ಬಾಳಿಗೊಂದು ಚಿಂತನೆ - 182

ಬಾಳಿಗೊಂದು ಚಿಂತನೆ - 182

ಮಾತು ಮಾತಿಗೆ ನಾವು ಹೇಳುವುದಿದೆ ‘ಭಗವಂತ’ ಇದ್ದಾನೆ, ‘ದೇವರಿದ್ದಾನೆ’ ಎಂಬುದಾಗಿ. ಹಾಗೆಂದು ದೇವರಿದ್ದಾನೆಂದು ಸುಮ್ಮನೆ ಕುಳಿತರೆ ಹೊಟ್ಟೆ ಹಸಿವು ನೀಗುವುದೇ? ನೀಗದು. ‘ಕೆಲಸವೇ ಭಗವಂತ’ ಅಲ್ಲವೇ? ಬೆವರು ಹರಿಸಿ, ಮೈಬಗ್ಗಿಸಿ ದುಡಿಯುವುದರಲ್ಲಿ ದೇವರನ್ನು ಕಾಣಬೇಕು. ಮನುಷ್ಯ ಪ್ರಯತ್ನ ಬೇಕಲ್ಲವೇ? ಒಬ್ಬರು ಕೊಡುತ್ತಾರೆಂದು ಕುಳಿತು ಉಣ್ಣುವುದು ಸರಿಯಲ್ಲ. ‘ನಮ್ಮ ದುಡಿಮೆ, ನಮ್ಮ ಸಂಪಾದನೆ, ನಮ್ಮ ಊಟ. ನೆಲ, ಜಲ, ಆಕಾಶ, ಗಾಳಿ, ಪ್ರಕೃತಿ, ಸಕಲ ಜೀವರಾಶಿಗಳ ನೀಡಿದವ ದೇವನಲ್ಲವೇ? ಅಂದರೆ ಕಣ್ಣಿಗೆ ಕಾಣಿಸದ ಮಹಾಶಕ್ತಿ’. ನಮ್ಮ ಕಲ್ಪನೆ ಏನೇನೋ ಇರಬಹುದು. ಭಗವಂತನ ಸೃಷ್ಟಿ ಅವರವರ ಮನದಲ್ಲಿ. ನಿರಾಕಾರ, ನಿರಾಮಯ ಆತ. ಯಾವುದನ್ನೂ ಬಯಸಲಾರ. ನಾವು ಮಾತ್ರ ಕಲ್ಪಿಸಿ ನೀಡುತ್ತೇವೆ. ಎಲ್ಲಾ ನದಿಗಳ ನೀರು ಹರಿಯುತ್ತಾ ಹೋಗಿ ಸೇರುವುದು ಅಗಾಧವಾದ ಸಮುದ್ರಕ್ಕೆ. ಹಾಗೆಯೇ ಯಾವ ದೇವನ ಸ್ಮರಣೆ ಮಾಡಿದರೂ ಆತ ಓರ್ವನೇ. ‘ದೇವನೊಬ್ಬ ನಾಮ ಹಲವು ಅದೆಲ್ಲ. ಅವರವರ ಮನಸ್ಸಿನ ಭಾವನೆಯಿರಬಹುದು. ನಮ್ಮ ಉಸಿರೇ ದೇವರೆಂದು ಹೇಳಬಹುದು. ಉಸಿರು ನಿಂತರೆ ಮತ್ತೇನಿದೆ? ಏನಾದರೂ ಜೀವಿತದಲ್ಲಿ ಒಳ್ಳೆಯ ಕೆಲಸಗಳ ಮಾಡಿದ್ದರೆ ನಮ್ಮನ್ನು ನೆನಪಿಸಿಯಾರು. ಇಲ್ಲದಿದ್ದರೆ ಅದೂ ಇಲ್ಲ. ಹಾಗಾಗಿ ಉಸಿರಾಟ ಕಾಪಾಡಿಕೊಳ್ಳಬೇಕಾದ್ದು ಮುಖ್ಯ. ಕೊಟ್ಟವನು ತೆಗೆದುಕೊಳ್ಳುವವನು ಎರಡೂ ಆತನೆ.ನಾವು ನಿಮಿತ್ತ ಮಾತ್ರ. ಒಮ್ಮೊಮ್ಮೆ ಯೋಚಿಸಿದಾಗ, ಹುಲ್ಲಿಗೆ ಹಸಿರು ಬಣ್ಣವಿತ್ತವ, ಉಸಿರಾಡಲು ಗಾಳಿಯೇ ಆಗಬೇಕೆಂದವ, ನೀರು ಮೇಲಿನಿಂದ ಕೆಳಕ್ಕೆ ಹರಿಯುವ ಗುಣ ನೀಡಿದವ, ಕಲ್ಲು ಘನರೂಪದಲ್ಲಿಯೇ ಈಗ ಇರಬೇಕೆಂದವ, ಗಿಳಿಗೆ ಹಸಿರು ಹಂಸಕ್ಕೆ ಬಿಳಿ, ಚಿತ್ರ ವಿಚಿತ್ರ ಬಣ್ಣಗಳ ಹೂವು, ಹಕ್ಕಿಗಳು, ಫಲವಸ್ತುಗಳು, ಸಿಹಿ,ಕಹಿ ,ಒಗರು, ಹುಳಿ ರೂಪ, ಬಿಳಿ, ಕಪ್ಪು ದೇಹ ಎಲ್ಲಾ ನೀಡಿದವನ್ನು ಆ ಶಕ್ತಿಯೇ ಅಲ್ಲವೇ? ಎಲ್ಲದಕ್ಕಿಂತ ದೊಡ್ಡದು ತಾಯಿ ಎಂಬ ಪದ. ಮಗುವಿನ ಜನನವಾಗುವುದೆಂಬ ಕ್ಷಣದಿಂದ ಅಮ್ಮನ ಎದೆಯ ವಾತ್ಸಲ್ಯ, ಮಮಕಾರ ಬೇರೆಯೇ. ಮಗು ಜನಿಸಿದ ತಕ್ಷಣ ಆಕೆಯ ಅಮೃತಧಾರೆ ಪದಗಳಿಗೆ ನಿಲುಕದ ಪವಾಡವೇ ಸರಿ. ಜನ್ಮಕ್ಕೆ ಕಾರಣನಾದ ಅಪ್ಪ ಹೆಸರೇ ಬೆಟ್ಟದಷ್ಟು ಎತ್ತರ, ಆಗಸದಷ್ಟು ವಿಶಾಲ, ಆಳ-ಅಗಲ ಅರಿಯಲು ಸಾಧ್ಯವಿಲ್ಲದ್ದು. ಎಲ್ಲಾ ಅವನ ನಿಯಮದಂತಲ್ಲವೇ?

ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಆಗದೇ? ಇರುವ ಈ ಮನುಷ್ಯ ಜನ್ಮವನ್ನು ಗೌರವಿಸೋಣ.

*ಗೌರವಿಸು ಜೀವನವ,ಗೌರವಿಸು ಚೇತನವ*

*ಆರದೋ ಜಗವೆಂದು ಭೇದವೆಣಿಸದಿರು*/

 *ಹೋರುವುದೆ ಜೀವನ* *ಸಮೃದ್ಧಿಗೋಸುಗ ನಿನಗೆ*

*ದಾರಿಯಾತ್ಮೋನ್ನತಿಗೆ-ಮಂಕುತಿಮ್ಮ*//

-ರತ್ನಾ ಕೆ.ಭಟ್ ತಲಂಜೇರಿ

(ಕಗ್ಗ: ಮಾನ್ಯ ಡಿ.ವಿ.ಜಿಯವರ ಕಗ್ಗದಿಂದ ಆಯ್ದ ಪದ್ಯ)

ಚಿತ್ರ ಕೃಪೆ: ಇಂಟರ್ನೆಟ್ ತಾಣ