ಬಾಳಿಗೊಂದು ಚಿಂತನೆ (136) - ಆಭರಣ
‘ಆಭರಣ’ ಧರಿಸಿದಾಗ ನಾವು ಇನ್ನಷ್ಟೂ ಸುಂದರವಾಗಿ ಕಾಣುತ್ತೇವೆ. ಆಭರಣದ ಹಿಂದೆ ಎಷ್ಟು ಶ್ರಮವಿದೆ ಮಾಡಿಸಿದವರಿಗೆ ಮಾತ್ರ ಆ ಕಷ್ಟ ಗೊತ್ತಿರಲು ಸಾಧ್ಯ. ಮದುವೆಗಳಲ್ಲಿ ಹೆಂಗಳೆಯರ ಆಭರಣ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲಾ ಶೋಭಿಸುವುದು ಸಾಮಾನ್ಯ. ಈಗಂತೂ ಕೃತಕ ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದನ್ನೇ ಒಂದು ವೃತ್ತಿಯನ್ನಾಗಿ ಸ್ವೀಕರಿಸಿದ ಸಾಕಷ್ಟು ಕುಟುಂಬಗಳಿವೆ.
ಒಂದು ಕಾಲದಲ್ಲಿ ಕೊರಳಿಗೆ ಒಂದೂ ಸರವೂ ಹಾಕದೆ ಹೇಗೆ ಮದುವೆಗೆ ಹೋಗಲಿ? ಎಂಬ ಪ್ರಶ್ನೆಯಿತ್ತು. ಇದ್ದವರಲ್ಲಿಂದ ಇಲ್ಲದವರು ತೀರಾ ನಂಬುಗೆಯಿದ್ದರೆ ಎರವಲು ತರುತ್ತಿದ್ದರಂತೆ. ಎಷ್ಟೋ ಸಲ ಕೊಡದೆ ವಾದ ವಿವಾದಗಳಾಗಿ ಪೋಲೀಸ್ ಸ್ಟೇಷನ್, ದೇವಸ್ಥಾನಗಳು, ದೈವಸ್ಥಾನಗಳವರೆಗೂ ದೂರುಗಳು ಹೋದದ್ದೂ ಇದೆ. ಆದರೂ ಆಭರಣದ ಮೇಲಿನ ಮೋಹ ಹೋಗುತ್ತಿಲ್ಲ. ‘ಬಿಡು ಅಂದರೂ ಮೋಹದ ಮಾಯೆ ಬಿಡುತ್ತಿಲ್ಲ’ . ನಮ್ಮ ಪರಿಚಯದ ಮನೆಯಲ್ಲಿ ಓರ್ವ ಹೆಣ್ಣು ಮಗಳು ಸ್ವಲ್ಪ ವಿಶೇಷ ಅಗತ್ಯದ ಮಗು. ಬಹುಷಃ ೭--೮ ವರ್ಷವಿರಬೇಕು. ತಂದ ಸರವೊಂದನ್ನು ಮಳೆಗಾಲದಲ್ಲಿ ಹೊಳೆಯಲ್ಲಿ ಬಿಸಾಡಿದಳಂತೆ. ಅಯ್ಯೋ ತಂದವರ ಗೋಳಾಟವೇ? ಅಂತು ಆ ತಂದೆ ಹೇಗೋ ಕಷ್ಟಪಟ್ಟು ಬೇರೆ ಮಾಡಿಸಿಕೊಟ್ಟರೆನ್ನಿ. ಆ ಮಗು ಈಗ ೬೦ರ ವಯಸ್ಸಿನವರು. ನನಗೆ ಅನಿಸುವುದು ‘ಈ ಎರವಲು ತಂದು ಧರಿಸುವ ಹುಚ್ಚುತನ ಯಾಕೆ?’. ಈಗೆಲ್ಲ ಕೃತಕಾಭರಣಗಳಿವೆ. ಮೊದಲೆಲ್ಲ ಪ್ರತಿಷ್ಠೆಯ ವಿಷಯವಾಗಿತ್ತು. ಮದುವೆಯ ಸಂದರ್ಭದಲ್ಲಿ ಬಹಳ ಬೇಡಿಕೆ. ಓರ್ವ ವರ ಮಹಾಶಯ ಹೇಳಿದ ಮಾತು "ವರದಕ್ಷಿಣೆ ಕೇಳುವುದಿಲ್ಲ, ಆದರೆ ಬಂಗಾರ ೧೫ ಪವನ್ ಕೇಳ್ತೇನೆ'. ಅಯ್ಯೋ ಮಹರಾಯ, 'ಹಣ ಎಷ್ಟಾಯಿತು ೧೫ ಪವನಕ್ಕೆ? ಎಂದೆ. ಅವ ಹೇಳಿದ್ದು ಕೇಳಿ ನನಗೆ ಶಾಕ್ ಒಂದು ಕ್ಷಣ. ಅವನಪ್ಪನಿಗೆ ಕೈತುಂಬಾ ಸಾಲವಂತೆ. ಈ ಬಂಗಾರ ಬಂದ ಮೇಲೆ ಅದನ್ನೇ ಮಾರಿ ಸಾಲ ತೀರಿಸುವುದಂತೆ. 'ಇದು ತಪ್ಪು, ವರದಕ್ಷಿಣೆಯ ಇನ್ನೊಂದು ರೂಪ 'ಹೇಳಿದೆ. 'ನಾನು ಅಸಹಾಯಕ. ಇಲ್ಲದಿದ್ದರೆ ಮದುವೆಯೇ ಇಲ್ಲ ನನಗೆ'ಹೇಳಿದ. ಹೀಗೂ ಉಂಟೇ? ಅನ್ನಿಸಿತು. ಆಭರಣಗಳು ಕಷ್ಟಕ್ಕೆ ಆಗುವುದು ನಿಜ. ಆದರೆ ಇತರರ ಬೆವರ ಹನಿಗಳ ಹೊನ್ನು ಬೇಡ. ನಾವೇ ಬೆವರಿಳಿಸೋಣ, ಗಳಿಸೋಣ.
ಇರಲಿ ಈಗ ಮುಖ್ಯವಾದ ‘ಆಭರಣ’ ದತ್ತ ಬರೋಣ. ಯಾವುದು ಹಾಗಾದರೆ? ಸ್ನೇಹಿತರೇ, ‘ನಮ್ಮ ಮಾತು, ಕೃತಿ, ಗುಣ-ನಡತೆ, ವ್ಯವಹಾರ, ನೈತಿಕ ಮೌಲ್ಯಗಳೆಂಬ ಆಭರಣ’. ಇದನ್ನು ನಮ್ಮ ತನುಮನಗಳಲ್ಲಿ ತುಂಬಿಕೊಂಡರೆ, ಅದರಂತೆ ಬದುಕಿನ ಉದ್ದಕ್ಕೂ ಸಾಗಿದರೆ ಅದಕ್ಕಿಂತ ದೊಡ್ಡ ಆಭರಣ ಖಂಡಿತಾ ಇಲ್ಲ. ಓರ್ವ ಶ್ರೀಮಂತ. ಆದರೆ ಹೆತ್ತ ತಂದೆ ತಾಯಿ ಬೇಡ. ಅವನಲ್ಲಿ ಎಷ್ಟಿದ್ದರೇನು? ಶುನಕದ ಮೈಯಲ್ಲಿದ್ದ ಜಿಗಣೆಯ ಹಾಗೆ. ಮೊನ್ನೆ ಬಂಧುವೊಬ್ಬರು ಫೋನ್ ಮಾಡಿ ಒಂದು ಸಮಾರಂಭಕ್ಕೆ ಹೋಗಿದ್ದೆ ಎಂದರು. ಹೋದ್ದೆಲ್ಲಿಗೆ ಕೇಳಿದಾಗ ‘ಊಟ ನೀಡಿದ ವ್ಯಕ್ತಿಯ ಮನೆಯಲ್ಲಿ ಸಂಭ್ರಮವಂತೆ. ಆದರೆ ಆತನ ವಯಸ್ಸಾದ ತಾಯಿ ವೃದ್ಧಾಶ್ರಮದಲ್ಲಂತೆ. ಪಾಪ! ಫೋನಾಯಿಸಿದವರಿಗೆ ಅವರಮ್ಮನ ನೆನಪಾಗಿ ಅತ್ತರು’ . ತಾಯಿಯ ಮಹತ್ವ ತಿಳಿಯುವುದು ಅವರಿಲ್ಲ ಪ್ರಪಂಚದಲ್ಲಿ ಅಂದಾಗ.
*ಸತ್ಕರ್ಮಗಳ ಗೈದು ಸಂತಸದಿ ಬದುಕಯ್ಯಾ*
*ಆಡಿದ ವಚನಗಳ ಮರೆಯದಿರಯ್ಯಾ*
*ಸಜ್ಜನರಿಗೆ ಹಿಂಸೆ ನೀಡದಿರಯ್ಯಾ*
*ಕೊಳೆತು ನಾರುವ ಕೊಚ್ಚೆಗೆ ಕಲ್ಲು ಎಸೆಯದಿರಯ್ಯಾ*
*ಆಂತರಿಕ ಸೌಂದರ್ಯದಲಿ ಅಡಗಿದ ಆಭರಣಂಗಳ*
*ಬದುಕಿನ ಹಾದಿಯಲಿ ಅಳವಡಿಸಿದರೆ*
*ಒಲಿದು 'ಶ್ರೀದುರ್ಗೆ' ಹರಸುವಳಯ್ಯಾ*
ಕೈಗೆ ನಿಜವಾದ ಆಭರಣ ಕಾಯಕ, ದಾನಗುಣ. ಕೊರಳಿಗೆ ಸತ್ಯದ ನಡತೆ ಮಾತುಗಳು. ಕಿವಿಗೆ ಉತ್ತಮ ವಾರ್ತೆಗಳನ್ನು ಕೇಳುವುದೇ ಆಭರಣ. ತನುವಿಗೆ ಗುಣನಡತೆಯೇ ಆಭರಣ. ನುಡಿದಂತೇ ನಡೆವುದೇ ಆಭರಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ