ಬಾಳಿಗೊಂದು ಚಿಂತನೆ - 211

ನಮ್ಮ ಕೈಗೆ ಹಣ ಬಂತು,ಆರ್ಥಿಕತೆ ಸದೃಢ ಎಂದೊಡನೆ ನಮಗ್ಯಾಕೊ ಸ್ವಲ್ಪ ಅಹಂ ಬಂದು ಬಿಡುತ್ತದೆ. ಪಾಪದವರು, ಬಡವರೆಲ್ಲ ಲೆಕ್ಕಕ್ಕಿಲ್ಲದವರಂತೆ ನಮ್ಮ ವರ್ತನೆಯಿರುತ್ತದೆ. ಈ ಗುಣ ತಪ್ಪಲ್ಲವೇ ? ಹಣ ಬರಲಿ, ಲಾಟರಿಯೇ ಮಗುಚಲಿ, ನಾವು ನಾವಾಗಿರೋಣ. ಮನುಷ್ಯತ್ವವನ್ನು ಮಾರುವುದು ಬೇಡ. ಶ್ರೀಮಂತಿಕೆಯ ಹೊದಿಕೆಯನ್ನು ಹಾಸಿ ಹೊದೆಯುವುದು ಸರಿಯಲ್ಲ. ಇದ್ದರೂ ಮನೆಯೊಳಗಿರಲಿ. ಹೊರ ಪ್ರಪಂಚಕ್ಕೆ ಬೇಡ. ಹಣವಿದ್ದವರ ಹತ್ತಿರ ಮಾತನಾಡಲು ಕೆಲವು ಜನ ಹೆದರುವುದಿದೆ. ಯಾಕೆ ಹೀಗೆ? ಇಲ್ಲಿ ಹಣಕ್ಕಿಂತ ಗುಣ ಮುಂದಿದ್ದರೆ ಹೆದರಿಕೆ, ಅಂಜಿಕೆ ಇರದು. ಗುಣವಿಲ್ಲ, ಹಣಮುಂದು, ದೊಡ್ಡಸ್ತಿಕೆ, ಅದಕ್ಕೆ ಅಂಜಿಕೆ. ಹಣ ಕೈಸೇರಿದಾಗ ಸ್ವಲ್ಪವಾದರೂ ದಾನ ಮಾಡುವ ಗುಣ ಬಂದರೆ ಒಳ್ಳೆಯದು.
*ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ/*
*ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾಗತಿರ್ಭವತಿ//*
ಹಣ ಖಾಲಿಯಾಗಲು ಮೂರು ದಾರಿಗಳಿವೆ. ದಾನ, ಭೋಗ, ನಾಶ. ಯಾರಿಗೂ ಕೊಡದೆ, ತಾನು ಅನುಭವಿಸದೆ ಇದ್ದರೆ ಮೂರನೆಯ ದಾರಿ ನಾಶವೇ ಸರಿ. ಕೆಲವು ಜನ ಯಾರಿಗೂ ನಯಾಪೈಸೆ ಕೊಡದೆ, ತಾವು ಅನುಭವಿಸದೆ ಇರುವವರನ್ನು ನೋಡುತ್ತೇವೆ ,ಅವರ ಬಗ್ಗೆ ಒಂದಷ್ಟು ಮಾತುಗಳು ಕೇಳುತ್ತವೆ .ಯಾಕೆ ಹೀಗೆ ಗೊತ್ತಾಗ್ತಾ ಇಲ್ಲ. ತಾನಾದರೂ ಉಂಡುಟ್ಟು ಸುಖವಾಗಿರಬಹುದಲ್ಲ? ಅದೂ ಇಲ್ಲ. ಕಾರ್ಯಕ್ರಮಗಳಿಗೆ ಸಹಾಯಧನ ಕೇಳಿಕೊಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಮಾತನಾಡಿ ಕಳುಹಿಸುತ್ತಾರೆ. ನಾಲ್ಕು ಸಲ ಹೀಗೆ ಆದಾಗ ಪ್ರಚಾರವಾಗಿ ಮತ್ತೆ ಆ ಮನೆಗೆ ಯಾರೂ ಹೋಗುವುದಿಲ್ಲ. ಸ್ವಲ್ಪವಾದರೂ ನೀಡುವ ಮನಸ್ಸಿಲ್ಲದ ವರ್ಗದವರು. ನಾಳೆ ಮಕ್ಕಳ ಕಾಲಕ್ಕೆ ಬೇಕಾಬಿಟ್ಟಿ ಮಾಡಿ ಇವನು ಆಸೆ ಮಾಡಿದ್ದೆಲ್ಲ ಮಣ್ಣುಪಾಲು ಅಷ್ಟೆ. ಇರುವಾಗಲೇ ಏನಾದರೂ ಯೋಚಿಸಿದ್ದರೆ ಸಮಾಜದಲ್ಲಿ ನಾಲ್ಕು ಜನರ ಬಾಯಿಯಲ್ಲಿ, ಮನದಲ್ಲಿ ಇರುತ್ತಿದ್ದನೋ ಏನೋ. ಜನರು ಮರೆತೇ ಬಿಡುವರು ಇಂತಹವರನ್ನು.
‘ದುಡ್ಡೇ ದೊಡ್ಡಪ್ಪ’ ಸರಿ ಒಪ್ಪೋಣ. ಹಾಗೆಂದು ಅದರ ಅಟ್ಟಿಯೇರಿಸಿ ಅದರ ಮೇಲೆಯೇ ಕೂರಬೇಕೆಂದಿಲ್ಲವಲ್ಲ. ಹಣವಿರುವಾಗ ನಮ್ಮ ಖರ್ಚುವೆಚ್ಚಗಳೊಂದಿಗೆ ಸ್ವಲ್ಪ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ. ಜನರ ಮೆಚ್ಚಿಸುವುದು ಬೇಡ. ಭಗವಂತ ಮೆಚ್ಚುವಂತಿರಲಿ. ಏನೊಂದು ಕೊಡದೆ ನಾಶಕ್ಕೆ ನಾವೇ ದಾರಿ ಮಾಡುವುದು ಬೇಡ. ಮಾನವೀಯತೆಯ ಮಜಲನ್ನು ತೆರೆದಿಟ್ಟು ವ್ಯವಹರಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)