ಬಾಳಿಗೊಂದು ಚಿಂತನೆ - 189

ಬಾಳಿಗೊಂದು ಚಿಂತನೆ - 189

ನಮ್ಮ ಪ್ರತಿ ನಡೆ ನುಡಿಯು ಇತರರಿಗೆ ಮಾದರಿಯಾಗಿದ್ದರೆ ಚಂದ. ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ. ಮನುಷ್ಯನ ಬದುಕಿನ ಗುಟ್ಟೇ ಉತ್ತಮ ಗುಣನಡತೆಗಳು, ಹೊಂದಾಣಿಕೆ. ಇಂದ್ರಿಯ ಚಪಲತೆಗೆ ಕಡಿವಾಣ ಹಾಕಿದರೆ ಮತ್ತೂ ಒಳ್ಳೆಯದು. ಸರ್ವಜ್ಞನ ವಚನಗಳು, ಮಂಕುತಿಮ್ಮನ ಕಗ್ಗ, ಹಿರಿಯ ‌ಸಾಹಿತಿಗಳ ಹಲವಾರು ಕೃತಿಗಳನ್ನು ಓದಿದಾಗ ನಾವು ಬಹಳಷ್ಟು ವಿಷಯಗಳನ್ನು ತಿಳಿಯಬಹುದು, ಸಮಾಜಕ್ಕೂ ನೀಡಬಹುದು, ನಮ್ಮ ಕಿರಿಯರಿಗೆ ಅದರ ಸಾರವನ್ನು ಉಣಬಡಿಸಬಹುದು.

*ಕಣ್ಣು ನಾಲಗೆ ಮನವು ತನ್ನದೆಂದೆನಬೇಡ*

*ಅನ್ಯರು ಕೊಂದರೆನಬೇಡ ಇವು ಮೂರು*

*ತನ್ನ ಕೊಲ್ಲುವುವು ಸರ್ವಜ್ಞ//*

ಇಂದ್ರಿಯ ಹಿಡಿತ ಅತಿ ಮುಖ್ಯ. ಅದರ ಸಡಿಲತೆ ಅನಾಹುತಗಳ ಸೃಷ್ಟಿಗೆ ಮೂಲ. ಸಂಬಂಧಗಳ ಬೆಸೆತಕ್ಕೂ, ಕಡಿತಕ್ಕೂ ಕಾರಣವಾದೀತು. ಎಷ್ಟೋ ಮನೆಗಳು ಸಂಬಂಧಗಳ ವಿಷಯದಲ್ಲಿ ಹೊತ್ತಿ ಉರಿಯಲು ಈ ಇಂದ್ರಿಯಗಳ ಬೇಕಾಬಿಟ್ಟಿ ವ್ಯವಹಾರವೇ ಕಾರಣವಾಗಿದೆ. ಅನರ್ಥಗಳಿಗೆ ಮಣೆ ಹಾಕದಿರೆ ನಾವು ಬದುಕನ್ನು ಗೆದ್ದಂತೆಯೇ ಸರಿ.

ಸರಳತೆ, ಪ್ರಾಮಾಣಿಕತೆ, ಸತ್ಯ, ಎರಡು ಬಗೆಯದಿರುವುದು(ದ್ರೋಹ), ಭಯಭಕ್ತಿಯ ಗುಣ, ದೇವರಲ್ಲಿ ನಂಬಿಕೆ, ಮಾಡುವ ಕೆಲಸಕಾರ್ಯಗಳಲ್ಲಿ ಶ್ರದ್ಧೆ ಇದ್ದವರು ಎಲ್ಲಿಗೆ ಹೋದರೂ ಮನ್ನಣೆಯಿದೆ, ತೃಪ್ತಿಯ ಜೀವನ ನಡೆಸಿಯಾರು. ಕಾಯಕವಿಲ್ಲದೆ ಇನ್ನೊಬ್ಬರ ಹಂಗಿನ ಅನ್ನ ತಿನ್ನುವವರು ಸಮಾಜಕ್ಕೊಂದು ಹೊರೆ ಎನ್ನಬಹುದು. ನಾವು ಸರಿಯಾಗಿರಲು ಮೊದಲು ಪ್ರಯತ್ನಿಸಬೇಕು. ನಮ್ಮ ದುಡಿತ ನೋಡಿದಾಗ ಮನೆಯ ಕಿರಿಯರು ಸಹ ಅನುಕರಣೆ ಮಾಡಬಹುದು ಅಥವಾ ನಾವೇ ಅವರನ್ನು ಪ್ರೇರೇಪಿಸಬಹುದಲ್ಲವೇ? ಕಾಯಕದ ಸಂಪಾದನೆಗೆ ಮನ್ನಣೆಯಿದೆ. ಅದನ್ನೇ ಕಿರಿಯರ ಮನಸ್ಸಿನಲ್ಲಿ ಬಿತ್ತಿ ತಿಳುವಳಿಕೆ ಹೇಳಬೇಕು. ಬಾಯಿ ಚಪಲತೆ ತೀರಿಸಿಕೊಳ್ಳುವುದರಲ್ಲಿ ಅಸತ್ಯದ ನುಡಿಗಳೆಂದೂ ಇಣುಕಬಾರದು. ಅಸತ್ಯ ಅನಾಹುತಕ್ಕೆ ದಾರಿ. ನೇರ ನಡೆನುಡಿ ಕೆಲವು ಜನರಿಗೆ ಹಿತವಾಗದು. ಆದರೆ ಅದರಲ್ಲಿ ಸತ್ಯಾಂಶವಿದೆ ಎಂದರಿತಾಗ ಅವರಿಗೆ ಪಶ್ಚಾತ್ತಾಪವಾಗುವುದು ಸಹಜ. ಭಗವಂತನ ಕರುಣೆಯಿಂದ ಪ್ರಾಪ್ತವಾದ ಇಂದ್ರಿಯಗಳನ್ನು ಶುದ್ಧವಾಗಿಡುವುದರ ಮೂಲಕ, ಇತರರಿಗೂ ಮಾದರಿಯಾಗೋಣ.

-ರತ್ನಾ ಕೆ.ಭಟ್ ತಲಂಜೇರಿ

(ವಚನ: ಸರ್ವಜ್ಞನ ವಚನ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ