ಬಾಳಿಗೊಂದು ಚಿಂತನೆ - 30

ಬಾಳಿಗೊಂದು ಚಿಂತನೆ - 30

ನಮ್ಮ ಬದುಕಲಿ, ಜೀವನದ ಮಾರ್ಗದಲಿ ಉಸಿರು ಅಡಗುವವರೆಗೂ ನಾವು ಕಷ್ಟವೋ, ಸುಖವೋ ಬದುಕಿ ಇರುತ್ತೇವೆ. ಸುಖ, ಸಂತೋಷ, ತೃಪ್ತಿ ಇದ್ದುದರಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ.

ನಮ್ಮ ಸಂತೋಷದ ಜೊತೆಗೆ ಬೇರೆಯವರ ಕಿಂಚಿತ್ ಸಂತೋಷಕ್ಕೆ ನಾವು ಕಾರಣರಾದರೆ ಅದುವೇ ಸೌಭಾಗ್ಯ, ಪುಣ್ಯದ ಕೆಲಸ. ನಾವೇನೋ ಸ್ವಲ್ಪ ಗಳಿಸಬಹುದು, ಅದರಲ್ಲಿ ಸಾಸಿವೆಯಷ್ಟಾದರೂ ಪರಹಿತಕ್ಕಾಗಿ, ಕಷ್ಟದಲ್ಲಿದ್ದವರಿಗಾಗಿ ಮೀಸಲಿಡೋಣ. ಭಗವಂತನ ಡೈರಿಯಲ್ಲಿ ಇದೆಲ್ಲ ಬರೆಯಲ್ಪಡುತ್ತದೆ ಅನ್ನುವ ನಂಬಿಕೆ ನಮ್ಮದು. ನೀಡುವಾಗ ನೋಡಿಕೊಂಡು ನೀಡೋಣ. ಸತ್ಪಾತ್ರರಿಗೆ ನೀಡೋಣ. ಇಲ್ಲದಿದ್ದರೆ ಮುಂದೊಂದು ದಿನ ನಮ್ಮ ಕೈಯಿಂದ ತೆಗೆದುಕೊಂಡವರೇ ನಮ್ಮನ್ನು ಕಚ್ಚಲು ಬರಬಹುದು.

***

ಎರಡು ರೀತಿಯ ಬಾಣಗಳಿವೆ. ಒಂದು ಮಾತಿನ ಬಾಣ. ಇನ್ನೊಂದು ಬಿಲ್ಲಿಗೆ ಹೆದೆಯೇರಿಸಿ ಬಿಡುವ ಬಾಣ. ಈ ಬಾಣ ಸರಿಯಾದ ಸ್ಥಳಕ್ಕೆ ಬಿದ್ದರೆ, ಮತ್ತೆ ಏಳಲಾಗದು. ನಮಗೆ ತಿಳಿದ ವಿಚಾರ.

ಆದರೆ ಮಾತಿನ ಬಾಣ ಅದಕ್ಕಿಂತಲೂ ಕ್ರೂರ. ಇಂಚು ಇಂಚು ಸಾಯಿಸಬಹುದು. ಹಾಗಿದ್ದವರ ಬಗ್ಗೆ ನಾವು ಎಚ್ಚರವಾಗಿರಬೇಕು. ಅವರ ಸಹವಾಸದಿಂದ ದೂರವೇ ಇರಬೇಕು. ಅರಿತರೂ ಅರಿಯದಂತಿರಬೇಕು. ಕಂಡಕಂಡಲ್ಲಿ ತಾನೇ ದೊಡ್ಡ ಪರಬ್ರಹ್ಮ ಎಂಬ ಹಾಗೆ ಮಾತಿನ ಏಟು ನೀಡುವ ಸ್ವಭಾವ ಅವರದಾಗಿರುತ್ತದೆ. ತಲೆಕೆಡಿಸಿಕೊಳ್ಳದೆ ಮೌನವಾಗಿರುವುದೇ ಲೇಸು.*ಗಾದೆಯೇ ಇದೆಯಲ್ಲ, ಅಹಂಕಾರಕ್ಕೆ ಉದಾಸೀನವೇ ಮದ್ದು* .ಯಾವ ಬಾಣದಿಂದಲೂ ಚುಚ್ಚದೆ ಆದಷ್ಟೂ ದೇವರು ಮೆಚ್ಚುವ ಕೆಲಸ, ನಾಲ್ಕು ಜನರಿಗೆ ಒಳ್ಳೆಯ ದಾಗುವ ಕಾರ್ಯ ಮಾಡೋಣ.

-ರತ್ನಾ ಕೆ.ಭಟ್, ತಲಂಜೇರಿ