ಬಿಡುಗಡೆಯ ಹಾಡುಗಳು (ಭಾಗ ೨೫) - ಪೆ. ರ. ಮ.(ರಘುರಾಮ)

ಬಿಡುಗಡೆಯ ಹಾಡುಗಳು (ಭಾಗ ೨೫) - ಪೆ. ರ. ಮ.(ರಘುರಾಮ)

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ ಎಂಬ ಭಾವನೆ ಬರುತ್ತದೆ. ‘ಈ ಕವಿ ದಕ್ಷಿಣ ಕನ್ನಡದವರು, ಯಾರೆಂದು ಖಚಿತವಾಗಿ ತಿಳಿಯದು. ರಘುರಾಮ ಎಂಬ ಮುದ್ರಿಕೆ ಇದೆ’ ಎನ್ನುವ ಶರಾ ಬರೆದಿದ್ದಾರೆ. ಭಾರತ ಬೋಧೆಯ ಉಳಿದ ಭಾಗ ಇಲ್ಲಿದೆ…

ಭಾರತ ಬೋಧೆ (ಭಾಗ ೨)

ಹಿಂದೂ ಮುಸಲ್ಮಾನ ಬಂಧುಗಳಿನ್ನೂ ।

ಒಂದೇ ಮನದಿ ಫಾರ್ಶಿ ಕ್ರಿಸ್ತ್ಯಾದಿಯರನ್ನೂ ॥

ಪೊಂದಿಸುತೈಕ್ಯಮತ್ಯದೊಳ್ ಮುಂದಿನ್ನು ।

ಚಂದದೊಳಿರೆ ನಮಗಿದಿರಿಹರೇನು ॥೧೧॥

 

ಕುಡಿತತನವೆ ಸರ್ವ ಕೇಡಿನ ಮೂಲ ।

ಕುಡಿತತನವೆ ದ್ರವ್ಯ ನಿಧಿಯ ನಿರ್ಮೂಲ ॥

ಕುಡಿತತನವೆ ಪಿಶ್ಯಾಚನ ಮೋಹಜಾಲಾ ।

ಕುಡಿತ ಬಿಡಲು ನಮಗಿದುವೇ ಸುಕಾಲಾ ॥೧೨॥

 

ಗುತ್ತೆ ಯೇಲಮ್ಮಿಗೆ ನಾವು ನಿಲ್ಲಬೇಕೆ ।

ನಿತ್ಯ ಬಡವರ ಗೋಳದು ನಮಗೇಗೆ?

ತೆತ್ತ ದುಡ್ಡಿನಗಂಟು ಹೋಯ್ತತ್ತ ಜೋಕೇ।

ಮತ್ತಿದ ತಿಳಿದರೂ ಬುದ್ಧಿಲ್ಲವೇಕೆ ॥೧೩॥

 

ಸ್ವದೇಹ ಪೋಷಣೆಯಾಯ್ತೆಮಗೆಲ್ಲ ।

ಸ್ವದೇಶಿಯಾಹಾರ ಹವೆ, ಬಿಸಿಲಲ್ಲಿ ॥

ಸ್ವದೇಶಮಾತೆ ಭಾರತಿಯುದರದಲೀ ।

ಸ್ವದೇಶಕ್ಕಾಗಿ ಹುಟ್ಟಿಹೆವು ನಾವಿಲ್ಲಿ ॥೧೪॥

 

ತಿಳಿದಿದ ದೇಶಸೇವೆಗೆ ಮನ ನೀಡಿ

ತಿಳಿದು ದೇಶೋದ್ಧಾರಕ್ಕಾಗಿ ಒಡಗೂಡೀ ॥

ಅಳಿದರೀ ದೇಹ ದೇಶದ ಮಣ್ಣೀ ನೋಡೀ ।

ತಿಳಿಸಿ ನೀವಿದ ದೇಶದ್ರೋಹಿಯೊಳ್ ಬೇಡೀ ॥೧೫॥

 

ದೇಶೀಯವಾದ ವಸ್ತ್ರಗಳನ್ನೆ ಧರಿಸೀ ।

ದೇಶೀಯ ಮಗ್ಗಕುತ್ತೇಜನ ಕೊಡಿಸೀ ॥

ದೇಶೀಯ ರಾಟೆಮೂಲಕ ನೂಲು ತೆಗಿಸೀ ।

ವಾಸಿಪ ಮನೆಯೊಳೆಲ್ಲರಿಗಿದ ಕಲಿಸೀ ॥೧೬॥

 

ಪರದೇಶದೊಡವೆಯ ಗೊಡವೆಯಂ ಬಿಡಿಸೀ ।

ಪರದೇಶಿಯರ ವೇಷ ಭಾಷೆ ಸಾಕೆನಿಸಿ ॥

ಪರರೊಳ್ ಮತ್ಸರ ಬೇಡಾ ನಂಬಿಕೆ ತ್ಯಜಿಸೀ ।

ಸ್ಥಿರದಿಂ ಸ್ವದೇಶೀಯ ವ್ರತವಿಂದೆ ಧರಿಸೀ ॥೧೭॥

 

ಗಾಂಧಿ ಮಹಾತ್ತುಮ ನೆಹರು ಮುಂತಾದಾ ।

ಮುಂದಾಳುಗಳು ತಿಳಿಸಿದ ಬುದ್ಧಿವಾದಾ ॥

ಎಂದಿಗು ಮರೆಯದೆ ವರ್ತಿಸಿ ಸುಖದಾ ।

ಮುಂದಿನ ಹಾದಿ ಸ್ವೀಕರಿಸಿರಾನಂದಾ ॥೧೮॥

 

ಇನ್ನಾದರು ಮನದೊಳ್ ಧೈರ್ಯತಾಳೀ ।

ಬನ್ನಿ ಭಾಯ್ ಬಡಿಕ ತನವ ಹಿಂದೆ ತಳ್ಳಿ ॥

ಭಿನ್ನ ಭೇದವ ಕಲಿಸುವ ಬೆಂಕಿ ಕೊಳ್ಳಿ ।

ಯನ್ನೀಗ ಉರಿಯದಂತೆ ನೋಡಿಕೊಳ್ಳಿ ।।೧೯।।

 

ಏಳಿರೆದ್ದೇಳಿರಿನ್ನಾದರ್ಕಣ್ತೆರೆದೂ ।

ಹಾಳಾದ ಜಾತಿ ವೈಷಮ್ಯಗಳ್ತೊರೆದೂ ॥

ಪೇಳಿದ ರಘುರಾಮದಾಸ ತಾ ಕರೆದೂ ।

ಬಾಳಿರ್ನೀವೈಕ್ಯಮತ್ಯದೊಳಿನ್ನು ಮೆರೆದೂ ॥೨೦॥

(ರಾಗ, ತಾಳ, ಮಟ್ಟು : “ರಾಷ್ಟ್ರೀಯದೇಳಿಗೆಗೆ ಮನವ ನೀನಿರಿಸು” ಎಂಬಂತೆ)