ಬಾಳಿಗೊಂದು ಚಿಂತನೆ - 56

ಬಾಳಿಗೊಂದು ಚಿಂತನೆ - 56

ನಾವು ಬದುಕನ್ನು ಒಂದು ದೊಡ್ಡ ಗ್ರಂಥಕ್ಕೆ ಹೋಲಿಸಬಹುದು. ಗ್ರಂಥ ಹೇಗಿರಬೇಕೆಂದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಜಳ್ಳು ಪೊಳ್ಳುಗಳಿಗೆ ಗ್ರಂಥದಲ್ಲಿ ಆಸ್ಪದವಿಲ್ಲ. ಒಂದು ವೇಳೆ ಅದು ಇದೆ ಎಂದಾಗ ಯಾರೂ ಮೆಚ್ಚಿಕೊಳ್ಳರು. ಹಾಗೆಯೇ ನಮ್ಮ ದಿನಚರಿ ಸಹ. 'ಕರಿ ಮಸಿಯನ್ನು ಬಿಳಿ ಹಾಳೆ ನುಂಗಿತ್ತು' ಎಂಬ ನಾಣ್ನುಡಿಯಂತೆ ಆಗಬಾರದು.

ನಮ್ಮ ಬದುಕಿನ ಶುದ್ಧ ಚಾರಿತ್ರ್ಯದ ಮೇಲೆ ಒಂದು ಸಣ್ಣ ಕಪ್ಪು ಚುಕ್ಕಿ ಸಹ ಬರಬಾರದು. ೯೯ ಶೇಕಡಾ ಸರಿಯಿದ್ದು ೧% ಸರಿಯಾಗಿಲ್ಲ ಎನ್ನುವುದು ಕಪ್ಪು ಮಸಿಯೇ. ಈ ಸಮಾಜದಲ್ಲಿ, ಪರಿಸರದಲ್ಲಿ ಒಳ್ಳೆಯದನ್ನು ಕೊಂಡಾಡುವವರು ಬಹಳ ಕಡಿಮೆ. ಏನಾದರೂ ಒಂದು ಸಣ್ಣ ತಪ್ಪಾದರೂ ಅದನ್ನೇ ಹೇಳಿ ಚಪ್ಪಾಳೆ ತಟ್ಟಿ ಕೇಕೆ ಹಾಕುವವರನ್ನೇ ಕಾಣುತ್ತಿದ್ದೇವೆ.

ಸ್ವಾರ್ಥ ಬಂದಾಗ ಕಪ್ಪು ಚುಕ್ಕೆಗಳು ಹೆಚ್ಚು ಶರೀರಕ್ಕೆ ಅಂಟಿಕೊಳ್ಳಬಹುದು. ನೈತಿಕ ಮೌಲ್ಯಗಳ ಕುಸಿತ ಜೊತೆಗೆ ಸೇರಿಕೊಂಡಾಗ ನೆಲಕಚ್ಚುವುದರಲ್ಲಿ ಸಂಶಯವಿಲ್ಲ. ಈಗ ನಾವು ಮಾಡಬೇಕಾದ್ದೇನು? ಸನ್ಮಾರ್ಗದಲ್ಲಿ ನಡೆಯುವುದು. ದುರ್ಬಲ ಮನಸ್ಸನ್ನು ಹತೋಟಿಯಲ್ಲಿಡುವ, ಇಂದ್ರಿಯ ನಿಗ್ರಹ ಸಾಧಿಸುವುದನ್ನು ನಮ್ಮ ಸೊತ್ತನ್ನಾಗಿಸಿಕೊಳ್ಳಬೇಕು. ಕಂಡದ್ದು, ಕೇಳಿದ್ದು ಎಲ್ಲ ಬೇಕು ಎಂಬ ವ್ಯಾಮೋಹ ತ್ಯಜಿಸೋಣ. ಮನಸ್ಸಿನ ಆಸೆಗಳಿಗೆ ಕಡಿವಾಣ ಹಾಕೋಣ. ಎಲ್ಲಿ ಹೃದಯ ಶುದ್ಧವಾಗಿದೆಯೋ ಅಲ್ಲಿ ಬೇರೆ ಅಶುದ್ಧತೆಗೆ ದಾರಿ ಇಲ್ಲ. ಕನಸು ಕಾಣುವ ಒಳ್ಳೆಯದಕ್ಕೆ ಮಾತ್ರ. ಕೆಟ್ಟ ಕನಸಿನ ಮಹಲೇ ನಮ್ಮನ್ನು ಸರ್ವನಾಶಕ್ಕೆ ತಳ್ಳುವುದು. ರಾಗ ದ್ವೇಷಗಳ ಹತ್ತಿರ ಸುಳಿಯಗೊಡದಿರೆ ಎಲ್ಲಾ ಸರಿಯಾಗುವುದು.

ಸಮಾಜದಲ್ಲಿ ನಿಂದಕರು ಇರಬೇಕಂತೆ ದಾಸವರೇಣ್ಯರ ನುಡಿ. ಎಲ್ಲಿ ನಿಂದನೆ ಇದೆಯೋ ಅಲ್ಲಿ ಬೆಳೆಯಲು ಅವಕಾಶವಿದೆ. ಬದುಕೇ ಒಂದು ಸವಾಲು. ಸವಾಲು ಒಳ್ಳೆಯದೆ.ಆರೋಗ್ಯಕರವಾಗಿ ಸ್ವೀಕರಿಸೋಣ. ನಿಂದಕರೆದುರು ತಲೆಯೆತ್ತಿ ನಡೆದು ತೋರಿಸೋಣ. ಯಾವುದಕ್ಕೂ ಆತ್ಮಾಭಿಮಾನ, ಆತ್ಮವಿಶ್ವಾಸ ಇದ್ದರೆ ಹೆದರುವ ಅಗತ್ಯವಿಲ್ಲ. ಉತ್ತಮ ಗುಣನಡತೆಯಿಂದ ಒಳ್ಳೆಯ ಗ್ರಂಥಗಳಾಗಿ ಹೊರ ಹೊಮ್ಮೋಣ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ