ಬಾಳಿನ ಇಳಿಸಂಜೆಯ ಹೊತ್ತಿನಲ್ಲಿ…
ಚೆನ್ನಾಗಿ ಬಾಳಿ ಬದುಕಿದ ಎಲ್ಲರಿಗೂ ವೃದ್ಯಾಪ್ಯ ಬಂದೇ ಬರುತ್ತದೆ. ‘ಅರವತ್ತಕ್ಕೆ ಅರಳು ಮರಳು’ ಎಂಬ ಗಾದೆ ಮಾತು ಸುಳ್ಳಲ್ಲ. ನಮ್ಮ ಹಿಂದಿನವರು ಒತ್ತಡ ರಹಿತ ಬದುಕು, ರಾಸಾಯನಿಕ ಮುಕ್ತ ಆಹಾರ, ಶಿಸ್ತುಬದ್ಧ ಜೀವನವನ್ನು ಸಾಗಿಸುತ್ತಾ ಬಂದು ತಮ್ಮ ಇಳಿವಯಸ್ಸಿನಲ್ಲೂ ಉತ್ತಮವಾದ ಬದುಕನ್ನು ಕಂಡುಕೊಂಡರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಧಾವಂತದ, ಒತ್ತಡ ಭರಿತ, ರಾಸಾಯನಿಕ ಆಹಾರಗಳನ್ನು ಸೇವಿಸಿ ನಮ್ಮ ಬದುಕು ವೈದ್ಯರು ನೀಡುವ ಮಾತ್ರೆಯ ಮೇಲೆ ಅವಲಂಬಿತವಾಗಿದೆ. ವಯಸ್ಸಾದ ಮೇಲೆ ಬದುಕಿರಬಾರದು ಎನ್ನುವುದು ಬಹಳಷ್ಟು ವೃದ್ಧರ ಮಾತು. ಚೆನ್ನಾಗಿ ಕಲಿತ ಮಕ್ಕಳು ತಮ್ಮ ಬದುಕನ್ನು ಪರಊರಿನಲ್ಲಿ, ವಿದೇಶಗಳಲ್ಲಿ ಕಂಡುಕೊಂಡರು. ಊರಿನ ಮನೆಯಲ್ಲಿ ಮುದುಕರು ಮಾತ್ರ ಉಳಿದುಕೊಂಡರು. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಯಿತು. ಪ್ರೀತಿ-ಪ್ರೇಮ-ವಾತ್ಸಲ್ಯ ತೋರಿಸುವ ಸಂತಾನಗಳ ಸಂಖ್ಯೆ ಕಡಿಮೆ ಆಯಿತು.
ವಯಸ್ಸಾದ ಬಳಿಕ ಬದುಕನ್ನು ಅಂದಿನ ಕಾಲಕ್ಕನುಗುಣವಾಗಿ ರೂಪಿಸಿಕೊಳ್ಳುವುದು ಅಗತ್ಯ. ಪ್ರತಿಯೊಂದು ಹೆಜ್ಜೆಯಲ್ಲಿ ಜಾಗರೂಕತೆ, ತಿನ್ನುವ ಆಹಾರದಲ್ಲಿ ನಿಯಂತ್ರಣದಂತದ ಸ್ವ ಬಂಧನವನ್ನು ವಯಸ್ಸಾದವರು ಹಾಕಿಕೊಳ್ಳಲೇಬೇಕಾಗಿದೆ. ಜಾರಿ ಬಿದ್ದು ಏಟಾದರೆ ನೋಡಿಕೊಳ್ಳುವವರು ಯಾರು? ಹೊಟ್ಟೆ ಕೆಟ್ಟು ಅಸ್ವಸ್ಥರಾದರೆ ಆಸ್ಪತ್ರೆಯಲ್ಲಿ ನಿಲ್ಲುವವರು ಯಾರು ಎಂಬೆಲ್ಲಾ ಸಮಸ್ಯೆಗಳ ನಡುವೆ ಬದುಕು ರೂಪಿಸಿಕೊಳ್ಳಬೇಕಾಗಿದೆ. ಇಲ್ಲಿ ಕೆಲವೊಂದು ಚುಟುಕು ಮಾಹಿತಿಗಳನ್ನು ಸಂಗ್ರಹಿಸಿ ನೀಡಲಾಗಿದೆ. ಈಗ ವಯಸ್ಸಾಗಿರುವವರ ಜೊತೆಗೆ ಮುಂದಕ್ಕೆ ವಯಸ್ಸಾಗುವವರೂ ಓದಬೇಕು !
* ಸ್ನಾನ ಮಾಡುವಾಗ ಸುಮ್ಮನೇ ಬಾಗಿಲು ಹಾಕಿ. ಚಿಲಕ ಹಾಕಲು ಹೋಗಬೇಡಿ. ಸ್ಟೂಲು ಅಥವಾ ಕುರ್ಚಿ ಮೇಲೆ ಕುಳಿತುಕೊಂಡು ಸ್ನಾನ ಮಾಡಿ. ನಿಂತು ಸ್ನಾನ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಸಾಬೂನು ಬಳಸುವಾಗ ಜಾರಿ ಕೆಳಗೆ ಬೀಳದಂತೆ ಹಾಗೂ ಅದರ ನೊರೆಯಿಂದ ನಿಮ್ಮ ಕಾಲು ಜಾರದಂತೆ ಎಚ್ಚರ ವಹಿಸಿ.
* ಶೌಚಕ್ಕೆ ಕಮೋಡ್ ಬಳಕೆ ಮಾಡುವಾಗ ಅದರ ಮೇಲೆ ಕುಳಿತುಕೊಂಡು ಏಳುವುದಕ್ಕೆ ಅದರ ಬಳಿಯಲ್ಲಿ ಒಂದು ಸಪೋರ್ಟ್ ರಾಡ್ ಹಾಕಿಸಿಕೊಳ್ಳುವುದು ಉತ್ತಮ. ಆ ರಾಡ್ ಬಲವಾಗಿದ್ದು, ನಿಮ್ಮ ಭಾರ ತಡೆದುಕೊಳ್ಳುವಂತಿರಲಿ.
* ವಯಸ್ಸಾದ ಹೆಂಗಸರಾಗಲಿ, ಗಂಡಸರಾಗಲಿ ಪ್ಯಾಂಟ್ ಅಥವಾ ಪೈಜಾಮಾ ಅನ್ನು ಹಾಕಿಕೊಳ್ಳುವಾಗ ಕುರ್ಚಿ ಮೇಲೆ ಅಥವಾ ಮಂಚದ ಮೇಲೆ ಕುಳಿತುಕೊಂಡೇ ಹಾಕಿ. ನಿಂತುಕೊಂಡು ಹಾಕಲು ಹೋದರೆ ನೀವು ನಿಯಂತ್ರಣ ತಪ್ಪಿ ಜೋಲಿಯಾಗಿ ಬೀಳುವ ಸಾಧ್ಯತೆ ಇದೆ.
* ನಿದ್ರೆ ಮಾಡಿ ಏಳುವಾಗ ಒಮ್ಮೆಲೇ ಎದ್ದು ನಿಂತುಕೊಳ್ಳಬೇಡಿ. ಹಾಸಿಗೆಯಲ್ಲೇ ಮೂವತ್ತು ಸೆಕೆಂಡುಗಳ ಕಾಲ ಕುಳಿತು ನಂತರ ಎದ್ದು ಓಡಾಡಿ. ಮುಖ್ಯವಾಗಿ ರಾತ್ರಿ ಹೊತ್ತು ಏಳುವವರು ಹೀಗೆ ಮಾಡುವುದು ಅವಶ್ಯಕ.
* ನೆಲ ಒರಸುತ್ತಿರುವಾಗ ಎದ್ದು ಓಡಾಡಬೇಡಿ. ನಿಮ್ಮ ಕಾಲು ನೆಲದಲ್ಲಿರುವ ನೀರ ಮೇಲೆ ಜಾರಬಹುದು. ನೀರು ಸಂಪೂರ್ಣ ಒಣಗಿದ ಬಳಿಕವೇ ಓಡಾಡಿ. ವಾಕಿಂಗ್ ಸ್ಟಿಕ್ ಬಳಸಿದರೆ ಅತೀ ಉತ್ತಮ. ಇದರಲ್ಲಿ ನಾಚಿಕೆ ಪಡುವ ಅವಶ್ಯಕತೆ ಇಲ್ಲ.
* ಕುರ್ಚಿ, ಬೆಂಚು, ಸ್ಟೂಲು ಮೊದಲಾದುವುಗಳ ಮೇಲೆ ನಿಂತು ಯಾವುದೇ ಕೆಲಸ (ಕಪಾಟು ಮೇಲಿನಿಂದ ವಸ್ತುಗಳನ್ನು ಕೆಳಗಿಳಿಸುವುದು, ಫ್ಯಾನ್ ಒರೆಸುವುದು ಇತ್ಯಾದಿ) ಗಳನ್ನು ಮಾಡಲು ಹೋಗಲೇ ಬೇಡಿ. ಕಾಲು ಜಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
* ನೀವು ವಾಹನಗಳನ್ನು ಚಲಾಯಿಸಲು ಶಕ್ತರೇ ಆಗಿದ್ದರೂ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವಾಗ ಡ್ರೈವರ್ ಅಥವಾ ನಿಮ್ಮ ಸಂಗಾತಿಯನ್ನು ಜೊತೆಯಲ್ಲಿ ಕರೆದೊಯ್ಯಿರಿ. ಒಬ್ಬರೇ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ಬಿಟ್ಟುಬಿಡಿ.
* ಯಾವುದೇ ಮದ್ದು ತೆಗೆದುಕೊಳ್ಳುವುದಾದರೂ ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಮುಂದುವರೆಯಿರಿ. ಮಾತ್ರೆಯ ಅಡ್ಡ ಪರಿಣಾಮಗಳನ್ನು ನಿಮ್ಮ ವಯಸ್ಸಾದ ದೇಹ ಸಹಿಸಲಾರದು.
* ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವಂತಹ ಕೆಲಸವನ್ನು ಮಾತ್ರ ಮಾಡಿ. ನಿಯಮಿತವಾಗಿ ವಾಕ್ ಮಾಡಿ. ಬೇರೆಯವರು ಹೇಳುತ್ತಾರೆ ಎಂದು ನಿಮ್ಮಿಂದ ಆಗದ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಲು ಹೋಗಬೇಡಿ.
* ಮನೆಯಿಂದ ಹೊರಗಡೆ ಬ್ಯಾಂಕ್, ಅಂಚೆ ಕಚೇರಿ, ಶಾಪಿಂಗ್ ಮೊದಲಾದ ಕಡೆ ಹೋಗುವಾಗ ಪರಿಚಯದ ಅಥವಾ ಸಂಬಂಧಿಕರು ಹೀಗೆ ಯಾರನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋಗಿ. ಇವರು ನಿಮಗೆ ಜೊತೆಗಾರರಾಗಿಯೂ, ನಿಮ್ಮ ಕಷ್ಟ ಕಾಲದಲ್ಲಿ ಆಪದ್ಭಾಂಧವರಾಗಿಯೂ ಸಹಕರಿಸುತ್ತಾರೆ.
* ಮನೆಯಲ್ಲಿ ಒಬ್ಬರೇ ಇರುವಾಗ ಅಪರಿಚಿತರನ್ನು ಒಳಗೆ ಸೇರಿಸಿಕೊಳ್ಳಬೇಡಿ. ವೃದ್ಧರನ್ನು ಗುರಿಯಾಗಿಸಿಕೊಂಡೇ ದರೋಡೆ, ಕೊಲೆ ಮಾಡುವ ಹಲವು ವ್ಯಕ್ತಿಗಳು ಇದ್ದಾರೆ.
* ಮನೆಯ ಮುಖ್ಯ ಬಾಗಿಲಿನ ಕೀಲಿ ಕೈಯ ನಕಲಿ ಕೀ ಅನ್ನು ಮಾಡಿಸಿಡಿ. ಅದನ್ನು ನಿಮ್ಮ ಪತ್ನಿಯ ಬಳಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ಕೈಯಲ್ಲಿ ಕೊಟ್ಟು ಕಾಪಿಡುವಂತೆ ತಿಳಿಸಿ. ಇದರಿಂದ ನಿಮ್ಮ ಹತ್ತಿರ ಇರುವ ಕೀ ಕಳೆದುಹೋದರೆ ಅಥವಾ ಮರೆತು ಅಟೋಮ್ಯಾಟಿಕ್ ಬಾಗಿಲು ಲಾಕ್ ಆದರೆ ಸಹಾಯವಾಗುತ್ತದೆ.
* ನಿಮ್ಮ ಬೆಡ್ ರೂಂ ನಲ್ಲಿ ಒಂದು ಕಾಲ್ ಬೆಲ್ ಅಳವಡಿಸಿ. ಅದನ್ನು ಅದುಮಿದರೆ ಅದರ ಶಬ್ಧ ಎಲ್ಲರಿಗೂ ಕೇಳುವಂತಿರಲಿ. ಇದರಿಂದ ತುರ್ತು ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಸ್ಥಿರ ದೂರವಾಣಿಯನ್ನೂ ಬೆಡ್ ರೂಂ ಮಂಚದ ಬಳಿ ಇರಿಸಿಕೊಂಡರೆ ಪ್ರಯೋಜನವಿದೆ.
* ವಯಸ್ಸಾದವರ ಬಳಿ ಉಡಾಫೆಯಾಗಿ ಮಾತನಾಡುವವರೇ ಅಧಿಕ ಮಂದಿ. ನೀವು ಯಾವುದಾರೂ ಕಚೇರಿ ಅಥವಾ ಶಾಪಿಂಗ್ ಮಾಲ್ ಗಳಿಗೆ ಹೋದಾಗ ಇಂತಹ ಉಡಾಫೆ ವ್ಯಕ್ತಿಗಳು ಸಿಕ್ಕರೆ ತಾಳ್ಮೆ ಕಳೆದುಕೊಳ್ಳಬೇಡಿ. ಅವರ ಮಾತಿಗೆ ಪ್ರತಿಯಾಡಬೇಡಿ. ಏಕೆಂದರೆ ಕೆಸರಿಗೆ ಕಲ್ಲು ಬಿಸಾಕಿದರೆ ಅದರಿಂದ ನಮ್ಮ ಮುಖವೇ ಹಾಳಾಗುತ್ತದೆ.
* ನಿಮ್ಮ ಹಿಂದಿನ ಸಮಯದ ಬಗ್ಗೆ ಯೋಚಿಸಿ ಕೊರಗಬೇಡಿ, ಮುಂದೇನಾಗುವುದೋ ಎಂದು ಹಲುಬಬೇಡಿ. ವರ್ತಮಾನದ ತುರ್ತು ಏನಿದೆ? ಆ ಬಗ್ಗೆ ಯೋಚನೆ ಮಾಡಿ ಮುಂದುವರೆಯಿರಿ.
* ನಿಮ್ಮ ವಯೋಮಾನದ ಸ್ನೇಹಿತರ ಬಳಗ ಮಾಡಿ, ಸಾಯಂಕಾಲದ ಹೊತ್ತಿಗೆ ಹತ್ತಿರದ ಉದ್ಯಾನವನದಲ್ಲೋ, ಹರಟೆ ಕಟ್ಟೆಯಲ್ಲೋ ಸೇರಿ ಮಾತುಕತೆ ನಡೆಸಿ. ವೃಥಾ ಅನ್ಯರ ಬಗ್ಗೆ ದೂರಲು ಹೋಗಬೇಡಿ. ನಗೆ ಉಕ್ಕಿಸುವ ನಗೆಹನಿಗಳು, ಉತ್ತಮ ಉದಾತ್ತ ಚಿಂತನೆಗಳ ಬಗ್ಗೆ ವಿಮರ್ಶೆ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಿ. ಕೇರಂ, ಚೆಸ್, ಲೂಡೋ ಅಂತಹ ಮನಸ್ಸಿಗೆ ಮುದ ನೀಡುವ ಆಟಗಳನ್ನು ಆಡಿ.
* ಯಾವುದೋ ಕಪಟ ಜ್ಯೋತಿಷಿ, ತಂತ್ರ ಮಂತ್ರ, ಶಾಸ್ತ್ರಗಳ ಹಿಂದೆ ಹೋಗದೇ ವರ್ತಮಾನವನ್ನು ಆನಂದಿಸಲು ಪ್ರಾರಂಭಿಸಿ.
* ರಸ್ತೆಯಲ್ಲಿ ನಡೆದಾಡುವಾಗ ಎಚ್ಚರ ವಹಿಸಿ. ರಸ್ತೆ ಗುಂಡಿಗಳು ಮತ್ತು ಮಳೆಗಾಲದಲ್ಲಿ ನಿಂತ ನೀರಿನ ಬಗ್ಗೆ ಎಚ್ಚರವಿರಲಿ. ಪಾದಚಾರಿಗಳ ಮಾರ್ಗದಲ್ಲೇ (ಫುಟ್ ಪಾತ್) ನಡೆದಾಡಿ. ಹೊರಗಡೆಯ ತಿಂಡಿ ತಿನಸನ್ನು ತಿನ್ನಲು ಹೋಗಬೇಡಿ. ವಯಸ್ಸಾದ ಬಳಿಕ ನಿಮ್ಮ ಜೀರ್ಣಶಕ್ತಿ ತುಂಬಾ ಕಡಿಮೆಯಾಗುತ್ತದೆ. ಅಪರಿಚಿತ ವ್ಯಕ್ತಿ ತಿನ್ನಲು ಕೊಟ್ಟರೆ ಅದನ್ನು ಖಂಡಿತವಾಗಿಯೂ ಮುಟ್ಟಲು ಹೋಗಬೇಡಿ, ತಿನ್ನಲೂ ಬೇಡಿ.
* ಹೊರ ಹೋಗುವಾಗ ನಿಮ್ಮ ಮನೆಯ ವಿಳಾಸ, ಮನೆಯವರ ದೂರವಾಣಿ ಸಂಖ್ಯೆ, ಆತ್ಮೀಯ ಗೆಳೆಯರ ದೂರವಾಣಿ ಸಂಖ್ಯೆಯನ್ನು ಒಂದು ಚೀಟಿಯಲ್ಲಿ ಬರೆದು ಜೇಬಿನಲ್ಲಿರಿಸಿ. ಆಪತ್ಕಾಲದಲ್ಲಿ ಇದು ಸಹಕಾರಿಯಾಗುತ್ತದೆ.
* ನಿಮ್ಮ ಮನೆಯಲ್ಲಿನ ಪುಟ್ಟ ಮೊಮ್ಮಕ್ಕಳ ಬಳಿ ಬಿಗುಮಾನದಿಂದ ಕಠಿಣವಾಗಿ ವರ್ತಿಸಬೇಡಿ. ಈಗಿನ ಮಕ್ಕಳು ಅದನ್ನು ಬಯಸುವುದಿಲ್ಲ. ಅವರನ್ನು ಪ್ರೀತಿಯಿಂದ ಮಾತನಾಡಿ. ಸಾಧ್ಯವಾದರೆ ಅವರಿಗೆ ಉತ್ತಮ ನೀತಿ ಕಥೆಗಳನ್ನು ಹೇಳಿ. ಹಲವಾರು ಮಕ್ಕಳು ಅಜ್ಜ ಅಜ್ಜಿ ಹೇಳುವ ಕಥೆಗೆ ಮಾರು ಹೋಗುತ್ತಾರೆ. ಚೆನ್ನಾಗಿ ನಿದ್ರೆಯನ್ನೂ ಮಾಡುತ್ತಾರೆ. !
* ಬಸ್ಸು ಅಥವಾ ರೈಲು ಪ್ರಯಾಣ ಮಾಡುವ ಅನಿವಾರ್ಯತೆ ಎದುರಾದರೆ ನಿಮ್ಮ ಲಗೇಜು ಆದಷ್ಟು ಕಡಿಮೆಯಾಗಿರಲಿ. ಏಕೆಂದರೆ ತುಂಬಾ ಲಗೇಜು ನಿಮ್ಮ ಜೊತೆಗಿದ್ದರೆ ತುರ್ತು ಸಂದರ್ಭಗಳಲ್ಲಿ ಅದೇ ನಿಮಗೆ ದೊಡ್ದ ಹೊರೆಯಾಗುತ್ತದೆ.
* ನಿಮ್ಮ ಬ್ಯಾಂಕ್, ಪಾಸ್ ಬುಕ್, ಎಟಿಎಂ ಕಾರ್ಡ್, ಗುಪ್ತ ಸಂಖ್ಯೆ ಮೊದಲಾದ ವಿವರಗಳನ್ನು ಯಾರ ಬಳಿಯಲ್ಲೂ ಹೇಳಿಕೊಳ್ಳಬೇಡಿ ಮತ್ತು ಬರೆದು ಇಡಲೂ ಬೇಡಿ.
* ನೀವು ಹೊರ ಹೋಗುವಾಗ ಒಂದು ಪುಟ್ಟ ಪುಸ್ತಕ, ಬರೆಯಲು ಪೆನ್, ಮೊಬೈಲ್, ಕೈವಸ್ತ್ರ ಮೊದಲಾದುವುಗಳನ್ನು ಒಂದು ಪುಟ್ಟ ಕೈಚೀಲದಲ್ಲಿ ತೆಗೆದುಕೊಂಡು ಹೋಗಿ.
* ಹಣವನ್ನು ತೆಗೆದುಕೊಂಡು ಹೋಗುವಿರಾದರೆ ಒಂದೇ ಜೀಬಿನಲ್ಲಿ ಇರಿಸಿಕೊಳ್ಳುವ ಬದಲಾಗಿ ಬೇರೆ ಬೇರೆ ಜೇಬಿನಲ್ಲಿ ಹಂಚಿ ಇಡಿ. ಇದರಿಂದ ಒಂದು ಜೇಬಿನ ಹಣ ಕಳವಾದರೆ ಅಥವಾ ಬಿದ್ದು ಹೋದರೆ ಮತ್ತೊಂದು ಜೇಬಿನ ಹಣ ಉಪಯೋಗಕ್ಕೆ ಬರುತ್ತದೆ.
* ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಗಾಬರಿಗೊಳಪಡಬೇಡಿ. ನಾನಿನ್ನೂ ಸಶಕ್ತ ಈ ಸಮಸ್ಯೆಯನ್ನು ಎದುರಿಸಬಲ್ಲೆ ಎಂಬ ಮನಸ್ಥಿತಿಯನ್ನು ಮೂಡಿಸಿಕೊಂಡು ಬದುಕಲು ಕಲಿಯಿರಿ.
ಈ ಮೇಲಿನವು ಕೆಲವು ಪುಟ್ಟ ಉಪಯುಕ್ತ ಸಲಹೆಗಳು ಮಾತ್ರ. ಹಿರಿಯರು ಇದನ್ನು ಗಮನದಲ್ಲಿಟ್ಟುಕೊಂಡರೆ ಬದುಕು ಇನ್ನಷ್ಟು ಸುಂದರವಾಗುತ್ತದೆ. ಆ ಹಿರಿಯರ ಮಕ್ಕಳು ಇದನ್ನು ಗಮನದಲ್ಲಿಟ್ಟುಕೊಂಡು ಸದಾ ತಮ್ಮ ಹೆತ್ತವರ ಬಗ್ಗೆ ಖುದ್ದಾಗಿ ಕಾಳಜಿ ತೆಗೆದುಕೊಳ್ಳುತ್ತಿದ್ದರೆ ಅದಕ್ಕಿಂತ ಉತ್ತಮ ಸೇವೆ ಬೇರೆ ಯಾವುದೂ ಇಲ್ಲ.
ಚಿತ್ರ ಕೃಪೆ: ಅಂತರ್ಜಾಲ ತಾಣ