ಬಾಳಿಗೊಂದು ಚಿಂತನೆ - 28
ನೈರ್ಗುಣ್ಯಮೇವ ಸಾಧಿಯೋ ಧಿಗಸ್ತು ಗುಣಗೌರವಮ್/
ಶಾಖಿನೋನ್ಯೇ ವಿರಾಜಂತೇ ಖಂಡ್ಯತೇ ಚಂದನದ್ರುಮಾಃ//
ನಾವು ಈ ಪ್ರಪಂಚಮುಖದಲ್ಲಿ ನೋಡಿದ ಹಾಗೆ, ಒಳ್ಳೆಯವರಿಗೆ ಯಾವಾಗಲೂ ಒಂದರ ಹಿಂದೆ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಯಾವ ಯೋಗ್ಯತೆಯೂ ಇಲ್ಲದವರನ್ನು ಯಾರೂ ಪೀಡಿಸುವುದಿಲ್ಲ. ಯೋಗ್ಯರನ್ನು ಮತ್ತು ಶಕ್ತಿಯುಳ್ಳವರನ್ನು ತಮ್ಮ ಕೆಲಸಕ್ಕಾಗಿ ಎಲ್ಲರೂ ಪೀಡಿಸುತ್ತಾರೆ. ಕೆಲಸ ಆಗದಿದ್ದರೆ ಅಳಿಸಿ ಹಾಕುತ್ತಾರೆ.
ಗುಣಹೀನತ್ವವೇ ಮೇಲು, ಅಧಿಕ ಗುಣತ್ವಕ್ಕೆ ಧಿಕ್ಕಾರ. ಕಾಡಿನಲ್ಲಿ ಎಲ್ಲಾ ವಿಧದ ಮರಗಳೂ ಬೆಳೆಯುತ್ತಿವೆ. ಯಾವ ತೊಂದರೆಯೂ ಇರುವುದಿಲ್ಲ. ಆದರೆ ಶ್ರೀ ಗಂಧದ ಮರಗಳನ್ನು ಮಾತ್ರ ಕಡಿಯುವುದು, ಕದಿಯುವುದು ಮಾಡುತ್ತಾರೆ. ಆ ಮರದ ಬೆಲೆ, ಅದರ ಒಳ್ಳೆಯತನವೇ ಕಾರಣ ಕಡಿಯಲು. ಅದೇ ರೀತಿ ಒಳ್ಳೆಯವರು ಯಾವಾಗಲೂ ಸಂಕಷ್ಟಕ್ಕೆ ಒಳಗಾಗುತ್ತಾ ಇರುತ್ತಾರೆ.
***
ನಮ್ಮ ಜೀವನ ದೀರ್ಘವಾಗಿದೆ ಅಂದು ಕೊಂಡರೆ ಅದು ತಪ್ಪು. ಎಷ್ಟು ಹೊತ್ತಿಗೆ ಏನಾದೀತು ಊಹಿಸಲು ಸಾಧ್ಯವಿಲ್ಲ. ನಮ್ಮ ಊಹೆಗೆ, ಅಂಕೆಗೆ ಮೀರಿದ್ದು. ಚಿಕ್ಕ ಸಮಯದಲ್ಲಿ ನಾವು ಏನೆಲ್ಲಾ ಮಾಡಬೇಕೋ, ಹೇಗೆಲ್ಲಾ ಇರಬೇಕೋ ಅದನ್ನೆಲ್ಲಾ ಮುಗಿಸಲು ಪ್ರಯತ್ನಿಸೋಣ. ಖುಷಿ ಎನ್ನುವುದು ಹಣ ಕೊಟ್ಟರೆ ಸಿಗುವಂಥ ವಸ್ತುವಲ್ಲ. ನಮ್ಮ ನಮ್ಮಲ್ಲೇ ಇದೆ. ಅದನ್ನು ಪಡಕೊಳ್ಳುವ ನೀಡುವ ಸಾಮರ್ಥ್ಯ ನಮಗೆ ಬಿಟ್ಟದ್ದು. ಇರುವ ಚಿಕ್ಕ ಸಮಯದಲ್ಲಿ ಖುಷಿಯಾಗಿರೋಣ.
ಮರಳಿ ಮರಳಿ ಬರುವುದು ನೆನಪುಗಳು ಮಾತ್ರ,ಸಮಯವಲ್ಲ. ಕಾಲಸರಿದಂತೆ ವಯಸ್ಸು ಹೋಗುತ್ತಿರುತ್ತದೆ ಎಂಬುದು ನೆನಪಿರಲಿ. ವಯಸ್ಸಾಗಿ ಮಾಗಿದ, ಬಾಗಿದ ಮೇಲೆ ಏನೂ ಮಾಡಲಾಗದು.
ಆಧಾರ:(ಸುಭಾಷಿತ ದೀಪ್ತಿ)
-ರತ್ನಾ ಕೆ.ಭಟ್, ತಲಂಜೇರಿ