ಬಾಳಿಗೊಂದು ಚಿಂತನೆ - 156

ಬಾಳಿಗೊಂದು ಚಿಂತನೆ - 156

*ವ್ಯಾಘ್ರೀವ ತಿಷ್ಠತಿ ಜರಾ ಪರಿತರ್ಜಯಂತೀ ರೋಗಾಶ್ಚ ಶತ್ರುವ ಇವ ಪ್ರಹರಂತಿ ದೇಹಮ್/*

*ಆಯು: ಪರಿಸ್ರವತಿ ಭಿನ್ನಘಟಾದಿವಾಂಭ:*

*ಲೋಕಸ್ತಥಾಪ್ಯಹಿತಮಾ ಚರತೇತಿ ಚಕ್ರಮ್//*

ಮುಪ್ಪು, ವಯಸ್ಸು ಎನ್ನುವುದು ಹಸಿದ ಹೆಣ್ಣು ಹುಲಿಯಂತೆ ಹಾರಲು ಹೊಂಚು ಹಾಕುತ್ತದೆ. ನಾಲ್ಕೂ ದಿಕ್ಕುಗಳಿಂದ ಕಾಯಿಲೆಗಳು ಸಹ  ಶತ್ರುಗಳಂತೆ ಬರಬೇಕಾ ಕೇಳ್ತವೆ. ಒಡೆದ ಮಡಿಕೆಯಿಂದ ನೀರು ಸೋರಿ ಹೋಗುವಂತೆ ಆಯುಷ್ಯ ಹೋಗ್ತಾ ಇರುತ್ತದೆ. ಇಷ್ಟಾದರೂ ಮನುಷ್ಯರಿಗೆ ಬುದ್ಧಿ ಬಂದಿಲ್ಲ. ಅಹಿತ ಕಾರ್ಯಗಳನ್ನು ಮಾಡ್ತಾನೇ ಇರ್ತೇವೆ . ಒಂದು ಮಾತಿದೆ ‘ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ’. ಎಷ್ಟೇ ಮೌಲ್ಯದ ವಸ್ತುಗಳನ್ನು ಕೋತಿಯ ಕೈಗೆ ಕೊಟ್ಟರೆ ಅದಕ್ಕೆ ಅದರ ಮೌಲ್ಯ ಗೊತ್ತಿದೆಯೇ? ಇಲ್ಲ. ಅದನ್ನು ಅದು ಎಸೆಯಬಹುದು. ನಮ್ಮ ಮನೆಯಲ್ಲಿರುವ ಹಿರಿಯರು, ವೃದ್ಧರು ಅವರ ಅಮೂಲ್ಯ ವಿಚಾರಗಳನ್ನು, ಅನುಭವ ಬುತ್ತಿಯ ವಿಷಯಗಳನ್ನು, ಮನೆಯ ಕಿರಿಯರು ಅನುಸರಿಸಬೇಕು. ವೃದ್ಧರು ನಮ್ಮ ಮನೆಯ ಆಸ್ತಿ, ಸಂಪತ್ತು. ಜೀವನದಲ್ಲಿ ಒಮ್ಮೆ ಕಳಕೊಂಡರೆ ಮತ್ತೆ ಸಿಗರು. ‘ಹಿರಿಯರೆಂದೂ ನಮಗೆ  ಹೊರೆಯೆಂದು ಭಾವಿಸಬಾರದು’  ಅವರ ಜ್ಞಾನದ ಅರಿವು ವಿಶಾಲ. ಮನೆಯಲ್ಲಿ ಯಾವುದೇ ಸಮಾರಂಭ ಮಾಡುವಾಗ ಅವರ ಮಾರ್ಗದರ್ಶನ ಅಗತ್ಯವಾಗಿ ಬೇಕು. ಅವರ ಧ್ವನಿಗೆ ಕಿವಿಯಾಗಬೇಕು. ಬೇಕು ಬೇಡಗಳನ್ನು ವಿಚಾರಿಸೋಣ.

ನಾವು ಯಾರಿಗೂ ಬೇಡವಾದವರು ಎಂಬ ಭಾವನೆ ಬರಬಾರದು. ನಾವು ಅವರಿಗೆ ಅಗೌರವ ತೋರಬಾರದು. ಅವರನ್ನು ಕಣ್ಣೀರು ಹಾಕಿಸುವುದು ತರವಲ್ಲ. ಮುಂದೊಂದು ದಿನ ನಮಗೂ ಮುಪ್ಪಿದೆಯಲ್ಲವೇ? ಎಷ್ಟು ಕಷ್ಟ ತೊಂದರೆಗಳನ್ನು ಅನುಭವಿಸಿ ನಮ್ಮನ್ನು ದಾರಿಗೆ ತಂದ ಹಿರಿಯ ಜೀವಿಗಳಿಗೆ ಆಸರೆಯಾಗೋಣ. ಅವರೇನೋ ಹೇಳಲು ಹೊರಟಾಗ ಅದೇನೆಂದು ಕೇಳುವಷ್ಟಾದರೂ ತಾಳ್ಮೆ ನಮ್ಮಲ್ಲಿರಲಿ. ನಮಗೆ ಬದುಕು ಕೊಟ್ಟವರನ್ನು ನಾವು ಬದುಕಲು ಬಿಡಬೇಕು ಅಲ್ಲವೇ? ದೇವನಿತ್ತ ಆಯುಷ್ಯವನ್ನು ಉತ್ತಮ ರೀತಿಯಲ್ಲಿ ಕಳೆಯೋಣ, ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ