ಬಿಡದಿಯಲ್ಲಿ ತಲೆ ಎತ್ತಿರುವ "INNOVATIVE FILM CITY" ಯಲ್ಲಿ ಕನ್ನಡಾನೂ ಸ್ವಲ್ಪ ಒಳಗೆ ಬಿಡಿ!

ಬಿಡದಿಯಲ್ಲಿ ತಲೆ ಎತ್ತಿರುವ "INNOVATIVE FILM CITY" ಯಲ್ಲಿ ಕನ್ನಡಾನೂ ಸ್ವಲ್ಪ ಒಳಗೆ ಬಿಡಿ!

ಬರಹ

ನೆನ್ನೆ, ಬೆಂಗಳೂರು-ಮೈಸೂರು ರಸ್ತೆಯಲ್ಲಿ, ಬಿಡದಿ ಸಮೀಪದಲ್ಲಿ ಕಟ್ಟಿರುವ "ಇನ್ನೋವೇಟಿವ್ ಫಿಲ್ಮ್ ಸಿಟಿ" ನೋಡಿ ಬರುವ [ದೌರ್]ಭಾಗ್ಯ ಒದಗಿ ಬಂದಿತ್ತು. ಬೆಂಗಳೂರಿನಲ್ಲಿ innovative multiplex ಎಂಬ ಮೊಟ್ಟ ಮೊದಲನೆ "ಬಹು ಪರದೆ ಸಿನೆಮಾಮನೆ" ಕಟ್ಟಿದ ಮಂದಿಯೇ ಇದನ್ನು ನಿರ್ಮಿಸಿದ್ದಾರೆ ಎಂದು ಬಲ್ಲವರು ತಿಳಿಸಿದ್ದರು. ತಮ್ಮ ಮಲ್ಟಿಪ್ಲೆಕ್ಸ್ ನಲ್ಲಿ ಎಲ್ಲಾ ರೀತಿಯಲ್ಲಿಯೂ ಕನ್ನಡಕ್ಕೆ ಕಡೆಯ ಜಾಗ ನೀಡಿರುವ ಇವರು ತಮ್ಮ ನೂತನ ಚಿತ್ರನಗರಿಯಲ್ಲಿಯಲ್ಲಿ ಸಹ ಅದೇ ಸಂಪ್ರದಾಯವನ್ನು ಮುಂದುವರೆಸಿರುವುದೇ ಈ ಮೇಲೆ "ದೌರ್ಭಾಗ್ಯ" ಎಂಬ ಪದವನ್ನು ವಿಷಾದದಿಂದ ಉಪಯೋಗಿಸಿರುವುದು.

ಇಂಗ್ಲೀಷು ಅಥವ ರಾಷ್ಟ್ರ ಭಾಷೆ! ಹಿಂದಿಯಲ್ಲಿ ಮಾತನಾಡಿ [ಪಾಪ ಅಲ್ಲಿರುವವರೆಲ್ಲರೂ ವಿಶ್ವಮಾನವರು, ಅವರ್ಯಾರಿಗೂ ಲೋಕಲ್ ಭಾಷೆ ಕನ್ನಡ ಅರ್ಥ ಆಗಲ್ಲ. ಹಾಗಾಗಿಯೇ ಚಿತ್ರ ನಗರಿಯ ಹೆಸರಿನ ಫಲಕ, ವಿವರ ತಿಳಿಸುವ ನಮೂನೆ, ಭೂಪಟ, ನಿರೂಪಣ ಪಟ, ರೇಖಾಚಿತ್ರ ಎಲ್ಲವನ್ನೂ ವಿಶ್ವಮಾನ್ಯ ಭಾಷೆಯಲ್ಲಿ ಮಾಡಿಸಿದ್ದಾರೆ] ಟಿಕೆಟ್ಟು ಗಿಟ್ಟಿಸಿ ಒಳಗೆ ಹೋದೆ.

ಟಿಕೆಟ್ಟು ಹರಿಸಿ, ತಪಾಸಣೆ ಮಾಡಿಸಿಕೊಂಡು ಒಳಕ್ಕೆ ಹೋದೊಡನೆ ಪರವಾಗಿಲ್ವೇ ಅನ್ನಿಸ್ತು. ಕೃತಕ "ಟೆಂಟ್" ಸಿನಿಮಾ ಮಾಡಿ ಅಲ್ಲಿ ಬಬ್ರುವಾಹನ-ಸತ್ಯಹರಿಶ್ಛಂದ್ರ-ಬೇಡರ ಕಣ್ಣಪ್ಪ ಚಿತ್ರಗಳ ಪಟ ಅಂಟಿಸಿದ್ದರು. ಟೆಂಟಲ್ಲಿ Ten Rs. ಇಸ್ಕೊಂಡು Ten minutes ಬಬ್ರುವಾಹನ ಸಿನೆಮಾ ತೋರಿಸಿದ್ರು. ಸಿನೆಮಾ ನೋಡಿ ಕಣ್ಣುಜ್ಜಿಕೊಂಡು ಹೊರಬರ್ತಿದ್ದಂಗೆ "ನನ್ನ ಮಕ್ಳ ಅಷ್ಟೆ ಇದಾದ ಮೇಲೆ ಒಳಗಡೆ ಎಲ್ಲಾದ್ರೂ ಕನ್ನಡ ಅಂದ್ರೆ ಈ ಟೆಂಟೂ ಕಿತ್ತಾಕಿ ಬಿಡ್ತೀವಿ" ಎಂಬ ಅಶರೀರವಾಣಿ ಕಿವಿಗೆ ಬಡಿದು ಹೋದಂಗಾಯ್ತು. ನಿಮ್ಮ ಕನ್ನಡ ಏನಿದ್ರೂ ಇಂತಾ ಜಾಗದಲ್ಲೇ [ಟೆಂಟ್ನಾಗೆ] ಕಾಣಬೇಕು ಎಂಬ ಸಂದೇಶಾನೂ ಈ ಟೆಂಟು ನಿರ್ಮಿಸಿಸುರುವ ಉದ್ದೇಶನೇನೊ ಅಂತ ಸಹ ಅನ್ನಿಸ್ತು.

ಅಷ್ಟೇ, ಆಮೇಲೆ ಅಲ್ಲಿ ಕಂಡದ್ದು ಬರೀ!! Cartoon City, Fossil museum, Mock sets, Main street, Dinosaur world, Funplex, Velocity, Aqua Kingdom, Haunted Mansion, Mini golf, Louis Tussauds wax works, Ripleys Believe it or not, Miniature City, Grub hub, Snow park, Amphitheatre and "RESTROOMS" ಇದೆಲ್ಲಾ ನಾನು ಇರಬಾರ್ದಿತ್ತು ಅಂತ ಹೇಳ್ತಿಲ್ಲ. ಇದೆಲ್ಲಾ ಇರ್ಲಿ. ಇನ್ನೂ ಏನೇನಿದೆಯೋ ಎಲ್ಲಾ ಸುಡುಗಾಡೂ ಬರಲಿ, ನಾವೆಲ್ಲಾ ನಮ್ಮ ಬೆರಗುಗಣ್ಣುಗಳಿಂದ ನೋಡ್ತೀವಿ, ಕಿವಿ ಅಗಲಿಸಿ ಕೇಳ್ತಿವಿ! ಆದ್ರೆ ಅಲ್ಲೆಲ್ಲಾ "ಕನ್ನಡ" ಎಂಬ ಲೋಕಲ್ ಸುವಾಸನೆನೂ ಜತೆಗೆ ಹರಡಿ ಬರಲಿ ಎನ್ನುವುದಷ್ಟೇ ಕಳಕಳಿ!

ಅಲ್ಲಿ ನಾನಿದ್ದ ಪೂರ್ತಿ ಸಮಯ ಕೇವಲ ಇಂಗ್ಲೀಷ ಅಥವ ಹಿಂದಿಯಲ್ಲಿ ಹಿನ್ನಲೆ ಸಂಗೀತ ಕೇಳಿಬರುತ್ತಿತ್ತು. ಹಾಗೆ ಅಡ್ಡಾಡುತ್ತಿದ್ದಾಗ ಗೂರ್ಖ ಮುಖ ಚಹರೆಯ ಪರಿಚಾರಕನೊಬ್ಬ [ಸ್ವಲ್ಪಮಟ್ಟಿಗೆ ಕನ್ನಡ ಬಲ್ಲವರು ಸಹ ಇಲ್ಲಿ ಕೆಲಸ ಗಿಟ್ಟಿಸಿದ್ದಾರೆ ಅನ್ನುವುದೇ ಸಮಾಧಾನದ ವಿಷಯ] ಅಲ್ಲಿ karaoke [ಮುದ್ರಿತ ಸಂಗೀತಕ್ಕೆ ಧ್ವನಿ ಸೇರಿಸುವ ಆಟ]ಕ್ಕೆ ನನ್ನನ್ನು ಆಹ್ವಾನಿಸಿ ಹಾಡುಗಳ ಪಟ್ಟಿ ನೀಡಿದ. ಆ ಸಂಗೀತ ಪಟ್ಟಿಯ ಪುಣ್ಯ!! ಪಕ್ಕದಲ್ಲೆಲ್ಲೂ ಬೆಂಕಿ ಹಚ್ಚಿದ್ದು ಕಂಡು ಬರಲಿಲ್ಲ [ಅದಕ್ಕೆ ಹಾಕಿ ಬಿಡುವಷ್ಟು ಸಿಟ್ಟು ನೆತ್ತಿಗೇರಿತ್ತು]ಇಂಗ್ಲೀಷ್, ಹಿಂದಿ ಜತೆಗೆ ತೆಲುಗು, ತಮಿಳು....ಹಾಡುಗಳ ಪಟ್ಟಿ ಇದೆ. ಕನ್ನಡ, ಲೋಕಲ್ಲಲ್ವ ಹೇಗಿರಕ್ಕೆ ಸಾಧ್ಯ ನೀವೆ ಹೇಳಿ!!

"ಇನ್ನೋವೇಟಿವ್ ಫಿಲ್ಮ್ ಸಿಟಿ" ಯಲ್ಲಿ ನಾನು ಪ್ರತಿಭಟಿಸಿ ಬಂದಿದ್ದೇನೆ! ನೀವ್ಯಾರದರೂ ಅತ್ತ ಹೋದರೆ ಅಥವ ಅವರ "info@innovativefilmcity.in" ಗೆ "ಲೋಕಲ್ ಭಾಷೆಗೂ ಸ್ವಲ್ಪ ಮರ್ಯಾದೆ ಕೊಡ್ರಪ್ಪ, ಇದ್ರಿಂದ ನೀವು ಕಳಕೋಳೋದೇನು ಇಲ್ಲ. ಇನ್ನೂ ಹೆಚ್ಚಿನ ಆಧಾಯ ಮಾಡ್ಕಳಕೆ ಇದೊಂದು ದಾರಿ ಅಂತ" ಮಿಂಚಿಸ್ತೀರ?

ಅಂದ ಹಾಗೆ ನೆನ್ನೆ ಅಲ್ಲಿ ನಾನು ಗಮನಿಸಿದ್ದು. ಅಲ್ಲಿಗೆ ಬಂದ ನೂರಕ್ಕೆ ತೊಂಭತ್ತು ಜನ ಕನ್ನಡ ಮಾತಾಡ್ತ ಇದ್ರು!

ಚಂದ್ರಶೇಖರನ್ ಕಲ್ಯಾಣ ರಾಮನ್,
ಬೆಂಗಳೂರು.