ಬಾಳಿಗೊಂದು ಚಿಂತನೆ - 137

ಬಾಳಿಗೊಂದು ಚಿಂತನೆ - 137

ಅಜ್ಞಾನವೆನ್ನುವುದು ಎಲ್ಲಿಂದ ಎಲ್ಲಿಗೂ ಮನುಷ್ಯನನ್ನು ಒಯ್ಯಬಹುದು. ಮಾನವ ಸಮಾಜದಲ್ಲಿ ಒಳ್ಳೆಯವನಾಗಲು ಹಲವು ದಾರಿಗಳಿದ್ದಂತೆ, ಕೆಟ್ಟವನಾಗಲು, ಹಾಳಾಗಲೂ ಅನೇಕ ಮಾರ್ಗಗಳಿವೆ. ತಾನು ಏನು ಮಾಡಿದರೂ ತೊಂದರೆಯಿಲ್ಲ, ನಾನು ಹೋದದ್ದೇ ದಾರಿ, ಬೇಕಾದವರು ನನ್ನ ದಾರಿಗೆ ಬರಲಿ ಇಲ್ಲವೇ ಹಿಂಬಾಲಿಸಲಿ ಎಂಬ ಧೋರಣೆ ಕೆಲವು ಜನರಿಗಿದೆ. ವಿವೇಕಿಗಳು ಯೋಚಿಸಿ ಹಿಂಬಾಲಿಸುವರು. ವಿವೇಕ ಶೂನ್ಯರು ಹಿಂಬಾಲಿಸಿ ಹೊಂಡಕ್ಕೆ ಬೀಳುತ್ತಾರೆ ಇಲ್ಲವೇ ಎಲ್ಲವನ್ನೂ ಕಳಕೊಳ್ಳುತ್ತಾರೆ.

*ಕೇಚಿದಜ್ಞಾನತೋ ನಷ್ಟಾಃ* *ಕೇಚಿನ್ನಷ್ಟಾಃ ಪ್ರಮಾದತಃ/*

*ಕೇಚಿಜ್ನಾನಾವಲೇಪೇನ* *ಕೇಚಿನ್ನಷ್ಟ್ಯಸ್ತು ನಾಶಿತಾಃ//*

ಅಜ್ಞಾನವೆನ್ನುವುದು ನಮ್ಮ ಶತ್ರು. ಜ್ಞಾನವಂತರಲ್ಲಿ ಕೇಳಿ ತಿಳುವಳಿಕೆ ಹೆಚ್ಚಿಸಿಕೊಳ್ಳೋಣ. ಯಾವುದರಲ್ಲಿಯೂ ನಿರ್ಲಕ್ಷ್ಯ ಬೇಡ. ಅದು ನಮ್ಮನ್ನು ಪಾತಾಳದತ್ತ ಒಯ್ಯಬಹುದು. ರೋಗ ಆರಂಭದ ಹಂತದಲ್ಲಿ ಗುಣವಾಗಬಹುದು, ಹಣವೂ ಕಡಿಮೆ ಸಾಕು. ಉಲ್ಬಣವಾದರೆ ನೋವು, ಯಾತನೆ, ಹಣದ ಜೊತೆ ಹೆಣವಾಗಬಹುದು. ಹಾಗಾಗಿ ಅಸಡ್ಡೆ ಬೇಡ. ನಾನೇ ಕಲಿತವ, ನನಗೇ ಎಲ್ಲಾ ತಿಳಿದಿದೆ, ನನ್ನಷ್ಟು ಕಲಿತವರಾರಿಲ್ಲ ಎಂಬ ಅಹಮಿಕೆ ಸರ್ವನಾಶದತ್ತ ಒಯ್ಯಬಹುದು. ಕಲಿತದ್ದು ಇದ್ದರೆ ಇರಲಿ. ಸಾಧ್ಯವಾದರೆ, ಮನಸ್ಸಿದ್ದರೆ ನಾಲ್ಕು ಜನಕ್ಕೆ ಕಲಿಸಿಕೊಟ್ಟರೆ ಪುಣ್ಯ ಬರಬಹುದು. ಮದ ಮತ್ಸರಗಳು ಮಾನವನ ಅತಿ ದೊಡ್ಡ ಶತ್ರು. ‘ಮರದ ಹುಳ ಮರವನ್ನೇ ನಾಶ ಮಾಡುವ’ ವಿಚಾರ ನಮಗೆ ತಿಳಿದಿದೆ. ಹುಳ ಹಿಡಿವಾಗಲೇ ಎಚ್ಚೆತ್ತುಕೊಂಡರೆ ಬಾಳಿಕೆ ಹೆಚ್ಚಾಗಬಹುದು. ಸ್ನೇಹ ಮಾಡುವಾಗ ನೋಡಿ ಮಾಡೋಣ. ಗೆಳೆತನವೆನ್ನುವುದು ಸ್ವರ್ಗ ಪಾತಾಳ ಎರಡನ್ನೂ ತೋರಿಸಬಹುದು. ನಮ್ಮ ಉನ್ನತಿ ಇಲ್ಲದಲ್ಲಿ ಹದವರಿತ ಸ್ನೇಹ ಸಾಕು. ಸ್ನೇಹದಿಂದ ನಾಶವಾಗದ ಹಾಗೆ ಜಾಗ್ರತೆ ವಹಿಸೋಣ. ಹೆಗಲಿಗೆ ಹೆಗಲು ಕೊಡುವ ಸ್ನೇಹಿತರೂ ಇದ್ದಾರೆ. ಯಾರ ಹತ್ತಿರ ಹೇಳದ ಅಂತರಾಳದ ನುಡಿಗಳನ್ನು ಗೆಳೆಯರ ಹತ್ತಿರ ಹೇಳ್ತೇವೆ. ಅಷ್ಟೂ ನಂಬುತ್ತೇವೆ. ಹಾಗೆಂದು ಸಂಪೂರ್ಣ ಹಾಳುಮಾಡುವ ಗೆಳೆಯರೂ ಇದ್ದಾರೆ. ಗೆಳೆತನ ನಮ್ಮನ್ನು ವೃದ್ಧಿಸುವಂತಿರಲಿ. ಕೆಟ್ಟ ಜನ, ಕೆಟ್ಟ ಮನಸ್ಸಿನವರೊಂದಿಗೆ ಸೇರಿ ಮತ್ತೂ ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಅವರಿಂದ ದೂರವೇ ಇರೋಣ. ‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’, ದುರ್ಜನರ ಸಂಗ ಎಂದರೆ ಮೈಮೇಲಿನ ತುರಿಕೆ ಹುಣ್ಣಿನಂತೆ, ಕೆರೆದಷ್ಟೂ ನೋವು ಜಾಸ್ತಿ, ಹರಡುವುದು ಹೆಚ್ಚು. ಆದಷ್ಟೂ ಉತ್ತಮತೆಯಲ್ಲಿ ಬದುಕು ಕಟ್ಟಿಕೊಳ್ಳೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ : ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ