ಬಾಳಿಗೊಂದು ಚಿಂತನೆ - 220

ಬಾಳಿಗೊಂದು ಚಿಂತನೆ - 220

‘ಕೈಗೆ ಬಂದ ತುತ್ತು ಬಾಯಿತನಕ ಬರಲಿಲ್ಲ’ ಎಂಬುದಾಗಿ ಒಂದು ಮಾತಿದೆ. ಓರ್ವ ಹಗಲಿರುಳು ಕಷ್ಟಪಟ್ಟು ಕೃಷಿ ಕೆಲಸ ಮಾಡುತ್ತಾನೆ. ಈ ಸಲದ ಫಸಲು ಚೆನ್ನಾಗಿದೆ ಅಂದುಕೊಳ್ಳುವಷ್ಟರಲ್ಲಿ ಅಕಾಲಿಕ ಮಳೆಯೋ, ಇಲಿ, ಹಂದಿ, ಮಂಗ, ಹೆಗ್ಗಣ, ಹಕ್ಕಿಗಳೋ, ವಿಪರೀತ ಬಿಸಿಲಿನ ಧಗೆಯಿಂದ ಹಾಳಾಗಬಹುದು. ಫಸಲೆಲ್ಲ ನಾಶವಾಗಬಹುದು. ದು:ಖಿಸುವುದು ಬಿಟ್ಟು ಬೇರೆ ದಾರಿಯಿಲ್ಲ. ಹಿಂದಿನದ್ದು ಉಳಿತಾಯವಿದ್ದರೆ ಚಿಂತೆಯಿಲ್ಲ. ಅದರಲ್ಲೇ ಬದುಕು ಎಂದಾಗ ಕಷ್ಟವೇ ಸರಿ. ಪಾಲಿಗಿಷ್ಟೇ ದಕ್ಕಿದೆ ಎಂದು ತೃಪ್ತಿ ಪಡಬೇಕಷ್ಟೆ. ಒಳ್ಳೆಯ ಗುಣವಂತ, ಪ್ರಾಮಾಣಿಕನಿಗಾದರೆ ನೆರೆಹೊರೆಯವರು, ಬಂಧುಗಳು ಇದ್ದವರು ಸಹಕರಿಸಬಹುದು. ಅಪ್ರಾಮಾಣಿಕನನ್ನು ಯಾರೂ ಕಣ್ಣೆತ್ತಿ ಸಹ ನೋಡರು.

ಸಮಯ ಸಂದರ್ಭ ನೋಡಿಕೊಂಡು ನಮ್ಮ  ದಿನಚರಿ, ಮಾತುಗಳು, ವ್ಯವಹಾರವಿರಬೇಕು. ಇರುವವನಿಗೆ ಮತ್ತಷ್ಟು ನೀಡದೆ, ಇಲ್ಲದವನಿಗೆ ನೀಡೋಣ, ಸಹಕರಿಸೋಣ. ಬುದ್ಧಿವಂತಿಕೆ ಎನ್ನುವುದು ಒಂದು ಹೊಳೆಯುವ ಆಭರಣವಿದ್ದಂತೆ. ಸಕಾಲದಲ್ಲಿ ಉಪಯೋಗಕ್ಕೆ ಬರಲು ಬುದ್ಧಿವಂತಿಕೆ, ಜಾಣ್ಮೆ ಬೇಕು. ಅವನು ಮಾತ್ರ ಎಲ್ಲಾ ಕಷ್ಟಗಳ ಬದಿಗೆ ಸರಿಸಿ ಜೀವನ ನಡೆಸಿಯಾನು. ಸಮಯೋಚಿತ ಶೋಭೆ ಎಂದರೆ ಇದುವೇ. ಕಾಲಕ್ಕೆ ಸರಿಯಾಗಿ ವರ್ತನೆ.

*ದರಿದ್ರತಾ ಧೀರತಯಾ ವಿರಾಜತೇ ಕುರೂಪತಾ ಶೀಲತಯಾ ವಿರಾಜತೇ/*

*ಕುಭೋಜನಂ ಚೋಷ್ಣತಯಾ ವಿರಾಜತೇ ಕುವಸ್ತ್ರತಾ ಶುಭ್ರತಯಾ ವಿರಾಜತೇ//*

ಬುದ್ಧಿವಂತಿಕೆಯು ಬಡತನದಲ್ಲಿಯೂ ಶೋಭಿಸುತ್ತದೆ. ಒಳ್ಳೆಯ ಗುಣನಡತೆ ಕುರೂಪದಲ್ಲೂ ಪ್ರಜ್ವಲಿಸಬಹುದು, ಅಂದವಿರಬಹುದು. ಅಡುಗೆ ಸಾಮಾನ್ಯವಾದರೂ ಬಿಸಿಯಾಗಿದ್ದಾಗ ರುಚಿಸಬಹುದು. ಮಲಿನವಾದ ಹರಕುಬಟ್ಟೆ ಶುಭ್ರವಾಗಿದ್ದಾಗ ಚಂದ. ಬಡತನವನ್ನು ಗೇಲಿಮಾಡಬಾರದು. ಸಾಧ್ಯವಾದರೆ ಸಂಪಾದನೆಯ ದಾರಿ ಹುಡುಕಬೇಕು. ಇಲ್ಲವಾದರೆ ಇರುವುದರಲ್ಲಿಯೇ ತೃಪ್ತಿ ಪಡಬೇಕು.

ನಮ್ಮ ಭಾಗ್ಯದಲ್ಲಿ ಇದ್ದದ್ದು ನಮಗೆ ಸಿಗುತ್ತದೆ. ದುಡಿದು ಗಳಿಸಲು ಮನಸ್ಸು,ಪ್ರಯತ್ನ ಎರಡೂ ಬೇಕು. ಹಾಳಾಯಿತು, ನಷ್ಟವಾಯಿತೆಂದು ಕೊರಗದೆ, ಮುಂದೆ ಏನು ಮಾಡಬಹುದೆಂದು ಆಲೋಚಿಸಿ ನಡೆಯೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ