ಬಿಡುಗಡೆಯ ಹಾಡುಗಳು (ಭಾಗ ೧೦) - ಸಿಂಪಿ ಲಿಂಗಣ್ಣ

ಬಿಡುಗಡೆಯ ಹಾಡುಗಳು (ಭಾಗ ೧೦) - ಸಿಂಪಿ ಲಿಂಗಣ್ಣ

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳೆದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. ೧೯೨೨ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. ೧೯೨೫ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ೧೯೬೦ರಲ್ಲಿ ನಿವೃತ್ತರಾದರು. ಇವರ ತಾಯಿ ಮತ್ತು ಅತ್ತಿಗೆಯವರು ಹೇಳುತ್ತಿದ್ದ ತ್ರಿಪದಿಗಳನ್ನು ಬಾಲ್ಯದಿಂದಲೇ ಕೇಳುತ್ತಾ ಲಿಂಗಣ್ಣನವರಲ್ಲಿ ಜನಪದ ಸಾಹಿತ್ಯದತ್ತ ಒಲವು ಬೆಳೆಯ ತೊಡಗಿತು. ನಂತರ ಇವರು ಸಂಗ್ರಹಿಸಿದ ಜನಪದ ಹಾಡುಗಳನ್ನು ‘ಗರತಿಯ ಹಾಡು’ ಮತ್ತು ‘ಜೀವನ ಸಂಗೀತ’ ಎಂಬ ಸಂಕಲನಗಳಲ್ಲಿ ಪ್ರಕಟಿಸಿದರು. ನಂತರ ಹೊರತಂದ ಪುಸ್ತಕ ‘ಉತ್ತರ ಕರ್ನಾಟಕದ ಜನಪದ ಕಥೆಗಳು’. ಶಾಸ್ತ್ರೀಯವಾಗಿ ಒಂಬತ್ತು ಭಾಗಗಳಾಗಿ ವಿಭಜಿಸಿ ಪ್ರಕಟಿಸಿದ ಈ ಕೃತಿಯು ಎಂ.ಎ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.

ಜಾನಪದ ವಿಮರ್ಶೆಯ ಕೃತಿ ‘ಜನಾಂಗದ ಜೀವಾಳ’ ಪುಸ್ತಕವನ್ನೂ ಮಿಂಚಿನ ಬಳ್ಳಿ ಪ್ರಕಾಶನವು ೧೯೫೭ರಲ್ಲಿ ಪ್ರಕಟಿಸಿತು. ಇದರಲ್ಲಿ ಜನಪದ ಕಥೆಗಳು, ಗಾದೆಗಳು, ಒಗಟುಗಳು, ಬಯಲಾಟದ ಹಾಡುಗಳು, ವಾಕ್ ಸಂಪ್ರದಾಯಗಳು, ಪಡೆನುಡಿಗಳು- ಇವೆಲ್ಲದರ ರಸಭರಿತ ವಿಶ್ಲೇಷಣೆಯ ವಿಶಿಷ್ಟ ಕೃತಿ. ಜಾನಪದ ಕ್ಷೇತ್ರದಷ್ಟೇ ಇವರಿಗೆ ಪ್ರಿಯವಾಗಿದ್ದ ಮತ್ತೊಂದು ಕ್ಷೇತ್ರವೆಂದರೆ ಕಾವ್ಯಪ್ರಕಾರ. ೧೯೩೬ರಲ್ಲಿಯೇ ರಾಮನರೇಶ್‌ ತ್ರಿಪಾಠಿಯವರು ಹಿಂದಿಯಲ್ಲಿ ಬರೆದ ‘ಮಿಲನ’ ಖಂಡ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಇವರು ಹೊರತಂದ ಕವನ ಸಂಕಲನಗಳೆಂದರೆ ಮುಗಿಲಜೇನು, ಪೂಜಾ, ಮಾತೃವಾಣಿ, ನಮಸ್ಕಾರ, ಶ್ರುತಾಶ್ರುತ, ಸಾಯ್‌ಕೊಲ್‌ ಮುಂತಾದವುಗಳು. ಜಾನಪದ, ಕಾವ್ಯದಷ್ಟೇ ಉತ್ಕೃಷ್ಟ ಕೃತಿಗಳನ್ನು ನೀಡಿದ ಮತ್ತೊಂದು ಕ್ಷೇತ್ರವೆಂದರೆ ಪ್ರಬಂಧಪ್ರಕಾರ. ಭಾರತದ ಇತಿಹಾಸ, ಸಂಸ್ಕೃತಿಯ ಚಿತ್ರಣ, ವೈಚಾರಿಕತೆ ಜೀವನದೃಷ್ಟಿ, ಇವುಗಳನ್ನೊಳಗೊಂಡಂತೆ ಪ್ರಕಟಿಸಿದ ಪ್ರಬಂಧ ಸಂಕಲನಗಳೆಂದರೆ ‘ಸ್ವರ್ಗದೋಲೆಗಳು’. ‘ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?’, ‘ಬಾಳಬಟ್ಟೆ’, ‘ತಲೆಮಾರಿನ ಹಿಂದೆ’, ‘ಬದುಕಿನ ನೆಲೆ’, ‘ನೂರುಗಡಿಗೆ ಒಂದು ಬಡಿಗೆ’ ಮುಂತಾದ ೧೫ ಪ್ರಬಂಧ ಕೃತಿಗಳು.

ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಸಿಂಪಿ ಲಿಂಗಣ್ಣನವರು ನಿಧನರಾದದ್ದು ೧೯೯೩ರ ಮೇ ೫ ರಂದು. ಸಿಂಪಿ ಲಿಂಗಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕುಟುಂಬದ ಸದಸ್ಯರು ಪ್ರಾರಂಭಿಸಿರುವ ‘ಜಾನಪದ ಅಧ್ಯಯನ ವೇದಿಕೆ’ಯಿಂದ ಪ್ರತಿವರ್ಷ ನೀಡುತ್ತಿರುವ ‘ಸಿಂಪಿ ಲಿಂಗಣ್ಣ ಪ್ರಶಸ್ತಿ’.

ಸಿಂಪಿ ಲಿಂಗಣ್ಣನವರು ೧೯೪೨ರಲ್ಲಿ ರಚಿಸಿದ ‘ಬಹುರೂಪಿ’ ಎನ್ನುವ ಕವನವನ್ನು ಆಯ್ದು ಪ್ರಕಟಿಸಲಾಗಿದೆ. ಈ ಕವನ ಹಸ್ತಪ್ರತಿಯಲ್ಲೇ ಇದ್ದಾಗಲೇ ಸ್ವತಃ ಸಿಂಪಿ ಲಿಂಗಣ್ಣನವರೇ ‘ಬಿಡುಗಡೆಯ ಹಾಡುಗಳು’ ಕೃತಿಯ ಸಂಪಾದಕರಿಗೆ ನೀಡಿದ್ದರು ಎನ್ನಲಾಗಿದೆ.

ಬಹುರೂಪಿ

ಇವರು ಯಾರು-ಎಂದು ಗಾಂಧಿಯವರ ಕುರಿತು ಬಗೆವರೆ ।

ಅವರು ಒಬ್ಬರಲ್ಲಿ ಹಲವು ರೂಪಿನವರು ಕಾಣರೆ ?॥

 

ರಾಟಿ ಕಾಮಧೇನುವಿರುವ ತಪಸಿವರ ವಸಿಷ್ಟನು ।

ಕೋಟಿ ವಿಘ್ನಗಳಲ್ಲಿ ಸತ್ಯ ಬಿಡದ ಹರಿಶ್ಚಂದ್ರನು ॥

 

ವೀರ ತಪಸಿನಿಂದ ದಿವ್ಯ ಸೃಷ್ಟಿಗೈದ ವಿಶ್ವಾಮಿತ್ರನು ।

ಘೋರ ಹಿಂಸೆ ಕರುಣೆಯಿಂದ ಮುರಿಯನಿಂತ ಬುದ್ಧನು ॥

 

ದನುಜ ಬಲವ ದೈವಶಕ್ತಿಯಿಂದ ಗೆಲುವ ಕೃಷ್ಣನು ।

ಮನುಜಕುಲವ ಪ್ರೇಮದಿಂದ ನಿಲಿಸಿ ನಿಂತ ಕ್ರಿಸ್ತನು ॥

 

ತಂದೆಯಾಜ್ಞೆಯಂತೆ ಮನಸೊನೊಲವ ತೊರೆದ ರಾಮನು ।

ಒಂದೆ ದೊಣ್ಕೆಯಿಟ್ಟುಕೊಂಡು ನಡೆದು ತೋರ್ದ ಭೀಷ್ಮನು ॥

 

ದಿವ್ಯ ನೆರವಿನಿಂದ ಗುರಿಯಹೊಡೆದ ಇಂದ್ರತನುಜನು ।

ಭವ್ಯಕರ್ಮಯೋಗನಿರತ ದಿವ್ಯತೇಜ ಸೂರ್ಯನು ॥

 

ಮರಣ ಹಿಂಸೆಯಲ್ಲು ಭಕ್ತಿಬಿಡದ ಪ್ರಹ್ಲಾದನು ।

ಪರಮಸೇವೆಗಸ್ತಿಬಿಡುವ ಆ ದಧೀಚಿವರ್ಯನು ॥

 

ಬಳಗದಲ್ಲಿ ದೈವರೂಪ ಕಂಡ ವರಗೃಹಸ್ಥನು ।

ಹೊಲೆಯರ ಹರಿಯಜನರಗೈದ ಪುಣ್ಯದಂಶನು ॥

 

ಬಗೆದಷ್ಟು ಭಾವ ಬೆಳಗುವ ಮಹಾತ್ಮನು ।

ಜಗದಜನ್ಮ ಸುಟ್ಟು ಜೀವನಾದ್ವಿಜಾತ್ಮನು ॥