ಬಿಡುಗಡೆಯ ಹಾಡುಗಳು (ಭಾಗ ೨೧) - ಎನ್ ವಿಷಕಂಠರಾವ್

ಬಿಡುಗಡೆಯ ಹಾಡುಗಳು (ಭಾಗ ೨೧) - ಎನ್ ವಿಷಕಂಠರಾವ್

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಕವಿ ಎನ್ ವಿಷಕಂಠರಾವ್ ಅವರ ಅಪರೂಪದ ಕವನವನ್ನು ಆರಿಸಿದ್ದೇವೆ. ವಿಷಕಂಠರಾವ್ ಕುರಿತಾಗಿ ಎಲ್ಲೂ ಮಾಹಿತಿಗಳು ಸಿಗುತ್ತಿಲ್ಲ. ಅವರ ಈ ಲಾವಣಿಯು ಮೈಸೂರಿನಲ್ಲಿ ೧೯೩೯ರಲ್ಲಿ ಪ್ರಕಟವಾದ ‘ಕಾಂಗ್ರೆಸ್ ವಿಶೇಷ ಲಾವಣಿ’ ಎಂಬ ಸಂಕಲನದಲ್ಲಿ ಪ್ರಕಟವಾಗಿದೆ. 

ಬದಲಾವಣೆಯೇ ಜೀವನದ ನಿಯಮ

ಇದ್ದಂತೆಯೆ ನಾವಿರೋಣವೆಂಬುವ ಮುಗ್ಧ ಧೋರಣೆಯಲಿ ಹುರುಳಿಲ್ಲಾ।

ಶುದ್ಧಮನದೊಳಿದ ತಿಳಿದುನೋಡಿ, ಜೀವಂತತನದ ಲಕ್ಷಣವಲ್ಲಾ ॥

 

ಮುದ್ದು ಪ್ರಕೃತಿಯು ಇದ್ದಂತಿರುವದೇ? ಬುದ್ಧಿವಂತರಿದನರಿತೆಲ್ಲಾ ।

ತಿದ್ದಿದ ನವನವ ಯೋಜನೆಕಾಲದಿ ಬುದ್ಧಿಶೂನ್ಯರಾಗಿ ಫಲವಿಲ್ಲಾ ॥

 

ಇದ್ದಂತೆಯೆ ಇರಲೆಂದುಕೊಳ್ವ ಮಹಮನ್ವಂತರ ದಾಟಿಹುದಲ್ಲಾ ।

ಇದ್ದುದನೆಲ್ಲವ ಬದಲಾಯ್ಸುವ ಘನ ಎದೆಗಾರಿಕೆಯುಗವೀಗೆಲ್ಲಾ ॥

 

ಯುಗಬದಲಾವಣೆಗನುಗುಣವಾಗಿ ಸಮಾಜದ ಸ್ಥಿತಿಗತಿಗಳು ಯಲ್ಲಾ ।

ಬಗೆಬಗೆಯಯಿಂದಲಿ ಬದಲಾವಣೆಯಾಗಿರುತಿರ ಬೇಕಾಗಿದೆಯಲ್ಲಾ ॥

 

ಈ ಬದಲಾವಣೆಯಿಂದ ಪ್ರಯೋಜನ ಮಂದಿಗೆ ಸಿಗುವಂತಿಹುದೆಲ್ಲಾ ।

ವಿಭವದಿ ವ್ಯಕ್ತಿಯ ಮತ್ತು ಸಮಾಜವ ಸಾಧನೆಯಾಗಿರಬೇಕಲ್ಲಾ ॥