ಬಿದಿರು ಹೂಬಿಟ್ಟ ಮರುವರ್ಷ ಬರಗಾಲ !

ಬಿದಿರು ಹೂಬಿಟ್ಟ ಮರುವರ್ಷ ಬರಗಾಲ !

ಈ ಮೇಲಿನ ಗಾದೆಯನ್ನು ನೀವೆಲ್ಲಾ ಬಹಳಷ್ಟು ಸಲ ಕೇಳಿರುತ್ತೀರಿ. ಬಿದಿರು ಸಸ್ಯ ಸಾಮಾನ್ಯವಾಗಿ ಹೂ ಬಿಡುವುದು ೬೦ ವರ್ಷಗಳಿಗೊಮ್ಮೆ. ಕೆಲವು ಜಾತಿಯ ಬಿದಿರುಗಳಲ್ಲಿ ಹೂವು ಬಿಡುವ ಸಮಯಗಳಲ್ಲಿ ವ್ಯತ್ಯಾಸವಿದ್ದರೂ, ಬಹಳಷ್ಟು ಬಿದಿರು ಸಸ್ಯಗಳು ಅರವತ್ತು ವರ್ಷಗಳಿಗೆ ಒಮ್ಮೆ ಹೂವು ಬಿಡುತ್ತದೆ. ೧೨ ವರ್ಷಗಳಲ್ಲಿ ಹೂವು ಬಿಡುವ ಬಿದಿರಿನ ಸಸ್ಯಗಳೂ ಇವೆ. ಹೂವು ಬಿಟ್ಟ ಬಿದಿರಿನಲ್ಲಿ ಅಕ್ಕಿಯಂತಹ ಕಾಯಿಗಳಾಗುತ್ತವೆ. ಇದನ್ನು ಬಿದಿರಕ್ಕಿ ಎಂದು ಕರೆಯುತ್ತಾರೆ. ಬಿದಿರಕ್ಕಿ ಉತ್ಪತ್ತಿ ಆದ ಬಳಿಕ ಬಿದಿರು ಸಸ್ಯ ಸಾಯುತ್ತದೆ.

ಬಿದಿರಿಗೂ ಬರಗಾಲಕ್ಕೂ ಏನು ಸಂಬಂಧ ಎಂದು ಹೇಳಲು ಹೋದರೆ, ಬಿದಿರು ಹೂಬಿಟ್ಟ ಬಳಿಕ ಅದರಲ್ಲಿ ಅಕ್ಕಿಯ ಉತ್ಪಾದನೆಯಾಗುತ್ತದೆ. ಬಿದಿರಿನ ಅಕ್ಕಿಯು ಸಂತಾನ ಅಭಿವೃದ್ಧಿಗೆ ಹೇಳಿ ಮಾಡಿಸಿದ ಔಷಧಿಯಂತೆ. ಈ ಅಕ್ಕಿಯನ್ನು ಇಲಿಗಳು ಹಾಗೂ ಹೆಗ್ಗಣಗಳು ಮನಸೋ ಇಚ್ಛೆ ತಿನ್ನುತ್ತವೆ. ಈ ಕಾರಣದಿಂದ ಅವುಗಳ ಸಂತಾನಾಭಿವೃದ್ಧಿಯಲ್ಲಿ ವಿಪರೀತವಾದ ಏರುಪೇರುಗಳಾಗುತ್ತವೆ. ಅಕ್ಕಿಯನ್ನು ತಿಂದ ಮೂಷಿಕಗಳು ಕೆಲವೇ ವಾರಗಳಲ್ಲಿ ಅನಿಯಂತ್ರಿತವಾದ ಸಂತಾನ ಉತ್ಪತ್ತಿ ಮಾಡುತ್ತವೆ. ಆ ಇಲಿಗಳ ಮರಿಗಳು ಆಹಾರಕ್ಕಾಗಿ ಸಿಕ್ಕಸಿಕ್ಕಲ್ಲಿ ನುಸುಳುತ್ತವೆ. ಆಹಾರದ ಕಣಜ, ಬಣವೆಗಳಿಗೆ ದಾಳಿ ಮಾಡಿ ಅವುಗಳನ್ನು ಮುಕ್ಕಿಬಿಡುತ್ತವೆ. ಹೊಲಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನೂ ತಿಂದು ಬಿಡುತ್ತವೆ. ಹೀಗಾಗಿ ಆ ವರ್ಷ ಗದ್ದೆಯಲ್ಲಿ ಬೆಳೆದ ಪೈರೂ, ಬಣವೆಯಲ್ಲಿ ಶೇಖರಿಸಿಟ್ಟ ಬೆಳೆಯೂ ಇಲಿ-ಹೆಗ್ಗಣಗಳ ಪಾಲಾಗಿ ಬಿಡುತ್ತವೆ. ಹೀಗಾಗಿ ಸ್ವಾಭಾವಿಕವಾಗಿ ಆಹಾರ ವಸ್ತುಗಳ ಕೊರತೆಯುಂಟಾಗುತ್ತದೆ. 

ಆಹಾರದ ಕೊರತೆಯುಂಟಾದಾಗ ಮುಂದಿನ ವರ್ಷಕ್ಕಾಗಿ ಬೀಜಗಳ ಸಂಗ್ರಹವಾದರೂ ಹೇಗೆ ನಡೆಯಬೇಕು? ಹಾಗಾಗಿ ಮುಂದಿನ ವರ್ಷ ಬರಗಾಲ ಆವರಿಸುತ್ತದೆ. ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಬಿದಿರು ಹೂಬಿಟ್ಟಾಗ ಜನ ಬರಗಾಲದ ದಿನಗಳು ಬಂತೆಂದು ಹೆದರುತ್ತಿದ್ದರು. ಈ ಅನುಭವದ ಕಾರಣದಿಂದಲೇ ಮೇಲಿನ ಗಾದೆ ಮಾತು ಸೃಷ್ಟಿಯಾಗಿರಬಹುದು.

ಕೊನೇ ಸುದ್ದಿ: ಜಗತ್ತಿನಲ್ಲಿ ಯಾವುದೇ ಔಷಧವನ್ನು ಮಾನವನ ಮೇಲೆ ಪ್ರಯೋಗಿಸುವ ಮೊದಲು, ಇಲಿ, ಮೊಲ, ಮಂಗ ಮೊದಲಾದ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿನೋಡುತ್ತಾರೆ. ಈ ಕಾರ್ಯದಲ್ಲಿ ಅತಿಯಾಗಿ ಬಳಕೆಯಾಗುವ ಪ್ರಾಣಿ ಇಲಿ. ಇವುಗಳನ್ನು “ಗಿನಿ ಪಿಗ್" (Guinea Pig) ಎನ್ನುತ್ತಾರೆ. ಅಮೇರಿಕಾವೊಂದರಲ್ಲೇ ವರ್ಷವೊಂದಕ್ಕೆ ೧೧ ಕೋಟಿಗೂ ಅಧಿಕ ಇಲಿಗಳನ್ನು ಪ್ರಯೋಗ ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ವಿಶ್ವದ ಬಹುತೇಕ ಪ್ರಯೋಗಶಾಲೆಗಳಲ್ಲಿ ಬಳಕೆಯಾಗುವ ಪ್ರಾಣಿ ಇಲಿಯೇ. ಈ ಪ್ರಮಾಣ ಸುಮಾರು ೯೯%.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ