ಬಾಳಿಗೊಂದು ಚಿಂತನೆ - 158

ಬಾಳಿಗೊಂದು ಚಿಂತನೆ - 158

ಒಬ್ಬರ ಭಾವನೆಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಮನಸ್ಸಿನ ಓಘ, ಆಲೋಚನೆ ಅವರೇ ಬಲ್ಲರು. ಅವರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ತಿಳಿಯಬಹುದಷ್ಟೆ. ಒಂದು ಮನೆಯ ವಿಷಯಕ್ಕೆ ಬರೋಣ. ಅಲ್ಲಿ ಹೊಂದಾಣಿಕೆ ಇಲ್ಲದಾಗ, ಮಾತುಗಳ ವೈಪರೀತ್ಯವಾದಾಗ ಒಬ್ಬೊಬ್ಬರ ಮುಖ ಒಂದೊಂದು ದಿಕ್ಕಿಗೆ. ಏನು ಸುಖ ಶಾಂತಿ ಇದೆ? ವಯಸ್ಸಾದವರು ಅಸಹಾಯಕರು. ಅವರು ಎಲ್ಲಿಗೆ ಹೋಗಬೇಕು? ‘ಆಚೆಯೂ ಅಲ್ಲ ಈಚೆಯೂ ಅಲ್ಲ’ ಅವರುಗಳ ಸ್ಥಿತಿ. ಇರುವಷ್ಟು ದಿನ ತಮ್ಮ ಮಕ್ಕಳೊಟ್ಟಿಗೆ ಇರಬೇಕೆಂಬ ಆಸೆ ಹೊತ್ತವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯೇ ಸರಿ. ಒಳಗೊಳಗೆ ಕೊರಗಿ ಮತ್ತೂ ಆಯುಷ್ಯ ಕಡಿಮೆಯಾಗಬಹುದು. ಕಾಯಿಲೆಗಳು ಕರೆಯದೆಯೆ ಬರಬಹುದು. ತಂದೆ-ಮಕ್ಕಳು, ಗಂಡ-ಹೆಂಡತಿ ಪರಸ್ಪರ ಅರಿತು ಬಾಳದಿರೆ ಮನೆ ರಣರಂಗವೇ ಸರಿ. ‘ಇರುವುದೊಂದೇ ಜನ್ಮ', ಸಂತೋಷದಿಂದ ಇರುವುದು ಬಿಟ್ಟು ಸದಾ ನೋವಿನಲ್ಲೇ ಇದ್ದರೆ ಏನು ಸುಖವಿದೆ.

ಇದಕ್ಕೆಲ್ಲ ಸಾಮರಸ್ಯದ ಕೊರತೆ, ನಾನೆಂಬ ಅಹಂಭಾವ, ಪರಸ್ಪರ ಅರಿಯುವ ಕೊರತೆ, ಪ್ರಾಯದವರ ಮಾತುಗಳು ಪಥ್ಯವಾಗದಿರುವ ಕೊರತೆ, ನಾನು ಹೇಳಿದ್ದೇ ನಡೆಯ ಬೇಕೆಂಬ ಮನೋಭಾವ, ಸ್ವಪ್ರತಿಷ್ಠೆ ಎಲ್ಲವೂ ಸೇರಿ ಬದುಕನ್ನು ‌ ‘ಸೂತ್ರವಿಲ್ಲದ ಗಾಳಿಪಟ’ ಮಾಡಿಬಿಟ್ಟು ಬೇರೆಯವರು ಚಂದನೋಡಿ ಕೈತಟ್ಟಿ ನಗುವಂತಾಗುತ್ತದೆ.ಒಬ್ಬರ ಬಗ್ಗೆ ಸಾರಸಗಟಾಗಿ ತೀರ್ಮಾನಕ್ಕೆ ಬರುವುದು ಅಷ್ಟು ಸುಲಭದ ಮಾತಲ್ಲ. ಅವರ ಬಗ್ಗೆ ಬಹಳಷ್ಟು ಯೋಚಿಸಿ ಮುಂದೆ ಮಾತನಾಡಬೇಕಾಗುತ್ತದೆ. ಮನೆಯಲ್ಲಿ ‘ನಗುವೆಂಬ ಹೂವರಳದೆ ಬಿಗುಮಾನದ ಗಂಟಿಕ್ಕಿದ ಮೊಗ’ ವಿದ್ದರೆ ಬದುಕ ಹಾದಿ ನರಕಸದೃಶ. ನೆಮ್ಮದಿ ಕನಸಿನ ಮಾತು. ಇರುವ ಮನುಷ್ಯರನ್ನು ಕಳಕೊಂಡಾಗ ಅವರ ಬೆಲೆ ಅರಿವಿಗೆ ಬರಬಹುದು. ಆಗ ಎಲ್ಲ ಮುಗಿದು ಹೋಗಿರುತ್ತದೆ. ಬೇಕು ಎಂದರೂ ಮತ್ತೆ ಸಿಗಲಾರರು.

ಮುಕ್ತ ವಾತಾವರಣ, ಮನಬಿಚ್ಚಿದ ಮಾತುಕತೆ, ನಾನೆಂಬ ಭದ್ರ ಚೌಕಟ್ಟಿನಿಂದ ಹೊರಬರುವಿಕೆ, ಪ್ರೀತಿ,ವಾತ್ಸಲ್ಯ,ಗೌರವ  ಪರಸ್ಪರ ಇರಲಿ. ಮಾತೇ ಎಲ್ಲದಕ್ಕೂ ಕಾರಣ ಅರಿತಿರಲಿ. ಎಷ್ಟು ವರುಷ ಬದುಕಿರುವಿ ಮುಖ್ಯವಲ್ಲ ಹೇಗೆ ಬದುಕಿರುವಿ?  ಮುಖ್ಯ ಎಂಬ ಅರಿವಿರಲಿ. ಹಿರಿಕಿರಿಯರೆಂಬ ಭೇದ ಬೇಡ. ಮಿಂಚುಹುಳ ಎಷ್ಟು ಚಿಕ್ಕ ಅಲ್ವೇ? ಆದರೂ ಸ್ವಲ್ಪ ಬೆಳಕು ನೀಡಬಲ್ಲುದು. ಚಿಕ್ಕ ಜಾಜಿಮಲ್ಲಿಗೆ ಹೂವಿನ ಪರಿಮಳ ಪರಿಸರದಿ ಪಸರಿಸುವುದಲ್ಲವೇ?

*ಮತಿ ಬಿಟ್ಟ ಮನ ಕುರುಡು ಮನ ಬಿಟ್ಟ ಮತಿ ಹೆಳವ/*

*ನಡೆ ಬಿಟ್ಟ ನುಡಿಯಂತೂ ಬರಡೋ ಬರಡು/*

ಓದಿದ ನೆನಪು. ಮತಿ-ಮನಗಳ ಮಥಿಸು. ಹೊಂದಾಣಿಕೆ, ವಿಚಾರ ಮಂಥನ, ವಿವೇಕದ ಬೆಳಕಲ್ಲಿ ಹೆಜ್ಜೆಯೂರು, ಅರಿವನ್ನು ಮೂಡಿಸಿ ಮುಂದೆ ಹೋಗು. ಬಾಯಿ ನಾಲಿಗೆಗೆ ಕೆಲಸ ಕೊಡುವಾಗ ಜಾಗ್ರತೆ. ಪರಿಪೂರ್ಣತೆ, ಸಾರ್ಥಕತೆ ಚಿತ್ತವನ್ನೊಮ್ಮೆ ಒರೆಗೆ ಹಚ್ಚಿ ಹಿಂದಿರುಗಿ ನೋಡುತ್ತಾ ಮುಂದಡಿಯಿಡು. ಮತಿ ಸರಿಯಾಗಿದ್ದರೆ ಎಲ್ಲವೂ ಸರಿ. ಬಾಳಯಾತ್ರೆಯಲ್ಲಿ ಮತಿಯನ್ನು ಮಥಿಸುತ್ತಾ ಸಾಗೋಣ. ಎಲ್ಲದಕ್ಕೂ ಕಿವಿಯಾಗೋಣ, ಬೇಕಾದ್ದನ್ನು ಮಾತ್ರ ಸ್ವೀಕರಿಸೋಣ, ಬೇಡದ ಜಳ್ಳು ಪೊಳ್ಳುಗಳ ಬದಿಗೆ ಸರಿಸೋಣ. ಅರಿವೇ ಗುರು ನೆನಪಿರಲಿ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ