ಬಾಲ್ಯದ ನೆನಪು .............

ಬಾಲ್ಯದ ನೆನಪು .............

ಬರಹ
ರಾಜವತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್|
ಪ್ರಾಪ್ತೇ ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್||

ಮಕ್ಕಳನ್ನು ಐದು ವರ್ಷದ ವರೆಗೆ ರಾಜರಂತೆ ನೋಡಿಕೊಳ್ಳಬೇಕು.  ನಂತರದ ಹತ್ತುವರ್ಷಗಳು ಚೆನ್ನಾಗಿ ಹೊಡೆದು ಬುದ್ಧಿ ಹೇಳಬೇಕು.  ಹದಿನಾರನೇ ವಯಸ್ಸು ಬಂದಮೇಲೆ ಅವರನ್ನು ಸ್ನೇಹಿತರಂತೆ ಕಾಣಬೇಕು. ಎನ್ನುವುದು ಈ ಶ್ಲೋಕದ ಅರ್ಥ.

 

     ಚಿಕ್ಕಂದಿನ ನೆನಪು! ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದೆ.  ನನ್ನ ತಂಗಿ  ಒಂದನೇ ತರಗತಿ.  ಮನೆಯಲ್ಲಿ ನಮ್ಮಜ್ಜಿ, ನಮ್ಮಮ್ಮ, ನಾನು ನನ್ನ ಪುಟ್ಟ ಪುಟ್ಟ ತಂಗಿಯರು.  ತಂದೆಯವರು ಅರಣ್ಯ ರಕ್ಷಕರಾಗಿದ್ದರಿಂದ ಹೊರಗಡೆ ಇದ್ದಿದ್ದೇ ಹೆಚ್ಚು.  ಮನೆಯ ಜವಾಬ್ದಾರಿ ಎಲ್ಲ ಅಮ್ಮಂದೇ.  ಪಾಪ ಅಂದು ನಮ್ಮಪ್ಪಂಗೆ ಬರುತ್ತಿದ್ದ ಸಂಬಳದಲ್ಲಿ ಎರೆಡೆರಡು ಕಡೆ ಸಂಸಾರ ನಡೆಸಬೇಕಾಗಿತ್ತು.  ಇಲ್ಲಿ ನಾವೆಲ್ಲ, ಅಲ್ಲಿ ನಮ್ಮ ತಂದೆ ಒಬ್ಬಂಟಿ.  ಹೀಗೇ ಹಲವಾರು ವರುಷಗಳು ಅವರಿಗೆ ಬರುತ್ತಿದ್ದ ಸಂಬಳದಲ್ಲಿ ನಮ್ಮನ್ನೆಲ್ಲ ಕಷ್ಟ ಪಟ್ಟು ಸಾಕುತ್ತಿದ್ದರು.  ನಮಗೆಲ್ಲ ತಂದೆಯವರನ್ನು ಕಂಡರೆ ಮಹಾ ಭಯ.  ಅವರು ಮನೆಗೆ ಬರುತ್ತಿದ್ದುದೂ ಕಡಿಮೆ,  ಬಂದಾಗ ನಮ್ಮೆಲ್ಲರ ಹತ್ತಿರ ಮಾತಾಡುವುದೂ ಕಡಿಮೆ, ಹಾಗಾಗಿ ನಮಗೆ ತಂದೆಯವರು ತಾಯಿಯಷ್ಟು ಆಪ್ತರಾಗಿರಲಿಲ್ಲ.   ಏನೇ ಬೇಕಾದರೂ ಅಮ್ಮನ ಹತ್ತಿರ ಅರ್ಜಿ ಹಾಕಬೇಕಾಗಿತ್ತು.   ಅಪ್ಪನಾದರೂ … ಇಲ್ಲ ಎನ್ನುತ್ತಿರಲಿಲ್ಲ, ಇವತ್ತಿಗೂ ನಮ್ಮ ಸ್ವಾತಂತ್ರಕ್ಕೆ ಎಂದಿಗೂ ಅಡ್ಡ ಬಂದಿಲ್ಲ,  ಆದರೂ ನಮಗೆ ಅಪ್ಪನ್ನ ಕಂಡರೇ ಭಯವಾಗುತ್ತಿತ್ತು.  ಎಂದಿಗೂ ಬೈದವರಲ್ಲ…!, ಹೊಡೆದಿದ್ದಂತೂ ಇಲ್ಲವೇ ಇಲ್ಲ…!.  (ಅಮ್ಮನ ಕೈ ನಲ್ಲಿ ಇದೆಲ್ಲವೂ ಆಗಿದ್ದರೂ ಬಹಳ ಕಡಿಮೆ ಪ್ರಮಾಣದಲ್ಲಿ.)  ಅವರ ಕಂಠ, ಕಂಚಿನ ಕಂಠ, ಇವತ್ತಿಗೂ ಹಾಗೇ ಇದೆ.  ಏನಾದರೂ ತಪ್ಪು ಮಾಡಿದರೆ……….,  ಬಾ…..ಬೂ……… (ನಮ್ಮಪ್ಪ ನನ್ನ ಬಾಬೂ ಅಂತ ಕರೀತಾರೆ) ಅಂತ ಒಮ್ಮೆ ದೊಡ್ಡದಾಗಿ ಕಣ್ಣು ಬಿಟ್ಟು ಬಿಡುತ್ತಿದ್ದರು ಅಷ್ಟೇ.  ಮುಂದೆ ಒಂದಕ್ಷರವೂ ಬೈಯ್ಯುವುದಿಲ್ಲ.  ನಾವು ಭಯ ಬೀಳುತ್ತಿದ್ದಿದ್ದು ಅವರು ಬಿಡುತ್ತಿದ್ದ ದೊಡ್ಡ ಕಣ್ಣಿಗೆ ಮತ್ತು ಅವರ ಧ್ವನಿಗೆ….!

     ಬಾಲ್ಯ, ಹುಡುಗಾಟಿಕೆ, ಎಲ್ಲ ಕೂಡಿಕೊಂಡಿದ್ದ ಆ ಚಿಕ್ಕ ವಯಸ್ಸಿನಲ್ಲಿ ಒಂದು ದಿನ ಏನಾಯ್ತು ಅಂದ್ರೆ ………………………………?  ನಮ್ಮ ಮನೆಯ ರಾಮದೇವರ ಗೂಡಿನಲ್ಲಿ (ನಮ್ಮದು ಹಳೇ ಮನೆ ಮಧ್ಯದ ಹಾಲಿನಲ್ಲಿ ಒಂದು ಗೂಡು ಇದೆ ಅಲ್ಲಿ ಒಂದು ರಾಮದೇವರ ಫೋಟೋ ಇವತ್ತಿಗೂ ಇದೆ.  ಆದ್ದರಿಂದ ಆ ಗೂಡಿಗೆ ರಾಮದೇವರ ಗೂಡು ಅಂತ ಕರೀತಿವಿ) ಮೂರು ಪೈಸ ಇತ್ತು.  ನಾನು ನನ್ನ ತಂಗಿ ಅಮ್ಮಂಗೆ ಹೇಳದೇ ಆ ಮೂರು ಪೈಸವನ್ನು ತೆಗೆದು ಕೊಂಡ್ವಿ (ಹೇಳದೇ ಕೇಳದೇ ತೆಗೆದುಕೊಳ್ಳುವುದು ಕಳ್ಳತನ ಅಲ್ಲ್ವಾ?).  ಅದರಿಂದ ಒಂದು ಪೈಸದ ಬಳಪ (ಬೆಣ್ಣೆ ಬಳಪ ಅಂತ, ಬಣ್ಣ ಬಣ್ಣವಾಗಿ ಇರುತ್ತಿತ್ತು. ಅದರಿಂದ ಸ್ಲೇಟ್ ಮೇಲೆ ಬಣ್ಣ ಬಣ್ಣವಾಗಿ ಬರೆಯಬಹುದಾಗಿತ್ತು, ಆದರೆ ತುಂಬಾ ಮೃದು, ಬೇಗ ತುಂಡಾಗುತ್ತಿತ್ತು.  ನಮಗೆ ಬಳಪ ಬೇಕು ಅಂದ್ರೆ ಯಾವಾಗಲೂ ಕಡ್ಡಿ ಬಳಪ ತಂದು ಕೊಡೋರು ಗಟ್ಟಿಯಾಗಿರುತ್ತೆ ಮುರಿಯೋಲ್ಲ ಅಂತ),  ಒಂದು ಪೈಸದ ಕಿತ್ತಲೆ ತೊಳೆ ಪೆಪ್ಪರ್ ಮೆಂಟ್ ತಗೋಂಡ್ವಿ (ಒಂದು ಪೈಸಕ್ಕೆ ಹತ್ತು ಪೆಪ್ಪರ್ ಮೆಂಟ್ ಬರ್ತಿತ್ತು :-).   ಇನ್ನೊಂದು ಪೈಸವನ್ನು ಜೋಬಿನೊಳಗೆ ಇಟ್ಟುಕೊಂಡೆ.  ……….ಅಷ್ಟೇ,   “ಮಾಡಿದ್ದು ಎರಡೇ ಪೈಸದ ವ್ಯಾಪಾರ”,  ಇದಾಗೋವಾಗ ನಮ್ಮಪ್ಪ ಊರಲ್ಲೇ ಇದ್ರು,  ಮಾರನೇ ದಿನ ಬೆಳಗ್ಗೆ ನಮ್ಮಮ್ಮ “ಗೂಡಲ್ಲಿ ಮೂರು ಪೈಸ ಇತ್ತಲ್ಲ ಎಲ್ಲಿ ಹೋಯ್ತು…?”   ಅಂತ ಕೇಳಿದರು,  ನನಗೆ ಹೆದರಿಕೆ ಶುರುವಾಯ್ತು,  ನನ್ನ ತಂಗಿಗೆ ಹೇಳಿದೆ ಏನೂ ಹೇಳಬೇಡ ಸುಮ್ಮನಿರು……. !! ಅಂತ,  ಇಬ್ರೂ ಮಾತಾಡಿಕೊಂಡು ನನ್ಗೊತ್ತಿಲ್ಲ ಅಂತ ಶುರುಮಾಡಿದ್ವಿ ಶಾಲೆಗೆ ಸಮಯ ಆಯ್ತು ಬೆಳಿಗ್ಗೆ ಶಾಲೆಗೆ ಹೋಗಿದ್ದೂ ಆಯ್ತು,  ಮಧ್ಯಾಹ್ನ ಮನೆಗೆ ಬರೋ ಹೊತ್ತಿಗೆ ಈ ವಿಷಯ ಅಮ್ಮಂಗೆ ಮರೆತಿರುತ್ತೆ ಅಂತ ಯೋಚನೆ ಮಾಡಿದ್ದೆ,  ಆದ್ರೆ ಹಾಗಾಗಲಿಲ್ಲ……!!!   ಸ್ಕೂಲ್ ಮಗಿಸಿ ಊಟಕ್ಕೆ ಬಂದಾಗ ಅಪ್ಪಂಗೆ ವಿಷ್ಯ ತಿಳಿಸಿರುವುದಾಗಿ ಅಮ್ಮ ಹೇಳಿದ್ರು,  ನನಗೆ ಎದೆ ಬಡಿತ ಶುರುವಾಯಿತು, ನನ್ನ ತಂಗಿಯ ಮುಖ ನೋಡಿದೆ……. ಪಾಪ ಅವಳಿನ್ನೂ ಚಿಕ್ಕವಳು ಅವಳೂ ಹೆದರಿಕೊಂಡು ನನ್ನನ್ನು ನೋಡಿದಳು,  ಊಟ ರುಚಿಯಾಗಲಿಲ್ಲ, ಅಮ್ಮನ ಹತ್ತಿರ ಹೇಳೋಣವೆಂದರೆ ಅಪ್ಪಬೇರೇ ಮನೇಲೇ ಇದಾರೆ ಇನ್ನೇನು ಆಗುತ್ತೋ ಅಂತ ಭಯ. ನಾನು ಕದ್ದಿದ್ದೀನಿ ಅಂತ ಹೇಳೋಣವೆಂದರೆ ಹೇಗೆ ಸಾಧ್ಯ…..?  “ಕಳ್ಳತನ ಮಾಡಿದಮೇಲೆ ಒಪ್ಪಿಕೊಳ್ಳುವುದೇ…….?”  ಅಯ್ಯಪ್ಪ …..  ಅದು ಇನ್ನೂ ಕಷ್ಟದ ಕೆಲಸ.  ಏನೋ ಅಮ್ಮ ತಟ್ಟೆಯಲ್ಲಿ ಹಾಕಿದ್ದನ್ನು ಬೇಗ ಬೇಗ ತಿಂದು ಶಾಲೆಗೆ ಹೋಗಿಬಿಡೋಣ ಸಾಯಂಕಾಲಕ್ಕಾದರೂ ಮರೆಯಬಹುದು ಅನ್ನೋ ಆಸೆ ಮನಸ್ಸಿನಲ್ಲಿ ಚಿಗುರಿತು,  ಕೂಡಲೇ ಬೇಗ ಬೇಗ ಊಟ ಮಾಡಿದ್ವಿ ಕೈ ತೊಳೆದು ಕೊಂಡು,  “ಅಮ್ಮ….. ಸ್ಕೂಲಿಗೆ ಹೋಗುತ್ತೀನಿ”  ಅಂತ ಹೇಳಿ ಜಗುಲಿಗೆ ಬಂದ್ರೆ………..?   ಅಲ್ಲಿ ಅಪ್ಪ ನಮಗಾಗಿ ಕಾಯ್ತಾ ಇದ್ರು …….!!!  “ಬಾ ಬೂ…. ಬಾ ಇಲ್ಲಿ”   ಅಂತ ಒಂದು ಗಡುಸಾದ ಧ್ವನಿ ಬಂತು.   ಅಯ್ಯಪ್ಪ…..!!  ನಡುಗಿಬಿಟ್ಟೆ,  ಜೋಬೆಲ್ಲಾ ತಡಕಾಡಿದೆ,  “ಅಯ್ಯೋ …….  ಆ ಮೂರು ಪೈಸೆ ನಾನು ಯಾಕೆ ತಗೋಂಡೆ…….?”  “ಯಾಕೆ ಖರ್ಚು ಮಾಡಿದೆ ……?”  “ಜೋಬಲ್ಲೇ ಇದ್ದಿದ್ದ್ರೆ ಎಷ್ಟು ಚೆನ್ನಾಗಿರುತ್ತಿತ್ತು…….!! ಕೇಳಿದ ತಕ್ಷಣ ಕೊಟ್ಟುಬಿಡಬಹುದಾಗಿತ್ತಲ್ಲ …..”  ಎಂದೆಲ್ಲಾ ನೂರೆಂಟು ಯೋಚನೆಗಳು ತಲೆಯ ತುಂಬಾ ಹರಿದಾಡಿದವು.  ಅಷ್ಟು ಹೊತ್ತಿಗೆ ನನ್ನ ಪುಟ್ಟ ತಂಗಿಯೂ ಬಾಯಿ ಒರೆಸಿಕೊಳ್ಳುತ್ತಾ ನನ್ನ ಹಿಂದೆ ಬಂದು ನಿಂತಳು.  ……………….. ಅಪ್ಪ ಎಲೆ ಅಡಿಕೆ ಹಾಕುತ್ತಾ ಇದ್ದರು,  ನನಗೆ ಗಂಟಲು ಒಣಗಿ ನೀರು ಕುಡೀಬೇಕು ಅಂತ ಕಾಣಿಸತೊಡಗಿತು.  ಹೊಗೆ ಸಪ್ಪು ಬಾಯಲ್ಲಿ ಇಟ್ಟುಕೊಂಡವರು, “ದುಡ್ಡು ಏನು ಮಾಡಿದೆ…?”  ಅಂತ ನೇರವಾಗಿ ಪ್ರಶ್ನೆ ಮಾಡಿದರು.  ನನ್ನ ಕೈ ಕಾಲೆಲ್ಲಾ ಥರ ಥರ ನಡುಗುವುದಕ್ಕೆ ಶುರುವಾಯಿತು.  ಅಪ್ಪನನ್ನು ನೋಡುವುದಕ್ಕೇ ………. ಹೆದರಿಕೆ !  ಅವರ ಮುಂದೆ ನಿಂತಿದ್ದೇ …….. ಜ್ಞಾಪಕಕ್ಕೆ ಬರುತ್ತಿಲ್ಲ !  ಈಗ ದುಡ್ಡು ಕದ್ದು ನಿಲ್ಲಬೇಕಾದ ಪರಿಸ್ಥಿತಿ ……..  ತಲೆ ತಗ್ಗಿಸಿ ನಿಂತುಕೊಂಡೆ,  “ಏನು ಮಾಡಿದ್ಯೋ …….?”  ಧ್ವನಿ ಇನ್ನೂ ಸ್ವಲ್ಪ ಜೋರಾಗಿತ್ತು.  ನನ್ನ ಕಣ್ಣಲ್ಲಿ  ನೀರು ಶುರುವಾಯಿತು,  ಎದೆ ಬಡಿತ ನನ್ನ ಕಿವಿಗೇ ಕೇಳುತ್ತಿತ್ತು  ಆದರೂ ಮಾತಾಡಲು ಧೈರ್ಯ ಬರಲಿಲ್ಲ ಮೌನವಾಗಿ ನಿಂತಿದ್ದೆ,  ನನ್ನ ಮೌನವನ್ನು ನೋಡಿ ಅಪ್ಪನ ಪ್ರಶ್ನೆ ತಂಗಿಯ ಕಡೆ ತಿರುಗಿತು.  “ಯಾರು ತೆಗೆದ್ರಿ ಆ ದುಡ್ಡನ್ನ…….?”   ಅವಳು ಚಿಕ್ಕವಳು ಪಾಪ … ! ಹೆದರಿ ಅಳು ಶುರುಮಾಡಿಬಿಟ್ಟಳು.  ಪುನಹ ನನ್ನ ಕಡೆ ತಿರುಗಿ “ಏನು ಮಾಡಿದೆ ದುಡ್ಡನ್ನ…..?  ಕೊಡು ಇಲ್ಲಿ” ಅಂದರು.  ಇರುವ ಧೈರ್ಯವನ್ನೆಲ್ಲಾ ಒಟ್ಟು ಮಾಡಿಕೊಂಡು ಜೋಬಿನಿಂದ ಒಂದು ಪೈಸೆ ತೆಗೆದು ಕೊಟ್ಟೆ.   “ಇನ್ನೆರಡು ಪೈಸೆ ಎಲ್ಲಿ …..?”  ನನಗೂ ಧಾರಾಕಾರವಾಗಿ ಕಣ್ಣೀರಿನ ಅಳು ಶುರುವಾಯಿತು.  ಅಪ್ಪ ಕೂತಲ್ಲಿಂದ ಎದ್ದರು “ನಿಮಗೆ ಮಾಡುತ್ತೇನೆ ತಡೀರಿ” ಅಂತ ಮನೆ ಹಿಂದೆ ಹೋದವರು ಒಂದು “ಮರದ ತುಂಡು” ಮತ್ತು “ಕಬ್ಬಿಣದ ಸರಳನ್ನು” ತಂದರು.  ನಮ್ಮಿಬ್ಬರಿಗೂ ಕೂರಲು ಹೇಳಿದರು,  ನಾವಿಬ್ಬರೂ ಅಕ್ಕ ಪಕ್ಕ ಕುಳಿತೆವು,  ಮರದ ತುಂಡನ್ನು ನಮ್ಮ ಮುಂದೆ ಇಟ್ಟವರು “ಇಡ್ರೋ ಇದ್ರ ಮೇಲೆ ಕೈನ”  “ಅದು ಯಾವ ಕೈಲಿ ದುಡ್ಡು ತೆಗೆದಿದಿರಿ ನೋಡ್ತೀನಿ”  “ದುಡ್ಡು ಕದೀತೀರಾ………?”  “ಕದಿಯೋ ಕೈಗಳನ್ನು ಜಜ್ಜಿಬಿಡ್ತೀನಿ”  ಅಪ್ಪನ ಧ್ವನಿ ತಾರಕಕ್ಕೇರಿತ್ತು.  ಈಗಂತೂ ನಮ್ಮಿಬ್ಬರಿಗೂ ಕಣ್ಣೀರಿನ ಅಳುವಿನ ಜೊತೆಗೆ ಹೋ……. ಎಂದು ಇಬ್ಬರ ಧ್ವನಿಯೂ ಸೇರಿತ್ತು.  ಕೈಗಳೆರಡೂ ನಮಗೆ ತಿಳಿಯದಂತೆ  ಬೆನ್ನ ಹಿಂದೆ ಸೇರಿಕೊಂಡಿದ್ದವು.  “ಇಡೋ ಕೈನ”  “ಏನು ಮಾಡಿದೆ ದುಡ್ಡನ್ನ ಬೊಗಳೋ…?” ಇನ್ನು ಸುಮ್ಮನೆ ಇದ್ರೆ ಕೈಗಳು ಅಪ್ಪಚ್ಚಿ ಆಗುವುದೆಂದು ಖಚಿತವಾಯಿತು.  ಹೂಂ…..ಊಂ…….ಊಂ…… ಎಂದು ಅಳುತ್ತಾ ಒಂದು ಪೈಸ ……..ಊಂ ….. ಬೆಣ್ಣೆ ಬಳಪ ……ಊಂ ….. ಒಂದು ಪೈಸ ಪೆಪ್ಪರ್ ಮೆಂಟ್ ತಗೋಂಡ್ವಿ …….ಊಂ …..ಇನ್ನೊಂದು ಪೈಸ ನಿಮ್ಮ ಕೈಗೆ ಕೊಟ್ಟಿದಿನಿ ……ಊಂ………  “ಯಾಕೋ ಕದ್ದೆ ದುಡ್ಡನ್ನು….?”   “ಕೇಳಿದ್ರೆ ನಾನೇ ತಂದು ಕೊಡುತ್ತಾ ಇರ್ಲಿಲ್ವೇನೋ …..?"  “ಇಡೋ ಕೈ ಮುಂದೆ ಇನ್ನೊಂದು ಸಲ ಕದಿಯದೇ ಇರೋ ಹಾಗೆ ಮಾಡುತ್ತೀನಿ……..”  ಅಂತ ನನ್ನ ಬಲಗೈ ಎಳೆದುಕೊಂಡು ಮರದ ತುಂಡಿನ ಮೇಲೆ ಇಟ್ಟೇ ಬಿಟ್ರು,  ನಾನು ನನ್ನ ತಂಗಿ ಇಬ್ರೂ ಥರ ಥರ ನಡುಗುತ್ತಾ ಅಮ್ಮಾಆಆಅ………. ಎಂದು ಜೋರಾಗಿ ಬೊಬ್ಬೆ ಹಾಕಲು ಶುರು ಮಾಡಿದ್ವಿ.  ಎಷ್ಟೇ ಆದ್ರೂ ತಾಯಿ ಅಲ್ವಾ….?  ಮಕ್ಕಳ ನೋವನ್ನು ಅವರಿಂದ ನೋಡಲಾಗಲಿಲ್ಲ.  ಅಡಿಗೆ ಮನೆಯಿಂದ ನೇರವಾಗಿ ನಾವಿರುವಲ್ಲಿಗೆ ಬಂದವರು,  “ಇನ್ನೊಂದು ಸಲ ಕದಿಯುವುದಿಲ್ಲ” ಅಂತ ಹೇಳಿ ಬಿಡುತ್ತಾರೆ ಅಂತ ನಮಗೆ ಹೇಳಿದರು.  “ಇವರಿಗೆ ಒಳ್ಳೆ ಮಾತಲ್ಲಿ ಹೇಳಿದ್ರೆ ಅರ್ಥ ಆಗೋಲ್ಲ, ಇನ್ನೊಂದು ಸಲ ಕದಿದೇ ಇರೋ ಹಾಗೆ ಮಾಡ್ತೀನಿ” ಅಂತ ಕಬ್ಬಿಣದ ಸರಳನ್ನು ಮೇಲೆತ್ತಿಯೇ ಬಿಟ್ಟರು…….!   ನಾವು ಜೋರಾಗಿ ಅಳುತ್ತಾ “ಇಲ್ಲ ಅಣ್ಣಾ …. (ನಾವು ಅಪ್ಪನನ್ನು ಅಣ್ಣ ಅಂತ ಕರೆಯುತ್ತೇವೆ, ಯಾಕೆಂದು ಗೊತ್ತಿಲ್ಲ, ಚಿಕ್ಕಂದಿನಿಂದ ಹಾಗೇ ಅಭ್ಯಾಸವಾಗಿದೆ)….ಊಂ…. ಇನ್ನೊಂದು ಸಲ ಕದಿಯುವುದಿಲ್ಲ …..ಊಂ….”  .   ಅಷ್ಟೊತ್ತಿಗೆ ನಮ್ಮಮ್ಮ, “ಹೋಗ್ಲಿ ಬಿಡ್ರಿ ಹುಡುಗ್ರು ಗೊತ್ತಿಲ್ದೇ ತಗೋಂಡಿದಾವೆ ಇನ್ನೊಂದು ಸಲ ತಗೋಬೇಡಿ ಅಂತ ಹೇಳಿದ್ರಾಯ್ತು”  ಅಂತ ಹೇಳಿದರು.  “ಏನ್ರೋ ಇನ್ನೊಂದ್ಸಲ ಕದಿತೀರೇನ್ರೋ…….?  ಊಂ……ಊಂ……ಎಂದು ಅಡ್ಡಡ್ಡಾ ತಲೆ ಆಡಿಸಿದಿವಿ.  “ಇನ್ನೊಂದುಸಲ ದುಡ್ಡು ತೆಗೆಯೋದಾಗ್ಲಿ ನಿಮ್ದಲ್ಲದೇ ಇರೋ ವಸ್ತು ಮುಟ್ಟೋದಾಗ್ಲಿ ಮಾಡಿದ್ರೆ ಏನು ಮಾಡ್ತಿನಿ ನೋಡಿ ಮತ್ತೆ”  ಅಂತ ಬೆದರಿಕೆ ಹಾಕಿದರು,  ಅಮ್ಮ ನಮ್ಮ ಪಾರ್ಟಿಗೆ ಬಂದಿದ್ರಿಂದ ಅಳು ಸ್ವಲ್ಪ ಸಮಾಧಾನ ಆಗಿತ್ತು.  ನಾನು ಬಿಕ್ಕಳಿಸುತ್ತಾ .... "ಇಲ್ಲ ಅಣ್ಣ ಇನ್ನುಮೇಲೆ ಯಾವತ್ತೂ ಹೀಗೆ ಮಾಡುವುದಿಲ್ಲ" ಅಂತ ಹೇಳಿದೆ.  ಸರಿ, “ನೆಡಿರಿ ಸ್ಕೂಲಿಗೆ, ನಾಳೆ ಮೇಷ್ಟ್ರಿಗೆ ಹೇಳ್ತಿನಿ ಇವರನ್ನ ಸ್ವಲ್ಪ ಸರಿಯಾಗಿ ನೋಡಿಕೊಳ್ಳಿ ಅಂತ” ಎಂದು ಅಪ್ಪ ಹೇಳಿದಮೇಲೆ ಕಣ್ಣೊರೆಸಿಕೊಂಡು ಏಳುತ್ತಾ ಶಾಲೆಯ ಕಡೆಗೆ ಹೊರಟ್ವಿ. 

     ಆ ದಿನ ನಮ್ಮಪ್ಪ ಅಷ್ಟು ಮಾಡದೇ ಹೋಗಿದ್ರೆ……..?  ಆ ಅಭ್ಯಾಸವೇ ಶುರುವಾಗಿದ್ರೆ……..?  ನೆನಸಿ ಕೊಂಡ್ರೇ ಭಯವಾಗುತ್ತೆ.  ಮಕ್ಕಳು ತಪ್ಪು ಮಾಡಿದ ಕೂಡಲೇ ಶಿಕ್ಷೆ ಕೊಡಬೇಕು,  ಸಮಾಧಾನವಾದ ನಂತರ ಕೂರಿಸಿಕೊಂಡು ತಿಳುವಳಿಕೆ ಹೇಳಬೇಕು ಆಗ ಅವರು ಇನ್ನೊಮ್ಮೆ ತಪ್ಪು ಮಾಡುವುದಿಲ್ಲ. ಇಂದಿಗೂ ನಾನು ನನ್ನ ತಂಗಿ ಈ ಸಂದರ್ಭವನ್ನು ನೆನಸಿಕೊಂಡು ನಗುತ್ತಿರುತ್ತೇವೆ.

     ಮೊದಲು ಕಳ್ಳತನ ಮಾಡುವಾಗ ಹೆದರಿಕೆ ಇರುತ್ತದೆ, ಮೊದಲ ಬಾರಿಗೆ ಸಿಕ್ಕಿಹಾಕಿಕೊಂಡಾಗ ಸರಿಯಾದ ಶಿಕ್ಷೆಯಾದರೆ ಅವನು ತನ್ನ ಜೀವಮಾನದಲ್ಲಿ ಕಳ್ಳತನವನ್ನು ಮಾಡುವುದಿಲ್ಲ.  ಸರಿಯಾದ ಶಿಕ್ಷೆಯಾಗದಿದ್ದರೆ, ದೊಡ್ಡಕಳ್ಳನಾಗುವುದರಲ್ಲಿ ಸಂದೇಹವಿಲ್ಲ.  


ನಿಮ್ಮ, ಗುರುಪ್ರಸಾದ್, ಶೃಂಗೇರಿ.