ಬಾಳಿಗೊಂದು ಚಿಂತನೆ - 99

ಬಾಳಿಗೊಂದು ಚಿಂತನೆ - 99

ಮನಸ್ಸಿದ್ದರೆ ಮಾರ್ಗವಿದೆ. ಮನಸ್ಸೇ ಸರಿಯಾಗಿಲ್ಲದಿದ್ದರೆ ಎಲ್ಲವೂ ಅಯೋಮಯ. ಅತ್ತಿತ್ತ ವಾಲುವ ಮನಸ್ಸಿಗೆ ಹಿಡಿತ ಬೇಕು. ಯೋಗ, ಧ್ಯಾನ, ಪುಸ್ತಕಗಳ ಓದುವಿಕೆ, ಸ್ನೇಹಿತರ ಜೊತೆ ಮಾತುಕತೆ, ಹಸಿರು ಸಸ್ಯಗಳ ಒಡನಾಟ, ಸಂಗೀತ ಮುಂತಾದ ಲಲಿತಕಲೆಗಳ ಆಸ್ವಾದನೆ ಈ ಎಲ್ಲದರಿಂದ ಓಡುವ ಮನಸ್ಸನ್ನು ಕಟ್ಟಿಹಾಕಬಹುದು.

*ಮನೋ ದಾವತಿ ಸರ್ವತ್ರ* *ಮದೋನ್ಮತ್ತ ಗಜೇಂದ್ರವತ್*

*ಜಾನಾಂಕುಶಸಮಾ ಬುದ್ಧಿಸ್ತಸ್ಯ* *ನಿಶ್ಚಲತೇ ಮನಃ||*

ನಮ್ಮ  ಮನಸ್ಸು ಯಾವಾಗಲೂ ಮದವೇರಿದ ಆನೆಯಂತೆ ಇರುವುದು. ಚಂಚಲತೆ ಎದ್ದು ಕಾಣುವುದು. ಎಲ್ಲಿ ಹೋಗಬೇಕು, ಏನು ಮಾಡಬೇಕು ಯೋಚಿಸುವ ತಾಳ್ಮೆ ಇರುವುದಿಲ್ಲ. ಆನೆ ನಡೆದದ್ದೇ ದಾರಿಯಾಗಬಹುದು. ಎದ್ದರೆ ಬದುಕು ಮತ್ತು ಜೀವನ, ಬಿದ್ದರೆ ಗುಂಡಿಗೆ, ಯಾವುದೂ ಇಲ್ಲ. ಯೋಚನೆ ಮತ್ತು ಯೋಜನೆ ಈ ಸಮಯದಲ್ಲಿ ಅಗತ್ಯ. ಜ್ಞಾನವೆಂಬ ಅಂಕುಶ ಯಾರ ಬಳಿ ಇರುವುದೋ ಅವರ ಮನಸ್ಸು ಮಾತ್ರ ಸ್ಥಿರವಾಗಿರುವುದು. ಅಂಕುಶವಿದ್ದಾಗ ಆನೆಯನ್ನು ತಹಬದಿಗೆ ತರಬಹುದು. ಹಾಗೆಯೇ ವಿವೇಚನೆಯೆಂಬ ಅಂಕುಶವ ಅಸ್ತ್ರವಾಗಿಸಿ, ಮನಸ್ಸೆಂಬ ಮರ್ಕಟವ ಹಿಡಿತದಲ್ಲಿಟ್ಟು ವ್ಯವಹರಿಸೋಣ. ನಮ್ಮ ಜೀವನವನ್ನು ನಾವೇ ಗೋಜಲು ಮಾಡಿಕೊಳ್ಳುವುದು ಬೇಡ. ಸಂಯಮ, ಶಾಂತಿ, ಸ್ಥಿರತೆಯಿಂದ ಬಾಳೋಣ.

ಶ್ಲೋಕ: ಸುಭಾಷಿತಸಾರ

-ರತ್ನಾ ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ