ಬಾಳಿಗೊಂದು ಚಿಂತನೆ (6) - ಕತ್ತಿಯ ಅಲಗು

ಬಾಳಿಗೊಂದು ಚಿಂತನೆ (6) - ಕತ್ತಿಯ ಅಲಗು

ನಮ್ಮ ಜೀವನವೆನ್ನುವುದು *ಅಸಿಧಾರವ್ರತ* ಎನ್ನುವುದನ್ನು ಎಷ್ಟೋ ಸಲ ಕೇಳಿದ್ದೇವೆ. ಹಲವಾರು ಸನ್ನಿವೇಶ, ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತವೆ. ಆಗ *ಅಯ್ಯೋ ಹೀಗಾಯಿತಲ್ಲ*ಅಂತ ಪರಿತಪಿಸುತ್ತೇವೆ. ನಮ್ಮನ್ನು ನಾವು ಇಂತಹ ಸಂದರ್ಭದಲ್ಲಿ ಕಾಪಾಡಿಕೊಳ್ಳಲು ಹೆಣಗಾಡುತ್ತೇವೆ, ಚಡಪಡಿಸುತ್ತೇವೆ. *ಹರಿತವಾದ ಕತ್ತಿಯ ಅಲಗಿನ ಮೇಲೆ ನಿಂತರೆ, ಹೇಗೆ ಮೆಲ್ಲಗೆ ನಾಜೂಕಿನಿಂದ ಹೊರಬರಬಹುದು* ಎಂದು ಯೋಚಿಸಿ ನಿರ್ಧಾರಕ್ಕೆ ಬರುತ್ತೇವೆ. ಕಾಲಿಗೂ ತಾಗಬಾರದು, ಗಾಯವಾಗಬಾರದು. ಹೇಗೆ? ಸ್ನೇಹಿತರೇ ಇದೇ ಜೀವನ ಕಲೆ. ಚಮತ್ಕಾರಿಕವಾದ ವ್ರತವೂ ಹೌದು. ಈ ಖಡ್ಗದ ಅಲಗನ್ನೇ *ಅಸಿಧಾರ *ಹೇಳುತ್ತೇವೆ.

ಬಲತ್ಕಾರ ಇಲ್ಲಿ ಸಲ್ಲದು. ಬಲವಾಗಿ ಹೆಜ್ಜೆಯೂರಿದಾಗ ರಕ್ತ ಸೋರುವುದು ಶತಸಿದ್ಧ. ಮುಂದೆ ನಡೆದರೆ ಕಾಲೇ ಕತ್ತರಿಸಬಹುದು. ಕತ್ತಿಗೆ ಹೆದರಿ ನಡೆಯದೆ ಇದ್ದರೆ ಹೇಗೆ? ನಮ್ಮ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು. ಬೆನ್ನು ಹಾಕಿ ಹೋಗುವುದು ಹೇಡಿಗಳ ಲಕ್ಷಣ. ಯಾವುದೇ ಆಹ್ವಾನವನ್ನು ಬಂದಂತೆಯೇ ಸ್ವೀಕರಿಸಬೇಕು.

ಈ ಬದುಕು ಮೂರು ದಿನದ ಬಾಳ್ವೆ. ಮೂರು ದಿನದ ಆಟ. ನಾವುಗಳು ಒಂದು ರೀತಿಯ ಡೊಂಬರಾಟ ಆಡುವವರಂತೆ. ಹಗ್ಗದ ಮೇಲೆ ನಡೆಯುವಂತೆ ನಮ್ಮ ಜೀವನ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೆಳಗೆ ಬೀಳುವುದು ನಿಶ್ಚಿತ.

ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಇಲ್ಲಿ ಜಾಣ್ಮೆ, ಇತಿ-ಮಿತಿಗಳ ಪ್ರಜ್ಞೆ ಇರಬೇಕು. ಒಂದು ರೀತಿಯ ಸಮತೋಲನ, ಸಮತೋಲಿತ ಬದುಕಿಗೆ ನಾವು ತೆರೆದುಕೊಳ್ಳಲೇ ಬೇಕು. ಹಾಗಾದರೆ ಮಾತ್ರ, ಸುಂದರ, ಸುಶೀಲ, ನೆಮ್ಮದಿ, ಆರೋಗ್ಯಯುತವಾದ ಜೀವನ ನಮ್ಮದಾಗಬಹುದು. ಸಮನ್ವಯ ಬದುಕಿನ ಜೀವಾಳವಿದ್ದಂತೆ.

ನಾವು ಮಾಡದ ತಪ್ಪಿಗಾಗಿ ಒಮ್ಮೊಮ್ಮೆ ಸಿಕ್ಕಿ ಬೀಳುವ ಪ್ರಮೇಯ ಬರಬಹುದು. ಆಗ ನಯ ನಾಜೂಕಿನಿಂದ ಮುಳ್ಳಿನ ಬೇಲಿಯ ಮೇಲೆ ಬಿದ್ದ ಬಟ್ಟೆಯನ್ನು ಹೇಗೆ ಮೆಲ್ಲಗೆ ತೆಗೆಯುತ್ತೇವೆಯೋ ಹಾಗೆಯೇ ವರ್ತಿಸಿ ಹೊರಬರಬೇಕಾಗಬಹುದು. ಏನೇ ಆಗಲಿ ನಾನು ಸರಿಯಾಗಿರುವೆನು, ಸರಿಯಾಗಿರುತ್ತೇನೆ ಎಂಬ ಪ್ರತಿಜ್ಞೆ ಮಾಡಿದರೆ ಎಲ್ಲವೂ ಸುಗಮ. ಒಂದು ಮಾತಿದೆ *ಹಾವೂ ಸಾಯಬಾರದು--ಕೋಲೂ ಮುರಿಯಬಾರದು*, ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು. ಇಷ್ಟು ನಾಜೂಕುತನ ನಮ್ಮಲ್ಲಿದ್ದಲ್ಲಿ ನಾವು ಯಶಸ್ವಿಯಾಗಬಲ್ಲೆವು.

       ರಸವೇ ಜನನ

       ವಿರಸವೇ ಮರಣ

    ಸಮರಸವೇ ಜೀವನ!

-ರತ್ನಾ ಭಟ್ ತಲಂಜೇರಿ