ಬಿಡುಗಡೆಯ ಹಾಡುಗಳು (ಭಾಗ ೮) - ರಾ ವೆ ಕರಿಗುದರಿ
ಬಿಡುಗಡೆಯ ಹಾಡುಗಳು ಕೃತಿಯಿಂದ ನಾವು ಈ ವಾರ ರಾ ವೆ ಕರಿಗುದರಿ ಅಥವಾ ಕರಗುದರಿ ಇವರ ಕವನವೊಂದನ್ನು ಆರಿಸಿ ಪ್ರಕಟಿಸಿದ್ಡೇವೆ. ಕರಿಗುದರಿಯವರ ಈ ಕವನ ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ’ ಎಂಬ ಸಂಕಲನದಲ್ಲಿ ಮೊದಲು ಪ್ರಕಟವಾಗಿದೆ. ಇವರ ಬಗ್ಗೆ ಯಾವುದೇ ಮಾಹಿತಿಗಳು ಎಲ್ಲೂ ದೊರಕುತ್ತಿಲ್ಲ. ಇವರ ಕವನದ ಜೊತೆ ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕವನವನ್ನೂ ಪ್ರಕಟ ಮಾಡುತ್ತಿದ್ದೇವೆ.
ಸ್ವಾತಂತ್ರ್ಯ ಎಂದು ದೊರಕುವುದು?
ಸ್ವಾತಂತ್ರ್ಯ ಎಂದು ದೊರಕುವುದು ನಮ್ಮ ದೇಶಕಾದಿನ ॥ಪಲ್ಲವಿ॥
ಇಬ್ಬರ ಜಗಳಾಟದಿಂದ ಮೂರನೆಯವನು ।
ಕೊಬ್ಬವನೆಂದು ತಿಳಿದು ಕಾರ್ಯಗೈದೊಡೆ ॥೧॥
ಹೊಲಮನೆ ಬಂಧುಗಳ ಸೌಖ್ಯ ತೊರೆವುದಲ್ಲದೆ ।
ನಲುಮೆಯ ಪ್ರಾಣವನು ಚೆಲ್ಲಲಂಜದಿರ್ದೊಡೆ ॥೨॥
ನನ್ನ ದೇಶ ನನ್ನ ಜನರು ನನ್ನೊಡವೆಗಳು
ಎನ್ನುವುದಭಿಮಾನ ನಮ್ಮೊಳಿರುವುದಾದೊಡೆ ॥೩॥
ಸತಿ ಸುತ ಹಿತ ಮಿತ್ರ ಪರಸ್ಪರರು ನಾಡಿನ ।
ಹಿತಕಾಗಿಯೇ ಮೋದದಿಂದ ಕಾರ್ಯಗೈದೊಡೆ ॥೪॥
ಎದ್ದರೆ ಸ್ವಾತಂತ್ರ್ಯ ಕುಳಿತರೆ ಸ್ವಾತಂತ್ರ್ಯ ।
ಬಿದ್ದರೆ ಕನಸಿನೊಳು ಸ್ವಾತಂತ್ರ್ಯ ನೆನೆದೊಡೆ ॥೫॥
-ರಾ.ವೆ.ಕರಿಗುದರಿ
***
ಸೇವಾದಲದ ಸೈನಿಕರು
ಭಾರತ ಮಾತೆಯ ಮಕ್ಕಳು ನಾವು । ಸೇವಾದಲದ ಸೈನಿಕರು ।
ಭೇದ ಭಾವವು ನಮ್ಮಲ್ಲಿಲ್ಲ
ಜಾತಿ ಭೇದವು ಸನಿಹದೊಳಿಲ್ಲ
ಎರಡು ತನವು ಕನಸಿನೊಳಿಲ್ಲ
ವೈರಿತನವು ನೆನಪಿನೊಳಿಲ್ಲ ॥
ದೇಶೋದ್ಧಾರವೆ ನಮ್ಮಯ ಆಟ
ತ್ರಿವರ್ಣ ಧ್ವಜವೇ ನಮ್ಮಯ ಬಾವುಟ
ಧ್ವಜದಡಿಯೇ ನಮ್ಮಯ ರಾವುಟ
ಜೀವನ ಮಂತ್ರವು ನಮ್ಮಯ ರಾಟಿ ॥
ಆತ್ಮ ತೇಜವೆ ನಮ್ಮಯ ಶಕ್ತಿ
ಸ್ವಾರ್ಥ ತ್ಯಾಗವೇ ನಮ್ಮಯ ಯುಕ್ತಿ
ಮೇಲಪ್ಪಣೆಯೇ ನಮ್ಮಯ ಕತ್ತಿ
ಇದರಿಂ ನಿಶ್ಚಯ ಭಾರತ ಮುಕ್ತಿ ॥
-ಅನಾಮಿಕ
(‘ಸೇವಾದಲದ ಗೀತೆಗಳು’ ಧಾರವಾಡ ೧೯೪೬ರಲ್ಲಿ ಪ್ರಕಾಶಿತ ಕೃತಿಯಿಂದ ಸಂಗ್ರಹಿತ)