ಬಿಟ್ಟೆನೆಂದರೆ ಬಿಡದೀ ಫೋಟೊ!

ಬಿಟ್ಟೆನೆಂದರೆ ಬಿಡದೀ ಫೋಟೊ!

ಬರಹ

ಪ್ರಿಯ ಓದುಗ ಮಿತ್ರರೇ,

ನಿನ್ನೆ ತಾನೇ ಈ ಜಾಲತಾಣದ ನನ್ನ ಲೇಖನಕೃಷಿಗೆ ನಮಸ್ಕಾರ ಹೇಳಿ ಹೋಗಿದ್ದೆ. ಇಂದು ಮತ್ತೆ ವಕ್ರಿಸಿದ್ದೇನೆ! ಈ ಕೆಳಗಿನ ಛಾಯಾಚಿತ್ರ ಮತ್ತೆ ನನ್ನನ್ನು ಇಲ್ಲಿಗೆ ಎಳೆತಂದಿದೆ.

’ಬಿಟ್ಟೆನೆಂದರೆ ಬಿಡದೀ ಮಾಯೆ!’ ಎಂಬ ನಾಣ್ಣುಡಿಯಂತೆ,
ಬಿಟ್ಟೆನೆಂದರೆ ಎನ್ನನು ಬಿಡದೀ ಫೋಟೊ!

ಪ್ರಸಿದ್ಧ ದಿನಪತ್ರಿಕೆಯೊಂದರ ಇಂದಿನ (14ನೇ ಮೇ 2009) ಸಂಚಿಕೆಯಲ್ಲಿ ಪ್ರಕಟವಾಗಿರುವ ಫೋಟೊ ಇದು. ಈ ಫೋಟೋವನ್ನೂ ಮತ್ತು ಅದರ ಅಡಿಬರಹವನ್ನೂ ಗಮನಿಸಿ.

ಗಮನಿಸಿದಿರಾ?

ಈ ಫೊಟೋಕ್ಕೆ ಅಡಿಬರಹವನ್ನು ನೀಡಿದವರು ಭಾರಿ ಬುದ್ಧಿವಂತರೇ ಸರಿ. ಬ್ರಾಕೆಟ್‌ಗಳೊಳಗೆ, ಅರ್ಥಾತ್, ಆವರಣಗಳೊಳಗೆ, ’ಎಡದಿಂದ ಎರಡನೆಯವರು’, ’ಬಲ’, ಎಡಬದಿ’, ಎಂಬ ವಿವರಗಳನ್ನು ನೀಡುವ ಮೂಲಕ ಆ ಪತ್ರಕರ್ತ ಮಹನೀಯರು (ಅಥವಾ ಪತ್ರಕರ್ತೆ ಮಹಿಳೀಯರು) ಓದುಗರಿಗೆ ಮಹದುಪಕಾರ ಮಾಡಿದ್ದಾರೆ. ಆವರಣಗಳೊಳಗೆ ಈ ವಿವರಗಳನ್ನು ನೀಡಿರದಿದ್ದರೆ ಓದುಗರಿಗೆ, ’ಯಾರು ಪ್ರಭಾಕರನ್ ಪತ್ನಿ, ಯಾರು ಪುತ್ರ ಮತ್ತು ಯಾರು ಪುತ್ರಿ’, ಎಂಬುದು ಗೊತ್ತಾಗುತ್ತಲೇ ಇರಲಿಲ್ಲ. ಯಾರುಯಾರಿಗೋ ಯಾರುಯಾರನ್ನೋ ಕನ್‌ಫ್ಯೂಸ್ ಮಾಡಿಕೊಂಡು ಓದುಗರು ಫಜೀತಿ ಪಡುತ್ತಿದ್ದರು. ಇಬ್ಬರು ಸ್ತ್ರೀಯರ ಪೈಕಿ ಪ್ರಭಾಕರನ್‌ನ ಪತ್ನಿ ಯಾರು, ಪುತ್ರಿ ಯಾರು ಎಂದು ಗೊತ್ತಾಗದೆ ತಲೆ ಕೆರೆದುಕೊಳ್ಳುತ್ತಿದ್ದರು. ಪತ್ನಿ ’ಎಡದಿಂದ  ಎರಡನೆಯವರು’ ಮತ್ತು ಪುತ್ರಿ ’ಎಡಬದಿ’, ಎಂದು ಅಡಿಬರಹ ಬರೆದಾತ/ಬರೆದಾಕೆ ನಮೂದಿಸಿರುವುದರಿಂದಾಗಿ ಮಾತ್ರ ಓದುಗರಿಗೆ ಗೊತ್ತಾಯಿತು.

ಇನ್ನು, ’ಬಲ’ಗಡೆ ಇರುವಾತ ಪ್ರಭಾಕರನ್ ಪುತ್ರನೆಂದು ಸದರಿ ಪತ್ರಕರ್ತನು/ಪತ್ರಕರ್ತೆಯು ಆವರಣದಲ್ಲಿ ಸೂಚಿಸಿರದಿದ್ದರೆ ಓದುಗರು ಎಲ್‌ಟಿಟಿಇ ಸಮವಸ್ತ್ರದಲ್ಲಿರುವ ಆತ ವೇಲುಪಿಳ್ಳೈ ಪ್ರಭಾಕರನ್ ಎಂದು ತಪ್ಪಾಗಿ ತಿಳಿದುಬಿಡುತ್ತಿದ್ದರು. ’ಬಲ’ಗಡೆಯ ಆ ಸಮವಸ್ತ್ರಧಾರಿಯು ಪ್ರಭಾಕರನ್‌ನ ಪುತ್ರನೆಂಬುದು ಆವರಣದ ಸೂಚನೆಯಿಂದಾಗಿ ಓದುಗರಿಗೆ ಗೊತ್ತಾಯಿತು. ಇದರಿಂದಾಗಿ, ಫೋಟೋದಲ್ಲಿರುವ ಚಿಕ್ಕ ಬಾಲಕನೇ ವೇಲುಪಿಳ್ಳೈ ಪ್ರಭಾಕರನ್ ಎಂಬುದೂ ಓದುಗರಿಗೆ ಕ್ಲಿಯರ್ ಆಯಿತು.

ಓದುಗರಿಗೆ ಈ ರೀತಿ ಸ್ಪಷ್ಟ ಮಾಹಿತಿ ನೀಡಿರುವ ಸದರಿ ಪತ್ರಕರ್ತನಿಗೆ/ಪತ್ರಕರ್ತೆಗೆ ರಾಜ್ಯ ಮಾಧ್ಯಮ ಅಕಾಡೆಮಿಯ ಈ ಸಲದ ಪ್ರಶಸ್ತಿಯನ್ನು ನೀಡತಕ್ಕದ್ದು.

ಈ ಚಿತ್ರದ ಈ ಅಡಿಬರಹವನ್ನು ಶ್ರೀಲಂಕಾ ಸರ್ಕಾರವು ಓದುವುದಿಲ್ಲವಾದ್ದರಿಂದ ಪಾಪ ಆ ಪುಟ್ಟ ಹುಡುಗ ಬಚಾವ್! (ಈಗವನು ದೊಡ್ಡವನಾಗಿದ್ದಾನೆ, ಆದರೂ......)

**೦**

(ಛಾಯಾಚಿತ್ರ ಕೃಪೆ: ರಾಯಿಟರ್ಸ್‌) (ಚಿತ್ರದ ಅಡಿಬರಹದಲ್ಲಿ ಇದು ವೇದ್ಯವಾಗಿದೆಯಾದರೂ ಕೃಪೆಯನ್ನು ಪ್ರತ್ಯೇಕವಾಗಿ ನೆನೆಯಬೇಕಷ್ಟೆ.)

---೦---