ಬಿಡುಗಡೆಯ ಹಾಡುಗಳು (ಭಾಗ ೧೪) - ಜಿ. ನಾರಾಯಣ
ದೇಶಹಳ್ಳಿ ಜಿ. ನಾರಾಯಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು. ೧೯೨೩ ಸೆಪ್ಟೆಂಬರ್ ೨ರಂದು ಜನನ. ಸಾಹಿತ್ಯ, ಸಂಘಟನೆಯ ಜೊತೆಗೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಮದ್ದೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು. ೧೯೪೨ರಲ್ಲಿ `ಬ್ರಿಟಿಷರೇ’ ಭಾರತ ಬಿಟ್ಟು ತೊಲಗಿ ‘ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದರು. ೧೯೫೭ರಲ್ಲಿ ಬೆಂಗಳೂರು ಕಾರ್ಪೋರೇಷನ್ನಿನ ಕೌನ್ಸಿಲರ್ ಆಗಿದ್ದ ಇವರು ೧೯೬೪ರಲ್ಲಿ ಮೇಯರಾಗಿ ಚುನಾಯಿತರಾದರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್ ಪಕ್ಷದ ವಾರ್ತಾ ಪತ್ರದ ವ್ಯವಸ್ಥಾಪಕರಾದ ಇವರು ತಮ್ಮದೇ ಆದ ಸ್ವತಂತ್ರ ಮುದ್ರಣಾಲಯವನ್ನು ಬೆಂಗಳೂರು ಚಾಮರಾಜಪೇಟೆಯಲ್ಲಿ ಸ್ಥಾಪಿಸಿ ವಿನೋದ ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದರು. ಈಗಲೂ ಆ ಪತ್ರಿಕೆ ಪ್ರಕಟವಾಗುತ್ತಿದೆ. ಅನೇಕ ಸಂಘಸಂಸ್ಥೆಗಳ ಸ್ಥಾಪನೆಯಲ್ಲಿ ನಿರ್ವಹಣೆಯಲ್ಲಿ ಮಾರ್ಗದರ್ಶಕರಾಗಿದ್ದ ಇವರು ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
೧೯೬೨ರಿಂದ ೧೯೭೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣಕರ್ತರಾದರು. ಬೆಂಗಳೂರು ನಗರಪಾಲಿಕೆ ಮುಂದೆ ಕೆಂಪೇಗೌಡನ ಪ್ರತಿಮೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು. ಇವರ ಸಾರ್ವಜನಿಕ ಸೇವೆಗೆ ಸರ್ಕಾರ, ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಪ್ರಶಸ್ತಿ ನೀಡಿವೆ. ೧೯೭೨ರಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿ ಇವರಿಗೆ ದೊರೆತಿದೆ. ಇವರು ‘ಅಕ್ಷರ ನೀವ್ ಕಲಿಯಿರಿ’ ಎಂಬ ಗೋವಿನ ಹಾಡಿನ ಧಾಟಿಯ ೧೦೦ ಪದ್ಯಗಳ ಗ್ರಂಥವನ್ನು ಬರೆದಿದ್ದಾರೆ. ವಿನೋದ ಪತ್ರಿಕೆಯಲ್ಲಿ ಸಂಪಾದಕೀಯಗಳನ್ನು ಸೊಗಸಾಗಿ ಬರೆಯುತ್ತಿದ್ದರು. ಅವರ ಭಾಷಣಗಳೆಲ್ಲಾ ಲಿಖಿತರೂಪದಲ್ಲಿದ್ದು ಅದನ್ನು ಪ್ರಕಟಿಸಿದರೆ ಸೊಗಸಾದ ಉಪಯುಕ್ತ ಲೇಖನ ಸಂಗ್ರಹವಾಗುತ್ತದೆ. ಮುಖ್ಯವಾಗಿ ಜಿ.ನಾರಾಯಣರು ನಿಸ್ವಾರ್ಥ ಸಾರ್ವಜನಿಕ ಸೇವಾ ಧುರೀಣರಾಗಿದ್ದರು.
ಜಿ ನಾರಾಯಣರ ಒಂದು ಕವನ ೧೯೪೬ರಲ್ಲಿ ಪ್ರಕಾಶಿತ ‘ರಾಷ್ಟ್ರೀಯ ಪದಗಳು’ ಎನ್ನುವ ಸಂಕಲನದಲ್ಲಿ ಪ್ರಕಟವಾಗಿತ್ತು. ಅದರಿಂದ ಆಯ್ದು ‘ಬಿಡುಗಡೆಯ ಹಾಡುಗಳು’ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಅದನ್ನು ಇಲ್ಲಿ ನಿಮ್ಮ ಓದಿಗಾಗಿ ನೀಡಲಾಗಿದೆ…
ನಾವು ಮತ್ತು ನಮ್ಮವರ ಹಾಡು
ದೇಶಸೇವೆ ಮಾಡ್ವರಾರ್ । ಈಶ ಸೇವೆ ಗೈಯ್ವರಾರ್ । ದೇಶಕಾಗಿ
ಸಾಯ್ವರಾರ್ । ನಾವಲ್ಲವೆ ನಮ್ಮ ಜನರಲ್ಲವೆ । ಆಶೆಯನ್ನು ತೊರೆದ
ವರಾರ್ । ದೇಶಕ್ಕಾಗಿ ದುಡಿದವರಾರ್ । ಆ ಸ್ವರಾಜ್ಯ ಪಡೆವರಾರ್ ।
ನಾವಲ್ಲವೆ ॥ ಪಲ್ಲವಿ ॥
ಹಿಂದು ಮುಸಲಿಂ ಎಂಬುವರಾರ್ । ಬಂಧು ಭಾವ ಬೆಳೆಸಿದವರಾರ್ ।
ಒಂದೆ ತಾಯಿ ಮಕ್ಕಳೆಲ್ಲ । ನಾವೆಲ್ಲವೆ ನಮ್ಮ ಜನರಲ್ಲವೆ । ಪಂಡಿತ್
ನೆಹ್ರೂ ಎಂಬುವರಾರ್ । ಖಂಡಿತವಾದಿ ಜಿನ್ನಾರಾರ್ । ಹಿಂದೂಸ್ಥಾನ
ದವರು ಯಾರ್ ನಾವಲ್ಲವೆ ॥೧॥
ಜೋಕಿನಿಂದ ಹೇಳ್ವರಾರ್ । ಪಾಕಿಸ್ತಾನ ಕೇಳ್ವರಾರ್ । ಸಾಕು ಮಾಡ್ರಿ
ಎಂಬುವರಾರ್ । ನಾವಲ್ಲವೆ ನಮ್ಮ ಜನರಲ್ಲವೆ । ಜೋಕೆ ಜೋಕೆ ಎನ್ವ
ರಾರ್ । ಬೇಕೆ ಬೇಕು ಎನ್ನುವರಾರ್ । ಪಾಕಿಸ್ತಾನ ಕೋರುವವರಾರ್ ।
ನಾವಲ್ಲವೆ ॥೨॥
ಯೋಗಿ ರೈತರೆಂಬುವರಾರ್ । ತ್ಯಾಗಮೂರ್ತಿ ಎಂಬುವರ್ಯಾರ್ । ಬಾಗಿ
ತಲೆಯ ನಡೆವರಾರ್ । ನಾವಲ್ಲವೆ ನಮ್ಮ ಜನರಲ್ಲವೆ । ಆಗು ಹೋಗು
ಬೇಡ್ವರಾರ್ । ಭೋಗ ದಿನವು ಪಡುವವರಾರ್ । ರಾಗದಿಂದ ಮೆರೆವರಾರ್ ।
ನಾವಲ್ಲವೆ ॥೩॥
ಕಷ್ಟಪಟ್ಟು ಬೆಳೆವರಾರ್ । ಹೊಟ್ಟೆಗಿಲ್ದೆ ಕೊರಗುವರಾರ್ । ಬಟ್ಟೆ ಇಲ್ದೆ
ನಡುಗುವರಾರ್ । ನಾವಲ್ಲವೆ ನಮ್ಮ ಜನರಲ್ಲವೆ । ಶ್ರೇಷ್ಟ ರೈತರೆಂಬುವ
ರಾರ್ । ನಿಷ್ಟೆಯಿಂದ ದುಡಿವರಾರ್ । ರಾಗದಿಂದ ಮೆರೆವರಾರ್ ।
ನಾವಲ್ಲವೆ ॥೪॥
ಸಕ್ಕರೆಯ ತಯಾರ್ಮಾಡುವರಾರ್ । ಸಕ್ಕರೆ ಕಬ್ಬ ಬೆಳೆವರಾರ್ । ಸಕ್ಕರೆಗೆ
ಹಲ್ಲ ಕಿರಿವರಾರ್ । ನಾವಲ್ಲವೆ ನಮ್ಮ ಜನರಲ್ಲವೆ । ಅಕ್ಕಿ ರಾಗಿ ಬೆಳೆವರಾರ್ ।
ಹೊಕ್ಕು ಡಿಪೋಲ್ ಕೊಳ್ಳುವರಾರ್ । ಮೆಕ್ಕೆ ಜೋಳ ತಿನ್ವರಾರ್ ।
ನಾವಲ್ಲವೆ ॥೫॥
ತೋಟಿ ತಳವಾರ್ ಎಂಬುವವರಾರ್ । ಪಟೇಲ ಶ್ಯಾನುಬೋಗ್ ಎನ್ವರಾರ್ ।
ಹ್ಯಾಟಿನಮಲ್ದಾರರಾರ್ । ನಾವಲ್ಲವೆ ನಮ್ಮ ಜನರಲ್ಲವೆ ।
ಹ್ಯಾಟ ಹಿಡಿದು ಮೆರೆವರಾರ್ । ಬೂಟ ಹಾಕಿ ನಡೆವರಾರ್ । ಮೋಟಾರ್
ಹತ್ತಿ ಓಡುವರಾರ್ । ನಾವಲ್ಲವೆ ॥೬॥
ಲಂಚ ಲಂಚವೆನ್ನುವರಾರ್ । ಲಂಚಕ್ಕೈಯ್ಯ ಒಡ್ಡುವರಾರ್ । ಲಂಚ ಕೊಟ್ಟು
ತೋರ್ದವರಾರ್ । ನಾವಲ್ಲವೆ ನಮ್ಮ ಜನರಲ್ಲವೆ । ಹೊಂಚು ಹಾಕಿ
ಕಾಯ್ದವರಾರ್ । ಸಂಚು ನೋಡಿ ನೀಡ್ವರಾರ್ । ಲಂಚಕಾಗೆ ದುಡಿದವರಾರ್
ನಾವಲ್ಲವೆ ॥೭॥
(‘ರಾಷ್ಟ್ರೀಯ ಪದಗಳು, ೧೯೪೬)