾ. ರೋಡ್ ಕ್ರಾಸ್ ಮಾಡುವಾಗ ಹುಷಾರು. ಸೈಕಲ್’ನೋರು ಗುದ್ದಿಯಾರು" !!!

ಬಸ್ ಸ್ಟಾಪಿಗೆ ಹೋಗಿ ಅರ್ಧ ಘಂಟೆ ನಿಂತ ಮೇಲೆ ಬಂದ ಬಸ್ ಏರಿದೆ. ಕಂಡಕ್ಟರ್ ಕಣ್ಣಲ್ಲೇ ಕೇಳಿದ ಎಲ್ಲಿಗೆ ಅಂತ. "ಪಾಸ್" ಎಂದೆ. ಒಳಗೆ ನುಗ್ಗಿ ಸೀಟಿನ ಮೇಲ್ಭಾಗದ ಹಿಡಿಯನ್ನು ಗಟ್ಟಿಯಾಗಿ ಹಿಡಿದು ನಿಂತೆ... ಮೇಲಿನ ಬಾರ್ ಹಿಡಿದುಕೊಳ್ಳೋಣಾ ಅಂದರೆ ಕೈಗೆ ಸಿಗಬೇಕಲ್ಲಾ !!! ಫ಼ುಟ್ ಬೋರ್ಡ್ ಮೇಲೆ ನಿಂತು ಒಮ್ಮೆ ಸ್ಕೂಲಿಗೆ ಹೋಗಬೇಕೂ ಅಂತ ಆಸೆ. ಬೀಸೋ ಗಾಳಿಗೆ ಹಣೆಯ ಮೇಲಿನ ಕೂದಲು ಹಾರುತ್ತಿದ್ದರೇ, ಅಹಾ! ಅದರ ಮಜಾನೇ ಬೇರೆ ... ಒಮ್ಮೆ ಟ್ರೈ ಮಾಡಿದ್ದೆ. ಆ ಕೆಂಪುಕಣ್ಣಿನ ಡ್ರೈವರ್ ಕೇಳಿದ್ದ "ಮನೆಯಲ್ಲಿ ಹೇಳಿ ಬಂದಿದ್ದೀಯಾ ? ನೆಡೆಯೋ ಒಳಗೆ"... ಅಯ್ಯಯ್ಯಪ್ಪಾ !!

ಶಾಲೆಗೆ ಹೋಗೋ ಹೊತ್ತಿಗ್ಗೆ ಒಪ್ಪವಾಗಿದ್ದ ಬಟ್ಟೆಯಲ್ಲ ನಲುಗಿ ಹೋಗಿತ್ತು. ನಾನು ಮೈದಾನಕ್ಕೆ ಹೋಗೋ ಹೊತ್ತಿಗೆ ಎಲ್ಲಿ ನನ್ನ ದೋಸ್ತ್’ಗಳು ಆಟ ಶುರು ಮಾಡಿಬಿಟ್ಟಿರುತ್ತಾರೋ ಅನ್ನೋ ಟೆನ್ಶನ್ ನನಗೆ. ಬಟ್ಟೆ ಕಡೆ ಗಮನ ಯಾರು ಕೊಡ್ತಾರೆ... ಅದಕ್ಕೆಲ್ಲಾ ಟೈಮ್ ಎಲ್ಲಿ? ಬ್ಯಾಗನ್ನು ಒಂದು ಕಡೆ ಹಾಕಿ, ಸೀದ ಆಟ ಶುರು ಮಾಡಿದ್ದೇ ... ಯಾಕೋ ಆ ಕಡೆ ಟೀಮಿನವರು ಔಟೇ ಆಗ್ತಿಲ್ಲ.... ನಮ್ಮ ಕ್ಯಾಪ್ಟನ್ನು ಕೈಗೆ ಬಾಲ್ ಎತ್ತಿಕೊಂಡು, ಫ಼ೀಲ್ಡ್ ಸೆಟ್ ಮಾಡಿ ಮೊದಲನೇ ಬಾಲ್ ಬಿಟ್ಟ ... ವಾವ್ ! ಬಾಲು ಸ್ಪಿನ್ ಆಯ್ತು... ನಮ್ಮ ಕಡೆ ಅವನು ಕ್ಲಾಸ್ ಬೌಲರ್ .... ಅದ್ಯಾಕೋ ಆಮೇಲೆ ಯಾವ ಬಾಲೂ ಸ್ಪಿನ್ ಆಗಲಿಲ್ಲಾ... ಆ ಓವರ್’ನಲ್ಲಿ ಹತ್ತು ರನ್ ಕೊಟ್ಟು, ಪಿಚ್ ಸರಿ ಇಲ್ಲ ಗುರೂ ಅಂದ ... ಇರಬಹುದೇನೋ !! ಮೊದಲನೇ ಬಾಲ್ ಸ್ಪಿನ್ ಆದ ಮೇಲೆ ಆ ಕಡೆ ಬ್ಯಾಟ್ಸ್ಮನ್ ನೆಲದಲ್ಲಿದ್ದ ಕಲ್ಲನ್ನು ತೆಗೆದು ಆಚೆಗೆ ಎಸದಿದ್ದ ಅಂತ ನನಗೇನು ಗೊತ್ತು !!!

ಸಂಜೆ ಐದಕ್ಕೆ ಶಾಲೆ ಬಿಟ್ಟ ಮೇಲೆ ಮನೆಗೆ ಬಂದು ಸೇರೋ ಹೊತ್ತಿಗೆ ಆರೂವರೆ ಆಗಿತ್ತು .... ನನ್ನ ಲಕ್ಷಣವನ್ನು ನೋಡಿದ ಅಮ್ಮ ಕೇಳಿದರು "ನೀನೇನು ಸ್ಕೂಲಿಗೆ ಹೋಗಿದ್ಯೋ ಇಲ್ಲಾ ಕೂಲಿ ಕೆಲಸಕ್ಕೆ ಹೋಗಿದ್ಯೋ ? ಚೆನ್ನಾಗಿ ಕೈಕಾಲು ತೊಳೆದುಕೊಂಡು ಬಾ. ತಿಂಡಿ ಕೊಡ್ತೀನಿ. " ಅಂದರು. ಬಟ್ಟೆ ಬದಲಿಸಿ, ತಿಂಡಿ ಕಾಫಿ ಆದ ಮೇಲೆ, ನಾನು ಓದಲಿಕ್ಕೆ ಕುಳಿತೆ. ಅಣ್ಣ ಪ್ರಾಕ್ಟಿಕಲ್ ಬರೆಯುತ್ತಿದ್ದ. ಇನ್ನೊಬ್ಬ ಅಣ್ಣ ಬೇರೇನೋ ಓದುತ್ತಿದ್ದ. ಅಕ್ಕ ಸಂಸ್ಕೃತ ಓದುತ್ತಿದ್ದಳು. ಅಪ್ಪ ಪದರಂಗ ಬಿಡುಸುತ್ತಿದ್ದರೆ, ಅಮ್ಮ ಯಾವುದೋ ದೇವರನಾಮದ ಪುಸ್ತಕ ಹಿಡಿದುಕೊಂಡು ಕುಳಿತಿದ್ದರು. ಓದುವಾಗ ತಕ್ಷಣ ನೆನಪಿಗೆ "ಅಮ್ಮಾ, ಈ ಭಾನುವಾರ ಅಜ್ಜಿ ಮನೆಯವರು ನಮ್ಮ ಮನೆಗೆ ಬರ್ತಾರಂತೆ. ಮನೆಯಲ್ಲೇ ಇರಬೇಕಂತೆ ಅಂತ ಹೇಳಿ ಕಳಿಸಿದ್ದಾರೆ..." ಅಂತ ನನ್ನ ಸೋದರಮಾವ ನನ್ನ ಸ್ಕೂಲಿಗೆ ಬಂದು ತಿಳಿಸಿದ ವಿಷಯ ಅಮ್ಮನಿಗೆ ಒಪ್ಪಿಸಿದೆ.

ನಾಳೆ ಮೊದಲ ಪೀರಿಯಡ್ಡು ಕನ್ನಡ. ಆ ಟೀಚರ್ ಪದ್ಯ ಕೇಳ್ತಾರೆ..... ಎಷ್ಟು ಉರು ಹೊಡೆದರೂ ಟೀಚರ್’ನ ನೋಡುತ್ತಿದ್ದಂತೇ ಮರೆತೇ ಹೋಗುತ್ತೆ. "ಮೂಡುವನು ರವಿ ಮೂಡುವನು, ಕತ್ತಲೊಡನೆ ಜಗಳಾಡುವನು" ಅಂತ ಹತ್ತನೇ ಬಾರಿ ಓದಿದೆ. ಅದಕ್ಕೆ "ಸ್ವಲ್ಪ ಮೆತ್ತಗೆ ಓದು ಅಂತ ಹೇಳಮ್ಮಾ ಅವನಿಗೆ. ನಾನು ಹೇಳಿದರೆ ಕೇಳಲ್ಲ" ಅಂತ ಅಕ್ಕನ ದೂರು. ನಾನೂ ಬೇಗ ದೊಡ್ಡವನಾಗಿಬಿಡಬೇಕು... ಓದೋ ಕಷ್ಟಾನೇ ಇರೋಲ್ಲ !

ಒಂಬತ್ತೂವರೆಗೆ ಊಟದ ಸಮಯ. ಒಬ್ಬರು ತಟ್ಟೆ ಇಟ್ಟರೆ, ಮತ್ತೊಬ್ಬರು ನೀರಿನ ಲೋಟ. ನಾನು ಲೋಟಕ್ಕೆ ನೀರು ಹಾಕುವಾಗ ಚೆಲ್ಲಿ ಬೈಸಿಕೊಂಡೆ. ಅದನ್ನು ಒರೆಸಿದ್ದಾಯ್ತು. ಬಿಸಿ ಬಿಸಿ ಅನ್ನಕ್ಕೆ ಅಮ್ಮ ಗೋರೀ ಕಾಯಿ ಹುಳಿ ಹಾಕಿದರು.... ಮತ್ತೆ ಸೊಟ್ಟ ಮುಖ !! "ತಿಳಿ ಹಾಕಮ್ಮಾ" ಅಂದೆ. "ತರಕಾರಿ ತಿಂದರೆ ಮೈಗೆ ಒಳ್ಳೇದು. ಬರೀ ತಿಳಿ ಸಾರಿನಲ್ಲಿ ಏನಿರುತ್ತೆ?" ಅಂದರು. ನನ್ನ ಗಂಟಲು ಚಿಕ್ಕದು ಅಂತ ನನಗೆ ಅನ್ನಿಸುತ್ತೆ. ಯಾವ ತರಕಾರಿಗೂ ಒಳಗೆ ಹೋಗೋದಕ್ಕೆ ಜಾಗವೇ ಇಲ್ಲ. ಇರಲಿ ನಾಳೆಯಿಂದ ಖಂಡಿತ ತರಕಾರಿ ತಿನ್ನೋಕೆ ಶುರು ಮಾಡಬೇಕು .... ಗುರುವಾರ ಒಳ್ಳೇ ದಿನ.

ನೆಲದ ಮೇಲೆ ಸಾಲಾಗಿ ಹಾಸಿಗೆ ಹಾಸಿ, ಸೊಳ್ಳೇ ಪರದೆ ಕಟ್ಟಿದ್ದಾಯ್ತು. ಲಕ್ಷಣವಾಗಿ ಎಲ್ಲ ಕಡೆ ಸಿಕ್ಕಿಸಿಕೊಂಡು ಸೊಳ್ಳೆ ಒಳಗೆ ಬರದಂತೆ ಕೋಟೆಯ ಮಾಡಿದ ಮೇಲೆ ನೆನಪಿಗೆ ಬಂತು ನಾಳೆಗೆ ಯಾವುದೋ ಬುಕ್ ಎತ್ತಿಟ್ಟುಕೊಂಡಿರಲಿಲ್ಲ ಅಂತ. ಮರೆತುಹೋದರೆ ಅಷ್ಟೇ! ಬೆಂಚಿನ ಮೇಲೆ ನಿಲ್ಲಿಸ್ತಾರೆ. ಸರಿ, ಹೊರಗೆ ಹೋಗಿ, ಬುಕ್ಕನ್ನು ಬ್ಯಾಗಿಗೆ ಸೇರಿಸಿ ಒಳಗೆ ಬರುವಾಗ ಮೂರು ಲೇಡಿ ಸೊಳ್ಳೆಗಳು ನನ್ನ ಹಿಂದೇನೆ ಒಳಗೆ ಬಂತು. ಅಕಟಕಟಾ ಎಂದು ಹಲ್ಲು ಕಡಿದು ಅವುಗಳ ಮೇಲೆ ದಾಳಿ ಮಾಡಿ ಕೊಚ್ಚಿ ಕೊಂದು, ಇಲ್ಲದ ಮೀಸೆ ತಿರುವಿದೆ.

ವಿಜಯೋತ್ಸಾಹದಿಂದ ದಿಂಬಿಗೆ ತಲೆ ಇಟ್ಟು ಮೈಯನ್ನು ಮೂಟೆಯಂತೆ ಮಾಡಿಕೊಂಡು ಮುದುರಿ ಮಲಗಿದೆ.

’ಸ್ಕೂಲಿಗೆ ಲೇಟಾಗುತ್ತೆ ಏಳೂ’ .... ಅರ್ರೇ ! ಈಗ ತಾನೇ ಮಲಗಿದ ಹಾಗಿತ್ತಲ್ಲಾ ????????