ಬಾಳಿಗೊಂದು ಚಿಂತನೆ - 153
ಇಲ್ಲದವನಿಗೆ ಕರೆದು ದಾನವ ನೀಡಬೇಕಂತೆ, ಹಿರಿಯರ ನುಡಿ. ಹೊಟ್ಟೆ ಹಸಿದವಗೆ ಒಂದು ತುತ್ತು ಅನ್ನ ಬಡಿಸಿದರೆ, ಉಂಡು ತೃಪ್ತಿಗೊಳ್ಳುವನು. ಅದನು ಕಂಡಾಗ ಬಡಿಸಿದವನಿಗೂ ತೃಪ್ತಿಯ ಭಾವ. ಹಿಡಿ ಅನ್ನಕ್ಕೆ ಬದಲಾಗಿ ಹೊನ್ನು ಆ ಕ್ಷಣಕ್ಕೆ ಪ್ರಯೋಜನವಾಗದು. ಯಾರಿಗೆ ಈಗ ಯಾವುದು ಅವಶ್ಯಕವೋ ಅದನ್ನೇ ಕೊಡಬೇಕು. ಕಷ್ಟದಲ್ಲಿದ್ದವಗೆ, ಬಡವರಿಗೆ, ದೀನರಿಗೆ, ಕೈಲಾಗದವರಿಗೆ ಕಿಂಚಿತ್ ಸಹಕರಿಸೋಣ. ಯಾವಾಗಲೂ ಊಟವೇ ನೀಡುವುದಲ್ಲ. ಊಟಕ್ಕಿರುವ ದಾರಿಯನ್ನು ಕಂಡುಕೊಳ್ಳಲು ಪ್ರೇರೇಪಿಸಬಹುದು. ಗಳಿಕೆಯು ಮುಂದೆ ಪ್ರಯೋಜನವಾಗಬಹುದು.
*ಅನ್ನದಾನಗಳಿಂದ ಮುನ್ನದಾನಗಳಿಲ್ಲ*
*ಅನ್ನಕ್ಕೆ ಮಿಗಿಲು ಇನ್ನಿಲ್ಲ, ಜಗದೊಳಗೆ*
*ಅನ್ನವೇ ಪ್ರಾಣ ಸರ್ವಜ್ಞ//*
ಅನ್ನವು ಮೊದಲು, ಉಳಿದದ್ದೆಲ್ಲ ನಂತರ. ಪಂಡಿತೋತ್ತಮರೆಲ್ಲ ಮೆಚ್ಚಿ ತಲೆದೂಗುವಂತೆ ತನ್ನ ವಚನಗಳ ಮೂಲಕ ಬಡಿದೆಬ್ಬಿಸಿದವನು ಸರ್ವಜ್ಞ. ಯಾವುದೇ ಪ್ರಾಪಂಚಿಕ ಸುಖಗಳಿಗೆ ಕೊರಳೊಡ್ಡದ ವ್ಯಕ್ತಿತ್ವ. ದಾನ ನೀಡುವ ಮೊದಲು ಯೋಚಿಸಿ ನೀಡಬೇಕು. ಒಬ್ಬರು ಧಾರಾಳವಾಗಿ ಕೊಡುವವರು ಇದ್ದಾರೆ ಎಂದರೆ ಸೋಮಾರಿಯಾಗಿ ಕುಳಿತು ತೆಗೆದುಕೊಳ್ಳುವವರು ಸಮಾಜದಲ್ಲಿ ಬಹಳಷ್ಟು ಜನರಿದ್ದಾರೆ. ಅಂಥವರಿಗೆಲ್ಲ ನೀಡುವ ಅವಶ್ಯಕತೆಯಿಲ್ಲ. ದುಡಿಮೆಯ ಮಂತ್ರವನ್ನು ಕಲಿಸುವ. ಹೇಳಿದ್ದನ್ನು ಕೇಳುವವಗೆ, ಪ್ರಾಮಾಣಿಕನಿಗೆ, ಜೀವನವನ್ನು ಅರ್ಥೈಸಿಕೊಳ್ಳುವವನಿಗೆ ನೀಡೋಣ, ಹೆಗಲಿಗೆ ಹೆಗಲು ಕೊಟ್ಟು ಮೇಲೆತ್ತೋಣ. ನಮ್ಮಂತೆಯೇ ಅವರೆಂದು ತಿಳಿದು ಬದುಕು ಸಾಗಿಸಿ, ಸಾರ್ಥಕ್ಯ ಹೊಂದೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ