ಬಾಳಿಗೊಂದು ಚಿಂತನೆ - 242

ಬಾಳಿಗೊಂದು ಚಿಂತನೆ - 242

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ

ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ

 

ಮನುಜ ಮನುಜರಲ್ಲಿ ಜಾತಿ ದ್ವೇಷದ ಹೊಣೆಯಾಡಿದೆ

ಅವನು ಹೆಚ್ಚು ಇವನು ಕೀಳು ಭೇದ ಭಾವ ಮೂಡಿದೆ

ಈ ಕವನಗಳ ಸಾರ, ಅಂತರಾಳದ ಧ್ವನಿಯ ಕವಿ ಸಾಹಿತಿ, ಪ್ರಾಧ್ಯಾಪಕ, ಚಲನಚಿತ್ರ ನಟ, ನಿರ್ದೇಶಕ ‘ಮನುಜ’ ಕಾವ್ಯನಾಮದ ಡಾ.ದೊಡ್ಡರಂಗೇಗೌಡರು. ಕೆ ರಂಗೇಗೌಡ, ಅಕ್ಕಮ್ಮ ದಂಪತಿಗಳ ಸುಪುತ್ರಾಗಿ ಫೆಬ್ರವರಿ ೭, ೧೯೪೬ರಲ್ಲಿ ಜನಿಸಿದರು.ಮಧುಗಿರಿಯ ಸಾಹಿತ್ಯರತ್ನರಿವರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತನ್ನೆಲ್ಲ ಬರವಣಿಗೆಗಳಲ್ಲಿ ಗ್ರಾಮೀಣ ಸೊಗಡನ್ನು, ವಾಸ್ತವದೊಂದಿಗೆ ಸಮನ್ವಯಗೊಳಿಸಿ ಬರೆದ ಮಹಾನುಭಾವರು.

'ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ 'ಸಂಶೋಧನಾ ಪ್ರಬಂಧ' ಬರೆದು ಬೆಂಗಳೂರು ವಿ.ವಿಯಿಂದ ಡಾಕ್ಟರೇಟ್ ಪಡೆದರು. ಉಪನ್ಯಾಸಕರಾಗಿ, ಅಧ್ಯಾಪಕರಾಗಿ ,ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಅವಧಿಗೆ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರೂ ಆಗಿದ್ದರು.

'ಜಾತಿಗೋಡೆ ಕುಟ್ಟಿ ಕೆಡವೋ

ಸತ್ಯನಾಮ ಶ್ರೇಷ್ಠ ಇರವೋ

ಕುಬ್ಜತನ ತೊರೆದು ಬದುಕಸ್ನೇಹ ಶಾಂತಿ ಬೆಳಕೋ' ಎಂಬುದಾಗಿ ಜಾತಿ ಗೋಡೆಯ ಬಗ್ಗೆ ಅಂತರಂಗದ ಅಳಲ ತೋಡಿಕೊಂಡರು.

'ಭೂಮಿತಾಯಿ ಇದ್ದರೆ ಬದುಕು

ಇಲ್ಲವಾದರೆ ಉಳಿವೇ ಅಳುಕು'

ಸತ್ಯ ತೆರೆದಿಟ್ಟರು ಪುಟಗಳ ಒಳಭಾಗಗಳಲಿ. ಪ್ರತಿಭೆ ಹಾಗೆಯೇ ಬಾರದು. ಅದನ್ನು ಸಾಧಿಸಬೇಕು. ಕಲೆಗಾರನ ಪುನರ್ ಪ್ರಯತ್ನದಲ್ಲಿ ಪ್ರತಿಭೆ ರಿಂಗಣಿಸುತ್ತಿದೆಯೆಂದರು. ಮೊದಲು' ನಮ್ಮನ್ನು ನಾವು ಪ್ರೀತಿಸಬೇಕು, ನಮ್ಮ ಬದುಕನ್ನು ಪ್ರೀತಿಸಬೇಕು, ಅನಂತರ ನಮ್ಮ ಬರಹವನ್ನು ಪ್ರೀತಿಸಬೇಕು, ವೃತ್ತಿ, ಸಮಾಜ, ಬಂಧುಗಳನ್ನು ಪ್ರೀತಿಸಿ'ಯೆಂದು ಸಂದೇಶ ನೀಡಿದರು.

'ಹುಟ್ಟು ಕಲಾವಿದ ಅರಿತು ನಡೆಯುವವ.ಆತನಿಗೆ ಯಾವ ತರಬೇತಿಯ ಹಂಗೂ ಇಲ್ಲ.' ಚಲನಚಿತ್ರ ಗೀತ ಸಾಹಿತ್ಯದಲ್ಲಿ ಎತ್ತಿದ ಕೈ. ಇವರ ಪ್ರತಿಭೆಗೆ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿರುತ್ತದೆ. 'ಆಲೆಮನೆ' ಭಾವೈಕ್ಯಗೀತೆಗೆ ವಿಶೇಷ ಗೀತೆ ಪ್ರಶಸ್ತಿ ಬೆಳ್ಳಿಪದಕ ಸಿಕ್ಕಿದೆ. ೪ ಸಲ ರಾಜ್ಯ ಪ್ರಶಸ್ತಿ ದೊರೆತ ಹೆಮ್ಮೆಯ ಕನ್ನಡ ನಾಡಿನ ಸಾಹಿತಿಯಿವರು. ಭಾವಗೀತೆಗಳು, ಮುಕ್ತಕ, ಗದ್ಯಕೃತಿ, ಪ್ರವಾಸ ಸಾಹಿತ್ಯ, ಭಕ್ತಿಗೀತೆ, ಹನಿಗವಿತೆಗಳು, ಚೌಪದಿ, ೬೦೦ಕ್ಕೂ ಅಧಿಕ ಕನ್ನಡ ಚಲನ ಚಿತ್ರಗೀತೆಗಳನ್ನು ಬರೆದವರು. ಸುಮಾರು ೫೦ ಭಾವಗೀತೆಗಳು ಕ್ಯಾಸೆಟ್ ರೂಪದಲ್ಲಿ ಹೊರಬಂದಿವೆ. ಮಾಗಿಯ ಕನಸು, ಸಾಧನೆ ಶಿಖರದಲ್ಲಿ ನಟನಾಗಿ ನಟಿಸಿದ್ದಾರೆ. ಹಾರುವ ಹಂಸಗಳು ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಜ್ಯೋತ್ಸವ ಪುರಸ್ಕಾರ, ರತ್ನಾಕರವರ್ಣಿ, ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ.

ಜಾನಪದದಲ್ಲಿ 'ತೇರಾನೇರಿ ಅಂಬರದಾಗೆ ನೇಸರ ನಗುತಾನೆ

ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೇ'

ಮರೆಯಲು ಸಾಧ್ಯವೇ?

ವಾಸ್ತವತೆಯನ್ನು ಸಾಲುಗಳಲ್ಲಿ ಬಿಂಬಿಸುವ, ಕಟುಸತ್ಯವಾದಿಯಾದ ರಚನೆಗಳು, ಕನ್ನಡ ಸಾಹಿತ್ಯ ಪರಂಪರೆಯ ಅಪ್ಪಟ ಕನ್ನಡದ ಕವಿಯವರಿಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಶುಭಾಶಯಗಳು.

-ರತ್ನಾ ಕೆ ಭಟ್, ತಲಂಜೇರಿ

(ಸಂಗ್ರಹ:ಕನ್ನಡ ಕವಿ ಸಾಹಿತಿಗಳ ಪರಿಚಯ)

ಚಿತ್ರ ಕೃಪೆ: ಇಂಟರ್ನೆಟ್ ತಾಣ