ಬಿಡಾರ
ಖ್ಯಾತ ಮರಾಠಿ ಲೇಖಕ ಅಶೋಕ ಪವಾರ್ ಅವರ ಆತ್ಮಕಥನವು ‘ಬಿಡಾರ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರವಾಗಿದೆ. ಖ್ಯಾತ ಅನುವಾದಕರಾದ ಚಂದ್ರಕಾಂತ ಪೋಕಳೆ ಇವರು ಕನ್ನಡಕ್ಕೆ ತಂದಿದ್ದಾರೆ. ಸುಮಾರು ೨೫೦ ಪುಟಗಳ ಈ ಕಾದಂಬರಿಯ ಆಯ್ದ ಭಾಗ ಮತ್ತು ಅನುವಾದಕರಾದ ಚಂದ್ರಕಾಂತ ಪೋಕಳೆ ಅವರ ಮಾತುಗಳು ಇಲ್ಲಿವೆ...
ಚಂದ್ರಕಾಂತರು ಕಂಡಂತೆ “ಮರಾಠಿಯಲ್ಲಿ ದಲಿತ ಆತ್ಮಕಥೆಗಳಿಗೆ ವಿಶಿಷ್ಟ ಸ್ಥಾನವಿದೆ. ಮರಾಠಿಯ ಹಲವು ಆತ್ಮಕಥೆಗಳು ಕಾದಂಬರಿಯ ಸ್ವರೂಪವನ್ನು ಹೊಂದಿ ರಸವತ್ತಾಗಿ ಓದಿಸಿಕೊಂಡು ಹೋಗುತ್ತವೆ. ಮರಾಠಿ ಆತ್ಮಕಥೆಗಳ ವೈಶಿಷ್ಟ್ಯವೆಂದರೆ, ವಿವಿಧ ವ್ಯವಸಾಯದಲ್ಲಿ ತೊಡಗಿದ ವಿವಿಧ ಜಾತಿ ಸಮುದಾಯದವರೂ ಆತ್ಮಕಥೆಯ ರಚನೆಯಲ್ಲಿ ತೊಡಗಿದ್ದು. ಎಪ್ಪತ್ತರ ದಶಕದಲ್ಲಿ ಆತ್ಮಕಥೆಗಳಿಗೆ ಕ್ರಾಂತಿಕಾರಿ ತಿರುವು ಸಿಕ್ಕಿತು. ಇದರ ಮೇಲೆ ದಲಿತ ಪ್ಯಾಂಥರ್ನ, ಚಳವಳಿಯ ಪ್ರಭಾವವಾಯಿತು. ‘ಬಲೂತ’, ‘ಉಪರಾ’, ಉಚಲ್ಯಾ’ದಂತಹ ಆತ್ಮಕಥೆಗಳು ಪ್ರಕಟಗೊಂಡಾಗ ಸಾಹಿತ್ಯಾಸಕ್ತರೆಲ್ಲರೂ ಹುಬ್ಬೇರಿಸುವಂತಾಯಿತು. ಬಿಸಿ-ಬಿಸಿ ಚರ್ಚೆ, ವಾದ-ವಿವಾದ ನಡೆಯಿತು. ಮರಾಠಿ ದಲಿತ ಆತ್ಮಕಥೆಗಳಿಗೆ ಇಂಗ್ಲೀಷಿನಲ್ಲೂ ಅಪಾರ ಬೇಡಿಕೆ ಬಂತು. ಭಾರತೀಯ ಭಾಷೆಗಳಿಗೂ ಭಾಷಾಂತರಗೊಂಡವು.
ದಲಿತರ ಆತ್ಮಕಥೆಗಳಲ್ಲಿ ದಲಿತರ ಶೋಷಣೆ, ಸವರ್ಣೀಯರ ದೌರ್ಜನ್ಯ, ಅವರು ಅನುಭವಿಸಿದ ಅಪಾರ ವೇದನೆ, ತೊಳಲಾಟ, ಪಟ್ಟ ಸಂಕಟ, ನಡೆಸಿದ ಚಳವಳಿ, ಹೀಗೆ ಒಟ್ಟಾರೆಯಾಗಿ ಗತಕಾಲದ ಚರಿತ್ರೆಯ ದುರಂತ ಚಿತ್ರಣ ವ್ಯಕ್ತವಾಯಿತು. ಇದೊಂದು ರೀತಿಯ ಸಾಮಾಜಿಕ, ಸಾಂಸ್ಕೃತಿಕ ದಸ್ತಾವೇಜು ಎನಿಸಿತು. ಅಂಥ ಹತ್ತಾರು ಮರಾಠಿ ದಲಿತ ಆತ್ಮಕಥೆಗಳು ಕನ್ನಡಕ್ಕೆ ಭಾಷಾಂತರಗೊಂಡವು.
ಅಶೋಕ ಪವಾರ ಅವರ ‘ಬಿಡಾರ’ ಅಂಥದೊಂದು ಮಹತ್ವದ ದಲಿತ ಆತ್ಮಕಥೆ. ಅಲೆಮಾರಿ ಜೀವನ ಸಾಗಿಸುವ ಇಡೀ ಸಮುದಾಯದ ಕಥೆಯು ಹೃದಯ ಹಿಂಡುವಷ್ಟು ಪ್ರಖರವಾಗಿ ಮಾಡಿ ಬಂದಿದೆ. ಇದು ಕಲ್ಲು ಕಡೆದು, ಮನೆ, ಕೆರೆ, ಒಡ್ಡುಗಳನ್ನು ಕಟ್ಟುವ ಸಮುದಾಯದವರ ಕಥನ. ಇವರಿಗೆ ಯಾವುದೇ ಶಾಶ್ವತವಾದ ಊರಿಲ್ಲ, ಮನೆಯಿಲ್ಲ, ಆಸ್ತಿಪಾಸ್ತಿಯಿಲ್ಲ, ಹೊಲಗದ್ದೆಯಿಲ್ಲ. ಇಂದು ಒಂದು ಊರಾದರೆ, ನಾಳೆ ಮತ್ತೊಂದೂರು. ಊರೂರು ತಿರುಗಾಡಿ, ಕಲ್ಲು ಒಡೆದು ಹೊಟ್ಟೆ ಹೊರೆಯುವುದೇ ಇವರ ಜೀವನ ಕ್ರಮ. ಈ ಜೀವನ ಯಾತ್ರೆಯಲ್ಲಿ ಅನುಭವಿಸಿದ ನೋವು, ಹಸಿವು, ಸಂಕಟ, ಪೋಲೀಸ್ ದೌರ್ಜನ್ಯ - ಮುಂತಾದವುಗಳ ಚಿತ್ರಣ ಕರುಳು ಹಿಂಡುವಷ್ಟು ಸಶಕ್ತವಾಗಿ ಮೂಡಿ ಬಂದಿದೆ.”
****
‘ಬಿಡಾರ’ದ ಆಯ್ದ ಭಾಗ
“ನಮ್ಮದು ಬೇಲದಾರ ಜಾತಿ. ಚೀರೆಕಲ್ಲು ಒಡೆದು ಗೋಡೆ ಕಟ್ಟುವ ಕೆಲಸ ಮಾಡುತ್ತದೆ. ಯಾವ ಊರಾಗ ಕೆಲಸ ಸಿಗತದೋ ಆ ಊರಿಗೆ ಹೊಗತಿದ್ವಿ. ಊರ ಹೊರಗಿನ ಹೇಲುಗೇರಿಯಲ್ಲಿ ಬಿಡಾರ ಹಾಕುತಿದ್ವಿ. ಅಲ್ಲೇ ಜೋಪಡಿ ಕಟ್ಟುತಿದ್ವಿ. ತಯಾರಾಗತಿತ್ತ ನಮ್ಮ ಮನೀ. ಆ ಊರಾಗಿನ ಕೆಲಸ ಮುಗಿದ ಮ್ಯಾಲೇ ಮತ್ತ ಬಿಡಾರ ಹೊತ್ತಕೊಂಡು ಬ್ಯಾರೆ ಊರಿಗೆ ಹೋಗತಿದ್ವಿ. ಅಪ್ಪ-ಅಜ್ಜನ ಕಾಲದಿಂದಾನೂ ಹಿಂಗೆ ಅಲೆಮಾರಿಯವರ ಹಾಂಗ ತಿರುಗಾಡ್ತಾನೆ ಅದೇವಿ. ಎಷ್ಟೆಲ್ಲ ಹಳೇ ಪೀಳಗಿಯವರು ಎಲ್ಲೆಲ್ಲಿ ತಿರುಗಾಡಿ ಜೀವನ ಕಳದ್ವಿ ಅನ್ನೋದು ನಮ್ಮ ಅಪ್ಪ-ಅಜ್ಜಂದಿರಿಗೂ ಗೊತ್ತಿಲ್ಲ. ಇಂಥದೇ ಬೇಲದಾರ ಜಾತಿಯ ಲಕ್ಷ್ಮ ಣ ಬೇಲದಾರನ ಜೋಪಡಿಯಲ್ಲಿ ನಾನು ಜನಿಸಿದೆ. ಬುದ್ಧಿ ಬಂದ ಮ್ಯಾಲೆ ಎಲ್ಲ ಒಂದೊಂದೇ ಗೊತ್ತಾಗಾಕ ಹತ್ತಿತು.
ನಮ್ಮ ಹಂತ್ಯಾಕೂ ಮರ್ನಾಲ್ಕು ಕತ್ತಿಗಳಿದ್ವು. ನಾನು ಅದನ್ನು ಮೇಯಿಸಾಕ ಕರಕೊಂಡ ಹೋಗತಿದ್ದೆ. ಹಾಂಗ ನೋಡಿದರೆ ಕತ್ತಿ ನಮ್ಗ ಲಕ್ಷಮಿ ಇದ್ದಾಂಗ. ಅದರ ಮ್ಯಾಲ ಬಿಡಾರ ಮತ್ತು ಚೀರೆಕಲ್ಲು ಹೊರಾಕ ಉಪಯೋಗಾಗತ್ತಿತ್ತು. ಅದಕ್ಕ ಬ್ಯಾರೆ ಪ್ರಾಣಿ ಹಾಂಗ ಮೇವೂ ತಂದ ಹಾಕಬೇಕಾಗಿಲ್ಲ. ಅದು ತಿಪ್ಪಿ ಮ್ಯಾಲೀನ ಚಿಪ್ಪಾಡಿ, ಹೇಲು ತಿಂತದ. ಬರೇ ಅದನ್ನು ತಿರುಗಾಡಿಸಿ ಕರ್ಕೊಂಡ ಬರೋ ಶ್ರಮ ಆಗತ್ತಿತ್ತು. ಕತ್ತಿ ಒಂದ ಸ್ವಭಾವ ಅಂದರ, ಅದು ಮತ್ತೊಂದ ಕತ್ತಿ ಎಂಜಲಾ ಮತ್ತು ರಾಡಿ ನೀರು ಯಾವಾಗ್ಲೂ ಕುಡಿಯಾಂಗಿಲ್ಲ. ಅದಕ್ಕೆ ಕುಡಿಯಾಕ ಸ್ವಚ್ಛ ನೀರೆ ಬೇಕು.
ಹಿಂಗ್ ಹೊಟ್ಟಿ ಸಲುವಾಗಿ ತಿರಗಾಡ್ತ ತಿರಗಾಡ್ತ ನಮ್ಮ ಬಿಡಾರ ವಾಡಿ ಊರಿಗೆ ಬಂತು. ಅಲ್ಲಿ ಯಾವ ಕೆಲ್ಸಾನೂ ಸಿಗಲಿಲ್ಲ. ಹಿಂಗಾಗಿ ಅಪ್ಪ ಅಲ್ಲೇ ನಮ್ಮ ಬಿಡಾರ ಬಿಟ್ಟು ಬ್ಯಾರೆ ಊರಿಗೆ ಕೆಲಸ ಹುಡಕ್ಕೊಂಡು ಹ್ವಾದ. ಎರಡು-ಮೂರೂ ದಿನಾ ಕಳೀತು. ಅಪ್ಪ ತಿರುಗಿ ಬರಲಿಲ್ಲ. ನಮ್ಗ ಚಿಂತಿ ಕಾಡಾಕ ಹತ್ತಿತು. ಕೊನಿಗೆ ಒಂದು ದಿನಾ ಸಂಜಿಗೆ ಅಪ್ಪ ತಿರುಗಿ ಬಂದ. ದಾರೂ ಕುಡದು ಟೈಟ್ ಆಗಿದ್ದ. ಅವ್ನಿಗೆ ಸರಿಯಾಗಿ ನಡಿಯಾಕೂ ಬರ್ತಿರಲಿಲ್ಲ. ಹಾಂಗ್ ಜೋಲಿ ಹೊಡಿತ ಹೊಡಿತ ಬಂದ. ಬಂದವನೇ ಕೈಯಾಗಿನ ಚೀಲ ಅವ್ವನ ಮೈಮ್ಯಾಲ್ ಚೆಲ್ಲಿದ, ‘ಏss ಉಂಡಗಿ ರಂಡೆ. ನನಗ ಈ ಮಟನ್ ಅಡಗಿ ಮಾಡಿ ಹಾಕು. ಇಲದಿದ್ದರ ನೋಡು’.
ನಾನು, ಕಿರಿತಮ್ಮ ಸಂಜೂ ಮತ್ತು ತಂಗಿ ಸೋಜಿ ಬಿಡಾರದ ಹಿಂದೆ ಹೋಗಿ ಗಪ್ಚಿಪ್ ಅಡಗಿ ಕುಂತ್ವಿ. ಮುದುಕಜ್ಜ, ಮುದುಕಜ್ಜಿನೂ ಗಪ್ಪಗಾರ. ಅಪ್ಪ ಎಂದ ದಾರೂ ಕುಡ್ದ ಬರ್ತಾನೊ, ಅಂದ ಎಲ್ಲಾರೂ ಅಪ್ಪನಿಗೆ ಅಂಜತಿದ್ದರು. ಯಾರಾದರೂ ಉಸರು ಬಿಟ್ಟರ ಸಾಕು, ನಮ್ಗೆಲ್ಲಾರಿಗೂ ಸಾಯೋ ಮಟ ಹಿಡ್ದು ಬಡಿತಿದ್ದ.
ಅವ್ವ ಥರಥರ ನಡುಗತಾ ಚೀಲದಾಗಿಂದ ಮಟನ್ ಹೊರಗ ತೆಗೆದ್ಲು. ಚೂರಿ ತಗೊಂಡು ಖಂಡ-ತುಂಡ ಮಾಡಿದ್ಲು. ಬೋಗಾಣಿಗೆ ಹಾಕಿದ್ಲು. ಮೂರು ಕಲ್ಲಿನ ಒಲಿಯೊಳಗ ತೊಗರಿಕಟಗಿ ತುರುಕಿದ್ಲು. ಉರಿ ಮಾಡಿ, ಒಲಿಮ್ಯಾಲೆ ಬೋಗಾಣಿ ಇಟ್ಲು. ಗಾಳಿ ಜೋರಾಗಿ ಬೀಸಿ, ಉರಿ ಹೊರಗ ಬರತಿತ್ತು. ಮತ್ತ ಆರುತಿತ್ತು. ಅವ್ವ ಒಲಿ ಊದಿ-ಊದಿ ಬ್ಯಾಸತ್ತ ಹೋಗತಿದ್ಲು, ಆಮ್ಯಾಲೆ ಜೋರಾಗಿ ಉರಿ ಹೊತ್ತಿ ಕೊಂಡಿತು. ಮಟನ್ ರಟರಟ ಕುದಿಯಾಕ ಶುರು ಮಾಡ್ತು.
ಅಪ್ಪ ಕೌದಿ ಮ್ಯಾಲೆ ಉರುಳಿದ. ಮಲಗಿದ್ದಲ್ಲಿಂದಲೇ ದಾರೂ ನಶೆದಾಗ ಅವ್ವನಿಗೆ ಬಯ್ಯಾಕ ಶುರು ಮಾಡಿದ. ‘‘ಏss ಪುತಳಿ ರಂಡೆ, ನೀ ಸತ್ತರ ಬ್ಯಾರೆ ಮದ್ವಿ ಮಾಡಿಕೋತಿನಿ. ನಿನ್ನಂಗ ಛಪ್ಪನ್ನ ರಂಡೆಯರು ಅದಾರು. ಬ್ಯಾರೆ ಊರಾಗ ಚೀರೆಕಲ್ಲಿನ ಕೆಲಸ ಸಿಕ್ಕೆತಿ. ಆ ಊರ ಧಣಿ ಮೊದಲ ಒಂದಿಷ್ಟ ರೊಕ್ಕ ಕೊಟ್ಟ. ಆ ದುಡ್ಡಿಂದಾನೇ ಒಂದ ಜರಾದಾರೂ ಕುಡಿದು, ಮಟನ್ ತಂದೇನಿ. ಇವತ್ತ ಮಜಾನೇ ಮಜಾ. ಮಾರಾಯ್ತಿ ನನಗ ಭಾಳ ಹಸಿವಿಯಾಗೇತಿ. ಮಟನ್ ಕುದ್ದೆತೋ ಇಲ್ಲೋ?’’
ಮಟನ್ ಅಡಿಗೆ ಕುದ್ದ ತಯಾರಾತು. ಅವ್ವ ಒಲಿ ಮ್ಯಾಲಿಂದ ಬೋಗಾಣಿ ಕೆಳಗಿಳಿಸಿದ್ಲು. ಒಂದು ಪರಾತಿನಾಗ ಅನ್ನ ಹಾಕಿದ್ಲು. ಅಪ್ಪ ಅನ್ನದ ಜೋಡಿ ಮಟನ್ ತಿನ್ನಾಕ ಹತ್ತಿದ. ಎಲಬು ಕಟಕಟ ಕಡಿಯಾಕ ಹತ್ತಿದ. ರೊಟ್ಟಿ ಮ್ಯಾಲ್ ರೊಟ್ಟಿ ತುರುಕಾಕ ಹತ್ತಿದ. ಅಪ್ಪ ಮರ್ನಾಲ್ಕು ರೊಟ್ಟಿಯಾದರೂ ನುಂಗಿರಬೇಕು. ದಾರೂ ತಲಿಗೇರಿ ಅಂವಾ ಅಲ್ಲೇ ಉರುಳಿದ. ಉರುಳಿ ಬೀಳತಾ-ಬೀಳತಾ ಅವ್ನ ಬಾಯಾಗಿಂದ ತುತ್ತು ಅರ್ಧ ಹೊರಗ ಬಿತ್ತು. ಅಪ್ಪನ ಮೀಸಿಗೆ ಮಟನ್ ರಸಾ ಅಂಟಿಕೊಳ್ತು. ಅಪ್ಪ ಹಾಂಗ ಕಣ್ಮುಚ್ಚಿಕೊಂಡ ಗಪ್ಚಿಪ್ ಬಿದ್ದುಕೊಂಡ. ಕೈ ಎಲ್ಲ ಎಂಜಲಾಗಿತ್ತು. ಮುಂದ ಸ್ವಲ್ಪ ಹೊತ್ತಾದ ಮ್ಯಾಲ ಅವ್ವ ಕುಡಿಯಾಕ ಮತ್ತ ಕೈ ತೊಳಕೊಳಾಕ ನೀರ ಕೊಡಬೇಕಂತ ಅಪ್ಪನನ್ನು ಎಬ್ಬಿಸಾಕ ಹ್ವಾದ್ಲು. ಅಪ್ಪ ಏಳಲಿಲ್ಲ. ಮುಂದ ಅವ್ವ ಅಪ್ಪನ ಗೋಣ ಕೆಳಗ ಕೈಹಾಕಿ ಎಬ್ಬಿಸಿದ್ಲು. ಕುಂಡರಿಸಿದ್ಲು. ಅಪ್ಪ ಸುತ್ತಲೂ ಕಣ್ಣು ತಿರುಗಿಸಿ ನೋಡಿದ. ಸಿಟ್ಟಿಂದ ಒಮ್ಮೆಲೆ ಗಕ್ಕಂತ ಎದ್ದುನಿಂತ. ನನಗ ಯಾಕ ಎಬ್ಬಿಸಿದಿ ಅಂತ ಅವ್ವನನ್ನ ನೆಲಕ್ಕ ಕೆಡವಿ, ಕಾಲಿಂದ ಒದಿಲಿಕ್ಕ ಶುರು ಮಾಡಿದ. ಅವ್ವ ಠೊ-ಠೊ ಅಂತ ಹೊಯ್ಕಾಳ್ಳಾಕ ಶುರು ಮಾಡಿದ್ಲು. ಒಮ್ಮಿ ಈ ಕಡೆ, ಮತ್ತೊಮ್ಮಿ ಆ ಕಡೆ ಹೊಳ್ಳಾಡಾಕ ಹತ್ತಿದ್ಲು. ಆವಾಗ ನಾನು, ಸಂಜೂ, ಸೋಜಿ ಬೊಬ್ಬಿ ಹೊಡಿತಾ ಅವ್ವನ ಮೈ ಮ್ಯಾಲೆ ಬಿದ್ವಿ. ಆಗ ಅಪ್ಪ ಬಡಿಯೋದನ್ನ ನಿಲ್ಲಿಸಿದ. ನಮ್ಮ ಕೊನೆಗೂ ಫಡ ಫಡ ಅಂತ ಹೊಡೆದು, ಹೋಗಿ ಕೌದಿ ಮ್ಯಾಲೆ ಬಿದ್ದುಕೊಂಡ. ಅವ್ವ ಅಳಾಕ ಶುರು ಮಾಡಿದ್ಲು. ಅಳತ-ಅಳತಾ ದೈವಕ್ಕ ಹಿಡಿಶಾಪ ಹಾಕಿದ್ಲು ‘‘ಹೆಣಾ ಎತ್ಲಿ ಆ ಅವ್ವ ಅಪ್ಪಂದು. ದರಿದ್ರ ಗಂಡನ ಜೋಡಿ ಲಗ್ನ ಮಾಡಿದರು, ನಂದೆಲ್ಲ ವಾಟೋಳೆ ಆತು. ಮಗಳು ಸತ್ತಾಳೋ-ಬದುಕಿದಾಳೋ ಅಂತ ನೋಡಾಕೂ ಬರಲಿಲ್ಲ. ಈಗ ಅವನ ಜೋಡಿ ನಾ ಹ್ಯಾಂಗ ಸಂಸಾರ ಮಾಡ್ಲಿ. ನಾನ ಬಾಂವಿ ಹರ್ಕೋತೀನಿ. ಸತ್ತ ಮೇಲಾದರೂ ಈ ಭಾಡ್ಯಾ ಸುಧಾರಿಸಬೌದು. ದಾರೂ ಕುಡಿಯೋದು ಬಿಡಬೌದು. ಇಡೀ ದಿನಾ ಬಾಯಾಕ ಬುರುಗ ಬರೋ ಮಟಾ ಕೆಲಸ ಮಾಡಬೇಕು ಮತ್ತು ಸಂಜೀ ಮುಂದ ಈ ಭಾಡ್ಯಾನ ಕೈಯಿಂದ ಹೊಡ್ತ ತಿಂದ ಸಾಯಬೇಕು. ಇನ್ನು ಮಾತ್ರ ನನ್ನಿಂದ ಸಹಿಸಿಕೊಳ್ಳೋದು ಸಾಧ್ಯವಿಲ್ಲವ್ವ...’’ ಹಿಂಗ ಅವ್ವ ಏನೇನೋ ಬಡಬಡಿಸಾಕ ಹತ್ತಿದ್ಲು. ಮತ್ತ ಅಪ್ಪ ಎದ್ದು ಅವ್ವನ ಮ್ಯಾಲೆ ರುಬ್ಬು ಕಲ್ಲು ಎತ್ತಿ ಹಿಡಿದ, ‘‘ಪುತಳಿ, ಬಾಯಿ ಮುಚ್ಕೊಂಡು ಸುಮ್ನ ಬಿದ್ದಿರು, ಇಲ್ಲದಿದ್ದರ ಕೊಂದೇ ಬಿಡ್ತೇನಿ, ಮಾದರಚೋದ್’’ ಅಪ್ಪನ ಮಾತಿಗೆ ಅಂಜಿ ಅವ್ವ ಗುಬ್ಬಚ್ಚಿ ಹಾಂಗ ಗಪ್ಚಿಪ್ ಆದ್ಲು. ಆಮ್ಯಾಲೆ ಅಪ್ಪ ಕೌಂದಿ ಮ್ಯಾಲೆ ಮಲಗಿಕೊಂಡ.
ನಾವಿನ್ನೂ ಉಂಡಿರಲಿಲ್ಲ. ಅವ್ವ ರ್ಯಾಗಿಂದಾನೇ ಉಪಾಸ ಇದ್ಲು, ಇಂದ ಮಂಗಳವಾರ ಆಗಿದ್ದರಿಂದ ಅವ್ವ ಅಂಬಾಬಾಯಿಯ ಉಪಾಸ ಮಾಡ್ತಾಳು. ಮತ್ತು ಆಕೀ ಎಂದೂ ಅಪ್ಪ ಉಂಡ ಹೊರತು ಉಣತಿರಲಿಲ್ಲ. ಇವತ್ತಂತೂ ಅಪ್ಪ ಊಟ ಮಾಡ್ತ-ಮಾಡ್ತಾ ಗದ್ದಲ ಹಾಕಿದ. ಮುಂದ ಅಪ್ಪ ಮಲಗಿದ ಮ್ಯಾಲೆ ನಾವೆಲ್ಲ ತಾಟು ತಗೊಂಡ್ವಿ. ಹಾಂಗ ಒಂದೆರಡು ತುತ್ತು ತಿಂದಿರಬೇಕೋ ಇಲ್ಲೋ, ಅಷ್ಟರಾಗ ಅಪ್ಪನಿಗೆ ಎಚ್ಚರಾತು, ಅಪ್ಪ ಎದ್ದ. ನಾವು ಉಣ್ಣೋದು ನೋಡಿ. ಬಯ್ಯತಾ ಬಂದ. ನಾವೆಲ್ಲ ತಾಟು ಬಿಟ್ಟು ದೂರ ಓಡಿ ಹೋದವಿ. ಮುಂದ ಅಪ್ಪ ಎಲ್ಲಾರ ತಾಟು, ಮಟನ ಸಾರು, ರೊಟ್ಟಿ - ಎಲ್ಲ ನಾಯಿಗೆ ಒಯ್ದ ಹಾಕಿದ. ಅವ್ವನ ಕರೆದ. ಅವ್ವ ಸನೇಕ ಹ್ವಾದ್ಲು ಅಪ್ಪನ ಕಾಲಿಗೆ ಬಿದ್ಲು. ಅಪ್ಪ ಮತ್ತ ಕಾಲಿನಿಂದ ನಾಲ್ಕಾರ ಸಲ ಒದ್ದ. ಆದರೂ ಅವ್ವ ‘ಇದೊಂದು ಸರ್ತಿ ಕ್ಷಮಾ ಮಾಡರಿ’ ಅಂತ ಕಾಲು ಹಿಡಕೊಂಡ್ಲು. ಆಗ ಅಪ್ಪ ಅವ್ವನನ್ನು ಬಿಟ್ಟ. ಕೌದಿ ಮ್ಯಾಲ ಹೋಗಿ ಉರುಳಿಕೊಂಡ. ಆದರೂ ಅವನ ಬಾಯಿಂದ ಬಯ್ಗಳು ಹೊರ ಬೀಳುತ್ತಲೇ ಇತ್ತು. ‘‘ನಿಮ್ಮವ್ವನ, ನೀ ಏನ್ ಹೆಂಡ್ತಿ ಆದಿಯೋ ಏನ್ ಕತ್ತಿನೋ, ನನಗ ಮಲಗಾಕ ಹೇಳಿ ನೀವು ಮಟನ್ ತಿನ್ನಾಕ ಹತ್ತಿದಿರೇನು? ಗಂಡನ್ನ ಬಿಟ್ಟು ಮಟನ್ ತಿನ್ನೊ ನೀನೆಂಥ ಹೆಂಡ್ತಿ? ಮಾಡಿದ ಈ ಪಾಪ ಎಲ್ಲಿ ತೀರಸ್ತಿ? ಗಂಡ ಅಂದರ ಪರಮೇಶ್ವರ ಇದ್ದಾಂಗ, ಮತ್ತ ದ್ಯಾವರಿಗೆ ಮೋಸ ಮಾಡ್ತಿಯೇನು. ನಿನಗ ಪಾಪ ಹತ್ತತದ. ಮುಂದಿನ ಜಲ್ಮದಾಗ ನೀನು ಹೇಲಾಗಿನ ಹುಳಾ ಆಗಿ ಹುಟ್ಟತಿ. ನೀನು ಹುಳಾ ಆಗಿ ಈ ಪಾಪ ತೀರಿಸಬೇಕಾಗತದ...’’ ಅಪ್ಪ ಹಿಂಗ ಏನೇನೋ ಬಡಬಡಿಸ್ತಾನೇ ಮಲಗಿದ. ನಾವು ಮಾತ್ರ ಉಪಾಸಿನೇ ಮಲಗಬೇಕಾಯ್ತು.
ಅಪ್ಪ ಇಂಥ ನಾಟಕ ಹಗಲೆಲ್ಲ ಮಾಡತಿದ್ದ. ಅಂವಾ ಇಂಥ ಗದ್ದಲ ಹಾಕಿದ ದಿನಾ ಮಾತ್ರ ನಾವೆಲ್ಲ ಉಪಾಸಾನೇ ಮಲಗಬೇಕಾಗತ್ತಿತ್ತು. ಅಪ್ಪನ್ನ ನೋಡಿದರ ಅಂಜಿಕೆಯಾಗತಿತ್ತು. ಒಮ್ಮೊಮಿ ಅವ್ನ ಜೀವಾನೇ ತಗೋಬೇಕು ಅಂತಾನೂ ಅನಿಸ್ತಿತ್ತು.”