ಬಾಳಿಗೊಂದು ಚಿಂತನೆ - 128

ಬಾಳಿಗೊಂದು ಚಿಂತನೆ - 128

ಬೆಂಕಿ ಬೆಂಕಿಯನ್ನೇ ನಂದಿಸಲಾರದು. ನಾವು ಏನಾದರೂ ಪಾಪದ ಕೆಲಸಗಳನ್ನು ಮಾಡಿದರೆ ಅದನ್ನು  ಪಾಪದಿಂದಲೇ ಹೋಗಲಾಡಿಸಲಾಗದು. ಹಾಗಾದರೆ ಏನು ಮಾಡೋಣವೆಂಬ ಪ್ರಶ್ನೆ ಸಹಜ. ಪಾಪ ಎಸಗುವ ಮೊದಲೇ ಪ್ರಜ್ಞೆ ಇದ್ದರೆ ಒಳ್ಳೆಯದು. ಜ್ಞಾತ ಮತ್ತು ಅಜ್ಞಾತ ಎರಡು ವಿಧಧ ಪಾಪಗಳನ್ನು ಮಾಡುತ್ತಲೇ ಇರುತ್ತೇವೆ. ಪರಿಹರಿಸಲು ಸಾಧ್ಯವಾಗದ್ದು, ನಮಗೆ ಅರಿವಿಲ್ಲದೆ ಆಗಿಹೋದದ್ದು. ನಮ್ಮ ತಿಳುವಳಿಕೆಗೆ ಬಂದೂ ನಾವು ಸುಮ್ಮನಿರುವುದು ಸರಿಯಲ್ಲ. ಪ್ರಾಯಶ್ಚಿತ್ತ ಬೇಕು. ಅದು ನಮ್ಮ ಕೈಯಲ್ಲಿದೆ ಅಲ್ಲವೇ? ಯಾವುದಾದರೂ ಒಂದು ರೂಪದಲ್ಲಿ ಸಹಕರಿಸಿ ಪಾಪದ ಸ್ವಲ್ಪಾಂಶವನ್ನು ಕಡಿಮೆ ಮಾಡಿಕೊಳ್ಳೋಣ. ಪರೋಪಕಾರ ಗುಣವನ್ನು ಬೆಳೆಸಿಕೊಂಡರೆ ಪಾಪ ಹತ್ತಿರವೇ ಬಾರದು. ಪಾಪವೆಂಬುದೇ ಮಹಾ ಕೂಪದೊಳು ಬಿದ್ದಂತೆ, ಅದರಿಂದ ಏಳಲಾಗದು. ಯಾವಾಗ ನಮಗೆ  ಏನಾಗುವುದೋ ಹೇಳಲಾಗದು. ಬೆಳಗುವ ದೀಪದಂತಿರಬೇಕಂತೆ ನಾವು. ದೀಪ ಹೇಗೆ ತನ್ನ ಸುತ್ತಲಿನ ಕತ್ತಲನ್ನು ಬೆಳಕ ನೀಡಿ ಹೋಗಲಾಡಿಸುವುದೋ ಹಾಗೆ. ದೀಪದಡಿ ಕತ್ತಲು. ನಮ್ಮೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ಕ್ಷೇಮ ನೀಡುವುದು ಆದ್ಯಕರ್ತವ್ಯ.

ಸೂರ್ಯ, ಚಂದ್ರ, ಆಕಾಶ, ಪ್ರಕೃತಿ, ಗಾಳಿ, ನೀರು ಎಲ್ಲವನ್ನೂ ನೋಡಿ ನಾವು ಕಲಿಯುವುದು ಬಹಳಷ್ಟಿದೆ. ಎಲ್ಲವೂ ಇತರರ ಸುಖಕ್ಕಾಗಿಯೇ ಭಗವಂತನ ಸೃಷ್ಟಿ. ಆದರೆ ನಾವೇನು ಮಾಡುತ್ತೇವೆ, ನಮ್ಮ ಪ್ರಹಾರ ಸದಾ ನಡೆಯುತ್ತಿದೆ. ಮುಂದೆ ಏನಾಗಬಹುದೆಂಬ ಕಲ್ಪನೆ ಸಹ ಇಲ್ಲದಂತೆ. ಈಗಾಗಲೇ ಮಾಡಿದ ತಪ್ಪಿಗೆ ಸಾಕಷ್ಟು ಫಲಗಳನ್ನು ಉಣ್ಣುತ್ತಿದ್ದೇವೆ. ಆದರೂ ಬುದ್ಧಿ ಬಂದಿಲ್ಲ. ಮತ್ತಷ್ಟೂ ಪಾಪಗಳ ದಾರಿಯಲ್ಲಿಯೇ ಸಾಗಲು ಪ್ರಯತ್ನಿಸುತ್ತೇವೆ.

*ಯಥಾ ಮಧು ಸಮಾಧತ್ತೇ ರಕ್ಷನ್ ಪುಷ್ಪಾಣಿ ಷಟ್ಪದ:/*

*ತದ್ವದರ್ಥಾನ್ ಮನುಷ್ಯೇಭ್ಯ ಆದದ್ಯಾದವಿಹಿಂಸಯಾ//*

ಹೂವಿಂದ ಹೂವಿಗೆ ಹಾರುವ ದುಂಬಿ ಹೇಗೆ ಪುಷ್ಪಕ್ಕೆ ನೋವಾಗದಂತೆ ಮಕರಂದವನ್ನು ಹೀರಿ, ಜೊತೆಗೆ ಪರಾಗಸ್ಪರ್ಶದಂಥ ಮಹಾ ಉಪಕಾರವನ್ನು ಮಾಡುತ್ತಿದೆಯೋ, ಹಾಗೆ ನಮ್ಮ ಕೆಲಸಕಾರ್ಯಗಳಿರಬೇಕು. ಇತರರಿಗೆ ಹಿಂಸೆ, ನೋವು, ತೊಂದರೆ ಕೊಟ್ಟು ಗಳಿಸಿದ ಸಂಪಾದನೆ ನಮಗೆ ಬೇಡವೆಂಬ ಮನೋಭಾವ ಎಲ್ಲರಿಗೂ ಬಂದರೆ ಲೋಕವೇ ಹೊನ್ನಿನಂತೆ ಬೆಳಗಬಹುದು. ಎಲ್ಲರೂ ಚೆನ್ನಾಗಿರೋಣ, ಉತ್ತಮತೆಯಲ್ಲಿ ಉತ್ತಮರಾಗೋಣ.

-ರತ್ನಾ ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ರತ್ನ ಭಂಡಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ