ಬಾಳಿಗೊಂದು ಚಿಂತನೆ - 37

ಬಾಳಿಗೊಂದು ಚಿಂತನೆ - 37

ಎಲ್ಲಾ ಪಾಪಗಳಿಗೂ ಆಸೆಯೇ ಮೂಲ. ಇನ್ನೂ ಬೇಕು, ಮತ್ತಷ್ಟೂ ಬೇಕು ಎಂಬ ಚಪಲ ಚಿತ್ತವೇ ಎಲ್ಲದಕ್ಕೂ ಕಾರಣ. ನಾಲಿಗೆಗೆ ರುಚಿ ಆಗುವುದೆಂದು ತಿಂದರೆ ಹೇಗೆ? ರೋಗಕ್ಕೆ ಆಹ್ವಾನ ನೀಡಿದಂತೆ. ದೇಹಕ್ಕೆ ಏನು ಬೇಕು, ಅದನ್ನೇ ಸೇವಿಸಬೇಕಲ್ಲವೇ?

ಮತ್ಸರ ಎಂಬುದು ಜೀವಂತ ಇಂಚು ಇಂಚು ದಹಿಸುವ ಪರಿ. ಯಾವಾಗ ನೋಡಿದರೂ ಮತ್ಸರ ಪಟ್ಟರೆ ಚಂದದ ಜೀವನ ಎಲ್ಲಿದೆ? ಹೊಟ್ಟೆಕಿಚ್ಚು, ಮತ್ಸರ, ಕೇಡು, ಇದು ಒಂದೇ ತಾಯಿ ಮಕ್ಕಳು. ಇದನ್ನು ಬಿಟ್ಟರೆ ಇದ್ದುದರಲ್ಲಿಯೇ ಸುಖ ಇರಬಹುದು. ಶಾಂತಿ, ನೆಮ್ಮದಿ, ತೃಪ್ತಿ ನಮ್ಮಲ್ಲಿಯೇ ಇದೆ. ಅದನ್ನು ಹುಡುಕಿಕೊಂಡು ಎಲ್ಲೆಲ್ಲಿ ಹೋಗುವುದು ಬೇಡ. ಲೋಭ, ಆಸೆ, ನಾಲಿಗೆ ರುಚಿ, ಮತ್ಸರ, ಚಿಂತೆ  ಇವುಗಳಿಂದ ದೂರವಿರೋಣ.

***

ತನ್ನನ್ನು, ತನ್ನ ಕೆಲಸಕಾರ್ಯಗಳನ್ನು ಎಲ್ಲರೂ ಮೆಚ್ಚಬೇಕೆಂಬ ಆಕಾಂಕ್ಷೆ ಮಾನವ ಸಹಜ ಗುಣ. ಮೆಚ್ಚುವಿಕೆಯಲ್ಲಿ ಎರಡು ವಿಧ. ಒಂದು ಸುಮ್ಮನೆ ಅವರೇನು ಭಾವಿಸಿಯಾರು, ನಾನಿಷ್ಟೂ ಹೇಳದಿದ್ದರೆ ಎಂಬ ಮೆಚ್ಚುಗೆ. ಇನ್ನೊಂದು ಮನದಾಳದ ಸರಿಯಾದ ಮೆಚ್ಚುಗೆ. ಎರಡನೆಯದು ಪರಿಣಾಮಕಾರಿ. ಮಾಡಿದ ಕೆಲಸದಲ್ಲಿ, ಬರವಣಿಗೆ ಯಲ್ಲಿ ಕಂಡದ್ದನ್ನು ಒಪ್ಪವಾಗಿ , ಓರಣವಾಗಿ ತಿಳಿಸುವುದು. *ನೋಡು ನಿನ್ನ ಕೆಲಸ ಹೀಗಿದೆ, ಅದನ್ನು ಹೀಗೆ ಮಾಡಬಹುದು* ಸಲಹೆ ಸಹ ಕೊಡಬಹುದು. ಹಾಗೆ ವಿಮರ್ಶೆ ಸಹ. ಕಾಟಾಚಾರದ ವಿಮರ್ಶೆ, ಹರಕೆ ಸಂದಾಯದ ವಿಮರ್ಶೆ, ಚಂದದ ವಿಮರ್ಶೆ, ಬರೆಯ ಬೇಕಲ್ಲ ಎಂಬ ಮನೋಭಾವದ ವಿಮರ್ಶೆ, ಆಳ ಅಗಲ ಓದಿ ಅರ್ಥೈಸಿ ಬರೆಯುವ ವಿಮರ್ಶೆ, ತಪ್ಪು ಒಪ್ಪುಗಳ ಸರಿಯಾಗಿ ತಿಳಿಸುವ ವಿಮರ್ಶೆ ಹೀಗೆ ಹತ್ತು ಹಲವು ಬಗೆ ಕಾಣ್ತಾ ಇದ್ದೇವೆ.

ಹೊಗಳಿಕೆ ಮತ್ತು ವಿಮರ್ಶೆಗಳು ಅಣ್ಣತಮ್ಮಂದಿರು ಇದ್ದಂತೆ. ಸರಿ ಇದ್ದರೆ ಎಲ್ಲವೂ ಸರಿ. ಓರೆಯಾಯಿತೋ ಎಲ್ಲವೂ ಓರೆಯೇ. ವಿಮರ್ಶೆಯನ್ನು ಅಪಾರ್ಥ ಮಾಡಿ, ಏನೇನೋ ಆಗಿ, ವಿಕೋಪಕ್ಕೆ ಹೋಗುವುದೂ ಇದೆ. ಇಲ್ಲಿ ಯಾರಿಗೂ ನೋವಾಗದಂತೆ  ಬರೆಯಬಹುದು, ಹೇಳಬಹುದು.ಹೀಗೆ ಮಾಡಿದರೆ, ಹೀಗೆ ಬರೆದರೆ ಇನ್ನೂ ಚಂದ ಎಂಬುದಾಗಿ. ವಿಮರ್ಶೆ ಎಂಬುದು ನಮ್ಮನ್ನು ನಾವು ತಿದ್ದಿಕೊಳ್ಳಲು ಒಂದು ದಾರಿ. ಒಳ್ಳೆಯದಾದರೆ, ಇನ್ನೂ ಹೇಗೆ ಉತ್ತಮ ಪಡಿಸಬಹುದು, ಆ ನಿಟ್ಟಿನಲ್ಲಿ ಆಲೋಚಿಸಿ ಮುಂದಡಿಯಿಡಬಹುದಲ್ಲವೇ?

ಯಾವಾಗಲೂ ಮೆಚ್ಚುಗೆಯೇ, ಹೊಗಳಿಕೆಯೇ ಸಿಗಬೇಕೆಂದಾದರೆ, ನಮ್ಮ ಚಟುವಟಿಕೆಗಳು ಹಾಗೆಯೇ ಇರಬೇಕಲ್ಲವೇ? ಬೇರೆಯವರ ಮನಸ್ಸು ನೋಯಿಸುವಂಥ ಕೆಲಸಕಾರ್ಯಗಳನ್ನು ಬರಹಗಳನ್ನು ಯಾರೂ ಮೆಚ್ಚಲಾರರು. ಮೆಚ್ಚಿದರೂ ಬರೆದವರ ಮನಸ್ಸಿನಂತಿರುವವರು ಮಾತ್ರ. ಇನ್ನೊಬ್ಬರನ್ನು ನೋಯಿಸುವವರನ್ನು ವಿಘ್ನ ಸಂತೋಷಿಗಳ ಸಾಲಿಗೆ ಸೇರಿಸಬಹುದು. ಅವರ ಕೆಲಸ ಆಯಿತು, ಪರಿಣಾಮ ಅವರು ಯೋಚಿಸುವುದಿಲ್ಲ. ಈ ವಾಟ್ಸಾಪ್, ಫೇಸ್ಬುಕ್ ಕಾಲಘಟ್ಟದಲ್ಲಿ ಇದನ್ನು ಬಹಳಷ್ಟು ಓದಬಹುದು, ನೋಡಬಹುದು. ಅವರ ಹೇಳಿಕೆಗಳು, ವಾಕ್ಯಗಳು, ಅವರ ಚಟುವಟಿಕೆಗಳ ಮಜಲುಗಳನ್ನು ಅವಲೋಕಿಸಿದಾಗ, ಸ್ವಂತಿಕೆ ಯ ಕೊರತೆ ಜಾಸ್ತಿ. ಎರವಲು ೯೦% ಕಂಡುಬರುತ್ತದೆ. ನಾವು ಏನೇ ಹೇಳುವುದಿದ್ದರೂ ಜೀವನಾನುಭವ ಸ್ವಲ್ಪವಾದರೂ ಅದರಲ್ಲಿ ಬಂದರೆ, ತೂಕವಿರುತ್ತದೆ. ಅನುಭವದ ಮಾತುಗಳನ್ನು, ನಮ್ಮ ಹಿರಿಯರ ಸಾಹಿತ್ಯ ಓದುವುದರಿಂದ, ಜ್ಞಾನಿಗಳ ನುಡಿಗಳಿಂದ, ಗಾದೆ ಮಾತು, ನಾಣ್ಣುಡಿಗಳು, ಸ್ವ ಅನುಭವಗಳ ಸಾರ ಬರಲೆಂದು ಹಾರೈಕೆ.

ಸರ್ವಜ್ಞನ ತ್ರಿಪದಿಗಳ(ವಚನ)ಗಳಲ್ಲಿ ಒಂದೆಡೆ ಹೊಗಳಿಕೆ, ಮೆಚ್ಚುಗೆ ಬಗ್ಗೆ ಬರೆದ ವಚನ ಇಂತಿದೆ.

*ಹಂಗಿನರಮನೆಯಿಂದ ವಿಂಗಡದ ಗುಡಿ ಲೇಸು ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲು ತಂಗುಳವೆ ಲೇಸು ಸರ್ವಜ್ಞ* //

ತನ್ನನ್ನು ಮತ್ತೊಬ್ಬರು ಹೊಗಳಲಿಲ್ಲವಲ್ಲಾ ಎಂಬ ಸಂಕಟವಾಗಲಿ, ದುಃಖವಾಗಲಿ ಖಂಡಿತಾ ಇಲ್ಲ. ಕವಿಗಳು ನಿರ್ಮತ್ಸರರಾಗಲಿ ಎಂಬುದನ್ನು ಕಾಣಲು ಸಾಧ್ಯವಿಲ್ಲ. ಅದರೆಡೆಯಲ್ಲಿ ಹೇಳುವುದು ಸತ್ಯವೋ  ಸುಳ್ಳೋ, ಅಪ್ರಿಯವೋ, ಯಾರ್ಯಾರ ವಿಚಾರ ಹೇಳಿರುವನೋ ಅದನ್ನೆಲ್ಲ ವಿವೇಚಿಸದೆ ಒಪ್ಪಿಕೊಂಡರೂ, ಒಳಗೊಳಗೆ ಸತ್ಯ ಗೊತ್ತಿರುತ್ತದೆ. ಅಪ್ರಯತ್ನವಾಗಿ ತಿದ್ದಿಕೊಳ್ಳಲು ಪ್ರಯತ್ನಿಸುವರು.

ಸರ್ವಜ್ಞ ವಚನಗಳ ಸಾರವೂ ಅದೇ. ಜನರು ತಮ್ಮ ಲೋಪದೋಷಗಳನ್ನು ಸರಿಪಡಿಸಿ, ಜಳ್ಳುಗಳನ್ನು ಬಿಟ್ಟುಬಿಡಬೇಕು. ಉತ್ತಮರಾಗಿ ಬಾಳ್ವೆ ಇರುವಷ್ಟು ದಿನ ನಡೆಸಬೇಕು. ಎಲ್ಲರನ್ನೂ ಹಳಿಯುತ್ತ, ದೂರುತ್ತಾ, ಅತೃಪ್ತರಾದ ಮನೋಭಾವದವರಾಗಬಾರದು. ದುರ್ಗುಣಗಳನ್ನು, ದುರಾಚಾರಗಳನ್ನು, ದುರಹಂಕಾರಿಗಳನ್ನು ಕಂಡರೆ ಆ ಮಹಾನುಭಾವರಿಗೆ, ಕೋಪ, ಅಸಹನೆ, ಸಿಟ್ಟು, ಒಂದೆಡೆ ನೋವೂ, ಮರುಕವೂ ಆಗುತ್ತಿತ್ತಂತೆ. ಒಳಗೊಂದು ಹೊರಗೊಂದು ಇಲ್ಲದ, ನೇರ ಮಾತುಗಳ, ಸ್ವಚ್ಚ ಮನಸ್ಸಿನ ನಡೆಯ ಮಹಾಪುರುಷರು. ಕೊಂಕು, ಕುಟಿಲತೆ, ಸುತ್ತು ಬಳಸುಗಳಿಲ್ಲದ ನೇರ ಹಾದಿ ಸರ್ವಜ್ಞ ವಚನಗಳಲ್ಲಿ ನಾವು ಕಾಣಬಹುದು. ನಕ್ಕು ನಗಿಸುವ, ವಿಮರ್ಶೆಗೊಡ್ಡುವ ಬರಹಗಳನ್ನು ಕಾಣಬಹುದು.

ಹೊಗಳಿಕೆ-ತೆಗಳಿಕೆ, ಮೆಚ್ಚುಗೆಗಾಗಿ ಬರೆಯದೆ, ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳದೆ, ನಮ್ಮ ಆತ್ಮತೃಪ್ತಿಗಾಗಿ, ಮನಸ್ಸಿನ ಸಂತೋಷಕ್ಕಾಗಿ ಸದಾ ಚಟುವಟಿಕೆಗಳಿಂದಿರೋಣ.

-ರತ್ನಾ ಕೆ.ಭಟ್, ತಲಂಜೇರಿ

(ಆಧಾರ:ಸರ್ವಜ್ಞ ವಚನಗಳು, ಕಂಡ,ಕೇಳಿದ ಅನುಭವಗಳ ಸಾರ)