ಬಾಳಿಗೊಂದು ಚಿಂತನೆ - 216

ಬಾಳಿಗೊಂದು ಚಿಂತನೆ - 216

ನಮ್ಮ ಮನಸ್ಸಿನ ಏರುಪೇರಿಗೆ ಭಯ, ಅನುಮಾನ, ಉದ್ವೇಗಗಳು, ಯಾರೋ ಹೇಳಿದ ಮಾತುಗಳು, ನೋಡಿದ ದೃಶ್ಯಗಳು ಕಾರಣವಾಗಬಹುದು. ಕೆಲವು ಸಲ ಹೀಗಾದರೆ, ಹಾಗಾದರೆ ಎಂಬ ‘ರೆ’ ಪ್ರಪಂಚದಿಂದಲೂ ಭಯ ಹುಟ್ಟಬಹುದು. ಗಾದೆ 

ಮಾತಿನಂತೆ ‘ಅತ್ತ ಧರೆ ಇತ್ತ ಹುಲಿ’ ಎಲ್ಲಿಗೆ ಓಡುವುದು? ಹೇಗೆ ತಪ್ಪಿಸಿಕೊಳ್ಳುವುದು? ಎಂಬ ಮಾನಸಿಕ ತೊಳಲಾಟವಾಗಬಹುದು. ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾಗಬಹುದು. ಆಗ ವಿವೇಚನೆಯೇ ನಮ್ಮ ರಕ್ಷಣೆಮಾಡಬೇಕಷ್ಟೆ. ಭಯಗೊಳ್ಳಲು ಹಲವಾರು ಕಾರಣಗಳಿರಬಹುದು. ಸಾಲ ತೆಗೆದುಕೊಂಡು ಸಮಯಕ್ಕೆ ‌ಸರಿ ಹಿಂದಿರುಗಿಸಲು ಆಗದಾಗ, ಅವರು ಎಲ್ಲಿ ಕೇಳಿಬಿಡುವರೋ, ಹೇಗೆ ಕೊಡಲಿ ಎಂಬ ಭಯ, ಆತಂಕ, ಚಿಂತೆ ಆಗಬಹುದು. ಯಾವುದೋ ನೋಡಬಾರದ್ದನ್ನು ನೋಡಿದೆ, ಯಾರ ಹತ್ತಿರವೂ ಹೇಳಿಕೊಳ್ಳಲಾಗುತ್ತಿಲ್ಲವೆಂಬ ಭಯ. ಬಯಸಿದಂತೆ ಆಗದಿದ್ದಾಗ ಮಾನಸಿಕ ಚಿಂತೆ, ಸಿಟ್ಟು, ಅಸಹನೆ, ಗಾಬರಿ, ಕಳವಳ ಸಹಜ. ಹಾಗೆಂದು ಭಯದಲ್ಲೇ ಕುಳಿತರೆ ಹೇಗೆ?

ವಯಸ್ಸಾದವರಲ್ಲಿ ಮಾತನಾಡಿಸಿದಾಗ ಅವರಲ್ಲಿ ಸಾವಿನ ಭಯ ಮನೆ ಮಾಡಿರುವುದು ಮಾತಿನಲ್ಲಿ ಸ್ಪಷ್ಟವಾಗುತ್ತದೆ. ಹಾಗಾದರೆ ಇದಕ್ಕೆ ದಾರಿಯೇನೆಂದು ಯೋಚಿಸಿದರೆ ‘ಭಗವಂತ ನಾಮ ಸ್ಮರಣೆ, ಯೋಗ, ಧ್ಯಾನ, ಸಾಧ್ಯವಾದಲ್ಲಿ ಪುಸ್ತಕಗಳನ್ನು,ಪತ್ರಿಕೆಗಳನ್ನು ಓದುವುದು, ಏನಾದರೂ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು. ಅವರು ಸುಮ್ಮನೆ ಕುಳಿತಿರುವಾಗ ಇಲ್ಲದ ಆಲೋಚನೆಗಳು ಬರುವುದು ಸಹಜ.

ಬುದ್ಧಿವಂತನಾದವನು ಹುಟ್ಟು ಸಾವುಗಳೆರಡು ಬದುಕಿನ ಘಟ್ಟಗಳೆಂದು ಅರಿಯಬೇಕು. ಅರಗಿಸಿಕೊಳ್ಳಬೇಕು.

‘ಮರಣಂ ಪ್ರಕೃತಿ: ಶರೀರಿಣಾಂ ವಿಕೃತಿರ್ಜೀವಿತಮುಚ್ಯತೇ ಬುಧೈ:/’

*ಕ್ಷಣಮಪ್ಯವತಿಷ್ಠತೇ ಶ್ವಸನ್ ಯದಿ  ಜಂತುರ್ನನು ಲಾಭವಾನಸೌ//*

ಮಾನವನಿಗೆ ಅಥವಾ ಯಾವುದೇ ಜೀವಿಗೆ ಮರಣ ಸಹಜ.ಈ ಬದುಕೆಂಬುದು ಆಕಸ್ಮಿಕ. ಜನ್ಮ ತಳೆದ ಮೇಲೆ ಬದುಕು ನಡೆಸಲೇ ಬೇಕು. ಉಸಿರಾಡುತ್ತಾ ಒಂದು ಕ್ಷಣ ಜೀವಿಸಿದರೂ ಅದು ಪರಮಭಾಗ್ಯವೆಂದು ನಾವರಿಯಬೇಕು. ಮತ್ತೆ ಅಂಜಿಕೆ ಯಾಕೆ? ಇರುವಷ್ಟು ದಿನ ಬಾಳನ್ನು ಹಸನಾಗಿಸುತ್ತಾ ಬದುಕೋಣ.

ಭಯದ ಕಾರಣವನ್ನು ಅರಿತು ಅದು ಹೃದಯದಲ್ಲಿ ಮನೆಮಾಡದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ಆಪ್ತರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದರೆ ಖಂಡಿತಾ ಪರಿಹಾರ ನಮ್ಮಲ್ಲಿಯೇ ಇದೆ. ನೀರಿಗೆ ಬಿದ್ದವರು, ಹಾವು ಕಚ್ಚಿದವರು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದವರು, ಎತ್ತರದಿಂದ ಕೆಳಗೆ ಬಿದ್ದವರು, ಅಪಘಾತಗಳು ಸಂಭವಿಸಿದಾಗ ಹೆಚ್ಚಿನವರು ಭಯದಿಂದಲೇ ಸಾವನ್ನಪ್ಪುತ್ತಾರೆಂದು ಓದಿದ ನೆನಪು. ಧೈರ್ಯ ತೆಗೆದುಕೊಳ್ಳೋಣ, ಧೈರ್ಯ ನಮ್ಮ ಆಪ್ತಮಿತ್ರ, ಬಂಧು, ಭಗವಂತ ಎಲ್ಲವೂ ಸಹ. ಬಹಳಷ್ಟು ಸಂಪಾದನೆ ಮಾಡಿ ಮನೆಯಲ್ಲಿಟ್ಟವನಿಗೆ ನಿದ್ದೆ ಕನಸಿನ ಮಾತು. ಕಳ್ಳರು ಬಂದು ದೋಚಿದರೆ ಎಂಬ ಭಯದಲ್ಲಿ ನಿದ್ದೆ ಸುಳಿಯದು. ಲೆಕ್ಕದಿಂದ ಹೆಚ್ಚಿಗೆ ಪೇರಿಸಿಟ್ಟವನಿಗೆ ತನಿಖೆಯ ಭಯ. ಏನೂ ಇಲ್ಲದವನಿಗೆ ನಾಳೆಯ ಚಿಂತೆಯ ಭಯ. ಭಯ ಹೃದಯದಲ್ಲಿ ಬೇರೂರಿದಂತೆ ವಿಕಾರಗಳು, ವಿಕಲ್ಪಗಳು, ಅಸಹನೆ ತಲೆದೋರುವುದು. ನಮ್ಮ ಬಗ್ಗೆ ನಮಗೆ ಸಂದೇಹ ಇಣುಕಬಾರದು. ‘ಸಂಶಯಾತ್ಮಾ ವಿನಶ್ಯತಿ’ ಎಂಬುದನ್ನು ದೂರಮಾಡೋಣ. ಸಂದೇಹ-ಸಂಶಯ ಯಾವುದೂ ಬಾರದ ಮನೋ ಸಾಮರ್ಥ್ಯ, ದೃಢತೆ, ಸಂಕಲ್ಪ ನಮ್ಮದಾದರೆ ಭಯವೂ ಇಲ್ಲ, ಅಂಜಿಕೆಯೂ ಇಲ್ಲ.ಎಲ್ಲವನ್ನೂ ಸಮನಾಗಿ ತಕ್ಕಡಿಯಲ್ಲಿಟ್ಟು ತೂಗಿ ಸಮಚಿತ್ತದಿಂದ ಸ್ವೀಕರಿಸಿ, ಬೇಡದ್ದನ್ನು ಹೊರದೂಡೋಣ. ಬೇಕಾದ್ದನ್ನು ಸ್ವೀಕರಿಸೋಣ. ಏನೇ ಆದರೂ ಬೆದರದೆ, ಬೆಚ್ಚದೆ ಇರಲು ಕಲಿಯೋಣ. ಇನ್ನೇನು ಗತಿಯೆಂಬುದ ಬಿಡೋಣ. ವಿಧಿಯಾಟ ಬಲ್ಲವರಾರು? ಏನೇ ಆದರೂ ನಮ್ಮ ಆತ್ಮವನ್ನು, ಮನಸ್ಸನ್ನು ತಣ್ಣಗಿಟ್ಟುಕೊಳ್ಳಬೇಕು.

*ಇನ್ನೇನು ಮತ್ತೇನು ಗತಿಯೆಂದು ಬೆದರದಿರು/*

*ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ?//*

*ಕಣ್ಣಿಗೆಟುಕದ ಸಾಗುತಿಹುದು ದೈವದ ಸಂಚು/*

*ತಣ್ಣಗಿರಿಸಾತ್ಮವನು-ಮಂಕುತಿಮ್ಮ//*

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ:ಸುಭಾಷಿತ, ಮಂಕುತಿಮ್ಮನ ಕಗ್ಗ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ