ಬಿಡಾಲವ್ರತಿಗಳಿಗೆ ನೀಡಬೇಕಿದೆ ಬಡಿಗೆ ಏಟು...!

ಬಿಡಾಲವ್ರತಿಗಳಿಗೆ ನೀಡಬೇಕಿದೆ ಬಡಿಗೆ ಏಟು...!

ಬಿಡಾಲವ್ರತಿಗಳಿಗೆ ನೀಡಬೇಕಿದೆ ಬಡಿಗೆ ಏಟು...!

                 ಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಭಿನ್ನವಾಗಿ ನಿಲ್ಲುವುದು ಅದರ ಆರ್ಥಿಕತೆಯಿಂದಲೋ, ರಾಜಕೀಯದಿಂದಲೋ ಅಥವಾ ಇನ್ಯಾವುದೋ ಸಾಧನೆಯಿಂದಲೋ ಅಲ್ಲ. ಬದಲಾಗಿ ಅದು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿರುವ ವೈವಿಧ್ಯತೆಯಿಂದ ಮಾತ್ರ. ಭಾರತದ ವೈವಿಧ್ಯತೆಯನ್ನು ಅಳೆಯುವುದಕ್ಕೆ ಜಗತ್ತು ರೂಪಿಸಿರುವ ಯಾವುದೇ ಮಾಪಕಗಳಿಂದಲೂ ಸಾಧ್ಯವಾಗುವುದಿಲ್ಲ. ಆಹಾರ, ಅರಿವೆ, ಭಾಷೆ, ಧರ್ಮ, ಭೂಸ್ವರೂಪ, ವಾತಾವರಣ ಹೀಗೆ ಮಾನವ ರೂಪಿಸಿರುವ ಮತ್ತು ಮಾನವನನ್ನು ರೂಪಿಸಿರುವ ಎಲ್ಲಾ ಅಂಶಗಳೂ  ವೈವಿಧ್ಯತೆಯಿಂದ ಕೂಡಿರುವ ಪ್ರಪಂಚದ  ಏಕೈಕ ರಾಷ್ಟ್ರ ಭಾರತ ಎಂದರೆ ತಪ್ಪಾಗದು.

               ಭಾರತದ ಸತ್ವ ಅಡಗಿರುವುದು ಅದರ ವೈವಿಧ್ಯತೆಯಲ್ಲಿ ಮತ್ತು ಭಾರತ ಉಸಿರಾಡುತ್ತಿರುವುದು ಕೂಡ ಅದರ ವೈವಿಧ್ಯತೆಯಿಂದ ಮಾತ್ರ. ಇಲ್ಲಿ ವೈದಿಕ, ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ ಮತ್ತು ಯಹೂದಿ ಧರ್ಮಗಳಲ್ಲದೆ ಅಸಂಖ್ಯಾತ ಮೂಲನಿವಾಸಿ ಧರ್ಮಗಳು ನೆಲೆಗೊಂಡಿವೆ.  ಹೀಗಾಗಿ ಎಂದಿಗೆ ಪ್ರತಿಯೊಬ್ಬ ಭಾರತೀಯ ತನ್ನ ಮನೆಯಲ್ಲಿ ಮಾತ್ರ ತನ್ನ ಧಾರ್ಮಿಕ ಆಚರಣೆಗಳನ್ನು ಅನುಸರಿಸಿ ಸಾರ್ವಜನಿಕವಾಗಿ ತಾನು ಕೇವಲ ʼಭಾರತೀಯತೆʼಯನ್ನು ಅನುಸರಿಸಿ ಮತ್ತು ಇತರರಿಗೆ ಅನುಸರಿಸಲು ಉತ್ತೇಜಿಸುವನೋ ಆವಾಗ ಮಾತ್ರ ಭಾರತ ಅನ್ಯ ರಾಷ್ಟ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತಗೊಳ್ಳುವುದಲ್ಲದೆ, ರಾಜಕೀಯವಾಗಿಯೂ ಸದೃಢಗೊಳ್ಳಲು ಸಾಧ್ಯವಾಗುತ್ತದೆ ಹಾಗೂ ನಿಜಾರ್ಥದಲ್ಲಿ ವಿಶ್ವಗುರು ಎನಿಸುತ್ತದೆ. ಒಂದು ವೇಳೆ ಅನ್ಯ ದೇಶಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದೇ ಇದ್ದರೂ ಯಾವುದೇ ಅಡ್ಡಿ ಇಲ್ಲ ದೇಶವಾಸಿಗಳು ಸೌಹಾರ್ಧತೆಯಿಂದ ಮತ್ತು ಶಾಂತಿಯಿಂದ ಹಾಗೂ ಸಂತೋಷದಿಂದ ಜೀವಿಸುವಂತಾಗಬೇಕಾದರೆ ಧರ್ಮಗಳು ನಮ್ಮ ನಮ್ಮ ಮನೆಗಳಲ್ಲಿ ಮಾತ್ರವೇ ಇರುವಂತೆ ಮತ್ತು ಅದು ಸಾರ್ವಜನಿಕಗೊಂಡು ಬೀದಿಬೀದಿಗಳಲ್ಲಿ ಅಂಡಲೆಯದಂತೆ ಮಾಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.

              ಭಾರತವು ನಿಡುಗಾಲದಿಂದಲೂ ಪರಧರ್ಮ ಸಹಿಷ್ಣುತೆಗೆ ನೆಲೆಬೀಡಾಗಿದೆ. ಇತರರ ವಿಚಾರ ಮತ್ತು ಧಾರ್ಮಿಕ ಅಂಶಗಳನ್ನು ಯಾವ ರೀತಿ ಸಹಿಸಿಕೊಳ್ಳಬೇಕು‌ ಮತ್ತು ಅದು ಹೇಗೆ ಬದುಕಿನ ಬಹುಮುಖ್ಯವಾದ ಅಂಶ ಎಂಬುದನ್ನು ಕನ್ನಡದ ಉದ್ಗ್ರಂಥ ಕವಿರಾಜಮಾರ್ಗದ ಈ ಮುಂದಿನ ನುಡಿಗಳು ಬಹಳ ಉತ್ತಮವಾಗಿ ವಿಶದೀಕರಿಸುತ್ತವೆ ,

ಸವರಮೆಂಬುದು ನೆರೆಸೈರಿಸಲಾರ್ಪೊಡೆ

ಪರ ವಿಚಾರಮುಂ, ಪರಧರ್ಮಮುಮಂ|

ಕಸವೇನ್? ಕಸವರಮೇನ್? 

 

ಬ್ಬಸಮಂ ಬಸಮಲ್ಲದಿದುರ್ ಮಾಡುವರೆಲ್ಲಂ||

 

               ಬದುಕಿನಲ್ಲಿ ಇತರರ ವಿಚಾರಗಳನ್ನು ಮತ್ತು ಧಾರ್ಮಿಕ ನಂಬಿಕೆಗಳನ್ನು ಸೌಹಾರ್ದತೆಯಿಂದ ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಚಿನ್ನಕ್ಕೆ ಸಮಾನವಾದದ್ದು, ಸಹನೆ ಇಲ್ಲದವರು ಸಮಾಜದಲ್ಲಿ ಮಿತಿಮೀರಿದ ಸಂಕಟಗಳನ್ನು ಉಂಟುಮಾಡುತ್ತಾರೆ. ಸಹನಾಹೀನರಿಗೆ ಕಸ ಮತ್ತು ಕಸವರ ಎರಡು ಒಂದೇ ಆಗಿರುತ್ತದೆ. ಅವರು ಉಂಟುಮಾಡುವ ಸಂಕಟಗಳನ್ನು ಇಡೀ ಸಮಾಜವೇ ಅನುಭವಿಸಬೇಕಾಗುತ್ತದೆ.

                ಸೌಹಾರ್ಧ ಗುಣಗಳನ್ನು ಅಳವಡಿಸಿಕೊಂಡಿರುವ ಭಾರತದಲ್ಲಿ ಪ್ರಸ್ತುತ, ಅರಿಯದ ಮುಗ್ಧ ಮನಸ್ಸಿನ ಯುವಕರ ಬುದ್ಧಿಯ ಮೇಲೆ ಪೊಳ್ಳು ಧಾರ್ಮಿಕ ಮೇಲರಿಮೆಯ ಮಂಕುಬೂದಿಯನ್ನು ಸಿಂಪಡಿಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಮೃಗೀಯ ಮನಸ್ಸುಗಳು ಮತ್ತು ಧರ್ಮದ ಪೋಷಾಕು ಧರಿಸಿ ಅದರ ಮೂಲಕ ತಮ್ಮ ಪಾಪ ಕೃತ್ಯಗಳಿಗೆ ರಕ್ಷಣೆಯನ್ನು ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪಾಪಭೀತಿ ಇಲ್ಲದವರ ಸಂಖ್ಯೆಯು ಬೆಳೆಯುತ್ತಿರುವುದರಿಂದಾಗಿ ಭಾರತದ ಅಂತಃಸತ್ವ ನಷ್ಟಕ್ಕೊಳಗಾಗುತ್ತಿದೆ ಇದು ಹೀಗೇ ಮುಂದುವರಿದರೆ ಭಾರತೀಯರ ಬದುಕೂ ಅಸಹನೀಯವಾಗುತ್ತದೆ.  ಆದುದರಿಂದ ಮಿತಿಮೀರಿ ಬೆಳೆಯುತ್ತಿರುವ ಕತ್ತರಿ ಪ್ರಯೋಗ ನಿಷ್ಣಾತರಿಗೆ  ಬೆಸೆಯುವ ಸೂಜಿ-ದಾರದ ಮೂಲಕ ಉತ್ತರಿಸಬೇಕಿದೆ.

            ಇಂತಹ  ಆಷಾಢಭೂತಿಗಳು, ಆರ್ಥಿಕತೆ, ರಾಜಕೀಯ, ಸಮಾಜ ಅಷ್ಟೇ ಯಾಕೆ ರೋಗಕ್ಕೂ ಧಾರ್ಮಿಕತೆಯನ್ನು ಬೆರೆಸುವ ಚಾಣಾಕ್ಷತೆ ಹೊಂದಿರುತ್ತಾರೆ. ಈ ರೀತಿ  ಮುಗ್ಧರಿಗೆ ಧರ್ಮದ ಅರಿವಿನ ಬದಲಿಗೆ ಅದರ ಅಮಲಿನ ಅರಿವಳಿಕೆ ನೀಡಿ ಅವರನ್ನು ಬೌದ್ಧಿಕ ಅಡಿಯಾಳುಗಳನ್ನಾಗಿ ಮಾಡಿಕೊಂಡು ತಮ್ಮ  ಗುಪ್ತ ಕಾರ್ಯಗಳನ್ನು ನೆರವೇರಿಸಿಕೊಳ್ಳುವುದಕ್ಕೆ ಉದಾಹರಣೆಯಾಗಿ ಬೌದ್ಧ ಕತೆಗಳಲ್ಲಿ ಉಕ್ತವಾಗಿರುವ  ಬಿಡಾಲ ವೃತ್ತಾಂತವನ್ನು ಉಲ್ಲೇಖಿಸಬಹುದು.

                        ಹಿಂದೆ ಬ್ರಹ್ಮದತ್ತನು ವಾರಣಾಸಿಯಲ್ಲಿ ರಾಜ್ಯ ಆಳುತ್ತಿದ್ದಾಗ, ಬೋಧಿಸತ್ವನು ಮೂಷಿಕ ವಾಗಿ ಜನಿಸಿ ತನ್ನ ಮೂಷಿಕ ಪರಿವಾರದೊಡನೆ ವನದಲ್ಲಿ ಜೀವಿಸುತ್ತಿದ್ದನು. ಆಗ ಒಂದು ಬಿಡಾಲವು (ಬೆಕ್ಕು) ಆಹಾರ ಸಂಪಾದಿಸುವ ಶಕ್ತಿ ಇಲ್ಲದೆ, ಆಹಾರಕ್ಕಾಗಿ ಅಂಡಲೆಯುತ್ತ ಬಂದು, ಆ ಮೂಷಿಕ ಸಮೂಹವನ್ನು ಕಂಡು “ಈ ಇಲಿಗಳಿಗೆ ವಂಚಿಸಿ ಇವುಗಳನ್ನೆಲ್ಲಾ ತಿನ್ನುವೆ” ಎಂದು ದುರಾಲೋಚನೆ ಮಾಡಿ ಇಲಿಗಳ ಬಿಲದ ಬಳಿ, ಶುಚಿರ್ಭೂತನಾಗಿ ಸದ್ಭಕ್ತನ ವೇಷಧರಿಸಿ ಸೂರ್ಯನಿಗೆದುರಾಗಿ ಒಂಟಿ ಕಾಲಿನಲ್ಲಿ ನಿಂತು ಗಾಳಿ ಸೇವಿಸುವ ನಟನೆ ಮಾಡತೊಡಗಿತು.

                         ಮೂಷಿಕ ಬೋಧಿಸತ್ವನು ಎಂದಿನಂತೆ ಆಹಾರವನ್ನು ಹುಡುಕಾಡುತ್ತಿರುವಾಗ ಈ ಬಿಡಾಲನನ್ನು ನೋಡಿ ಯಾರೋ ಮಹಾಯೋಗಿ ಇರಬೇಕೆಂದು ಅದರ ಬಳಿ ಹೋಗಿ “ಮಹಾತ್ಮರೇ ತಾವ್ಯಾರು? ತಮ್ಮ ಶುಭ ನಾಮಧೇಯವೇನು? ಪ್ರಶ್ನಿಸಿದನು.

“ನನ್ನ ಹೆಸರು ಧರ್ಮಿಕ”

“ತಾವುಗಳು ಒಂಟಿಕಾಲಿನಲ್ಲಿ ನಿಂತಿರುವುದು ಯಾಕೆ?”

 “ಒಂದು ವೇಳೆ ನಾನು ನಾಲ್ಕು ಕಾಲುಗಳನ್ನು ನೆಲದ ಮೇಲೆ ಇಟ್ಟಲ್ಲಿ ಭೂಮಿ ತಾಳಲಾರದು ಆದ್ದರಿಂದ ಒಂಟಿಕಾಲಿನಲ್ಲಿ ನಿಂತಿರುವೆ….!”

“ಬಾಯಿ ಏಕೆ ತೆರೆದುಕೊಂಡು ನಿಂತಿರುವಿರಿ?”

 “ನಾನು ವಾಯುವನ್ನು ಹೊರತುಪಡಿಸಿ ಬೇರೆ ಏನನ್ನೂ ಸೇವಿಸುವುದಿಲ್ಲ….!”

“ಸೂರ್ಯನಿಗೆದುರಾಗಿ ನಿಂತಿರುವ ಕಾರಣ?”

“ನಾನು ಸೂರ್ಯನಿಗೆ ನಮಸ್ಕಾರ ಮಾಡುತ್ತಿರುವೆ….!”

                ಬೋಧಿಸತ್ವ ಅದರ ಮಾತುಗಳನ್ನು ಕೇಳಿ ಇದು ನಿಜಕ್ಕೂ ಮಹಾಯೋಗಿ ಎಂದು ಬಗೆದು ಅಂದಿನಿಂದ ತನ್ನ ಪರಿವಾರದೊಂದಿಗೆ ಪ್ರಾತಃಕಾಲ ಮತ್ತು ಸಂಧ್ಯಾಕಾಲಗಳಲ್ಲಿ ಬಿಡಾಲ ಸೇವೆಗೆ ಹೋಗುತ್ತಿದ್ದನು ಹಾಗೆಯೇ ಬಿಡಾಲವು, ಮೂಷಿಕಗಳಿಗೆ ಧರ್ಮ ಬೋಧನೆಯನ್ನು ಮಾಡತೊಡಗಿತು. ಹೀಗೆ ಸೇವೆಯು ಮುಂದುವರೆಯುತ್ತಿರಲು ಕ್ರಮೇಣ ಇಲಿಗಳ ಸಂಖ್ಯೆ ಕುಸಿಯತೊಡಗಿತು. ಇಲಿಗಳಿಗೆ ಅನುಮಾನ ಉಂಟಾಗಿ ಬೋಧಿಸತ್ವನ ಬಳಿಬಂದು “ಹಿಂದೆ ಬಿಲದ ತುಂಬಾ ಇದ್ದ ನಾವು ಇತ್ತೀಚೆಗೆ ಬಹಳ ಕಡಿಮೆಯಾಗಿದ್ದೇವೆ ಇದಕ್ಕೆ ಕಾರಣವನ್ನು ಹುಡುಕಬೇಕು” ಎಂದು ಕೇಳಿಕೊಂಡವು. ಬೋಧಿಸತ್ವನು ಬಿಡಾಲನ ಮೇಲೆ ಶಂಕೆ ಪಟ್ಟು ಸತ್ಯಾಸತ್ಯತೆಯ ಪರಿಶೀಲನೆಗಾಗಿ ಅಂದಿನ ಬಿಡಾಲ ಸೇವೆಯು ಪೂರ್ಣಗೊಂಡ ನಂತರ ಉಳಿದ ಇಲಿಗಳನ್ನು ಮುಂದೆ ಬಿಟ್ಟು ತಾನು ಹಿಂದೆ ಉಳಿಯಿತು. ಅದೇ ಸಮಯಕ್ಕೆ ಬಿಡಾಲವು ಬೋಧಿಸತ್ವನನ್ನು ಕೊಲ್ಲಲು ಅವನ  ಮೇಲೆ  ಹಾರಿತು ಚಾಕಚಕ್ಯತೆಯಿಂದ ಬಿಡಾಲನ ದಾಳಿಯಿಂದ  ತಪ್ಪಿಸಿಕೊಂಡ ಬೋಧಿಸತ್ವ “ಆಹಾ  ಬಿಡಾಲವೇ ನಿನ್ನ ಧರ್ಮಬೋಧನೆಯು, ಧರ್ಮಕ್ಕಾಗಿ ಅಲ್ಲ. ನಿನ್ನ ಸ್ವ-ಅನುಕೂಲಕ್ಕಾಗಿ ಅಲ್ಲವೇ? ಹೇ ಮಿತ್ರರೇ  ಇಲ್ಲಿ ಬನ್ನಿ ನಮ್ಮ ಬಂಧುಗಳ ಪ್ರಾಣ ಹರಣ ಮಾಡಿದ ಠಕ್ಕನು ಸಿಕ್ಕಿಬಿದ್ದನು” ಎಂದು ಎಲ್ಲಾ ಇಲಿಗಳನ್ನು ಕೂಗಿ ಕರೆದನು. ಇಲಿಗಳೆಲ್ಲವೂ ಸೇರಿ ಬಿಡಾಲನ ಮೇಲೆ ಮುಗಿಬಿದ್ದು ಅವನನ್ನು ಕೊಂದು ಹಾಕಿದವು.

               ಶತ್ರು ಸಂಹಾರವೇನೋ ಆಯಿತು, ಆದರೆ ಇಲ್ಲಿ ಒಂದು ಬಹುಮುಖ್ಯ ಅಂಶವನ್ನು ಗಮನಿಸಬೇಕು ಪೂರ್ವಾಪರ ವಿಚಾರಿಸದೆ ಸೂಖಾಸುಮ್ಮನೆ ಆಷಾಢಭೂತಿಯನ್ನು ನಂಬಿದ ಪರಿಣಾಮ ಮೂಷಿಕಗಳು ತಮ್ಮ ಬಂಧುಗಳನ್ನು ಕಳೆದುಕೊಂಡವು.

ಹೀಗೆ “ಧರ್ಮವನ್ನು ಧ್ವಜ ಮಾಡಿಕೊಂಡು ಗುಟ್ಟಾಗಿ ಪಾಪವನ್ನು ಆಚರಿಸಿ ಜನರಲ್ಲಿ ವಿಶ್ವಾಸ ಉಂಟುಮಾಡುವುದಕ್ಕೆ ಬಿಡಾಲ ವ್ರತ ಎಂದು ಹೆಸರು”.

              ಪ್ರಸ್ತುತ ಭಾರತದಲ್ಲಿಯೂ ಧರ್ಮವನ್ನು ಧ್ವಜ ಮಾಡಿಕೊಂಡು ಎಲ್ಲರ ಕಣ್ಣುಗಳಿಗೆ ಮಣ್ಣೆರಚಿ ತಮ್ಮ ಸ್ವಾರ್ಥ ಸ್ವ-ಕೃತ್ಯಗಳನ್ನು ನೆರವೇರಿಸಿಕೊಳ್ಳುವವರು ಒಂದೆಡೆಯಾದರೆ, ಧರ್ಮದ ಪೋಷಾಕನ್ನು ಅನ್ಯರಿಗೆ ಹೊದಿಸಿ ಅದರ ನೆರಳಿನಲ್ಲಿ ಬೇಕಾದ್ದನ್ನು ಹಾಸುಂಡು ಇತರರನ್ನು ಬೀಸಿ ಒಗೆಯುವ ದುಷ್ಟರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಇಂತಹ ಕೃತ್ಯಗಳಿಗೆ ಒತ್ತಾಸೆಯಾಗಿ ನಿಲ್ಲುವವರು ಗೋಮುಖ ವ್ಯಾಘ್ರಗಳ ಆಂತರ್ಯವನ್ನು ಅರಿಯದೆ ಅವರ ಅಸ್ತ್ರಗಳಾಗಿ ಬಳಕೆಯಾಗುತ್ತಿರುವುದು ಪ್ರಸ್ತುತ ಸಮಾಜದ ದುರಂತಗಳಲ್ಲಿ ಒಂದು. ಸ್ವಾರ್ಥಕ್ಕೆ ಮುಗ್ಧರನ್ನು ಬಳಕೆಮಾಡಿಕೊಂಡು ಸಮಾಜದಲ್ಲಿ ಅಶಾಂತಿಯನ್ನು ಎಬ್ಬಿಸಿ ತಾವು ಮತ್ತು ತಮ್ಮ ಪೀಳಿಗೆಗಳು ಮಾತ್ರ ನಿರುಮ್ಮಳವಾಗಿ ಬದುಕುವಂತೆ ನೋಡಿಕೊಳ್ಳುವ ಠಕ್ಕರು ಹೆಚ್ಚುತ್ತಿರುವುದು ಕಳವಳಕಾರಿಯಾದ ವಿಷಯ. ಭಾರತದ ಭವ್ಯ ಭವಿತವ್ಯಕ್ಕಾಗಿ ಇಂತಹ ಬಿಡಾಲ ವ್ರತಿಗಳನ್ನು ಬಗ್ಗು ಬಡಿಯಬೇಕಿದೆ. ಅದು ಸಾಧ್ಯವಾಗದಿದ್ದರೆ ಭಾರತದ ಭವಿಷ್ಯವು ಮಸುಕಾಗಿ ಬಿಡುವ ಅಪಾಯವಿದೆ.

          ಇಂತಹ ಬಿಡಾಲ ವ್ರತಿಗಳನ್ನು ಬಗ್ಗುಬಡಿಯಲು ನಮಗೆ ಯಾವುದೋ ಅವಧೂತನ ಆಗಮನವಾಗಬೇಕಿಲ್ಲ ಅಥವಾ ಅನ್ಯನೆಲದ ಆದರ್ಶಗಳ ಅಗತ್ಯವೂ ಇಲ್ಲ. ನಮ್ಮದೇ ನೆಲದ ಆದರ್ಶಗಳ ಅರಿವು ಮತ್ತು ಅವುಗಳ ಸರಿಯಾದ ಅನುಸರಣೆ ಇದ್ದರೆ ಸಾಕು. ಭಾರತದಲ್ಲಿ ಯಾವತ್ತಿಗೂ ಅಂತಹ ವಿಚಾರಗಳಿಗೆ ಕೊರತೆಯಾಗಿಲ್ಲ ಮತ್ತು ಕೆಲವೊಂದು ಆಳರಸರ ಅಸಹನೆಯ ನಡುವೆಯೂ ಸೌಹಾರ್ಧತೆಯು ಕುಸಿದಿರಲಿಲ್ಲ. ನಮ್ಮ ಪೂರ್ವಿಕರು ಅಂತಹ ಆದರ್ಶಗಳನ್ನು ಆಯಾ ಕಾಲದಲ್ಲಿ ಆಯಾ ಸಂದರ್ಭಕ್ಕೆ ಅನುಸಾರವಾಗಿ ಜನಮಾನಸದಲ್ಲಿ ಬಿತ್ತುತ್ತಲೇ ಬಂದಿದ್ದಾರೆ. ಅವುಗಳಲ್ಲಿ ಪ್ರಾತಿನಿಧಿಕವಾಗಿ ಒಂದೆರಡನ್ನು ಮುಂದಿನಂತೆ ಉದಾಹರಿಸಬಹುದು.   ಭಾರತವನ್ನು ಕುರಿತು ಅಥವಾ ಭಾರತದ ಹೆಮ್ಮೆಯನ್ನು ಪರಿಚಯ ಮಾಡಿಕೊಡುವಲ್ಲಿ ಸದಾಕಾಲ ಎಲ್ಲರಿಂದಲೂ ಉಕ್ತಗೊಳ್ಳುವ "ವಸುಧೈವ ಕುಟುಂಬಕಂ" ಎಂಬ ಸುಭಾಷಿತವನ್ನು ನೀವೆಲ್ಲಾ ಕೇಳಿರುತ್ತೀರಿ.  ಅದರ ಪೂರ್ಣಪಠ್ಯ ಹೀಗಿದೆ,

ಆಯಂ ನಿಜಃ ಪರೋವೇತಿ ಗಣನಾ ಲಘುಚೇತಸಾಂ

ಉದಾರ ಚರಿತಾನಾಂ ತು ವಸುದೈವ ಕುಟುಂಬಕಂ

                ಈ ಸಂಸ್ಕೃತ ಸುಭಾಷಿತ ಭಾರತೀಯ ನೆಲದಿಂದಲೇ ರೂಪುಗೊಂಡಿದ್ದರೂ ಪ್ರಸಕ್ತ ಭಾರತೀಯರಲ್ಲಿ ಕೇವಲ ವಾಚ್ಯಾರ್ಥವಾಗಿ ಉಳಿದುಕೊಂಡಿದೆ. ಬಹುಶಃ ಹಿಂದೆಂದಿಗಿಂತಲೂ ಪ್ರಸ್ತುತ ಭಾರತದಲ್ಲಿ ಈ ಸುಭಾಷಿತದ ಅಂತರ್ಗತವನ್ನು ಅರ್ಥೈಸಿಕೊಂಡಿರುವ ಮತ್ತು ಅನುಸರಿಸುವ ಬೃಹತ್ ಸಮೂಹದ ಅನಿವಾರ್ಯತೆಯಿದೆ. ಸುಭಾಷಿತದ ಅರ್ಥ ಹೀಗಿದೆ, ಕೀಳು ಬುದ್ಧಿಯವರಿಗೆ ಮಾತ್ರ ಇವನು ನಮ್ಮವನು ಅವನು ಪರಕೀಯ ಎಂಬ ಭಾವನೆಗಳು ಆದರೆ ಉದಾರಗುಣವಿದ್ದವರಿಗೆ ಈ ಭೂಮಿಯೇ ಒಂದು ಕುಟುಂಬದಂತೆ. ವಸುಧೆ ಎಂಬುದು ಭೂಮಿಯನ್ನು ಪ್ರತಿನಿಧಿಸಿದರೆ ಒಳಾರ್ಥದಲ್ಲಿ ʼವಸುʼ ಅಂದರೆ ʼಜೀವʼ ಇರುವ ಸಕಲವೂ ಒಂದೇ ಕುಟುಂಬಕ್ಕೆ ಸೇರಿದವು ಎಂಬುದನ್ನು ಮುಂದಿನ ಪೀಳಿಗೆಯು ಅರಿಯುವ ರೀತಿಯಲ್ಲಿ ಪ್ರಸ್ತುತ ಪೀಳಿಗೆಯ ವರ್ತನೆಯು ಇರಬೇಕಾದದ್ದು ಅತ್ಯಗತ್ಯ ಹಾಗಾದಾಗ ಮಾತ್ರ ರತ್ನಗರ್ಭಾ ವಸುಂಧರಾ ಎಂಬುದು ನಿಜಾರ್ಥದಲ್ಲಿ ಸಾಕಾರಗೊಳ್ಳುತ್ತದೆ.

ಇದನ್ನೇ ಬಸವಣ್ಣ ತಮ್ಮ ವಚನದಲ್ಲಿ

ಇವನಾರವ ಇವನಾರವ ಇವನಾರವನೆಂದೆಣಿಸದಿರಯ್ಯ

ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆಣಿಸಯ್ಯ

ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆಣಿಸಯ್ಯ

ಎಂದು ತಿಳಿಹೇಳಿರುವುದು,

     

               ಬಹುಶಃ ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗದಿದ್ದರೆ ಇಡೀ ಜೀವನವು ಒಂದು ವ್ಯರ್ಥ ಸಾಧನದಂತೆ. ಅನ್ಯರ ಕುಟಿಲೋಪಾಯಗಳನ್ನು ಗ್ರಹಿಸಲು ಸಾಧ್ಯವಾಗದ ಮೊದ್ದುಗಳಾಗಿ ಬದಲಾಗುವುದು ಒಂದು ಕೀಳುದರ್ಜೆಯ ಜೀವನವಾಗಿರುತ್ತದೆ. ಅಂತಹವರಿಗೆ ಯಾವುದೇ ಕಾರಣಕ್ಕೂ ಸತ್ಯದರ್ಶನ ವಾಗದು ಮತ್ತು ಬದುಕಿನ ಮುಂಗಾಣ್ಕೆಯು ಅವರಿಗಿರದು ಅಂತಹ ಬದುಕು ಬದುಕುವುದರಿಂದ ಸ್ವತಃ ಮತ್ತು ಅನ್ಯರಿಗೂ ಪ್ರಯೋಜನವಿರದು. ಪ್ರಾರಂಭದಲ್ಲಿಯೇ ಕೂಟವಿದ್ಯೆ ಪ್ರಯೋಗವಾಗಿರುವುದನ್ನು ಗ್ರಹಿಸಲಾಗದ ವ್ಯಕ್ತಿಗಳಿಂದ  ಸಮಯದ  ಮತ್ತು ಸಮುದಾಯದ ಹತ್ಯೆಯಾಗುತ್ತದೆ.

ಈ ಕುರಿತು ಘಟ್ಟಿವಾಳಯ್ಯನವರ ವಚನ ಬಹಳ ಅದ್ಭುತವಾಗಿ ವಿವರಣೆ ನೀಡುತ್ತದೆ.

ಇರಿವ ಕೈದಿಂಗೆ ದಯೆ ಧರ್ಮದ ಮೊನೆಯುಂಟೇ?

ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೇ?

ಕೂಟವ ಕೂಡಿ ಸಮಯನೊಂದಲ್ಲಿ ಅಜಾತನ ಬಲ್ಲರೇ?

ಎನಗೆ ನಿಮ್ಮೊಳಗಿನ್ನೇತರ ಮಾತು?

ವೇಷಧಾರಿಗಳೆಲ್ಲಾ ನಿಮ್ಮ ಕೂಟಕ್ಕೆ ಹೊರಗು

ಚಿಕ್ಕಯ್ಯಪ್ರಿಯ ಸಿದ್ದಲಿಂಗ ಇಲ್ಲ ಇಲ್ಲ ಮಾಣು.

              ಕೊಲ್ಲುವ ಚೂರಿಗೆ ದಯೆ ಧರ್ಮದ ಮೊನೆ ಇರುವುದುಂಟೇ? ವಿಷ ಉಗುಳುವ ಹಾವಿನ ಹಲ್ಲುಗಳಲ್ಲಿ ಅಮೃತದ ಸುಧೆ ಹರಿಯಲು ಸಾಧ್ಯವೇ? ದುಷ್ಟರ ಸಂಗವ ಮಾಡಿ ಸಮಯವನ್ನು ಅನಾಯಾಸವಾಗಿ ವ್ಯರ್ಥ ಗೊಳಿಸಿದರೆ ಅದರಿಂದ ಶಿವ ಸಾಕ್ಷಾತ್ಕಾರ ಸಾಧ್ಯವೇ? ವೇಷಧಾರಿಗಳು ಮತ್ತು ಅಂತಹವರನ್ನು ನಂಬಿ ಸಮಯಾಲಾಪನೆ ಮಾಡುವವರು ಶಿವನನ್ನು ಅರಿಯುವ ಸಮೂಹದಿಂದ ಯಾವತ್ತಿಗೂ ಹೊರಗು.  ಇರಿವ ಚೂರಿ ಇವನು ನಮ್ಮವ ಇವನು ಪರರವ ಎಂದು ಪರಿಶೀಲನೆಗೆ ತೊಡಗುವುದಿಲ್ಲ. ಹಾಳುಗೆಡುಹುವವರಿಗೆ ತಮ್ಮ ಮನೆ ಪರರ ಮನೆಗಳ ಯಾವ ಭಿನ್ನತೆಗಳು ಇರುವುದಿಲ್ಲ ಅವರು ವಿಘ್ನಸಂತೋಷಿಗಳು. ಅಂತಹವರ ಇರಾದೆ ಅರಿಯದೆ ಅವರ ತಾಳಕ್ಕೆ ಕುಣಿದು ತಾನೂಕೆಟ್ಟು ತನ್ನವರನ್ನು ಕೆಡಿಸುವುದು ಹೇಯಕೃತ್ಯ.

                  ಹಾಗಾಗಿ ಮೋಸಮಾಡುವವನಿಗಿಂತ ಮೋಸಹೋಗುವವನ ತಪ್ಪು ಅಧಿಕ. ಸ್ವಾರ್ಥಸಾಧಕನ ನುಡಿಗೆ ಸಮಾಜಮುಖಿ ಒಳಿತಿನ ಲೇಪವಿರಲು ಸಾಧ್ಯವೇ? ನಯವಾದ ಮಾತುಗಳಿಂದ ಸ್ವಕಾರ್ಯ ಸಾಧನೆಗಾಗಿ ಸದಾಕಾಲ ಬಿಡುವಿರದೆ ದುಡಿಯುವ ನಯವಂಚಕರ ಆಂತರ್ಯವನ್ನು ಅರಿಯದಿದ್ದರೆ ಅದು ಸ್ವಯಂಕೃತ ಅಪರಾಧವಾಗಿರುತ್ತದೆ. ನಮ್ಮ ಬದುಕಿನ ಗುರಿಯು, ಯಾವಾಗಲೂ ಬದುಕು ಮತ್ತು ಬದುಕಲು ಬಿಡು ಎಂಬ ಆದರ್ಶದ ಆಧಾರದಲ್ಲಿ ಇರಬೇಕು. ಹಾಗೆಂದು ಧರ್ಮದ ಹೆಸರಿನಲ್ಲಿ ಕುಟಿಲ ಉಪಾಯಗಳನ್ನು ಹೂಡುವ ದುಷ್ಟರ ಕೃತ್ಯಗಳನ್ನು ಅರಿಯುವುದು ಬಹಳ ಸುಲಭವಾದ ಕೆಲಸವಲ್ಲ ಅದಕ್ಕಾಗಿ ಅರಿವಿನ ತಿಳಿವನ್ನು ತಿಲಮಾತ್ರವಾದರೂ ಹೊಂದಿರಬೇಕು ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗುಣವಿರಬೇಕು. ಅರಿತ ಮತ್ತು ಜವಾಬ್ದಾರಿಯುತ ನಾಗರಿಕರೆಲ್ಲರೂ ಜನಮಾನಸದಲ್ಲಿ ಇಂತಹ ಆಷಾಢಭೂತಿಗಳು, ಗೋಮುಖ ವ್ಯಾಘ್ರಗಳು ಮತ್ತು ಬಿಡಾಲ ವ್ರತಿಗಳ ಕುತಂತ್ರಗಳ ಬಗ್ಗೆ ಯುವಜನಾಂಗದಲ್ಲಿ ತಿಳಿವಳಿಕೆನ್ನು ಮೂಡಿಸುವುದು  ಹಾಗೆಯೇ ಕುಟಿಲ ಉಪಾಯ ಮಾಡಿ ತಮ್ಮ ಅನುಕೂಲಕ್ಕೆ ಅಸ್ತ್ರಗಳನ್ನಾಗಿ ಮಾಡಿಕೊಂಡಿರುವ ಮೃಗಗಳ ಕಪಿಮುಷ್ಠಿಯಿಂದ ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕಿದೆ. ಈ ಜವಾಬ್ದಾರಿಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ಹೊರಬೇಕಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಭಾರತದ ಭವಿಷ್ಯವನ್ನು ತಿಳಿದೂ ಕಗ್ಗತ್ತಲೆಗೆ ದೂಡಿದಂತೆ ಆಗುತ್ತದೆ.

              ಹಿಂದೆಂದಿಗಿಂತಲೂ ಪ್ರಸಕ್ತದಲ್ಲಿ ನಿಜ ದೇಶಪ್ರೇಮಿಗಳ ಅಗತ್ಯವಿದೆ, ದೇಶಪ್ರೇಮಿಯು ನಿಜವಾದ ಅರ್ಥದಲ್ಲಿ ದೇಶವಾಸಿಗಳ ಪ್ರೇಮಿಯಾಗಿರುತ್ತಾನೆ. ಕೇವಲ ಮಣ್ಣನ್ನು ಪ್ರೀತಿಸಿ ಮನುಷ್ಯರನ್ನು ದ್ವೇಷಿಸುವವನು ಮನುಷ್ಯರೂಪದ ಮೃಗವಾಗಿರುತ್ತಾನೆ. ದೇಶಪ್ರೇಮಿಗಳ ಸಮೂಹವನ್ನು ಲಕ್ಷಮಡಿ ವೇಗದಲ್ಲಿ ಬೆಳೆಸಿ ದ್ವೇಷಪ್ರೇಮಿಗಳನ್ನು ಮಟ್ಟಹಾಕಬೇಕಿದೆ. ಆದುದರಿಂದ ನಾಗರಿಕ ಸಮಾಜವು ಮೇಲು-ಕೀಳು ಮಡಿ-ಮೈಲಿಗೆ ಎಂಬ ರೋಗವನ್ನು ಸಂಸ್ಕೃತಿಯೆಂದು ಬಿಂಬಿಸುವವರಿಗೆ ವೈಚಾರಿಕ ಚಿಕಿತ್ಸೆಯನ್ನು, ತರತಮದ ಕಟ್ಟುಪಾಡುಗಳನ್ನೇ ಸಂಪ್ರದಾಯವೆಂದು ಕೊಂಡವರಿಗೆ ಅರಿವಿನ ಚಿಕಿತ್ಸೆಯನ್ನು, ಅನಾದಿ ಕಾಲದಿಂದಲೂ ಅಸಮಾನ ಸಂಪನ್ಮೂಲ ಹಂಚಿಕೆಯ ಕಾರಣದಿಂದಾಗಿ ಬಂದಿರುವ ಬಡತನವೆಂಬ ರೋಗಕ್ಕೆ ಆರ್ಥಿಕ ಚಿಕಿತ್ಸೆಯನ್ನು ಮತ್ತು ಅನ್ಯರ ಒಡಕಿನ ಮಾತುಗಳನ್ನು ಬಿಮ್ಮನೆ ಧರಿಸಿ ಓಡಾಡುವ ಮೊದ್ದುಗಳಿಗೆ ಶೈಕ್ಷಣಿಕ ಚಿಕಿತ್ಸೆ ನೀಡಬೇಕಾದದ್ದು ತುರ್ತು ಅಗತ್ಯವಾಗಿದೆ.

              ಭಾರತವೆಂಬ ಸೌಹಾರ್ದತೆಯ ಸೊಗದ ಸುಂದರ ವೈವಿಧ್ಯಮಯ ತೋಟಕ್ಕೆ ಧರ್ಮದ ಬಾವುಟಗಳನ್ನು ಹಿಡಿದು ತಮ್ಮ ಸ್ವಾರ್ಥಕ್ಕಾಗಿ ಕೋಮುದ್ವೇಷವನ್ನು ಕೆಂಡದ ಮಳೆಯಂತೆ ಸುರಿಯುವ ದುಷ್ಟರ ದುಷ್ಕೃತ್ಯಗಳನ್ನು ಮಟ್ಟ ಹಾಕಬೇಕಾದುದು ಮತ್ತು ಇಂತಹ ಹೇಯ ಕೃತ್ಯಗಳನ್ನು ಅತ್ಯಂತ ತಿರಸ್ಕಾರದಿಂದ ನೋಡಬೇಕಾದುದು ಹಾಗೆಯೇ ಇಂತಹ ಕೃತ್ಯಗಳನ್ನು ಎಸಗುವ ಬಿಡಾಲ ವ್ರತಿಗಳ ಬೆನ್ನುಮೂಳೆಯನ್ನು ಅರಿವಿನಸ್ತ್ರ ಬಳಸಿ ಮುರಿಯ ಬೇಕಾದುದು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯ ನಾಗರಿಕನ ಆದ್ಯ ಕರ್ತವ್ಯ. ಹಾಗಾದಾಗ ಮಾತ್ರ ಸ್ವತಂತ್ರ ಭಾರತದಲ್ಲಿ ಸರ್ವ ಸಮಾನ, ಸರ್ವ ಸಂಪನ್ನ ಮತ್ತು ಸೌಹಾರ್ಧ ಸಮಾಜದ ನಿರ್ಮಾಣವು ಸಾಧ್ಯವಾಗುತ್ತದೆ.

                                                                                                                                  :- ಕಾಂತರಾಜು ಕನಕಪುರ

(ದಿನಾಂಕ:- 04/07/2021 ರಂದು ಸಂಗಾತಿ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)