ಬಿಜೆಪಿಯ ಕಾಂಗ್ರೆಸ್ ರಾಜಕಾರಣ!

ಬಿಜೆಪಿಯ ಕಾಂಗ್ರೆಸ್ ರಾಜಕಾರಣ!

ಬರಹ

ಬಿಜೆಪಿಯ ಕಾಂಗ್ರೆಸ್ ರಾಜಕಾರಣ!

ಯಡಿಯೂರಪ್ಪನವರ ನೇತೃತ್ವದದಲ್ಲಿ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಮಾರಂಭದ ಸಂಭ್ರಮದಿಂದ ಸ್ವಲ್ಪ ಮತ್ತೇರಿದಂತಿದ್ದ ನನ್ನ ಸ್ನೇಹಿತರೊಬ್ಬರು, ಯಡಿಯೂರಪ್ಪ ನಿಜವಾಗಿ ಒಂದು ಒಳ್ಳೆಯ ಸರ್ಕಾರ ನೀಡಿದರೆ ಈ ಕಾಂಗ್ರೆಸ್ಸಿಗರು ಒಂದಿಪ್ಪತ್ತು ವರ್ಷ ಅಧಿಕಾರದ ಕಡೆ ಮುಖ ಕೂಡ ಹಾಕಿ ಮಲಗಲಾರರು ಎಂದಾಗ, ನನ್ನ ತುಟಿಗಳಲ್ಲಿ ನನಗೆ ಗೊತ್ತಿಲ್ಲದಂತೆಯೇ ಒಂದು ಮುಗುಳ್ನಗೆ ಹಾದು ಹೋಯಿತು! ಯಡಿಯೂರಪ್ಪನವರ ಕಷ್ಟ ಯಡಿಯೂರಪ್ಪನವರಿಗಷ್ಟೇ ಗೊತ್ತು!! ಐದು ಶನಿಗಳನ್ನು ಹೆಗಲೇರಿಸಿಕೊಂಡು ಹೊರಟಿರುವ ಯಡಿಯೂರಪ್ಪ ಐದು ವರ್ಷಗಳ ಪೂರ್ಣಾವಧಿಯನ್ನು ನೆಮ್ಮದಿಯಿಂದ ಮುಗಿಸಿದರೇ ಸಾಕಾಗಿದೆ ಎನ್ನುವಷ್ಟು ಸಂಕಷ್ಟಗಳಿಗೆ ಆ ಪಕ್ಷ ಆರಂಭದಲ್ಲೇ ಎದುರಾಗಿದೆ. ಇದನ್ನು ಆ ನನ್ನ ಸ್ನೇಹಿತರಿಗೆ ಹೇಳಿದಾಗ, ಅವರು ಇದೆಲ್ಲ ಬಿಜೆಪಿ ವಿರೋಧಿ ಮನೋಭಾವನೆಯ ಊಹೆಗಳಷ್ಟೆ ಎಂದು ಬೇಸರ ಮಾಡಿಕೊಂಡು ಎದ್ದು ಹೋದರು.

ಹಾಗೆ ನೋಡಿದರೆ ಈಗ ಯಾರಿಗೇ ಆಗಲಿ, ಕಟ್ಟಾ ಬಿಜೆಪಿ ವಿರೋಧಿಯಾಗಲು ಅಂತಹ ಕಾರಣಗಳೇ ಇಲ್ಲ. ಈಗ ಆ ಪಕ್ಷದ ತುಂಬಾ - ಸದ್ಯದ ಅದರ ಶಾಸಕಾಂಗ ಪಕ್ಷವೂ ಸೇರಿದಂತೆ - ಅರ್ಧಕ್ಕರ್ಧ ಬಿಜೆಪಿಯೇತರ ಪಕ್ಷಗಳಿಂದ (ಮುಖ್ಯವಾಗಿ ಕಾಂಗ್ರೆಸ್ಸಿನಿಂದ) ಬಂದವರೇ ಇದ್ದಾರೆ. ಇವರ್ಯಾರಿಗೂ ನಾವು ಬಿಜೆಪಿಯನ್ನು ವಿರೋಧಿಸಲು ಮುಖ್ಯ ಕಾರಣವನ್ನು ಒದಗಿಸಿದ್ದ ಆರ್.ಎಸ್.ಎಸ್.ನ ಹಿನ್ನೆಲೆ ಇಲ್ಲ. ಅವರಲ್ಲಿ ಬಹಳಷ್ಟು ಜನ ಬಿಜೆಪಿ ಸೇರಿರುವುದು, ಇತರ ಪಕ್ಷಗಳಲ್ಲಿ ಸರಿಯಾದ ಜಾಗ ದೊರೆಯದಾಗಲೋ ಅಥವಾ ಆ ಪಕ್ಷಗಳಲ್ಲಿ ತಾವು ಇನ್ನು ಇರಲಾಗದಷ್ಟು ಪರಿಸ್ಥಿತಿ ಬಿಗಡಾಯಿಸಿದಾಗಲೋ! ಅಷ್ಟೇ ಅಲ್ಲ, ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ನಾಯಕರೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಆ ಪಕ್ಷ ಕಂಡ ಅಧಿಕಾರದ ನಿರೀಕ್ಷೆ ಮತ್ತು ರುಚಿಗಳಿಂದ ಎಷ್ಟು 'ಮಾಗಿ' ಹೋಗಿದ್ದಾರೆಂದರೆ, ಅವರ ಪಾಲಿಗೆ ಆರೆಸ್ಸೆಸ್ ಈಗ ಮನೆಯಲ್ಲಿ ಮೂಲೆ ಹಿಡಿದು ಸಾಂಕೇತಿಕ ಗೌರವಕ್ಕೇ ಅರ್ಹರಾದ ಹಿರಿಯರಂತಾಗಿದೆ! ಇಲ್ಲದಿದ್ದರೆ, ಲಾಠಿ ಹಿಡಿದೇ ಬಿಜೆಪಿ ಪ್ರವೇಶಿಸಿದ ಯಡಿಯೂರಪ್ಪನವರಂತಹ ಯಡಿಯೂರಪ್ಪನವರೇ - ಅವರೇ ಒಮ್ಮೆ ವಿಷಾದಪೂರ್ಣವಾಗಿ ಒಪ್ಪಿಕೊಂಡಂತೆ - ಅಧಿಕಾರದ ಚಕ್ರವ್ಯೂಹದಲ್ಲಿ ದಾರಿಗಾಣದಂತಾಗಿದ್ದಾಗ ಜೆಡಿಎಸ್ ಸೇರಲು ಮುಂದಾಗುತ್ತಿದ್ದರೇಕೆ?

ಹಾಗಾಗಿ ನಾನು ಯಡಿಯೂರಪ್ಪನವರ ಸಕಾರದ ಸುಭದ್ರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲು ಕಾರಣ, ಬಿಜೆಪಿ ವಿರೋಧಿ ಮನೋಭಾವನೆಯಲ್ಲ. ಬದಲಿಗೆ, ಬಿಜೆಪಿ ಕೆಲವರು ಭಾವಿಸಿದಂತೆ ದೇವಗಣದಿಂದಾಗಲೀ, ರಾಕ್ಷಸರಿಂದಾಗಲೀ ಕೂಡಿದ ಪಕ್ಷವೇನಲ್ಲ; ಅದೂ ಎಲ್ಲ ಪಕ್ಷಗಳಂತೆ ಉಪ್ಪು - ಖಾರ ತಿಂದ ಮನುಷ್ಯರನ್ನೊಳಗೊಂಡ ಪಕ್ಷವಾಗಿದೆ ಎಂಬುದೇ ಆಗಿದೆ. ಅದಕ್ಕೂ ಅಧಿಕಾರದ ಆಮಿಷಗಳಿಂದ ಭ್ರಷ್ಟಗೊಳ್ಳುವ ಎಲ್ಲ ಅವಕಾಶಗಳೂ, 'ಹಕ್ಕು'ಗಳೂ ಇವೆ! ಹಾಗಾಗಿಯೇ ಐದು ಜನ ಪಕ್ಷೇತರರಿಗೆ ಸಂಪುಟ ಸಚಿವ ಸ್ಥಾನ ನೀಡಿಯೇ ಸರ್ಕಾರ ರಚಿಸಬೇಕಾದ ದುಃಸ್ಥಿತಿಗೆ ಈಡಾಗಿರುವ ಪಕ್ಷ, ತನ್ನ ಸರಳ ಬಹುಮತದೊಂದಿಗೆ ಮುಂದಿನ ಐದು ವರ್ಷಗಳ ಆಡಳಿತಾವಧಿಯಲ್ಲಿ ಉದ್ಭವಿಸಬಹುದಾದ ಎಲ್ಲ ರೀತಿಯ ಸಂಕಷ್ಟಗಳನ್ನು ಎದುರಿಸಲು ಬಹಳ ಅವಸರದ ಮತ್ತು ಸುಲಭ ಪರಿಹಾರ ಮಾರ್ಗವನ್ನು ಕಂಡುಕೊಂಡಂತಿದೆ. ಈ ಐವ್ವರು ಪಕ್ಷೇತರರಲ್ಲಿ ಮುವ್ವರು ಮೂಲತಃ ಕಾಂಗ್ರೆಸ್ಸಿಗರು ಹಾಗೂ ಓರ್ವ ಜೆಡಿಎಸ್‌ನವರು ಮತ್ತು ಇವರೆಲ್ಲ ಆ ಪಕ್ಷಗಳ ಕೆಲವು ಪ್ರಬಲ ನಾಯಕರಿಗೆ ವ್ಯಕ್ತಿಶಃ ನಿಷ್ಠರಾಗಿರುವವರು ಎಂಬ ಮುಖ್ಯ ಸಂಗತಿಯನ್ನೇ ಬಿಜೆಪಿ ನಾಯಕತ್ವ ಸರ್ಕಾರ ರಚಿಸುವ ತರಾತುರಿಯಲ್ಲಿ ನಿರ್ಲಕ್ಷಿಸಿದಂತಿದೆ.

ಇದಕ್ಕಾಗಿ ಮುಂದೆ ಅದು ಎರಡು ನೆಲೆಗಳಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾಗಬಹುದು. ಒಂದು: ಈ ಪಕ್ಷೇತರರು ಅಂತಹ ರಾಜಕೀಯ ಅನುಭವಿಗಳೇನಲ್ಲ. ತಮಗೊಂದು ರಾಜಕೀಯ ವ್ಯಕ್ತಿತ್ವ ನೀಡಿದ್ದ ಪಕ್ಷಗಳ ವಿರುದ್ಧವೇ ಸೇಡಿನ ಮೇಲೆ ತಿರುಗಿ ಬಿದ್ದ ಇವರ ತಾತ್ವಿಕ ಹಾಗೂ ವೈಯುಕ್ತಿಕ ನಿಷ್ಠೆಗಳೆರಡೂ ಯಾವಾಗಲೂ ಅನುಮಾನಾಸ್ಪದವೇ. ಕಷ್ಟ ಕಾಲದಲ್ಲಂತೂ ಇವರನ್ನು ಯಾವ ಕಾರಣದ ಮೇಲೂ ನೆಚ್ಚುವಂತಿಲ್ಲ. ಇನ್ನು ಇವರಲ್ಲಿ ಕೆಲವರಂತೂ ತಮ್ಮ ಅದೃಷ್ಟ ಕುಲಾಯಿಸಿದ ವೇಗಕ್ಕೆ ಸಿಕ್ಕಿ ಬುದ್ಧಿ ಭ್ರಮಣೆಗೆ ಒಳಗಾದಾವರಂತಿದ್ದು, ಅವರು ತಮ್ಮ ಸಚಿವ ಸ್ಥಾನಕ್ಕೆ ಯಾವ ನ್ಯಾಯ ಅಥವಾ ಘನತೆ ಒದಗಿಸುವರೋ ತಿಳಿಯದಂತಾಗಿದೆ! ಎರಡು: ಈ ಐವ್ವರಿಗೆ ಸಚಿವ ಸ್ಥಾನ ಕೊಟ್ಟಿದ್ದರಿಂದಾಗಿ ಪಕ್ಷದೊಳಗಿನ ಕೆಲವು ನಿಷ್ಠಾವಂತರಿಗೆ ಮತ್ತು ಮುಖ್ಯರಿಗೆ ಸಚಿವ ಸ್ಥಾನ ಸಿಗದಂತಾಗಿದ್ದು, ಈ ಸಂಬಂಧ ಈಗಾಗಲೇ ಭಿನ್ನಮತ ಭುಗಿಲೆದ್ದಿದೆ. ಆದೂ 'ಕಾಂಗ್ರೆಸ್' ಶೈಲಿಯಲ್ಲಿ - ಬಹಿರಂಗ ಕೆಸರೆರಚಾಟ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಪುಂಡಾಟಿಕೆಗಳ ರೂಪದಲ್ಲಿ. ಜಗದೀಶ ಶೆಟ್ಟರ ಭಿನ್ನಮತವಂತೂ - ಅದು ಹಿರಿಯ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಯಿಂದ ಸದ್ಯಕ್ಕೆ ಶಮನಗೊಂಡರೂ - ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯ ಘಟಕವನ್ನು ಉದ್ದನೆ ಸೀಳುವಂತಹ ಆಳದ ಪಿತೂರಿ ರಾಜಕಾರಣವನ್ನು ಒಳಗೊಂಡಂತೆ ತೋರುತ್ತದೆ.

ವಿಧಾನಸಭಾಧ್ಯಕ್ಷ ಸ್ಥಾನದಂತಹ ಅತ್ಯುನ್ನತ ಗೌರವ ಸ್ಥಾನವನ್ನು ಶೆಟ್ಟರ್ ಏಕೆ ಹೀಗೆ ಕಡ್ಡಿ ಮುರಿದಂತೆ ನಿರಾಕರಿಸುತ್ತಿದ್ದಾರೆ? ಬರೀ ಶಾಸಕನಾಗಿ ಕೂತೇನು, ಈ ಸ್ಥಾನ ಬೇಕಿಲ್ಲ ಎನ್ನುತ್ತಿದ್ದಾರೆ? ತಮ್ಮ ರಾಜಕೀಯ ಜೀವನವನ್ನು ಮೊಟಕುಗೊಳಿಸಲೆಂದೇ, ತಮ್ಮ ರಾಜಕೀಯ ಕೈಕಾಲುಗಳನ್ನು ಕಟ್ಟಿಹಾಕಲೆಂದೇ ಉದ್ದೇಶಪೂರ್ವಕವಾಗಿ ಈ 'ಸ್ಥಾನಮಾನ'ವನ್ನು ತಮಗೆ ನೀಡಲಾಗುತ್ತಿದೆ ಎಂದು ಅವರು ಭಾವಿಸಿರುವುದೇ ಇದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಇದೀಗ ತಾನೇ ಪಕ್ಷಕ್ಕೆ ಸೇರಿರುವ ತಮ್ಮದೇ 'ನೆರೆಹೊರೆ'ಯ ಬಸವರಾಜ ಬೊಮ್ಮಾಯಿಯವರಿಗೆ ಸಚಿವ ಸ್ಥಾನ ನೀಡಿ ಅವರನ್ನು 'ಪ್ರೋತ್ಸಾಹಿಸಿ'ರುವುದೂ ಶೆಟ್ಟರ್ ಅವರ ಅನುಮಾನಗಳಿಗೆ ಪುಷ್ಠಿ ನೀಡಿದೆ. ಇದು, ಮೇಲ್ನೋಟಕ್ಕೆ ಅಬಾಧಿತವಾಗಿದ್ದಂತೆ ಕಾಣುವ ಯಡಿಯೂರಪ್ಪನವರ ನಾಯಕತ್ವ ಒಳಗಿಂದೊಳಗೇ ಎದುರಿಸುತ್ತಿರುವ ಆತಂಕಗಳ ಸೂಚನೆಯೂ ಆಗಿದೆ. ಹಾಗೇ ಇದು ಲಿಂಗಾಯಿತ ಜಾತಿ ನಾಯಕತ್ವವೆಂಬುದು ರಾಜಕೀಯ ಅಧಿಕಾರ ಪಡೆಯುವವರೆಗೆ ಒಂದೇ ಅಲಗಿನ ಕತ್ತಿಯಂತೆ ಕಾಣುತ್ತಿದ್ದುದು; ಅಧಿಕಾರ ಪಡೆದೊಡನೆ ಎರಡಲ್ಲ, ಹಲವು ಅಲಗುಗಳ ಕತ್ತಿಯಾಗಬಲ್ಲುದು ಎಂಬುದರ ಸೂಚನೆಯೂ ಆಗಿದೆ!

ಅಲ್ಲದೆ, ಯಡಿಯೂರಪ್ಪ ತಮ್ಮ ಸಂಪುಟವನ್ನು ದಕ್ಷತೆಗಿಂತ ಹೆಚ್ಚಾಗಿ ವೈಯುಕ್ತಿಕ ನಿಷ್ಠೆಯ ಆಧಾರದ ಮೇಲೆ ರಚಿಸಿಕೊಂಡಿದ್ದಾರೆ ಎಂಬ ಆರೋಪವೂ ಕೆಲವೆಡೆಯಿಂದ ಕೇಳಿ ಬರುತ್ತಿದೆ. ಅವರು ಮುಖ್ಯವಾಗಿ ಹಣವಂತ ಶಾಸಕರನ್ನು ಸಚಿವರನ್ನಾಗಿ ಮಾಡಿ ಪಕ್ಷದಲ್ಲಿ ತಮ್ಮ ಬೆಂಬಲವನ್ನು ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಬಳ್ಳಾರಿ ರೆಡ್ಡಿ ಗುಂಪಿನ ಮುವ್ವರನ್ನು ಮತ್ತು ನಿರಾಣಿಯಂತಹ ಅನಾಮಿಕರನ್ನು ಸಚಿವರನ್ನಾಗಿ ಮಾಡಿರುವುದು ಇದಕ್ಕೊಂದು ದೊಡ್ಡ ಉದಾಹರಣೆ. ಇದು ನಿಜವೇ ಆಗಿದ್ದಲ್ಲಿ ಯಡಿಯೂರಪ್ಪ, ನನ್ನ ಸ್ನೇಹಿತರು ನಿರೀಕ್ಷಿಸಿದಂತೆ ಕಾಂಗ್ರೆಸ್ ಇಪ್ಪತ್ತು ವರ್ಷಗಳ ಕಾಲ ಅಧಿಕಾರದ ಕಡೆ ಮುಖ ಕೂಡ ಹಾಕದಂತಹ ನಿಜವಾದ ಒಳ್ಳೆಯ ಸರ್ಕಾರ ನೀಡುವುದು ಕನಸಿನ ಮಾತೇ ಸರಿ! ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಸ್ವರೂಪವನ್ನೇ ನೋಡಿ. ಜಗದೀಶ್ ಶೆಟ್ಟರ್ ಬೆಂಬಲಕ್ಕೆ ಹುಬ್ಬಳ್ಳಿಯ ಪ್ರಮುಖ ವೀರಶೈವ ಮಠಾಧೀಶರೊಬ್ಬರು ಮುಂದೆ ಬಂದು ನಿಂತಿದ್ದಾರೆ. ವೀರಶೈವ ನಾಯಕತ್ವವಿರುವ ಸ್ಥಳೀಯ ವಕೀಲರ ಸಂಘವೂ ನ್ಯಾಯಾಲಯ ಕಲಾಪ ಬಹಿಷ್ಕರಿಸಿ, ಶೆಟ್ಟರ್ ಪರವಾಗಿ ಮತ ಪ್ರದರ್ಶನ ನಡೆಸಿದೆ. ವೀರಶೈವ ಮಹಿಳೆಯರೂ ಪಕ್ಷದ ಮಹಿಳಾ ಮೋರ್ಚಾದ ಹೆಸರಿನಲ್ಲಿ ಬೀದಿಗೆ ಬಂದಿದ್ದಾರೆ. ಇದು ಇತರ ಜಾತಿಯವರಿಗೆ, ಜಗದೀಶ ಶೆಟ್ಟರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಳೆಸಿ ಯಡಿಯೂರಪ್ಪನವರ ನಂತರವೂ ರಾಜಕೀಯ ಅಧಿಕಾರವನ್ನು ವೀರಶೈವರ ಕೈಯಲ್ಲೇ ಇರಿಸಿಕೊಳ್ಳುವ ಒಂದು ಜಾತಿಯ ಹುನ್ನಾರವಾಗಿ ಕಂಡರೆ ಆಶ್ಚರ್ಯವಿಲ್ಲ. ಇದು ಬಿಜೆಪಿಗೆ ಕೋಮುವಾದಿ ಎಂಬ ಬಿರುದಿನೊಂದಿಗೆ ಜಾತಿವಾದಿ ಎಂಬ ಬಿರುದನ್ನೂ ದಯಪಾಲಿಸುವುದಾದರೆ, ಆ ಪಕ್ಷದ ಸದ್ಯದ ಅರ್ಧ ತಳಹದಿ ನಾಶವಾದಂತೆಯೇ!

ಇನ್ನು, ಪ್ರಬಲವಾಗಿ ವ್ಯಕ್ತವಾಗುತ್ತಿರುವ ಇನ್ನಿಬ್ಬರ ಭಿನ್ನಮತವನ್ನು ನೋಡಿ. ಮೈಸೂರಿನ ಎಚ್.ಎಸ್.ಶಂಕರಲಿಂಗೇಗೌಡರದ್ದು ವಿಚಿತ್ರ ಭಿನ್ನಮತ. ಮಿತಿಯಿಲ್ಲದ ಮದ್ಯಪಾನದ ಖಯಾಲಿಯ ಹೊರತಾಗಿ ಇನ್ನಾವ ದೌರ್ಬಲ್ಯವನ್ನೂ ಹೊಂದಿರದಂತೆ ತೋರುವ ಗೌಡರು ತಮ್ಮ 'ಪಾರದರ್ಶಕ' ವ್ಯಕ್ತಿತ್ವದ ಬಗ್ಗೆ ತಾವೇ ಹೊಂದಿರುವ ನಿಷ್ಠೆಯ ಹೊರತಾಗಿ ಇನ್ನಾವುದಕ್ಕೂ ಅಂತಿಮ ನಿಷ್ಠೆ ವ್ಯಕ್ತಪಡಿಸದಿರುವುದೇ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾದಂತಿದೆ. ಹಾಗಾಗಿಯೇ ಅವರ ಪರವಾದ ಭಿನ್ನಮತ - ಬಿಜೆಪಿ ಜಾಯಮಾನಕ್ಕೆ ವಿರುದ್ಧವಾಗಿ ಮೌನವ್ರತ, ಮೌನ ಮೆರವಣಿಗೆ, ವಿಷಸೇವನೆಯ ಪ್ರಯತ್ನ ಇತ್ಯಾದಿಗಳ ರೂಪದಲ್ಲಿ - ವ್ಯಕ್ತವಾಗುತ್ತಿರುವುದು ಅವರ ವೈಯುಕ್ತಿಕ ಅಭಿಮಾನಿಗಳಿಂದಲೇ ಹೊರತು ಪಕ್ಷದ ನೆಲೆಯಲ್ಲ್ಲ! ಆನೇಕಲ್‌ನ ನಾರಾಯಣ ಸ್ವಾಮಿಯವರ ಪರವಾಗಿ ಭಿನ್ನಮತ ವ್ಯಕ್ತವಾಗುತ್ತಿರುವುದೂ ಈ ನೆಲೆಯಲ್ಲೇ. ಆದರೆ ಬಸ್ಸುಗಳಿಗೆ ಕಲ್ಲು ಹೊಡೆದು ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸುವ ಪುಂಡಾಟಿಕೆಯ ರೂಪದಲ್ಲಿ. ಇವರು ನಾಲ್ಕು ಬಾರಿ ಸತತವಾಗಿ ಗೆದ್ದಿರುವುದೇ ಇವರು ಮಂತ್ರಿಯಾಗಲು ಇರುವ ಅರ್ಹತೆಯಾಗಿದೆ! ಪರಿಶಿಷ್ಟರ ಈ ಸರಳ ಬೇಡಿಕೆಯನ್ನು ಈಡೇರಿಸುವುದೂ ಯಡಿಯೂರಪ್ಪನವರಿಗೆ ಈಗ ಕಷ್ಟವಾಗಿದೆ. ಏಕೆಂದರೆ ಸಂಪುಟ ಸೇರಿರುವ ಐವ್ವರು ಪಕ್ಷೇತರರಲ್ಲಿ ನಾಲ್ವರು ಪರಿಶಿಷ್ಟ ಜಾತಿ - ವರ್ಗಗಳಿಗೆ ಸೇರಿರುವುದರಿಂದ, ಅವರ ಕೋಟಾ ಪೂರ್ಣವಾಗಿದೆ!

ಈ ಎಲ್ಲದರಿಂದಾಗಿ ಯಡಿಯೂರಪ್ಪ ಸಚಿವ ಸಂಪುಟ ರಚಿಸುವ ಹಂತದಲ್ಲೇ ಕಷ್ಟಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರ ಪೂರ್ವಯೋಜಿತ ರಾಜಕಾರಣವೆಲ್ಲ ದಿಕ್ಕೆಟ್ಟಂತಾಗಿದೆ. ಅವರು ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ, ಭದ್ರಪಡಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ತಂತ್ರಗಳಿಗೇ ಮೊರೆ ಹೋಗಬೇಕಾದ ಪರಿಸ್ಥಿತಿಗೆ ಈಡಾಗಿದ್ದಾರೆ! ಕಾಂಗ್ರೆಸ್‌ನಲ್ಲಿ ಸದಾ ಕೇಳಿಸುವಂತಹ ನಿಷ್ಠರಿಗೆ, ಹಿರಿಯರಿಗೆ ಸ್ಥಾನವಿಲ್ಲದೆ ಹೋಗಿದೆ ಎಂಬ ಕೂಗು ಅವರ ಪಕ್ಷದಲ್ಲೂ ಈಗ ದಟ್ಟವಾಗುತ್ತಿದೆ. ಡಿ.ಎಚ್.ಶಂಕರಮೂರ್ತಿ ಹಾಗೂ ವಿಮಲಾಗೌಡರಂತಹ ಹಿರಿಯರೂ ಬಹಿರಂಗವಾಗಿ ಪ್ರತಿಭಟಿಸಿದ್ದಾರೆ. ಕೆಲವರು ಮೌನವಾಗಿ ತಮ್ಮ ಕಾರ್ಯ ತಂತ್ರ ಹೆಣೆಯುತ್ತಿದ್ದಾರೆ. ಇದನ್ನರಿತೇ ಯಡಿಯೂರಪ್ಪ ನಾಲ್ಕು ಸಚಿವ ಸ್ಥಾನಗಳನ್ನು ಹಾಗೇ ಖಾಲಿಯಿಟ್ಟು, ಸಚಿವ ಖಾತೆಗಳ ಪ್ರಕಟಣೆಯನ್ನು ಬಹುಮತ ಸಾಬೀತಿನ ನಂತರದ ದಿನಗಳಿಗೆ ಮುಂದೂಡಿದ್ದಾರೆ. ಹೀಗೆ ತಮ್ಮ ಸಕಾರದ ಸುಭದ್ರತೆಯ ಬಗ್ಗೆ ತಮ್ಮಲ್ಲೇ ಅನುಮಾನ - ಗೊಂದಲ - ಆತಂಕಗಳನ್ನಿಟ್ಟುಕೊಂಡಿರುವ ಪಕ್ಷ, ಬಹುಮತ ಸಾಬೀತಿನ ನಂತರವಷ್ಟೇ ನಿಮ್ಮ ಸರ್ಕಾರದ ಪ್ರತಿನಿಧಿಯಾಗಿ ನನ್ನ ಭಾಷಣ ಎಂದಿರುವ ರಾಜ್ಯಪಾಲರ ಮೇಲೇಕೆ ಅಸಭ್ಯ ರೀತಿಯಲ್ಲೇಕೆ ಹರಿಹಾಯಿತ್ತಿದೆಯೋ ತಿಳಿಯದಾಗಿದೆ. ಈ ವಿಷಯದಲ್ಲಿ ಮುಂದುವರೆದು, ತುಟಿ ಮೀರಿ (ಹಲ್ಲು ಮೀರಿ?) ಅನುಚಿತ ಶಬ್ದಗಳನ್ನುದುರಿಸುತ್ತಿರುವ ಪಕ್ಷದ ಅಧ್ಯಕ್ಷ ಸದಾನಂದಗೌಡರಿಗೆ ಆರೆಸ್ಸೆಸ್ ಮುಖಂಡರಾದರೂ ಬುದ್ಧಿ ಹೇಳಬೇಕಿದೆ. ತಮಗೆ ಪ್ರತಿಕೂಲವಾದ ತೀರ್ಮಾನವನ್ನು ತೆಗೆದುಕೊಳ್ಳುವವರನ್ನೆಲ್ಲ ಕಾಂಗ್ರಸ್ ಏಜೆಂಟರೆಂದು ಕರೆಯುವ ಇವರ ಚಟ ಸಾರ್ವಜನಿಕ ಜೀವನದ ಅಭಿರುಚಿಯನ್ನೇ ಕೆಡಿಸುವಂತಿದೆ. ಇವರು ಚುನಾವಣೆಗಳ ಪ್ರಕಟಣೆಯ ಮುನ್ನ ಚುನಾವಣಾ ಆಯೋಗವನ್ನೂ ಕಾಂಗ್ರೆಸ್ ಏಜೆಂಟ್ ಎಂದು ಕರೆದಿದ್ದರು!

ಬಿಜೆಪಿ ಹೀಗೆ ಅಧಿಕಾರದ ಹೊಸ್ತಿಲಲ್ಲೇ ಮುಗ್ಗರಿಸುತ್ತಿರುವಂತೆ ತೋರುತ್ತಿರುವಾಗ ಪ್ರಮುಖ ವಿರೋಧ ಪಕ್ಷವೆನಿಸಿರುವ ಕಾಂಗ್ರೆಸ್ಸಾದರೂ ಏನು ಮಾಡುತ್ತಿದೆ? ಬಿಜೆಪಿಯೂ ತನ್ನ ಸೋದರ ಪಕ್ಷದಂತಾಗುತ್ತಿರುವ ಬೆಳವಣಿಗೆಯ ಮಜಾ ತೆಗೆದುಕೊಳ್ಳುತ್ತಿದೆಯೆ? ಹಾಗೆ ಮಜಾ ತೆಗೆದುಕೊಳ್ಳುವುದಕ್ಕೂ ಒಂದು ಜೀವಂತಿಕೆ ಬೇಕು. ಖರ್ಗೆಯವರ ಮುಖದಲ್ಲಿ ಸಂಪೂರ್ಣ ಕತ್ತಲು ಆವರಿಸಿಬಿಟ್ಟಿದೆ. ಅವರ ಪಕ್ಷದ ವರಿಷ್ಠ ನಾಯಕತ್ವ ಅವರಿಗೆ ಸಾಕಷ್ಟು ವಿರೋಧದ ನಡುವೆಯೂ ಶಾಸಕಾಂಗ ಪಕ್ಷದ, ಅಂದರೆ ವಿರೋಧ ಪಕ್ಷದ ನಾಯಕನ ಸ್ಥಾನ - ಮಾನವನ್ನು ದಯಪಾಲಿಸಿದ ಮೇಲೂ! ಇದಕ್ಕೆ ಕಾರಣ, ಪಕ್ಷದ ಸೋಲಿಗೆ ಕಾರಣವಾದ ಅನೈಕ್ಯತೆ ಹಾಗೂ ಪರಸ್ಪರ ದ್ವೇಷಾಸೂಯೆಗಳು ಸೋಲಿನ ನಂತರವೂ ಮುಂದುವರೆದಿರುವುದು. ಚುನಾವಣೆಗಳ ನಂತರ ಪಕ್ಷದಲ್ಲಿ ಸಿದ್ಧರಾಮಯ್ಯನವರ ಪ್ರಾಬಲ್ಯ ಹೆಚ್ಚಿದೆ. ಅದನ್ನು ಇರುವುದಕ್ಕಿಂತ ದೊಡ್ಡದಾಗಿ ಪ್ರತಿಬಿಂಬಿಸಲು ಯತ್ನಿಸುತ್ತಿರುವ ಅವರ ಗುಂಪಿನ ಆರ್ಭಟ ಮತ್ತು ಪಕ್ಷಕ್ಕೆ ಹೊಸದಾಗಿ ಬಂದಿರುವವರ ನಾಯಕತ್ವದ ಈ ಗುಂಪಿಗೆ ಪಕ್ಷವನ್ನು ಒಪ್ಪಿಸಲು ಸಿದ್ಧರಿರದ ಹಳೆಯ ನಾಯಕತ್ವದ ಹಠದ ನಡುವೆ ಪಕ್ಷ ತನ್ನ ನೈತಿಕ ಸ್ಥೈರ್ಯವನ್ನೇ ಕಳೆದುಕೊಳ್ಳುತ್ತಿದೆ.

ಶಾಸಕಾಂಗ ಪಕ್ಷವಾಗಿ ಸಾಕಷ್ಟು ಸಬಲವಾಗಿಯೇ ಇರುವ ಮತ್ತು ರಾಜಕೀಯ ತುರ್ತುಗಳಿಗಾಗಿ ಸದಾ ಸನ್ನದ್ಧವಾಗಿರಬೇಕಾಗಿರುವ ಈ ಸಂದರ್ಭದಲ್ಲಿ ಸಿದ್ಧರಾಮಯ್ಯ ಒಂದಿಷ್ಟು ಸಹನೆ ಮತ್ತು ಖರ್ಗೆಯವರು ಒಂದಿಷ್ಟು ಪ್ರಬುದ್ಧತೆಯನ್ನು ಪ್ರದರ್ಶಿಸಿ ಪಕ್ಷವನ್ನು ಮುಂದಿನ ಸವಾಲುಗಳಿಗಾಗಿ ಬಲಪಡಿಸುವ ಕಡೆ ಗಮನ ಹರಿಸಬೇಕಿದೆ. ಆದರೆ ಪಕ್ಷದ ವರಿಷ್ಠ ನಾಯಕತ್ವ ಇದಾವುದರ ಪರಿವೆಯೇ ಇಲ್ಲದಂತೆ ಮೊದ್ದು ಮೊದ್ದಾಗಿ ವರ್ತಿಸುತ್ತಿರುವುದೇಕೋ ತಿಳಿಯದಾಗಿದೆ. ಅದು ಪಕ್ಷದ ಸೋಲನ್ನು ಪರಾಮರ್ಶಿಸಲು ರಚಿಸಿರುವ ಸಮಿತಿಯನ್ನೇ ನೋಡಿ. ಅದಕ್ಕೆ ರಾಜ್ಯದಲ್ಲಿ ನಿಜವಾದ ನಾಯಕರಾರು ಎಂಬುದೇ ಇನ್ನೂ ತಿಳಿಯದೇ ಹೋಗಿದೆ. ಹಾಗಾಗಿಯೇ ಅದು ಕಳ್ಳರನ್ನು ಹಿಡಿಯಲು ಕಳ್ಳರನ್ನೇ ನೇಮಿಸಿದೆ!