ಬಾಳೆದಿಂಡಿನ ತವಾ ಫ್ರೈ

ಬಾಳೆದಿಂಡಿನ ತವಾ ಫ್ರೈ

ಬೇಕಿರುವ ಸಾಮಗ್ರಿ

ಬಾಳೆಯ ದಿಂಡು (೧೦-೧೫ ವೃತ್ತಾಕಾರದ ತುಂಡುಗಳಾಗುವಷ್ಟು), ಮೊಸರು ೧೦ ಚಮಚ, ಅರಸಿನ ಹುಡಿ ಕಾಲು ಚಮಚ, ಕೊತ್ತಂಬರಿ ಹುಡಿ ಅರ್ಧ ಚಮಚ, ಜೀರಿಗೆ ಹುಡಿ ೧ ಚಮಚ, ಗರಂ ಮಸಾಲ ಹುಡಿ ೧ ೧/೨ ಚಮಚ, ಮೆಣಸಿನ ಹುಡಿ ೩ ಚಮಚ, ಕಡಲೆ ಹಿಟ್ಟು ೧-೨ ಚಮಚ, ಅಕ್ಕಿ ಹಿಟ್ಟು ೨ ಚಮಚ, ರುಚಿಗೆ ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕರಿಯಲು ಎಣ್ಣೆ, ಸ್ವಲ್ಪ ಬಾಂಬೆ ರವಾ.

 

ತಯಾರಿಸುವ ವಿಧಾನ

ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸುಮಾರು ೧೫ ತುಂಡುಗಳು ಸಾಕು. ಬಾಳೆದಿಂಡನ್ನು ಬಟ್ಟೆಗೆ ತಾಗಿಸಬೇಡಿ. ಕಲೆಯಾಗುತ್ತದೆ. ಕತ್ತರಿಸಿಕೊಂಡ ತುಂಡುಗಳನ್ನು ನೀರಿನಿಂದ ಹೊರ ತೆಗೆದು ಒಂದು ಪಾತ್ರೆಗೆ ಹಾಕಿಡಿ. 

ಮತ್ತೊಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಅರಸಿನ ಹುಡಿ, ಗರಂ ಮಸಾಲ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಮೆಣಸಿನ ಹುಡಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು. ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ಬಳಿಕ ಆ ಮಸಾಲೆಗಳ ಮಿಶ್ರಣವನ್ನು ಚೆನ್ನಾಗಿ ಕಲಸಿ. ನಂತರ ಮೊದಲು ಕತ್ತರಿಸಿಟ್ಟ ಬಾಳೆದಿಂಡಿನ ತುಂಡುಗಳನ್ನು ಆ ಮಸಾಲೆಗೆ ಸೇರಿಸಿ, ಚೆನ್ನಾಗಿ ತಾಗುವಂತೆ ಕಲಸಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸೊಪ್ಪನ್ನು ಹಾಕಿ ಕಲಸಿ. ಹದಿನೈದು ನಿಮಿಷ ಹಾಗೇ ತಾಗಲು ಇಟ್ಟುಬಿಡಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿರಿಸಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದ ಬಳಿಕ ಮಸಾಲೆ ಹಚ್ಚಿಟ್ಟ ಬಾಳೆದಿಂಡಿನ ತುಂಡನ್ನು ಬಾಂಬೆ ರವೆಯಲ್ಲಿ ಹೊರಳಾಡಿಸಿ ತವಾ ಫ್ರೈ ಮಾಡಿ. ತುಂಡಿನ ಎರಡೂ ಬದಿಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಎರಡೂ ಬದಿ ಚೆನ್ನಾಗಿ ಕಾದ ಬಳಿಕ ಅದನ್ನು ಒಂದು ತಟ್ಟೆಗೆ ಹಾಕಿ ತಿನ್ನಲು ಕೊಡಿ. ಬಾಳೆದಿಂಡು ಆರೋಗ್ಯಕ್ಕೆ ಬಹಳ ಉತ್ತಮ. ಇದರಿಂದ ಪಲ್ಯ, ಪದಾರ್ಥಗಳನ್ನು ತಯಾರಿಸಬಹುದು. ಅದನ್ನು ಮಕ್ಕಳು ತಿನ್ನದೇ ಇರುವ ಸಾಧ್ಯತೆ ಇರುವುದರಿಂದ ಹೀಗೆ ಗರಿಗರಿಯಾಗಿ ಬಾಳೆದಿಂಡಿನ ಫ್ರೈ ಮಾಡಿಕೊಡುವುದು ಉತ್ತಮ.

-ವಾಣಿಶ್ರೀ ವಿನೋದ್, ಪೇರ್ಲಗುರಿ, ಮಂಗಳೂರು