ಬಾಳಿಗೊಂದು ಚಿಂತನೆ -70
ನಮ್ಮ ಉಸಿರು ಅಡಗಿರುವುದು ಪ್ರಕೃತಿಯಲ್ಲಿ. ಹಸಿರು ಗಿಡಮರಗಳಿದ್ದಷ್ಟೂ ಜೀವಿಗಳ ಉಸಿರಾಟಕ್ಕೆ ಬೇಕಾದ ಸ್ವಚ್ಛ, ಶುದ್ಧ ಗಾಳಿ ಸಿಗುವ ವಿಚಾರ ನಮಗೆಲ್ಲ ತಿಳಿದಿದೆ. ಜೀವಿಗಳಲ್ಲಿ ಇದರ ಹೊಣೆಗಾರಿಕೆ ಮಾನವನಾಗಿ ಶ್ರೇಷ್ಠ ಜನ್ಮ ಹೊಂದಿದ ನಮ್ಮದು ಮಾತ್ರ ಅಲ್ಲವೇ? ನಮಗೆಷ್ಟು ಸಾಧ್ಯವೋ ಅಷ್ಟು ನಮ್ಮ ಪರಿಸರವನ್ನು ಸುಂದರವಾಗಿಸುವುದು ನಮ್ಮ ಕೈಯಲ್ಲಿಯೇ ಇದೆ.
ಹಸಿರು ಮರಗಳನ್ನು ಸ್ವಾರ್ಥಕ್ಕಾಗಿ ಕಡಿದುರುಳಿಸುವುದು ಸಾಮಾನ್ಯವಾಗಿಬಿಟ್ಟಿದೆ. ಕಾಂಕ್ರಿಟ್ ಕಟ್ಟಡಗಳು ಮಹಡಿ ಮೇಲೆ ಮಹಡಿ ಏರುತ್ತಿದೆ. ನಗರೀಕರಣ ಕಾಡಿನ ನಾಶಕ್ಕೆ ಕಾರಣ. ತಾಂತ್ರಿಕ ಸೌಲಭ್ಯಗಳು ಹೆಚ್ಚಾದಂತೆ ಹಸಿರು ನಾಶ. ನರ್ಸರಿ ಯೋಜನೆಗಳೂ ಸಹ ಕಾಡಿನ ನಾಶಕ್ಕೆ ಕಾರಣ. ಆದರೆ ಗಿಡಮರಗಳ ಪುನರುತ್ಪತ್ತಿ ಆಗುತ್ತಿದೆ. ಬದುಕನ್ನು ಈ ರೀತಿಯಾಗಿ ಕಟ್ಟಿಕೊಳ್ಳುತ್ತಿರುವ ಕುಟುಂಬ ಗಳೂ ಇವೆ. ರಸ್ತೆ ಅಗಲೀಕರಣದಲ್ಲಿ ಬಹಳಷ್ಟು ಒಳ್ಳೊಳ್ಳೆಯ ಮರಗಳ ನಾಶವಾಗುತ್ತಿದೆ.
ಹಾಗಾದರೆ ಪರಿಸರ ಸಮತೋಲನಕ್ಕೆ ನಾವು ಕೂಡಿದಷ್ಟು ಸ್ಥಳಾವಕಾಶ ಇದ್ದಲ್ಲಿ ‘ಗಿಡನೆಡು’ ಆಂದೋಲನ ಕೈಗೊಳ್ಳಬಹುದು. ನಮ್ಮ ಮನೆ, ಕಛೇರಿಗಳು, ಕಟ್ಟಡಗಳು, ಶಾಲೆಯ ಸುತ್ತಮುತ್ತಲು ಕೈತೋಟ ನಿರ್ಮಾಣ, ನೆರಳು ಮತ್ತು ಔಷಧೀಯ ಸಸ್ಯಗಳು, ಹೂವಿನ ಗಿಡಗಳು,ಅಲಂಕಾರಿಕಾ ಸಸ್ಯಗಳು, ಫಲನೀಡುವ ಸಣ್ಣ ಸಸ್ಯಗಳು, ತರಕಾರಿ ಗಿಡಗಳು ಮುಂತಾದವುಗಳನ್ನು ನೆಟ್ಟು ಪೋಷಿಸಬಹುದು.
ಈ ಗಿಡ ಮರಗಳು ಪಕ್ಷಿಗಳ ಆಶ್ರಯತಾಣ, ನೆರಳುಣಿಸುವಿಕೆ ಆದಾಗ ಮನಸ್ಸಿಗೇನೋ ನೆಮ್ಮದಿ, ಸಾರ್ಥಕ್ಯ ಭಾವನೆ. ಬಸಳೆ, ತೊಂಡೆ, ಅವರೆ, ಬಾಳೆ ಇವುಗಳಿಗೆ ಹಾಳಾಗಿ ಹರಿದು ಹೋಗುವ ನೀರನ್ನು ಉಣಿಸಬಹುದಲ್ಲವೇ? ಪರಿಸರ ಸಹ ಸ್ವಚ್ಛವಾಗಬಹುದು. ಉದುರಿದ ಎಲೆಗಳು, ಹೂವು ಸಹ ಒಂದು ರೀತಿಯಲ್ಲಿ ಗೊಬ್ಬರವಾಗಬಹುದು. ಹಸಿರು ಬೆಳೆಸೋಣ, ಪರಿಸರ ಸುಂದರವಾಗಿಸೋಣ, ಉಸಿರಿಗೆ ಮೂಲವಾಗಿಸೋಣ, ಆರೋಗ್ಯ ವೃದ್ಧಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ