ಬಾಳಿಗೊಂದು ಚಿಂತನೆ - 98

ಬಾಳಿಗೊಂದು ಚಿಂತನೆ - 98

ಕೊಟ್ಟು ಉಣ್ಣುವುದರಲ್ಲಿ ಏನೋ ಒಂದು ರೀತಿಯ ತೃಪ್ತಿ ಇರುತ್ತದೆ. ನಾವು ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಖಾದ್ಯಗಳನ್ನು ತಯಾರಿಸುತ್ತೇವೆ. ಆಗ ನಮ್ಮ ಮನಸ್ಸಿನಲ್ಲಿ ಇದನ್ನು ಹೊರಗಿನ ಒಬ್ಬರಿಗಾದರೂ ಕೊಟ್ಟು ಉಣ್ಣ ಬೇಕೆಂಬ ಆಸೆ ಮೂಡುವುದು ಸಹಜ. ಅಕ್ಕಪಕ್ಕದ ಮನೆಗಳಿಗೆ ನೀಡಿ ಸಂತೋಷಪಡುತ್ತೇವೆ. ನಮ್ಮ ಹಿರಿಯರಿಂದ ಬಂದ ಸಂಸ್ಕಾರವೇ ಇದು, ದಾನಧರ್ಮ ಎಂಬುದು. ದಾನ ಮಾಡು ಮಾತ್ರ ಸತ್ಪಾತ್ರರಿಗೆ ಮಾಡಬೇಕೆಂಬ ಬುದ್ಧಿ ಕೆಲವು ಜನ ಕೈಕೊಟ್ಟದ್ದರಲ್ಲಿ ಅರಿವಿಗೆ ಬಂದಿದೆ.

ನಮ್ಮ ಕೈಯಿಂದ ತೆಗೆದುಕೊಳ್ಳುವಾಗ ಇದ್ದ ಆಸಕ್ತಿ ಹಿಂದಿರುಗಿಸುವುದರಲ್ಲಿ ಇರುವುದಿಲ್ಲ. ಅತ್ಯಂತ ಪ್ರಕಾಶಿಸುವ ನಮ್ಮ ಗುಣವೆಂದರೆ ವಿನಯ, ವಿಧೇಯತೆ, ಇತರರಿಗೆ ಕೇಡು ಮಾಡದಿರುವುದು, ದಾನಮಾಡುವುದು.ನಮಗೆ ಇದ್ದುದರಲ್ಲಿ ಸ್ವಲ್ಪಾಂಶವನ್ನು ದಾನಕ್ಕೆ ಬಳಸುವುದು. ಎಲ್ಲಾ ದಾನಕ್ಕೆ ಹೋದರೆ ಅವರವರ ಬದುಕು ನಡೆಯಬೇಕಲ್ಲ? ದಾನ ಮತ್ತು ಜ್ಞಾನ ಒಂದೆಡೆ ಸೇರಿದರೆ ಹೊನ್ನಿಗೆ ಪರಿಮಳ ಬಂದಂತೆ ತಿಳಿದವರ ನುಡಿ.

ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ/

ತ್ಯಾಗಸಹಿತಂ ಚ ವಿತ್ತಂ ದುರ್ಲಭಮೇತಚ್ಚತುಷ್ಟಯಂ ಲೋಕೇ//

ಈ ಪ್ರಪಂಚದಲ್ಲಿ ಇವು ನಾಲ್ಕು ಗುಣಗಳು ಒಟ್ಟಾಗಲು ಬಹಳ ಕಷ್ಟವಿದೆ. ಪ್ರೀತಿಯಿಂದ ಮನಸಿಟ್ಟು ಮಾಡುವ ದಾನ ಒಳ್ಳೆಯ ಮಾತುಗಳಿಂದ ನೀಡುವ ದಾನ. ಅಹಂಕಾರವಿಲ್ಲದ ಜ್ಞಾನ, ನಾನೇ ಕಲಿತವ, ನನಗೆಲ್ಲ ಗೊತ್ತಿದೆ ಎನ್ನುವ ಹಮ್ಮು ಜ್ಞಾನವನ್ನು, ಒಳ್ಳೆಯತನವನ್ನು ನೆಲಕಚ್ಚಿಸಿ ಬಿಡುತ್ತದೆ. ಕ್ಷಮಾಗುಣದೊಂದಿಗಿನ ಶೌರ್ಯ, ತ್ಯಾಗ ಗುಣದ ಐಶ್ವರ್ಯ.

ಬೇರೆಯವರ ಮೇಲೆ ಕಿಡಿ ಕಾರುವುದು ಅಷ್ಟು ಒಳ್ಳೆಯದಲ್ಲ. ಏನು ತಪ್ಪೆಸಗಿದ್ದಾನೆ ನೋಡಿಕೊಂಡು ಕ್ಷಮಿಸುವುದು ಉತ್ತಮ. ನಮ್ಮ ಹತ್ತಿರ ಇರುವುದರಲ್ಲಿಯೇ ಒಂದಂಶವನ್ನು ಇಲ್ಲದವರಿಗೆ ನೀಡಿ ಸಂತೋಷಪಡೋಣ. ಅದರಲ್ಲಿ ತೃಪ್ತಿ ಸಹ ಇದೆ. ಒಟ್ಟಿನಲ್ಲಿ ಇರುವಷ್ಟು ದಿನ ನೆಮ್ಮದಿಯ ಬದುಕು, ಅದಕ್ಕೆ ಬೇಕಾದ ದಾರಿಗಳನ್ನು ನಾವೇ ಕಂಡು ಹುಡುಕಿ ಜೀವಿಸೋಣ.

ಶ್ಲೋಕ: ಹಿತೋಪದೇಶ

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ