ಬಾವಲಿ ಗುಹೆ

ಬಾವಲಿ ಗುಹೆ

ಪುಸ್ತಕದ ಲೇಖಕ/ಕವಿಯ ಹೆಸರು
ತಮ್ಮಣ್ಣ ಬೀಗಾರ
ಪ್ರಕಾಶಕರು
ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು-560040
ಪುಸ್ತಕದ ಬೆಲೆ
ಬೆಲೆ: ರೂ. 70.00, ಮುದ್ರಣ: 2018

‘ಬಾವಲಿ ಗುಹೆ' ಮಕ್ಕಳಿಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರದೇ ಆದ ಸರಳ ಭಾಷೆಯಲ್ಲಿ ಹೇಳಿರುವುದು ಗಮನಿಸಬೇಕಾದ ವಿಷಯ. ಇದಲ್ಲದೆ ಚಳುವಳಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಯುವಂತೆ ವಿಷಯಗಳನ್ನು ಪಾತ್ರಗಳ ಮೂಲಕ ಚರ್ಚಿಸಲಾಗಿದೆ,'' ಎನ್ನುವುದು ನನ್ನ ಅನಿಸಿಕೆ. ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಕೃತಿಗೆ ನಾನು ಬರೆದಿರುವ ಅನಿಸಿಕೆ ನಿಮ್ಮ ಓದಿಗಾಗಿ...

ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ (2022) ಪಡೆದ ಅಭಿನವ ಪ್ರಕಟಿತ ಕೃತಿ 'ಬಾವಲಿ ಗುಹೆ' ಮಕ್ಕಳ ಕಾದಂಬರಿಯನ್ನು ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಇದರ ಜೊತೆಗೆ ಮಕ್ಕಳ ಕಥಾ ಸಂಕಲನ 'ಪುಟ್ಟಿಯೂ ಹಾರುತ್ತಿದ್ದಳು' ಮತ್ತು ಮಕ್ಕಳ ಕವಿತೆಗಳ 'ಹಾಡಿನ ಹಕ್ಕಿ' ಪುಸ್ತಕಗಳು ಇದ್ದವು.

ಮಕ್ಕಳ ಸಾಹಿತ್ಯವನ್ನು ಓದುವಾಗ ಆಗುವ ಅನುಭವವೇ ವಿಭಿನ್ನವಾದದ್ದು, ಮಕ್ಕಳಂತೆ ತೆರೆದ ಮನಸ್ಸಿನಿಂದಲೇ ಅವುಗಳನ್ನು ಓದಬೇಕು. ಇಲ್ಲಿ ಇನ್ನಿಲ್ಲದ ಪಾಂಡಿತ್ಯವನ್ನು ಹುಡುಕಲು ಹೋಗಲೆಬಾರದು, ಮಕ್ಕಳ ಮನೋ ವಿಕಸನಕ್ಕೆ ಸಹಾಯಕಾರಿಯಾಗುವಂತೆ ಮಕ್ಕಳ ಸಾಹಿತ್ಯ ಲವಲವಿಕೆಯಿಂದ ಕೂಡಿರಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ (2022) ಪಡೆದ ಕೃತಿ 'ಬಾವಲಿ ಗುಹೆ' ಓದುವಾಗ ಮಿನಿ ಮಕ್ಕಳ ಲೋಕವೇ ತೆರದಂತಾಯಿತು. ಈ ಕೃತಿ ನನಗೆ ಹೆಚ್ಚು ಹತ್ತಿರ ಅನಿಸಿದ್ದು, ಇದರಲ್ಲಿರುವ ಒಂದು ಮುಖ್ಯಪಾತ್ರ ನನ್ನ ಹೆಸರಿನಲ್ಲಿಯೇ ಇರುವುದು. ನಾನು ಕೂಡ ಮಲೆನಾಡಿವನೇ ಆಗಿರುವುದರಿಂದ 'ಜಿಗಣೆ', 'ದೇವರಕಾಡು' (Sacred Forest) ಪದಗಳು ಬಹಳ ಹತ್ತಿರವಾದವು ಎಂದೆನಿಸಿತು, ಅದರಲ್ಲಿಯೂ ವಿಶೇಷವಾಗಿ 'ದೇವರ ಕಾಡು' ಈ ಶೀರ್ಷಿಕೆಯಲ್ಲಿ ನನ್ನದು ಒಂದು ಕತೆ ಇರುವುದರಿಂದ, ಈ ಪದ ಓದಿದ ಕೂಡಲೇ ಕಾದಂಬರಿ ನನಗೆ ಹೆಚ್ಚು ಕನೆಕ್ಟ್ ಆಯಿತು. ಇದಲ್ಲದೆ ಇದನ್ನು ಓದುತ್ತಾ ಓದುತ್ತಾ ಮಕ್ಕಳಿಗೆ ಪರಿಸರದ ಬಗ್ಗೆ ಅರಿವಾಗುವಾಗುವಂತೆ ಪೂರಕವಾದ ಕತೆಯನ್ನು ಎಣೆಯಲಾಗಿದೆ.

ಮಕ್ಕಳಿಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರದೇಯಾದ ಸರಳ ಭಾಷೆಯಲ್ಲಿ ಹೇಳಿರುವುದು ಗಮನಿಸಬೇಕಾದ ವಿಷಯ. ಇದಲ್ಲದೆ ಚಳುವಳಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಯುವಂತೆ ವಿಷಯಗಳನ್ನು ಪಾತ್ರಗಳ ಮೂಲಕ ಚರ್ಚಿಸಲಾಗಿದೆ. ಕೊನೆಗೆ ಮಕ್ಕಳಾದ ಶಂಕರ್ ಮತ್ತು ಜಾನು ಬಾಹುಬಲಿಯ ಪುರಾತನ ಸ್ಮಾರಕವನ್ನು ಛಲಬಿಡದೆ ಹುಡುಕಿ ತಮ್ಮ ಊರನ್ನು ಹೇಗೆ ಗಣಿಗಾರಿಕೆಯ ಮುಷ್ಟಿಯಿಂದ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವುದನ್ನು ಕಾದಂಬರಿ ಮನೋಜ್ಞವಾಗಿ ಹಿಡಿದಿಡುವ ಮೂಲಕ ಮುಕ್ತಾಯವಾಗುತ್ತದೆ.

- ಶಂಕರ್ ಸಿಹಿಮೊಗ್ಗೆ