ಬಾಳಿಗೊಂದು ಚಿಂತನೆ - 104
ಒಮ್ಮೆ ಕಾಮನಬಿಲ್ಲು ಅಹಂಕಾರದಿಂದ ಬೀಗಿತಂತೆ ‘ನಾನು ಬಹಳ ಚೆಲುವ’ ಎಂಬುದಾಗಿ. ಆಕಾಶ ಎಷ್ಟು ಬುದ್ಧಿ ಮಾತು ಹೇಳಿದರೂ ಕೇಳಲಿಲ್ಲ. ತಾನೇ ಜಗದೇಕ ಸುಂದರ ಎಂಬ ಗರ್ವ. ಅಯ್ಯೋ ಭಗವಂತ! 'ಇದು ಸೂರ್ಯ ದೇವನ ಕೃಪೆ' ನಿನ್ನ ಏಳು ಬಣ್ಣಗಳೂ ನಿನ್ನದಲ್ಲ' ಹೇಳಿದ್ದು ಕಿವಿಗೆ ಕೇಳಿಸಲೇ ಇಲ್ಲ. ಇದರ ಅಹಂ ಮುರಿಯಬೇಕೆಂದು ಕಾರ್ಮೋಡವೊಂದು ಅಡ್ಡ ಬಂದು ಕಾಮನಬಿಲ್ಲು ಕಾಣದಾಯಿತು. ಅಹಂಕಾರ ಇಳಿಯಿತು. ಎಲ್ಲೋ ಓದಿದ ನೆನಪು.
ಇದೇ ಅಲ್ಲವೇ ‘ಕೃತಘ್ನತೆ’ ಎಂದರೆ. ಮಾಡಿದ ಉಪಕಾರದ ನೆನಪೇ ಇಲ್ಲ. ತಾನೇ ದೊಡ್ಡವನೆಂಬ ಮನೋಸ್ಥಿತಿ. ‘ಕೃತಜ್ಞತೆ’ ಬೇಡವೇ? ಅದೇ ಇಲ್ಲ. ಯಾರಾದರೂ ಸರಿ ಕಿಂಚಿತ್ ಸಹಾಯ ಮಾಡಿದರೂ ಮರೆಯಬಾರದು. ಮಾನವೀಯತೆ ಎಂದರೆ ಉಪಕಾರ ಸ್ಮರಣೆ ಮಾಡುವುದು. ಉಪಕರಿಸಿದವನಿಗೆ ಅಪಚಾರ ಮಾಡುವುದು ನೀಚತನವಲ್ಲದೆ ಮತ್ತೇನು?
*ಬ್ರಹ್ಮ ಘ್ನೇ ಚ ಸುರಾಪೇ ಚ*
*ಚೋರೇ ಭಗ್ನವ್ರತೇ ಶಠೇ*|
*ನಿಷ್ಕೃತಿರ್ವಿಹಿತಾ ಸದ್ಭಿಃ*
*ಕೃತಘ್ನೇ ನಾಸ್ತಿ ನಿಷ್ಕೃತಿಃ||*
ವಿದ್ಯಾವಂತನಾದ ಒಳ್ಳೆಯವನನ್ನು ಎಲ್ಲಿಯಾದರೂ ತಪ್ಪಿ ಜೀವತೆಗೆದರೆ, ಹೆಂಡವನ್ನು ಕುಡಿದರೆ, ಕಳ್ಳತನ ಮಾಡಿದರೆ, ವ್ರತವನ್ನು ಭಂಗ ಮಾಡಿದರೆ, ಒರಟುತನದಿಂದ ಮರ್ಯಾದೆಯನ್ನು ಉಲ್ಲಂಘಿಸಿ ಮೋಸ ಮಾಡಿದರೆ ಅಂಥವರಿಗೆ ಪ್ರಾಯಶ್ಚಿತ್ತವಿದೆ. ಆದರೆ ‘ಕೃತಘ್ನನಿಗೆ’ ಯಾವ ಪ್ರಾಯಶ್ಚಿತ್ತವೂ ಇಲ್ಲ. ಅದು ಅಷ್ಟೂ ಪಾಪದ ಕೆಲಸ. ಅತ್ಯಂತ ನಿಕೃಷ್ಟವಾದುದಾಗಿದೆ.
ಅನ್ನಕೊಟ್ಟ ಮನೆಗೆ ಕನ್ನ ಹಾಕಬಾರದು. ಮೃಗೀಯ ವರ್ತನೆ ಇದು. ತುಂಬಿ ಹರಿಯುವ ನದಿಯನ್ನು ದಾಟಿದ ಮೇಲೆ ದಾಟಿಸಿದ ಅಂಬಿಗನಿಗೆ ಹಣ ಕೊಡದೆ ಹೋದ ಹಾಗೆ ಮಾಡಬಾರದು. ನನ್ನ ಬಂಧುಗಳೊಬ್ಬರು ಹೇಳಿದ ವಿಷಯ 'ಓರ್ವ ಮಹನೀಯರಿಗೆ ಗಾಡಿಗೆ ಪೆಟ್ರೋಲ್ ಹಾಕಿಸಿ ಹಣ ಕೊಡದೆ ಹೋಗುವ ಅಭ್ಯಾಸವಿತ್ತಂತೆ. ಬೇರೆ ಬೇರೆ ಪೆಟ್ರೋಲ್ ಬಂಕ್ ಗಳಿಗೆ ಹೋಗಿ ಇದೇ ಆಟ ಮಾಡಿ, ಕಡೆಗೆ ಮೊದಲಿನ ಬಂಕ್ ಗೆ ಬಂದಾಗ ಮಹನೀಯರನ್ನು ಹಿಡಿದು ನಾಲ್ಕು ತಟ್ಟಿ ಕಳುಹಿಸಿದ ಮೇಲೆ ಈ ಚಾಳಿ ಬಿಟ್ಟರಂತೆ. ಧಾರಾಳ ಹಣ ಇದ್ದವರು. ಈ ಕೆಟ್ಟಬುದ್ಧಿ ಯಾಕೆ ಬಂತೋ ಗೊತ್ತಿಲ್ಲ.
ಒಂದು ದಿನ ತಲೆಗೆ ಬಲವಾದ ಹೊಡೆತ ಬಿದ್ದಾಗ ಯಾರೂ ಬರಲಾರರು. ಆಗ ಕೃತಘ್ನರು ನಗೆಪಾಟಲಿಗೆ ಈಡಾಗುತ್ತಾರೆ. ಸತ್ಯದ ಅರಿವಾಗಿ ಬೆಳಕು ಮೂಡಿದಾಗ ಎಲ್ಲವೂ ಶೂನ್ಯ ಅವರಿಗೆ. ತಾನಾಗಿ ತಗ್ಗಿಬಗ್ಗಿ ನಡೆಯಬೇಕಾದಲ್ಲಿ ನಡೆಯದಿದ್ದರೆ ಏಕಾಂಗಿಯಾಗಿ ಇರಬೇಕಾಗಬಹುದು.
*ಕೃತಂ ನಪ್ರತಿಕುರ್ಯಾದ್ಯಃ* *ಪುರುಷಾಣಾಂ ಸ ದೂಷಕಃ|*
ಎಂಬಂತೆ ಕೃತಘ್ನ ಎನಿಸಿದವನು ಅತ್ಯಂತ ನೀಚನು.
ಉಪಕಾರ ಪಡೆದುದನ್ನು ಸ್ಮರಿಸೋಣ, ಗೌರವಿಸೋಣ, ಮರೆಯದಿರೋಣ.
(ಶ್ಲೋಕ ಸಂಗ್ರಹ: ಸರಳ ಸುಭಾಷಿತ)
- ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ