ಬಾಳಿಗೊಂದು ಚಿಂತನೆ - 94

ಬಾಳಿಗೊಂದು ಚಿಂತನೆ - 94

*ಈಶಾವಾಸ್ಯಂಮಿದಂ ಸರ್ವಂ* *ಯತ್ಕಿಂಚ ಜಗತ್ಯಾಂ ಜಗತ್/*

*ತೇನ ತ್ಯಕ್ತೇನ ಭುಂಜೀಥಾ ಮಾ* *ಗೃಧಃ ಕಸ್ಯಸ್ವಿದ್ಧನಮ್//*

ಪರಿವರ್ತನ ಶೀಲವಾದ ಎಲ್ಲ ವೂ ಆ ಪರಮೇಶ್ವರನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ಆದರೆ ನಾವು ಮಾತ್ರ ಅದು ನನ್ನದು ಇದು ನನ್ನದು ಎಂದು ಹೇಳಿಕೊಂಡು ಬೀಗುತ್ತೇವೆ. ನಮಗೇನು ದಕ್ಕಿದೆಯೋ ಅದನ್ನೇ ಅನುಭವಿಸೋಣ. ಮೋಹರಹಿತ ಜೀವನ ಸುಖಕ್ಕೆ ರಹದಾರಿ. ನಾವು ಏನು ಕಷ್ಟಪಟ್ಟು ಸಂಪಾದಿಸುತ್ತೇವೆಯೋ ಅಥವಾ ಹಿರಿಯರಿಂದ ಬಂದಿರುವುದೋ ಆ ಗಳಿಕೆಯಲ್ಲಿ ಕಿಂಚಿತ್ ನೋಡಿಕೊಂಡು ನೀಡೋಣ. ಉಳ್ಳವನಿಗೆ ಮತ್ತೂ ಕೊಡಬಾರದು. ಹೊಟ್ಟೆ ತುಂಬಿದವನಿಗೆ ಅನ್ನದ ಅವಶ್ಯಕತೆಯಿಲ್ಲ. ತ್ಯಾಗದ ಬದುಕು ಸ್ವಲ್ಪ ಮಟ್ಟಿಗಾದರೂ ಇರಲಿ. ಬೇರೆಯವರ ಸಂಪತ್ತು ತೃಣಕ್ಕೆ ಸಮ. ನಮಗೆ ಬೇಡ. ಎಲ್ಲವೂ ಶಿವನಿಗೆ ಅರ್ಪಿತ ಎಂಬ ಮನೋಭಾವ ಯಾವಾಗ ನಮ್ಮಲ್ಲಿ ಬರುವುದೋ ಆಗ ನಾವು ಮನುಷ್ಯರಾಗಲು ಯೋಗ್ಯರು. ನನ್ನದೇ ಎಲ್ಲಾ ಎಂದು ಹೇಳಿದಲ್ಲಿಗೆ ನನ್ನತನ ನಾಶವಾಯಿತು. ಯಾರೂ ನಮ್ಮನ್ನು ಆದರಿಸುವವರು ಇಲ್ಲ. ನಾವು ಸಮಾಜದಲ್ಲಿ ಒಂಟಿ ಪಿಶಾಚಿಗಳಾಗಬೇಕಾಗಬಹುದು. ದೇವನಿತ್ತ ಪವಿತ್ರ ಮನುಷ್ಯ ಜನ್ಮವನ್ನು ನಾಲ್ಕು ಜನರೊಂದಿಗೆ ಬೆರೆತು ಬಾಳಿ ಬದುಕಿ ಸಾರ್ಥಕ ಪಡಿಸಿಕೊಳ್ಳೋಣ.

-ರತ್ನಾ ಭಟ್ ತಲಂಜೇರಿ 

ಶ್ಲೋಕ : ಸರಳ ಸುಭಾಷಿತ ಸಂಗ್ರಹ